'ಫೇಸ್ ರೆಕಗ್ನಿಷನ್' ನಿಂದ ನಕಲಿ ಫಲಾನುಭವಿಗಳಿಗೆ ಕಡಿವಾಣ ಯಶಸ್ವಿ: ಲಕ್ಷ್ಮೀ ಹೆಬ್ಬಾಳಕರ್

ರಾಜ್ಯದ ಅಂಗನವಾಡಿ ಕೇಂದ್ರಗಳಿಂದ ಗರ್ಭಿಣಿಯರಿಗೆ, ಬಾಣಂತಿಯರಿಗೆ ಪೂರೈಕೆಯಾಗುತ್ತಿರುವ ಆಹಾರ ವ್ಯವಸ್ಥೆಗೆ ಮತ್ತಷ್ಟು ಪಾರದರ್ಶಕತೆ ತರಲು ಎಫ್‌ಆರ್‌ಎಸ್‌ ವ್ಯವಸ್ಥೆಯನ್ನು ಅನುಷ್ಠಾನಗೊಳಿಸಲಾಗಿದೆ;

Update: 2025-08-11 11:09 GMT

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ ಮಾತನಾಡಿದರು.

ರಾಜ್ಯದ ಅಂಗನವಾಡಿ ಕೇಂದ್ರಗಳ ಮೂಲಕ ನೀಡಲಾಗುವ ಪೌಷ್ಟಿಕ ಆಹಾರ ಪೂರೈಕೆಯಲ್ಲಿನ ಪಾರದರ್ಶಕತೆ ಹೆಚ್ಚಿಸಲು ಮತ್ತು ನಕಲಿ ಫಲಾನುಭವಿಗಳನ್ನು ತಡೆಯಲು 'ಮುಖ ಗುರುತಿಸುವಿಕೆ ವ್ಯವಸ್ಥೆ' (Face Recognition System - FRS) ಜಾರಿಗೆ ತಂದಿರುವುದು ಯಶಸ್ವಿಯಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರು ತಿಳಿಸಿದ್ದಾರೆ.

ವಿಧಾನಪರಿಷತ್‌ನಲ್ಲಿ ಜೆಡಿಎಸ್ ಸದಸ್ಯ ಗೋವಿಂದರಾಜು ಅವರು ಈ ವ್ಯವಸ್ಥೆಯಿಂದ ಆಗುತ್ತಿರುವ ತೊಂದರೆಗಳ ಬಗ್ಗೆ ಪ್ರಶ್ನೆ ಎತ್ತಿದಾಗ ಸಚಿವರು ಈ ಉತ್ತರ ನೀಡಿದ್ದಾರೆ. "ಇದು ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದು, ಕರ್ನಾಟಕದಲ್ಲಿ ಇದನ್ನು ಕಟ್ಟುನಿಟ್ಟಾಗಿ ಜಾರಿ ಮಾಡಲಾಗಿದೆ. ಪಾರದರ್ಶಕತೆ ತರಲು ಎಫ್‌ಆರ್‌ಎಸ್ ಅತ್ಯಂತ ಸಹಕಾರಿಯಾಗಿದೆ" ಎಂದು ಅವರು ಹೇಳಿದರು.

"ಈ ತಂತ್ರಾಂಶವನ್ನು ಜಾರಿಗೊಳಿಸಿದ ರಾಜ್ಯಗಳ ಪೈಕಿ, ಕರ್ನಾಟಕವು ಶೇ 94.2ರಷ್ಟು ಫಲಾನುಭವಿಗಳನ್ನು ಎಫ್‌ಆರ್‌ಎಸ್ ಮೂಲಕ ನೋಂದಣಿ ಮಾಡುವ ಮೂಲಕ ಇಡೀ ದೇಶಕ್ಕೇ ಎರಡನೇ ಸ್ಥಾನದಲ್ಲಿದೆ" ಎಂದು ಸಚಿವರು ಹೆಮ್ಮೆಯಿಂದ ಹೇಳಿದರು.

ಕಾರ್ಯಕರ್ತೆಯರ ಮೇಲಿನ ಒತ್ತಡ

ಎಫ್‌ಆರ್‌ಎಸ್ ಜಾರಿಯಿಂದಾಗಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಮೇಲೆ ಕೆಲಸದ ಒತ್ತಡ ಹೆಚ್ಚಾಗಿರುವುದನ್ನು ಸಚಿವರು ಒಪ್ಪಿಕೊಂಡರು. ಈ ಹಿನ್ನೆಲೆಯಲ್ಲಿ ಅವರಿಗೆ ಚುನಾವಣಾ ಕರ್ತವ್ಯಗಳಿಂದ ವಿನಾಯಿತಿ ನೀಡಲಾಗಿದೆ ಎಂದು ತಿಳಿಸಿದರು. "ಅಂಗನವಾಡಿ ಕಾರ್ಯಕರ್ತೆಯರಿಗೆ ಕಳೆದ ವರ್ಷವೇ ಹೊಸ ಮೊಬೈಲ್‌ಗಳನ್ನು ನೀಡಲಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಜಂಟಿ ನಿರ್ದೇಶನದಂತೆ, ಎಫ್‌ಆರ್‌ಎಸ್ ಮೂಲಕ ಫಲಾನುಭವಿಗಳನ್ನು ಗುರುತಿಸಿ, ಅವರ ಮೊಬೈಲ್ ಸಂಖ್ಯೆಯನ್ನು ಆಧಾರ್‌ಗೆ ಜೋಡಣೆ ಮಾಡುವುದು ಕಡ್ಡಾಯವಾಗಿದೆ. ಇದನ್ನು ಮಾಡದಿದ್ದರೆ, ಕೇಂದ್ರದಿಂದ ಐಸಿಡಿಎಸ್ ಕಾರ್ಯಕ್ರಮಗಳಿಗೆ ಬರುವ ಆಹಾರ ಪದಾರ್ಥಗಳು ನಿಲ್ಲುವ ಸಾಧ್ಯತೆಯಿದೆ. ಹೀಗಾಗಿ, ಪಾರದರ್ಶಕತೆಗಾಗಿ ಈ ವ್ಯವಸ್ಥೆ ಅನಿವಾರ್ಯವಾಗಿದೆ" ಎಂದು ಅವರು ವಿವರಿಸಿದರು.

ಮುಂದಿನ ದಿನಗಳಲ್ಲಿ ಎಫ್‌ಆರ್‌ಎಸ್ ತಂತ್ರಜ್ಞಾನವನ್ನು ಇನ್ನಷ್ಟು ಸರಳೀಕರಿಸಿ, ಕಾರ್ಯಕರ್ತೆಯರ ಮೇಲಿನ ಹೊರೆ ಕಡಿಮೆ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಲಕ್ಷ್ಮೀ ಹೆಬ್ಬಾಳಕರ್ ಅವರು ಸದನಕ್ಕೆ ಭರವಸೆ ನೀಡಿದರು.

Tags:    

Similar News