MahaKumbh Stampede | ಬೆಳಗಾವಿಯಲ್ಲಿ ಸೂತಕ; ಪುಣ್ಯಸ್ನಾನಕ್ಕೆ ತೆರಳಿ ಅಸು ನೀಗಿದ ನಾಲ್ವರು

ಬೆಳಗಾವಿಯ ವಡಗಾವಿ, ಶೆಟ್ಟಿಗಲ್ಲಿ, ಶಿವಾಜಿನಗರ ಸೇರಿದಂತೆ ವಿವಿಧ ಪ್ರದೇಶಗಳಿಂದ 500 ಕ್ಕೂ ಹೆಚ್ಚು ಯಾತ್ರಿಕರು ಮಹಾ ಕುಂಭಮೇಳಕ್ಕೆ ತೆರಳಿದ್ದರು.;

Update: 2025-01-29 15:13 GMT
ಮಹಾ ಕುಂಭ ಮೇಳದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ ಮೃತಪಟ್ಟ ಬೆಳಗಾವಿಯ ನಾಲ್ವರು

ಗಂಗಾ, ಯಮುನಾ ಹಾಗೂ ಗುಪ್ತಗಾಮಿನಿ ಸರಸ್ವತಿ ನದಿಗಳ ʼತ್ರಿವೇಣಿ ಸಂಗಮʼದಲ್ಲಿ ಪುಣ್ಯಸ್ನಾನಕ್ಕೆ ತೆರಳಿದ್ದ ಬೆಳಗಾವಿಯ ನಾಲ್ವರು ಯಾತ್ರಿಕರಿಗೆ ಮೌನಿ ಅಮಾವಾಸ್ಯೆಯೇ ಕರಾಳ ದಿನವಾಗಿ ಜೀವ ಬಲಿ ಪಡೆದಿದೆ.

ಮಹಾಕುಂಭ ಮೇಳದಲ್ಲಿ ಮೌನಿ ಅಮಾವಾಸ್ಯೆಯ ದಿನ ಪುಣ್ಯ ಸ್ನಾನ ಮಾಡಿದರೆ ಪಾಪ ಕಳೆಯಲಿದೆ ಎಂದು ಭಾವಿಸಿ ಪ್ರಯಾಗಕ್ಕೆ ತೆರಳಿದ ಕನ್ನಡಿಗರು ಕಾಲ್ತುಳಿತ ದುರಂತದಲ್ಲಿ ಪ್ರಾಣ ಕಳೆದುಕೊಂಡಿದ್ದು, ಬೆಳಗಾವಿಯಲ್ಲಿ ಸೂತಕದ ಛಾಯೆ ಆವರಿಸಿದೆ.

ಕಾಲ್ತುಳಿತದಲ್ಲಿ ಸಿಲುಕಿದ ಹಲವರು ಕಣ್ಮರೆಯಾಗಿರುವುದು ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ.

ಉತ್ತರಪ್ರದೇಶದ ಪ್ರಯಾಗದಲ್ಲಿ(ಪ್ರಯಾಗರಾಜ್)144 ವರ್ಷಗಳಿಗೆ ಒಮ್ಮೆ ನಡೆಯುವ ಮಹಾ ಕುಂಭಮೇಳ ಕಣ್ತುಂಬಿಕೊಂಡು, ಪುಣ್ಯಸ್ನಾನಕ್ಕೆ ತೆರಳಿದ ಬೆಳಗಾವಿ ನಗರದ ನಾಲ್ವರು ಕಾಲ್ತುಳಿತದಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ.

ಮೌನಿ ಅಮಾವಾಸ್ಯೆಯಂದು ಸಂಗಮ ಸ್ನಾನ ಮಾಡಬೇಕೆಂಬ ಮಹದಾಸೆಯಿಂದ ಜ.26ರಂದು ಬೆಳಗಾವಿಯ ಯಾತ್ರಿಕರು ಉತ್ತರಪ್ರದೇಶದತ್ತ ಪ್ರಯಾಣಿ ಆರಂಭಿಸಿದ್ದರು. ಇನ್ನೇನು ಅಮೃತ ಸ್ನಾನ ಅವಕಾಶ ಸಿಕ್ಕೇ ಬಿಟ್ಟಿತು ಎನ್ನುವಷ್ಟರಲ್ಲಿ ಘೋರ ಕಾಲ್ತುಳಿತ ಉಂಟಾಗಿ ಪ್ರಾಣವನ್ನೇ ಆಪೋಷನ ತೆಗೆದುಕೊಂಡಿದೆ.

ಬೆಳಗಾವಿಯ ವಡಗಾವಿ, ಶೆಟ್ಟಿಗಲ್ಲಿ, ಶಿವಾಜಿನಗರ ಸೇರಿದಂತೆ ವಿವಿಧ ಪ್ರದೇಶಗಳಿಂದ 500 ಕ್ಕೂ ಹೆಚ್ಚು ಯಾತ್ರಿಕರು ಮಹಾ ಕುಂಭಮೇಳಕ್ಕೆ ತೆರಳಿದ್ದರು.

