ಕನ್ನಡ ಹುಟ್ಟಿದ್ದೇ ತಮಿಳಿನಿಂದ; ವಿವಾದ ಸೃಷ್ಟಿಸಿದ ನಟ ಕಮಲ್ ಹಾಸನ್; ಅವರ ಹೇಳಿಕೆ ಸರಿಯೇ?
ಚೆನ್ನೈನಲ್ಲಿ ನಡೆದ 'ಥಗ್ ಲೈಫ್' ಚಿತ್ರದ ಆಡಿಯೋ ಲಾಂಚ್ ಕಾರ್ಯಕ್ರಮದಲ್ಲಿ ಕಮಲ್ ಹಾಸನ್ ಈ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ತಮಿಳು ಭಾಷೆಯ ಐತಿಹಾಸಿಕ ಮತ್ತು ಸಾಂಸ್ಕೃತಿಕ ಮಹತ್ವವನ್ನು ಒತ್ತಿಹೇಳುವ ಸಂದರ್ಭದಲ್ಲಿ ಅವರು ಈ ಮಾತುಗಳನ್ನು ಆಡಿದ್ದಾರೆ.;
ಬಹುಭಾಷಾ ನಟ ಕಮಲ್ ಹಾಸನ್ ತಮ್ಮ ಇತ್ತೀಚಿನ 'ಥಗ್ ಲೈಫ್' ಚಿತ್ರದ ಪ್ರಚಾರ ಕಾರ್ಯಕ್ರಮವೊಂದರಲ್ಲಿ ನೀಡಿದ ಹೇಳಿಕೆಯು ಭಾರೀ ವಿರೋಧಕ್ಕೆ ಕಾರಣವಾಗಿದೆ. "ಕನ್ನಡ ಭಾಷೆಯು ತಮಿಳಿನಿಂದ ಹುಟ್ಟಿದೆ" ಎಂಬ ಅವರ ಹೇಳಿಕೆ ಕರ್ನಾಟಕದಲ್ಲಿ ತೀವ್ರ ಸ್ವರೂಪದ ವಿವಾದಕ್ಕೆ ಕಾರಣವಾಗಿದೆ. ಕನ್ನಡಿಗರು ಈ ಹೇಳಿಕೆಯಿಂದ ತಮ್ಮ ಸ್ವಾಭಿಮಾನಕ್ಕೆ ಧಕ್ಕೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಈ ವಿಷಯ ತೀವ್ರ ಚರ್ಚೆಗೆ ಗುರಿಯಾಗಿದೆ. ಆ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಕನ್ನಡ ನಟ ಶಿವರಾಜ್‌ಕುಮಾರ್ ಅವರ ಮೌನವೂ ಕೆಲವರ ಪ್ರಶ್ನೆಗೆ ಒಳಗಾಗಿದೆ.
ಚೆನ್ನೈನಲ್ಲಿ ನಡೆದ 'ಥಗ್ ಲೈಫ್' ಚಿತ್ರದ ಆಡಿಯೋ ಲಾಂಚ್ ಕಾರ್ಯಕ್ರಮದಲ್ಲಿ ಕಮಲ್ ಹಾಸನ್ ಈ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ತಮಿಳು ಭಾಷೆಯ ಐತಿಹಾಸಿಕ ಮತ್ತು ಸಾಂಸ್ಕೃತಿಕ ಮಹತ್ವವನ್ನು ಒತ್ತಿಹೇಳುವ ಸಂದರ್ಭದಲ್ಲಿ ಅವರು ಈ ಮಾತುಗಳನ್ನು ಆಡಿದ್ದಾರೆ. ಅವರ ಈ ಹೇಳಿಕೆಯನ್ನು ಕನ್ನಡ ಸಾಹಿತ್ಯ ಪರಿಷತ್ ಸೇರಿದಂತೆ ಅನೇಕ ಕನ್ನಡ ಸಂಘಟನೆಗಳು ತೀವ್ರವಾಗಿ ಖಂಡಿಸಿವೆ. ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಮಹೇಶ ಜೋಶಿ ಅವರು, "ಕಮಲ್ ಹಾಸನ್ ಅವರ ಹೇಳಿಕೆಯು ತಮಿಳಿನ ಮೇಲಿನ ಅಭಿಮಾನ ಅಥವಾ ಮಾಹಿತಿ ಕೊರತೆಯಿಂದ ಬಂದಿರಬಹುದು, ಆದರೆ ಇದು ಕನ್ನಡಿಗರ ಸ್ವಾಭಿಮಾನವನ್ನು ಕೆಣಕಿದೆ" ಎಂದು ಟೀಕಿಸಿದ್ದಾರೆ.
