Caste Census | ಸಾಮಾಕಿಕ ಶೈಕ್ಷಣಿಕ ಸಮೀಕ್ಷೆ (ಜಾತಿ ಗಣತಿ): 1.35 ಕೋಟಿ ಕುಟುಂಬಗಳ ಮಾಹಿತಿ ಸಂಗ್ರಹದ ಶ್ರಮವೇನು?
2015ರಲ್ಲಿ ಎಚ್.ಕಾಂತರಾಜ್ ನೇತೃತ್ವದ ಹಿಂದುಳಿದ ವರ್ಗಗಳ ಆಯೋಗವು ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಆರಂಭಿಸಿದಾಗಿನಿಂದ ಜಯಪ್ರಕಾಶ್ ಹೆಗ್ಡೆ ನೇತೃತ್ವದಲ್ಲಿ ಅಂತಿಮ ವರದಿ ಸಲ್ಲಿಸುವವರೆಗೆ ಶ್ರಮಿಸಿದವರು, ವರದಿಯ ದೃಢೀಕರಣ ಇತ್ಯಾದಿ ವಿವರಗಳನ್ನು ಇಲ್ಲಿ ಮೆಲುಕು ಹಾಕಲಾಗಿದೆ.;
ಡಾ.ಜಯಪ್ರಕಾಶ್ ಹೆಗ್ಡೆ ನೇತೃತ್ವದ ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಸಲ್ಲಿಸಿದ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷಾ ವರದಿ ಕೊನೆಗೂ ರಾಜ್ಯ ಸಚಿವ ಸಂಪುಟದ ಮುಂದೆ ಮಂಡನೆ ಆಗಿದೆ. ವರದಿಯ ವಿಸ್ತೃತ ಚರ್ಚೆಗೆ ಏ.17 ರಂದು ವಿಶೇಷ ಸಚಿವ ಸಂಪುಟ ಸಭೆಯನ್ನೂ ಕರೆಯಲಾಗಿದೆ.
ಈ ಮಧ್ಯೆ, ಜಾತಿ ಜನಗಣತಿ ವರದಿಗೆ ಕೆಲ ಪ್ರಬಲ ಸಮುದಾಯಗಳು ವಿರೋಧ ವ್ಯಕ್ತಪಡಿಸಿದರೆ, ಅಹಿಂದ ಸಮುದಾಯಗಳು ವರದಿಯ ಅನುಷ್ಠಾನಕ್ಕಾಗಿ ಪಟ್ಟು ಹಿಡಿದು ಹೋರಾಡುತ್ತಿವೆ.
2015 ರಲ್ಲಿ ಅಂದಿನ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಎಚ್.ಕಾಂತರಾಜು ನೇತೃತ್ವದಲ್ಲಿ ನಡೆದ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯು ಸರ್ಕಾರಿ ದಾಖಲೆಯಾಗಿ ಉಳಿಯಲಿದೆ. ಈ ವರದಿ ಸಿದ್ಧಪಡಿಸಲು ಅವರು ಪಟ್ಟ ಶ್ರಮ, ಅನುಸರಿಸಿದ ಮಾನದಂಡಗಳು ಇತ್ಯಾದಿ ಮಹತ್ವದ ಸಂಗತಿಗಳು ಮರೆತು ಹೋಗಿವೆ. ಈಗ ಕಾಂತರಾಜು ವರದಿ ಆಧರಿಸಿ 2024 ರಲ್ಲಿ ಜಯಪ್ರಕಾಶ್ ಹೆಗ್ಡೆ ಸಲ್ಲಿಸಿರುವ ಅಂತಿಮ ವರದಿಯ ಮೂಲಕ ಹಳೆಯ ಘಟನಾವಳಿಗಳನ್ನು ಮೆಲುಕು ಹಾಕುವುದು ಸೂಕ್ತವಾಗಿದೆ.
ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ರಾಜ್ಯಾಧ್ಯಂತ ಸಾಮಾಜಿಕ ಮತ್ತು ಶೈಕ್ಷಣಿಕ ವರದಿಗೆ ದತ್ತಾಂಶ ಸಂಗ್ರಹಿಸಲು 54 ಮಾನದಂಡಗಳನ್ನು ಅನುಸರಿಸಿದೆ. ಪ್ರತಿಯೊಂದು ಕುಟುಂಬದ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ, ರಾಜಕೀಯ ಪ್ರಾತಿನಿಧ್ಯ ಮತ್ತು ಔದ್ಯೋಗಿಕ ಸ್ಥಿತಿಗತಿಗಳ ಸಮೀಕ್ಷೆಗಾಗಿ 54 ಮಾನದಂಡಗಳನ್ನು ವಿಷಯ ತಜ್ಞರು ರೂಪಿಸಿದ್ದಾರೆ.
ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಜೋಗನ್ ಶಂಕರ್, ಬೆಂಗಳೂರಿನ ಐಸೆಕ್ನ (ಅರ್ಥಶಾಸ್ತ್ರ, ಸಾಮಾಜಿಕ ಮತ್ತು ಆರ್ಥಿಕ ವಿಶ್ಲೇಷಣಾ ಸಂಸ್ಥೆ) ಪ್ರಾಧ್ಯಾಪಕ ಪ್ರೊ. ಅಬ್ದುಲ್ ಅಜೀಜ್, ಬೆಂಗಳೂರಿನ ರಾಜ್ಯಶಾಸ್ತ್ರ, ಸೈಂಟ್ ಅಲೋಸಿಯಸ್ ಪದವಿ ಕಾಲೇಜಿನ ಪ್ರಾಧ್ಯಾಪಕ ಡಾ. ಆಂಬ್ರೋಸ್ ಪಿಂಟೋ.ಎಸ್.ಜೆ, ಐಸೆಕ್ನ ಸಹಾಯಕ ಪ್ರಾಧ್ಯಾಪಕ ಡಾ. ಸಿ.ಎಂ.ಲಕ್ಷ್ಮಣ್ , ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯದ ನಿವೃತ್ತ ನಿರ್ದೇಶಕ ಲಕ್ಷ್ಮಿಪತಿ, ಬೆಂಗಳೂರಿನ ಸೆಂಟರ್ ಫಾರ್ ಪಬ್ಲಿಕ್ ಪಾಲಿಸಿ, ಐಐಎಂ ನ ಪ್ರೊ.ರಾಜಲಕ್ಷ್ಮಿಕಾಮತ್ ಪರವಾಗಿ ನವೀನ್ ಭಾರತಿ ಅವರ ಸಮಿತಿ ಒಟ್ಟು 16 ಸಭೆಗಳನ್ನು ನಡೆಸಿ ವರದಿಗೆ ಬೇಕಾದ ಆಧಾರ ಹಾಗೂ ಮಾನದಂಡ ಸಿದ್ದಪಡಿಸಿತ್ತು.
ಶೇ 94.17 ರಷ್ಟು ಮಾಹಿತಿ ಸಂಗ್ರಹಣೆ
ಹೆಚ್. ಕಾಂತರಾಜ ನೇತೃತ್ವದ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು 2015 ಏ.11 ರಿಂದ ಆರಂಭಿಸಿ ಮೇ 30ರವರೆಗೆ ನಡೆಸಿತು.
ರಾಜ್ಯದ 6.35 ಕೋಟಿ ಜನಸಂಖ್ಯೆಯಲ್ಲಿ 5.98 ಕೋಟಿ ಮಂದಿಯನ್ನು ಜನಗಣತಿ ಒಳಗೊಂಡಿದೆ. 1.35 ಕೋಟಿ ಕುಟುಂಬಗಳು ಸಮೀಕ್ಷೆಯಲ್ಲಿ ಭಾಗವಹಿಸಿ ಮಾಹಿತಿ ನೀಡಿದ್ದು, 37 ಲಕ್ಷ ಕುಟುಂಬಗಳು ಪಾಲ್ಗೊಂಡಿಲ್ಲ. ಜನಗಣತಿಯ ಸಾಧನೆ ಶೇ 94.17 ರಷ್ಟಿದೆ.
