ಕನ್ನಡಿಗರಿಗೆ ಮೀಸಲಾತಿ | ವಿಶೇಷ ಅಧಿವೇಶನ ಕರೆಯಲು ಸಾಹಿತಿಗಳು, ಹೋರಾಟಗಾರರ ಆಗ್ರಹ

Update: 2024-07-31 12:20 GMT

ರಾಜ್ಯದ ಖಾಸಗಿ ವಲಯಗಳಲ್ಲಿ ಕನ್ನಡಿಗರಿಗೆ ಮೀಸಲಾತಿ ನೀಡುವ ಮಸೂದೆಯನ್ನು ಸರ್ಕಾರ ತಾತ್ಕಾಲಿಕವಾಗಿ ತಡೆ ಹಿಡಿದಿರುವುದನ್ನು ಖಂಡಿಸಿರುವ ಸಾಹಿತಿಗಳು, ಕನ್ನಡ ಪರ ಹೋರಾಟಗಾರರು, ಕೂಡಲೇ ವಿಧಾನಮಂಡಲದ ವಿಶೇಷ ಅಧಿವೇಶನ ಕರೆದು, ಈ ಮಸೂದೆಯನ್ನು ಜಾರಿ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

ಬುಧವಾರ, ಮೈಸೂರಿನ ಕನ್ನಡ ಕ್ರಿಯಾ ಸಮಿತಿ, ಕನ್ನಡ ಗೆಳೆಯರ ಬಳಗ ಹಾಗೂ ಕರ್ನಾಟಕ ವಿಕಾಸ ರಂಗ ಜಂಟಿಯಾಗಿ ಸುದ್ದಿಗೋಷ್ಠಿ ನಡೆಸಿ, ಮಸೂದೆ ಜಾರಿಗೆ ಒತ್ತಾಯಿಸಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಚರ್ಚಿಸುತ್ತೇವೆ ಎಂದು ಹೇಳಿದ್ದಾರೆ.

ಈ ವೇಳೆ ಮಾತನಾಡಿದ, ಸಾಹಿತಿ ಹಂ.ಪ. ನಾಗರಾಜಯ್ಯ ಅವರು, ʻʻಬೇರೆಯವರಿಗೆ ಉದ್ಯೋಗ ನೀಡಬೇಡಿ ಎನ್ನುವುದು ನಮ್ಮ ಹೋರಾಟದ ಆಶಯವಲ್ಲ. ಮಸೂದೆಯಲ್ಲಿ 'ಕನ್ನಡ ನಾಡಿನಲ್ಲಿ ಹುಟ್ಟಿದ, 15 ವರ್ಷಗಳಿಗಿಂತ ಹೆಚ್ಚು ಕಾಲದಿಂದ ನೆಲೆಸಿರುವ, ಕನ್ನಡ ಓದಲು ಬರೆಯಲು ಬಲ್ಲ ವ್ಯಕ್ತಿ ಕನ್ನಡಿಗ' ಎಂದು ವಿವರಿಸಲಾಗಿದೆ. ಹೀಗಾಗಿ, ಈ ಮಸೂದೆ ಜಾರಿಯಿಂದ ಯಾರಿಗೂ ಅನ್ಯಾಯ ಆಗುವುದಿಲ್ಲ. ನಮ್ಮ ಅಸ್ಮಿತೆಯನ್ನು ಉಳಿಸುವ ಹೋರಾಟ ಇದಾಗಿದೆʼʼ ಎಂದರು.

ಕವಿ ಎಲ್. ಹನುಮಂತಯ್ಯ ಮಾತನಾಡಿ, ʻʻಪ್ರಾದೇಶಿಕತೆ ಇಲ್ಲದೆಯೇ ಭಾರತೀಯತೆ, ರಾಷ್ಟ್ರೀಯತೆ ಎಂದು ಮಾತನಾಡುವುದು ಸರಿಯಲ್ಲ. ಸರ್ಕಾರ ಕೂಡಲೇ ಮಸೂದೆಯನ್ನು ಜಾರಿಗೆ ತರಬೇಕು. ಇಲ್ಲಿನ ಉದ್ದಿಮೆದಾರರು ಬೆಂಬಲ ನೀಡಬೇಕು. ಒಂದು ವೇಳೆ ಅಪಸ್ವರ ಎತ್ತಿದರೆ ಅವರೊಂದಿಗೆ ಮಾತುಕತೆ ನಡೆಸಿ, ಮುಂದಿನ ಕ್ರಮ ವಹಿಸಬೇಕುʼʼ ಎಂದರು.

