ಕಮಲ್ ಹಾಸನ್ ಭಾಷಾ ವಿವಾದ | ಕನ್ನಡವೇ ನನ್ನ ಮೊದಲ ಆದ್ಯತೆ ; ಕ್ಷಮೆ ಕೇಳುವುದು ಅವರಿಗೆ ಬಿಟ್ಟದ್ದು - ಶಿವರಾಜಕುಮಾರ್
ಕನ್ನಡವೇ ನನ್ನ ಮೊದಲ ಆದ್ಯತೆ, ಇದು ಮೊದಲ ಬಾರಿಯಲ್ಲ, ಪ್ರತಿಬಾರಿಯೂ ಕನ್ನಡದ ವಿಷಯ ಬಂದಾಗಲೆಲ್ಲಾ ನಾನು ನಿಂತಿದ್ದೇನೆ. ಕನ್ನಡಕ್ಕಾಗಿ ನಾನು ಏನು ಮಾಡಿದ್ದೇನೆ ಎಂಬುದು ಕರ್ನಾಟಕದ ಜನರಿಗೆ ಗೊತ್ತಿದೆ ಎಂದು ನಟ ಶಿವರಾಜ್ ಕುಮಾರ್ ಹೇಳಿದ್ದಾರೆ.;
ನಟ ಕಮಲ್ ಹಾಸನ್ ಭಾಷಾ ವಿವಾದದಲ್ಲಿ ಅನಗತ್ಯವಾಗಿ ಸಿಲುಕಿಕೊಂಡ ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್ ತಮ್ಮ ವಿರುದ್ಧದ ಟೀಕೆಗಳಿಗೆ ಕೊನೆಗೂ ಮೌನ ಮುರಿದಿದ್ದಾರೆ.
ಶನಿವಾರ ರಾತ್ರಿ ಮಾತನಾಡಿದ ಶಿವರಾಜ್ ಕುಮಾರ್ ಅವರು, ಕನ್ನಡವೇ ನನ್ನ ಮೊದಲ ಆದ್ಯತೆ, ಇದು ಮೊದಲ ಬಾರಿಯಲ್ಲ, ಪ್ರತಿಬಾರಿಯೂ ಕನ್ನಡದ ವಿಷಯ ಬಂದಾಗಲೆಲ್ಲಾ ನಾನು ನಿಂತಿದ್ದೇನೆ. ಕನ್ನಡಕ್ಕಾಗಿ ನಾನು ಏನು ಮಾಡಿದ್ದೇನೆ ಎಂಬುದು ಕರ್ನಾಟಕದ ಜನರಿಗೆ ಗೊತ್ತಿದೆ. ಅದನ್ನು ಯಾರಿಂದಲೂ ಅಲ್ಲಗಳೆಯಲು ಸಾಧ್ಯವಿಲ್ಲ. ನಾನು ಅಂದಿನ ಕಾರ್ಯಕ್ರಮಕ್ಕೆ ಹೋಗಿದ್ದಷ್ಟೇ ನಿಜ. ಆದರೆ ಸುಮ್ಮನೆ ವಿವಾದದಲ್ಲಿ ನನ್ನ ಹೆಸರು ಎಳೆದು ತರಲಾಗುತ್ತಿದೆ. ಇರಲಿ, ತೊಂದರೆ ಇಲ್ಲ, ನಾನು ಅದರ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ, ನನ್ನ ಆತ್ಮಸಾಕ್ಷಿಗೆ ನಾನು ಸರಿಯಾಗಿದ್ದೇನೆ. ನಾನು ಕಲೆಗಾಗಿ ಬದುಕುತ್ತಿರುವವನು, ಕಲೆಯಿಂದಲೇ ನಾವು, ಎಲ್ಲ ಭಾಷೆಗಳ ಬಗ್ಗೆಯೂ ಗೌರವ ಇದೆ, ಆದರೆ ಕನ್ನಡ ಭಾಷೆಯ ವಿಷಯ ಬಂದಾಗೆಲ್ಲ ಚಿತ್ರರಂಗದ ಪರವಾಗಿ ಬರುವವರಲ್ಲಿ ಮೊದಲಿಗೆ ನಾನಾಗಿರುತ್ತೇನೆ’ ಎಂದು ಹೇಳಿದ್ದಾರೆ.
ಕ್ಷಮೆ ಮಾಧ್ಯಮಗಳ ಬಯಕೆ
ನಾನು ಕಮಲ್ ಹಾಸನ್ ಅವರ ಅಭಿಮಾನಿ. ವೇದಿಕೆ ಮೇಲೆ ಏನು ಮಾತನಾಡಬೇಕು, ಬಿಡಬೇಕು ಎಂಬುದು ಅವರ ಆಯ್ಕೆ. ಆದರೆ ಅವರಿಂದ ಈಗ ಏನು ಬಯಸುತ್ತಿದ್ದಾರೋ ಅದು ಮಾಧ್ಯಮಗಳ ಬಯಕೆ. ಅಂದು ಕಮಲ್ ಮಾತಿಗೆ ನಾನು ಚಪ್ಪಾಳೆ ಹೊಡೆಯುತ್ತಿರುವಂತೆ ದೃಶ್ಯಗಳನ್ನು ಜೋಡಿಸಿ ಕೆಲವರು ತೋರಿಸುತ್ತಿದ್ದಾರೆ. ದಯವಿಟ್ಟು ಅದನ್ನು ಮಾಡಬೇಡಿ, ನಾನು ಕಲಾವಿದ, ಈ ಎಡಿಟಿಂಗ್ಗಳು ಹೇಗೆ ಆಗುತ್ತವೆ ಎಂಬುದು ನನಗೆ ಗೊತ್ತಿದೆ’ ಎಂದು ಮಾಧ್ಯಮಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಕಮಲ್ ಹಾಸನ್ ಅವರು ಅಂದು ಆ ಮಾತು ಆಡಿದಾಗ ಅಲ್ಲಿ ಎಲ್ಲರೂ ಇದ್ದರು, ಮಾಧ್ಯಮಗಳ ಮುಂದೆಯೇ ಅವರು ಆ ಮಾತನ್ನಾಡಿದ್ದರು. ಆದರೆ ಅಂದೇ ಆ ವಿಷಯದ ಬಗ್ಗೆ ಪ್ರಸ್ತಾಪ ಮಾಡಿದ್ದರೆ ವಿಷಯ ಇಷ್ಟು ದೊಡ್ಡದಾಗಿ ಆಗುತ್ತಿರಲಿಲ್ಲ. ನನ್ನ ಆತ್ಮಸಾಕ್ಷಿಗೆ ಗೊತ್ತು ನಾನು ಏನು ಎಂದು, ನನ್ನ ತಂದೆಗೆ ಗೊತ್ತು’ ಎಂದು ಹೇಳಿದರು.