ಕಳೆದ ಭಾನುವಾರ 60 ಮಂದಿಯ ತಂಡ ಎರಡು ಖಾಸಗಿ ಬಸ್ಗಳಲ್ಲಿ ಭಕ್ತಿಭಾವದಿಂದ ಮಹಾಕುಂಭ ಮೇಳಕ್ಕೆ ಪ್ರಯಾಣ ಆರಂಭಿಸಿತ್ತು. ಅಡ್ಡಿ, ಆತಂಕವಿಲ್ಲದೇ ಸಂಗಮ ಸ್ಥಳವನ್ನೂ ಪ್ರವೇಶಿಸಿತ್ತು. ಆದರೆ, ಭಕ್ತರ ಪುಣ್ಯಸ್ನಾನದ ಧಾವಂತವು ಕಾಲ್ತುಳಿತಕ್ಕೆ ಕಾರಣವಾಗಿ ತಂಡದಲ್ಲಿದ್ದ ಅರುಣ್ ಕೋಪರ್ಡೆ, ಮಹಾದೇವಿ ಭಾವಸಾರ ತೀವ್ರ ಗಾಯಗಳಿಂದ ಆಸ್ಪತ್ರೆಯಲ್ಲಿ ಕೊನೆ ಉಸಿರೆಳೆದಿದ್ದಾರೆ. ಇದೇ ತಂಡದ ಐವರು ಕಣ್ಮರೆಯಾಗಿದ್ದು, ಆತಂಕ ಹೆಚ್ಚಾಗಿದೆ. ಇನ್ನು ಜ. 26 ರಂದು 13ಜನರ ಮತ್ತೊಂದು ತಂಡ ಮಹಾಕುಂಭ ಮೇಳಕ್ಕೆ ಹೊರಟು, ಮಂಗಳವಾರ ಸಂಗಮ ಸ್ಥಳ ತಲುಪಿದೆ. ಇವರ ಪೈಕಿ ತಾಯಿ-ಮಗಳು ಇಬ್ಬರೂ ಗಾಯಗೊಂಡು ಕೊನೆ ಉಸಿರೆಳೆದಿದ್ದಾರೆ.

ಸಂಬಂಧಿಕರ ಆಕ್ರಂಧನ

ಮಹಾ ಕುಂಭ ಮೇಳಕ್ಕೆ ತೆರಳಿದವರಲ್ಲಿ ನಾಲ್ವರು ಮೃತಪಟ್ಟಿರುವ ಮಾಹಿತಿ ಲಭ್ಯವಾಗುತ್ತಿದ್ದಂತೆ ಉಳಿದವರ ಸಂಬಂಧಿಕರಲ್ಲಿ ಕ್ಷಣ ಕ್ಷಣಕ್ಕೂ ಆತಂಕ ಕಾಡುತ್ತಿದೆ. ಮೃತರ ಸಂಬಂಧಿಕರ ಗೋಳು ಹೇಳ ತೀರದಾಗಿದೆ.

ಬೆಳಗಾವಿಯ ವಡಗಾವಿ ನಿವಾಸಿ ಜ್ಯೋತಿ ಹತ್ತರವಾಠ್ (50), ಅವರ ಪುತ್ರಿ ಮೇಘಾ ಹತ್ತರವಾಠ್, ಶೆಟ್ಟಿಗಲ್ಲಿಯ ನಿವಾಸಿ ಅರುಣ್ ಕೋಪರ್ಡೆ, ಶಿವಾಜಿನಗರದ ಮಹಾದೇವಿ ಬಾವನೂರ ಮೃತಪಟ್ಟಿರುವುದು ಖಚಿತವಾಗಿದೆ.

ಇನ್ನು ಅರುಣ್ ಕೋಪರ್ಡೆ ಅವರ ಪತ್ನಿ ಕಾಂಚನಾ ಕೋಪರ್ಡೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಮನೆ ಮನೆಗೆ ತೆರಳಿ ಮಾಹಿತಿ ಸಂಗ್ರಹ

ಉತ್ತರ ಪ್ರದೇಶ ಸರ್ಕಾರ ಮೃತರು ಹಾಗೂ ಗಾಯಾಳುಗಳ ಮಾಹಿತಿ ನೀಡದ ಹಿನ್ನೆಲೆಯಲ್ಲಿ ಬೆಳಗಾವಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರು ಯಾತ್ರೆ ಕೈಗೊಂಡಿರುವವರ ಮನೆ ಮನೆಗೆ ತೆರಳಿ ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಈವರೆಗೆ ನಾಲ್ವರು ಮೃತಪಟ್ಟಿರುವ ಮಾಹಿತಿ ಮಾತ್ರ ಲಭ್ಯವಾಗಿದೆ. ಸಂಪರ್ಕಕ್ಕೆ ಸಿಗದಿರುವವರ ಮಾಹಿತಿಯನ್ನೂ ಕಲೆ ಹಾಕಿದ್ದು, ಅವರಿಗೆ ನೆರವು ನೀಡಲು ಅಧಿಕಾರಿಗಳ ತಂಡವನ್ನು ಪ್ರಯಾಗರಾಜ್ಗೆ ಕಳುಹಿಸಲಾಗಿದೆ.

ಪ್ರತಿ 12 ವರ್ಷಗಳಿಗೆ ಒಮ್ಮೆ ಕುಂಭಮೇಳ ನಡೆಯಲಿದೆ. ಇಂತಹ 12 ಕುಂಭಮೇಳಗಳು ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಈಗ ಮಹಾ ಕುಂಭ ಮೇಳ ನಡೆಯುತ್ತಿದೆ. ಮಹಾಕುಂಭ ಮೇಳವು ಪ್ರತಿ 144 ವರ್ಷಗಳಿಗೆ ಒಮ್ಮೆ ಜರುಗುತ್ತದೆ. ಇಂತಹ ಪವಿತ್ರ ಮಹಾಕುಂಭ ಮೇಳದಲ್ಲಿ ಪುಣ್ಯಸ್ನಾನಕ್ಕೆ ತೆರಳಿದ ಕನ್ನಡಿಗರು ಕಾಲ್ತುಳಿತ ದುರಂತದಿಂದ ಕಣ್ಣೀರು ಹಾಕುವಂತಾಗಿದೆ.

Tags:    

Similar News