ಕಾಂತಾರ' ಮೀಮ್ ಟ್ರೆಂಡ್: ಬೆಂಗಳೂರು ಗುಂಡಿ ಮುಚ್ಚಿದ ಯುವರಾಣಿ ರುಕ್ಮಿಣಿ ವಸಂತ್!
ಕಾಂತಾರ: ಅಧ್ಯಾಯ 1ರ ಅಧಿಕೃತ ಟ್ರೇಲರ್ ಇತ್ತೀಚೆಗೆ ಬಿಡುಗಡೆಯಾಗಿದ್ದು, ಕೇವಲ 21 ಗಂಟೆಯಲ್ಲಿ ಕನ್ನಡ ಅವತರಣಿಕೆಯ ಟ್ರೇಲರ್ ಅನ್ನು ಬರೋಬ್ಬರಿ 70 ಲಕ್ಷ ಜನ ವೀಕ್ಷಿಸಿದ್ದಾರೆ.
ರುಕ್ಮಿಣಿ ವಸಂತ್ ಮೀಮ್ಸ್
`ರಿಷಬ್ ಶೆಟ್ಟಿ ನಿರ್ದೇಶನದ, ಬಹುನಿರೀಕ್ಷಿತ 'ಕಾಂತಾರ: ಅಧ್ಯಾಯ -1' ಸಿನಿಮಾದ ಟ್ರೇಲರ್ ಬಿಡುಗಡೆಯಾಗಿ ಯೂಟ್ಯೂಬ್‌ನಲ್ಲಿ ದಾಖಲೆಗಳನ್ನು ಸೃಷ್ಟಿಸುತ್ತಿದ್ದರೆ, ಇತ್ತ ಸಾಮಾಜಿಕ ಜಾಲತಾಣಗಳಲ್ಲಿ ಸಿನಿಮಾದ ದೃಶ್ಯವೊಂದನ್ನು ಬಳಸಿಕೊಂಡು ರಚಿಸಲಾದ ಮೀಮ್ ಒಂದು ಸಿಕ್ಕಾಪಟ್ಟೆ ವೈರಲ್ ಆಗಿದೆ. ಸಿನಿಮಾದಲ್ಲಿ ರಾಜಕುಮಾರಿ ಕನಕಾವತಿಯಾಗಿ ಕಾಣಿಸಿಕೊಂಡಿರುವ ನಟಿ ರುಕ್ಮಿಣಿ ವಸಂತ್ ಅವರ ಫೋಟೋ ಬಳಸಿ, ಬೆಂಗಳೂರಿನ ರಸ್ತೆ ಗುಂಡಿಗಳ ಸಮಸ್ಯೆಯನ್ನು ಹಾಸ್ಯಮಯವಾಗಿ ಬಿಂಬಿಸಲಾಗಿದೆ.
'ನಾವು ಕೆಲಸ ಮಾಡೋಣ' ಎಂಬ ಶೀರ್ಷಿಕೆಯ ಈ ಮೀಮ್, ಬೆಂಗಳೂರಿನ ರಸ್ತೆಗಳಲ್ಲಿರುವ ಹೊಂಡಗಳ ಕುರಿತು ನಗರದ ಜನರ ಹತಾಶೆ ಮತ್ತು ಅಸಮಾಧಾನವನ್ನು ಪ್ರತಿನಿಧಿಸುತ್ತಿದೆ. ಇದು ನೆಟಿಜನ್‌ಗಳಲ್ಲಿ ನಗೆ ಹಾಗೂ ಚರ್ಚೆಗೆ ಕಾರಣವಾಗಿದೆ.