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಪುರುಷೋತ್ತಮ ಬಿಳಿಮಲೆ, ಚಿತ್ರ ಸಾಹಿತಿಗಳು, ಕನ್ನಡದ ರಾಜಕಾರಣಿಗಳುಸ ಸೇರಿದಂತೆ ಇಡೀ ಕನ್ನಡಿಗರ ಸಮೂಹವೇ ಕಮಲ್ ಹಾಸನ್ ವಿರುದ್ಧ ತಿರುಗಿ ಬಿದ್ದಿದೆ. ಹಿರಿಯ ನಟನಿಗೆ ಅರಿವಿನ ಕೊರತೆಯಿದೆ. ಅಲ್ಲದೆ, ತಮಿಳು ಶ್ರೇಷ್ಠ ಎಂಬ ಭಾವನೆ ಇದೆ. ಎಲ್ಲವೂ ಸೇರಿ ಸುಳ್ಳು ಹೇಳಿದ್ದಾರೆ ಎಂಬುದಾಗಿ ಆಕ್ರೋಶ ವ್ಯಕ್ತಗೊಂಡಿವೆ.
ವಿವಾದದಲ್ಲಿ ಶಿವರಾಜ್‌ಕುಮಾರ್
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಶಿವರಾಜ್‌ಕುಮಾರ್ ಈ ವಿಷಯದಲ್ಲಿ ಆ ಕ್ಷಣದಲ್ಲೇ ಯಾವುದೇ ಪ್ರತಿಕ್ರಿಯೆ ನೀಡದಿರುವುದು ಕೆಲವರಿಗೆ ಅಸಮಾಧಾನ ತಂದಿದೆ. ಸಾಮಾಜಿಕ ಜಾಲತಾಣಗಳಲ್ಲಿ "ಶಿವಣ್ಣ ಯಾಕೆ ಈ ಬಗ್ಗೆ ಮೌನ ಆಗಿದ್ದಾರೆ?" ಎಂದು ಕೆಲವರು ಪ್ರಶ್ನಿಸಿದ್ದಾರೆ. ಇನ್ನು ಕೆಲವರು ಶಿವರಾಜ್‌ಕುಮಾರ್ ಕೇವಲ ಆ ಕಾರ್ಯಕ್ರಮದ ಭಾಗವಾಗಿದ್ದರಿಂದ ಅನಗತ್ಯ ವಿವಾದಕ್ಕೆ ಒಳಗಾಗಿದ್ದಾರೆ ಎಂದು ಕೆಲವರು ಸಮರ್ಥಿಸಿಕೊಂಡಿದ್ದಾರೆ.