ಬಿಇಎಲ್ ತಾಂತ್ರಿಕ ನೆರವು
ಸಮೀಕ್ಷೆಯಲ್ಲಿ ಲಭ್ಯವಾದ ಅಂಕಿ ಅಂಶಗಳನ್ನು ಆಯಾ ಜಿಲ್ಲೆಗಳಲ್ಲಿಯೇ ಗಣಕೀಕರಣಗೊಳಿಸಲು ಅನುವಾಗುವಂತೆ ಬಿಇಎಲ್( ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್) ತಾಂತ್ರಿಕ ನೆರವು ಒದಗಿಸಿತ್ತು. 43.09 ಕೋಟಿ ರೂ. ವೆಚ್ಚದಲ್ಲಿ ಗಣಕೀಕರಣಕ್ಕಾಗಿ ಬಿ.ಇ.ಎಲ್ ಜೊತೆ ಒಡಂಬಡಿಕೆ ಮಾಡಿಕೊಳ್ಳಲಾಗಿತ್ತು.
2015ರ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ಕೇಂದ್ರ ಸರ್ಕಾರ 7 ಕೋಟಿ ರೂ. ಮತ್ತು ರಾಜ್ಯ ಸರ್ಕಾರ 185.79 ಕೋಟಿ ರೂ. ಬಿಡುಗಡೆ ಮಾಡಿದ್ದವು. ಬಿಡುಗಡೆಯಾದ 192.79 ಕೋಟಿ ರೂ.ಗಳಲ್ಲಿ ಒಟ್ಟು 165.51 ಕೋಟಿ ರೂ. ವೆಚ್ಚ ಮಾಡಲಾಗಿದೆ.
ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಗಣಕೀಕರಣಗೊಳಿಸಿದ ಅಂಕಿಅಂಶಗಳನ್ನು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್(ಐಐಎಂ) ಸಂಸ್ಥೆ ದೃಢೀಕರಣಗೊಳಿಸಿ ವರದಿ ನೀಡಿತ್ತು.
2019 ಸೆ.21 ರಂದು ಆಯೋಗದ ಅಧ್ಯಕ್ಷ ಹೆಚ್.ಕಾಂತರಾಜ್ ಹಾಗೂ ಸದಸ್ಯರ ಪದಾವಧಿ ಮುಕ್ತಾಯವಾದ ಕಾರಣ ಸರ್ಕಾರಕ್ಕೆ ಸಾಮಾಜಿಕ ಮತ್ತು ಶೈಕ್ಷ ಣಿಕ ಸಮೀಕ್ಷೆಯ ವರದಿ ಸಲ್ಲಿಸಿರಲಿಲ್ಲ. ಆ ಬಳಿಕ 2020 ನ.23 ರಂದು ಆಯೋಗದ ಅಧ್ಯಕ್ಷರನ್ನಾಗಿ ಕೆ. ಜಯಪ್ರಕಾಶ ಹೆಗ್ಡೆ ಅವರನ್ನು ನೇಮಿಸಿ, ಹೆಚ್ ಕಾಂತರಾಜ ನೇತೃತ್ವದಲ್ಲಿ ಸಂಗ್ರಹಿಸಿದ 2015ರ ಗಣಕೀಕರಣ ದತ್ತಾಂಶಗಳನ್ನು ಉಪಯೋಗಿಸಿಕೊಂಡು ವರದಿ ಸಲ್ಲಿಸುವಂತೆ ಸೂಚಿಸಲಾಗಿತ್ತು. ಅದರಂತೆ 2024 ಫೆ. 29 ರಂದು ಜಯಪ್ರಕಾಶ್ ಹೆಗ್ಡೆ ಅವರು ಸರ್ಕಾರಕ್ಕೆ ಅಂತಿಮ ವರದಿ ಸಲ್ಲಿಸಿದ್ದರು.