ರಸ್ತೆ ನಿರ್ವಹಣೆ ಒಂದು ಶಾಶ್ವತ ಸಮಸ್ಯೆಯಾಗಿರುವ ಬೆಂಗಳೂರಿನಲ್ಲಿ, ಮಳೆಗಾಲದಿಂದ ಹಾನಿಗೊಳಗಾದ ರಸ್ತೆಗಳನ್ನು ಸರಿಪಡಿಸುವ ಪ್ರಯತ್ನಗಳು ನಡೆಯುತ್ತಿದ್ದರೂ, ಹೊಂಡಗಳ ಸಮಸ್ಯೆ ಮುಂದುವರಿದಿದೆ, ಈ ಪರಿಸ್ಥಿತಿಯನ್ನು ಮೀಮ್ ಹಾಸ್ಯಮಯವಾಗಿ ಪ್ರತಿಬಿಂಬಿಸಲಾಗಿದೆ.
ಟ್ರೆಂಡ್ ಗೆದ್ದ ಮೀಮ್
ಈ ಮೀಮ್ ಅನ್ನು ಬಳಕೆದಾರರು ಅದರ ಸೃಜನಶೀಲತೆ ಮತ್ತು ಹಾಸ್ಯಕ್ಕಾಗಿ ಶ್ಲಾಘಿಸಿದ್ದಾರೆ, ಇದನ್ನು ಈ ಟೆಂಪ್ಲೇಟ್‌ನ ಅತ್ಯುತ್ತಮ ಮೀಮ್ ಮತ್ತು ಟ್ರೆಂಡ್ ಗೆದ್ದ ಮೀಮ್ ಎಂದು ಬಳಕೆದಾರರೊಬ್ಬರು ಕಮೆಂಟ್ ಮಾಡಿದ್ದಾರೆ.
ನಗರದ ಪ್ರಸ್ತುತ ಪರಿಸ್ಥಿತಿಗೆ ಮೀಮ್‌ನ ಸಮಯೋಚಿತತೆ, ಆನ್‌ಲೈನ್ ಮತ್ತು ಆಫ್‌ಲೈನ್‌ನಲ್ಲಿ ದೂರುಗಳು ಹೆಚ್ಚುತ್ತಿರುವಾಗ, ರಸ್ತೆ ನಿರ್ವಹಣೆಯ ಕುರಿತು ಸಾರ್ವಜನಿಕ ಗಮನ ಸೆಳೆಯಲು ಸಹಾಯ ಮಾಡಿದೆ ಎಂದು ಮತ್ತೊಬ್ಬರು ಕಮೆಂಟ್ ಮಾಡಿದ್ದಾರೆ.
ಒಟ್ಟಿನಲ್ಲಿ ಪ್ರಸ್ತುತ ಸಮಸ್ಯೆಯ ಬಗ್ಗೆ ಎಲ್ಲೆಡೆ ಆಕ್ರೋಶ ವ್ಯಕ್ತಪಡಿಸುತ್ತಿರುವ ಸಮಯದಲ್ಲಿ ಈ ಮೀಮ್ಸ್ ಜನರನ್ನು ಹಾಸ್ಯದ ಮೂಲಕ ಸಮಸ್ಯೆಯನ್ನು ಎತ್ತಿ ಹಿಡಿದಿದೆ.
ಕಾಂತಾರದ ಬಗ್ಗೆ
ರಿಷಬ್ ಶೆಟ್ಟಿ ಮುಖ್ಯ ಪಾತ್ರದಲ್ಲಿ ನಟಿಸಿರುವ ʻಕಾಂತಾರ: ಅಧ್ಯಾಯ 1ʼ ಸಿನಿಮಾದಲ್ಲಿ ನಟಿ ರುಕ್ಮಿಣಿ ವಸಂತ್ ರಾಜಕುಮಾರಿ ಕನಕಾವತಿಯಾಗಿ ಕಾಣಿಸಿಕೊಂಡಿದ್ದಾರೆ. ಈ ಪಾತ್ರದ ಬಗ್ಗೆ ಅವರು ತಮ್ಮ ಅನುಭವವನ್ನು ಹಂಚಿಕೊಂಡಿದ್ದರು. ರಾಜಕುಮಾರಿ ಕನಕಾವತಿ ಪಾತ್ರವು ಕೇವಲ ರಾಜಮನೆತನದ ಮಹಿಳೆಯಾಗಿರದೆ, ನಮ್ಮ ನಾಡಿನ ಸಂಸ್ಕೃತಿ ಮತ್ತು ನಂಬಿಕೆಗಳನ್ನು ಪ್ರತಿನಿಧಿಸುತ್ತದೆ ಎಂದು ತಿಳಿಸಿದ್ದರು.