ಭಾಷಾತಜ್ಞರ ದೃಷ್ಟಿಕೋನ: ಐತಿಹಾಸಿಕ ಸತ್ಯಾಂಶಗಳು
ಭಾಷಾತಜ್ಞರ ಪ್ರಕಾರ, ಕಮಲ್ ಹಾಸನ್ ಅವರ ಹೇಳಿಕೆಗೆ ಯಾವುದೇ ಐತಿಹಾಸಿಕ ಆಧಾರಗಳಿಲ್ಲ. ಕನ್ನಡ ಮತ್ತು ತಮಿಳು ಎರಡೂ ದ್ರಾವಿಡ ಭಾಷಾ ಕುಟುಂಬಕ್ಕೆ ಸೇರಿದವುಗಳಾದರೂ, ಇವುಗಳು ಪ್ರಾಗ್-ದ್ರಾವಿಡ ಭಾಷೆ ಯಿಂದ ಸ್ವತಂತ್ರವಾಗಿ ವಿಕಸನಗೊಂಡಿವೆ. "ತಮಿಳಿನಿಂದ ಕನ್ನಡ ಹುಟ್ಟಿಲ್ಲ, ಎರಡೂ ಸಹೋದರ ಭಾಷೆಗಳು. ಕನ್ನಡಕ್ಕೆ ಸುಮಾರು 2,000 ವರ್ಷಗಳಿಗೂ ಹೆಚ್ಚಿನ ಇತಿಹಾಸವಿದ್ದು, ಇದಕ್ಕೆ ಸ್ವಂತ ಲಿಪಿ ಮತ್ತು ಸಾಹಿತ್ಯ ಸಂಪತ್ತು ಇದೆ" ಭಾಷಾತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಕನ್ನಡವು ತನ್ನದೇ ಆದ ವಿಶಿಷ್ಟ ಲಿಪಿ, ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಬೆಳೆಸಿಕೊಂಡಿದೆ ಎಂಬುದು ಖಾತರಿಮ
ಕನ್ನಡಿಗರ ಆಕ್ರೋಶ ಮತ್ತು ಸಾಮಾಜಿಕ ಜಾಲತಾಣಗಳ ಪ್ರತಿಕ್ರಿಯೆ
ಕಮಲ್ ಹಾಸನ್ ಅವರ ಹೇಳಿಕೆಯು ಕನ್ನಡಿಗರಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ, ಕನ್ನಡಿಗರು ತಮ್ಮ ಆಕ್ಷೇಪವನ್ನು ವ್ಯಕ್ತಪಡಿಸಿದ್ದಾರೆ. "ಕನ್ನಡವೇ ಬೇರೆ, ತಮಿಳು ಬೇರೆ. ನಮ್ಮ ಭಾಷೆಗೆ 4,000 ವರ್ಷಗಳಿಗಿಂತಲೂ ಹೆಚ್ಚಿನ ಇತಿಹಾಸವಿದೆ" ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ. ಕೆಲವರು ಕಮಲ್ ಹಾಸನ್ ಅವರನ್ನು ದುರಹಂಕಾರದಿಂದ ಮಾತನಾಡಿದ್ದಾರೆ ಎಂದು ಆರೋಪಿಸಿ, ಅವರು ಕೂಡಲೇ ಕ್ಷಮೆಯಾಚಿಸಬೇಕೆಂದು ಒತ್ತಾಯಿಸಿದ್ದಾರೆ. ಕನ್ನಡ ಪರ ಸಂಘಟನೆಗಳು 'ಥಗ್ ಲೈಫ್' ಚಿತ್ರದ ಕರ್ನಾಟಕದಲ್ಲಿನ ಬಿಡುಗಡೆಯನ್ನು ವಿರೋಧಿಸುವ ಸಾಧ್ಯತೆಯಿದೆ ಎಂದು ವರದಿಗಳು ತಿಳಿಸಿವೆ. "ಕನ್ನಡಿಗರ ಭಾವನೆಗಳಿಗೆ ಧಕ್ಕೆ ತಂದವರಿಗೆ ಇಲ್ಲಿ ಸ್ಥಾನವಿಲ್ಲ" ಎಂದು ಕೆಲವು ಹೋರಾಟಗಾರರು ಎಚ್ಚರಿಕೆ ನೀಡಿದ್ದಾರೆ.