ʻʻಉದ್ದಿಮೆಗಳು ತಮ್ಮ ಶಕ್ತಿ ಬಳಸಿ ಮಸೂದೆ ಜಾರಿಗೆ ಅಡ್ಡಿಪಡಿಸಿವೆ. ಸರ್ಕಾರ ಉದ್ದಿಮೆದಾರರ ಲಾಬಿಗೆ ಮಣಿಯಬಾರದು. ಆಯಾ ರಾಜ್ಯದಲ್ಲಿ ಆಯಾ ಭಾಷಿಕರಿಗೆ ನ್ಯಾಯ ಸಿಗಬೇಕು. ಆಗ ದೇಶ ಸಮೃದ್ಧವಾಗುತ್ತದೆ. ಆದ್ದರಿಂದ ತಕ್ಷಣ ವಿಶೇಷ ಅಧಿವೇಶನ ಕರೆಯಬೇಕು" ಎಂದು ಲೇಖಕಿ ಬಿ.ಟಿ. ಲಲಿತಾ ನಾಯಕ್ ಒತ್ತಾಯಿಸಿದರು.

ಮೈಸೂರಿನ ಕನ್ನಡ ಕ್ರಿಯಾ ಸಮಿತಿಯ ಸ.ರ. ಸುದರ್ಶನ ಮಾತನಾಡಿ, ʻʻಶಿಕ್ಷಣ ಅಥವಾ ಉದ್ಯೋಗ ಸಂಬಂಧ ಪಾಶ್ಚಾತ್ಯ ದೇಶಗಳಿಗೆ ತೆರಳುವವರು ಗೇಟ್, ಟಾಫೆಲ್ ಎಂಬ ಪರೀಕ್ಷೆಗಳನ್ನು ಎದುರಿಸಬೇಕಾಗುತ್ತದೆ. ಇದನ್ನು ಒಪ್ಪಿಕೊಳ್ಳುವ ಉದ್ಯಮಿಗಳು, ಬುದ್ದಿಜೀವಿಗಳು ಕನ್ನಡ ಪರೀಕ್ಷೆ ನಿರಾಕರಿಸುವುದು ಗುಲಾಮಿ ಮನೋಭಾವʼʼ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷ ಮನು ಬಳಿಗಾರ್ ಮಾತನಾಡಿ, ʻʻಉದ್ದಿಮೆಗಳಲ್ಲಿ ಸ್ಥಳೀಯರಿಗೆ ಪ್ರಾತಿನಿಧ್ಯ ನೀಡಬೇಕು. ಆಗ ಸಾಮಾಜಿಕ ಹಾಗೂ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ. ನೂರಕ್ಕೆ ನೂರರಷ್ಟು ಅಲ್ಲದಿದ್ದರೂ ಶೇ. 75 ರಷ್ಟಾದರೂ ಕನ್ನಡಿಗರಿಗೆ ಮೀಸಲಾತಿ ನೀಡಬೇಕು. ಬಂಡವಾಳಶಾಹಿಗಳು ಹಾಗೂ ಕನ್ನಡ ವಿರೋಧಿಗಳ ಒತ್ತಡಕ್ಕೆ ಸರ್ಕಾರ ಮಣಿಯಬಾರದುʼʼ ಎಂದು ಹೇಳಿದರು.

ಈ ವೇಳೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ನಿಕಟಪೂರ್ವ ಅಧ್ಯಕ್ಷ ಟಿ.ಎಸ್‌. ನಾಗಾಭರಣ ಮಾತನಾಡಿ, ʻʻಮಸೂದೆಗೆ ಮೋಹನದಾಸ್ ಪೈ ಅಂತಹವರು ವಿರೋಧಿಸಿರುವುದು ಖಂಡನೀಯ, ಕನ್ನಡಿಗರಲ್ಲಿ ಕೌಶಲ್ಯ ಇಲ್ಲವೆ? ಇದು ಭಾವನಾತ್ಮಕ ವಿಷಯ ಆಗಿರದೆ, ಕಾನೂನಾತ್ಮಕ ವಿಷಯ ಆಗಬೇಕು. ಸಾಂವಿಧಾನಿಕವಾಗಿ ಭಾಷಾ ರಾಜ್ಯಗಳನ್ನು ರಚಿಸಿದ ಮೇಲೆ, ಅದಕ್ಕೆ ಸಲ್ಲಬೇಕಾದ ಸವಲತ್ತುಗಳನ್ನು ಒದಗಿಸಬೇಕುʼʼ ಎಂದು ಆಗ್ರಹಿಸಿದರು.

Tags:    

Similar News