ಕಾಂತಾರ: ಅಧ್ಯಾಯ 1ರ ಅಧಿಕೃತ ಟ್ರೇಲರ್ ಇತ್ತೀಚೆಗೆ ಬಿಡುಗಡೆಯಾಗಿದ್ದು, ಕೇವಲ 21 ಗಂಟೆಯಲ್ಲಿ ಕನ್ನಡ ಅವತರಣಿಕೆಯ ಟ್ರೇಲರ್ ಅನ್ನು ಬರೋಬ್ಬರಿ 70 ಲಕ್ಷ ಜನ ವೀಕ್ಷಿಸಿದ್ದಾರೆ. ಅಲ್ಲದೆ ಟ್ರೇಲರ್ ಅದ್ಭುತವಾಗಿದ್ದು, 'ಕಾಂತಾರವನ್ನು ದೇಶದ ಜನ ಮತ್ತೊಮ್ಮೆ ಮೆಚ್ಚುವಂತಾಲಿ' ಎಂದು ಶುಭಹಾರೈಸಿದ್ದಾರೆ.
ಟ್ರೇಲರ್ನಲ್ಲಿ ಏನಿದೆ?
ಟ್ರೇಲರ್‌ನ ಕಥಾಹಂದರವು ಒಂದು ದಂತಕಥೆಯ ಮೂಲಕ ಆರಂಭವಾಗಿ, ಪ್ರೇಮ, ಸಂಘರ್ಷ ಮತ್ತು ದೈವಿಕತೆಯ ಎಳೆಗಳನ್ನು ಒಂದೊಂದಾಗಿ ಬಿಚ್ಚಿಡುತ್ತದೆ.
ಟ್ರೇಲರ್‌ನ ಆರಂಭದಲ್ಲಿ, "ನನ್ನ ತಂದೆ ಕಾಣೆಯಾದ ಜಾಗ ಇದೇನಾ?" ಎಂಬ ಬಾಲಕನೊಬ್ಬನ ಪ್ರಶ್ನೆಯು, ಒಂದು ಮರೆತುಹೋದ ಕಥೆಗೆ ಮುನ್ನುಡಿ ಬರೆಯುತ್ತದೆ. 'ದೈವೀ ಸ್ವರೂಪಿ ಈಶ್ವರನು ಧರ್ಮ ರಕ್ಷಣೆಗಾಗಿ ಗಣಗಳನ್ನು ಕಳುಹಿಸಿಕೊಡುತ್ತಾನೆ' ಎಂಬ ಹಿನ್ನೆಲೆ ಧ್ವನಿಯೊಂದಿಗೆ, 'ಕಾಂತಾರ' ಎಂಬ ಊರಿನ ಉಗಮ ಮತ್ತು ಅಲ್ಲಿನ ಜನರ ಬದುಕಿನ ಚಿತ್ರಣ ತೆರೆದುಕೊಳ್ಳುತ್ತದೆ. ಆದರೆ, ಈ ಸಮುದಾಯಕ್ಕೆ 'ಬ್ರಹ್ಮ ರಾಕ್ಷಸ ಗಣ' ಎಂಬ ವಿರೋಧಿ ಗುಂಪಿನಿಂದ ಸಂಕಷ್ಟ ಎದುರಾಗುತ್ತದೆ.
ಕಾಡಿನ ಸಂಪತ್ತನ್ನು ನಂಬಿ ಬದುಕುವ 'ಕಾಂತಾರ'ದ ಜನರು, ತಾವು ಬೆಳೆದ ಬೆಳೆಯಲ್ಲಿ 'ಬ್ರಹ್ಮ ರಾಕ್ಷಸ ಗಣ'ಕ್ಕೆ ಪಾಲು ನೀಡುವುದನ್ನು ನಿಲ್ಲಿಸಿದಾಗ, ಎರಡು ಗುಂಪುಗಳ ನಡುವೆ ಸಂಘರ್ಷ ಭುಗಿಲೇಳುತ್ತದೆ. ಈ ದ್ವೇಷದ ವಾತಾವರಣದಲ್ಲಿಯೇ, ನಾಯಕ (ರಿಷಬ್ ಶೆಟ್ಟಿ) ಮತ್ತು ಯುವರಾಣಿ (ರುಕ್ಮಿಣಿ ವಸಂತ್) ನಡುವೆ ಪ್ರೇಮಾಂಕುರವಾಗುತ್ತದೆ. "ನಮ್ಮನ್ನು ನೋಡೋಕೆ ನೀವು ಬಂದಿದ್ದಿರಿ, ನಿಮ್ಮನ್ನು ನೋಡೋಕೆ ನಾವು ಬರಬಾರದೇ?" ಎಂಬ ನಾಯಕನ ಮಾತು, ಅವರಿಬ್ಬರ ನಡುವಿನ ಸಂಬಂಧದ ಆರಂಭಕ್ಕೆ ನಾಂದಿ ಹಾಡುತ್ತದೆ.
ಈ ಪ್ರೇಮಕ್ಕೆ ಅರಮನೆಯಲ್ಲಿಯೇ ವಿರೋಧ ವ್ಯಕ್ತವಾಗುತ್ತದೆ. ಯುವರಾಣಿಯ ಅಂಗರಕ್ಷಕನು, "ಆತ ನಿಮ್ಮ ಗದ್ದುಗೆ ಮೇಲೆ ಕಣ್ಣು ಹಾಕಿದಂತಿದೆ" ಎಂದು ಎಚ್ಚರಿಸುವ ಮೂಲಕ, ಪ್ರೇಮ ಕಥೆಯು ರಕ್ತಸಿಕ್ತ ಸಂಘರ್ಷಕ್ಕೆ ತಿರುಗುವ ಮುನ್ಸೂಚನೆ ನೀಡುತ್ತಾನೆ. ದಂತಕಥೆಯು ಮುಗಿದು, ನಿಜ ಜೀವನದ ಕಥೆ ಆರಂಭವಾಗುವ ಹಂತದಲ್ಲಿ, "ಈಶ್ವರ ದೇವ ಇಲ್ಲಿಗೆ ಬಂದಿದ್ದಷ್ಟೇ ಅಲ್ಲ, ಇಲ್ಲಿಯೇ ನೆಲೆಸಿದ್ದರು" ಎಂಬ ನಾಯಕನ ಮಾತು, ಚಿತ್ರದ ದೈವಿಕ ಹಿನ್ನೆಲೆಯನ್ನು ಮತ್ತಷ್ಟು ಬಲಪಡಿಸುತ್ತದೆ.
'ಕಾಂತಾರ: ಅಧ್ಯಾಯ 1' ಟ್ರೇಲರ್ ಒಂದು ಪರಿಪೂರ್ಣ ದೃಶ್ಯಕಾವ್ಯವಾಗಿದ್ದು, ಪ್ರೇಕ್ಷಕರನ್ನು ಸಿನಿಮಾ ಬಿಡುಗಡೆಗಾಗಿ ಕಾತುರದಿಂದ ಕಾಯುವಂತೆ ಮಾಡಿದೆ. ಈ ಚಿತ್ರವು ಅಕ್ಟೋಬರ್ 2 ರಂದು ವಿಶ್ವಾದ್ಯಂತ ತೆರೆಕಾಣಲಿದೆ.