ಕಲಬುರಗಿ ಸಂಪುಟ ಸಭೆ ಸಮಾಧಾನಕರ, ತೃಪ್ತಿ ತಂದಿಲ್ಲ: ಬಿ.ಆ‌ರ್. ಪಾಟೀಲ

ʼಕಲಬುರಗಿಯಲ್ಲಿ ನಡೆದ ಸಚಿವ ಸಂಪುಟ ಸಭೆಯ ನಿರ್ಣಯಗಳು ಸಮಾಧಾನ ತಂದಿದೆ. ಆದರೆ, ತೃಪ್ತಿ ತಂದಿಲ್ಲ' ಎಂದು ಮುಖ್ಯಮಂತ್ರಿ ಸಲಹೆಗಾರ, ಆಳಂದ ಶಾಸಕ ಬಿ.ಆರ್. ಪಾಟೀಲ ಬೇಸರ ವ್ಯಕ್ತಪಡಿಸಿದ್ದಾರೆ.

Update: 2024-09-19 07:41 GMT
ಆಳಂದ ಶಾಸಕ ಬಿ.ಆರ್. ಪಾಟೀಲ
Click the Play button to listen to article

ಕಲಬುರಗಿಯಲ್ಲಿ ನಡೆದ ಸಚಿವ ಸಂಪುಟ ಸಭೆಯ ನಿರ್ಣಯಗಳು ಸಮಾಧಾನ ತಂದಿವೆ. ಆದರೆ, ತೃಪ್ತಿ ತಂದಿಲ್ಲ ಎಂದು ಮುಖ್ಯಮಂತ್ರಿ ಸಲಹೆಗಾರ, ಆಳಂದ ಶಾಸಕ ಬಿ.ಆರ್. ಪಾಟೀಲ ಬೇಸರ ವ್ಯಕ್ತಪಡಿಸಿದ್ದಾರೆ. 

ಈ ಬಗ್ಗೆ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 'ತರಾತುರಿಯಲ್ಲಿ ಸಂಪುಟ ಸಭೆ ನಿರ್ಧಾರವಾಗಿದ್ದರಿಂದ ಈ ಭಾಗದ ಅಭಿವೃದ್ಧಿಗೆ ಬೇಕಾದ ಕೊಡುಗೆಗಳನ್ನು ನೀಡಲು ಸಾಧ್ಯವಾಗಿಲ್ಲ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಸಾಕ್ಷರತೆ ತೀರಾ ಕೆಳಮಟ್ಟದಲ್ಲಿದೆ. ಮೊದಲು ಶಿಕ್ಷಕರ ಹುದ್ದೆಗಳ ನೇಮಕಾತಿ ಆಗಬೇಕು ಎಂಬುದು ನಮ್ಮ ಒತ್ತಾಯವಾಗಿತ್ತು. ಸಂಪುಟದಲ್ಲಿ ನೇಮಕಾತಿ ಬಗ್ಗೆ ಯಾವುದೇ ಸ್ಪಷ್ಟತೆ ನೀಡಿಲ್ಲ' ಎಂದು ಅವರು ತಿಳಿಸಿದರು.

 'ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ ಶೇ 80ರಷ್ಟು ಉಪನ್ಯಾಸಕರ ಹುದ್ದೆ ಖಾಲಿ ಇವೆ. ಇಲ್ಲಿ ವಿದ್ಯಾರ್ಥಿಗಳು ಕಲಿತು ಬೇರೆ ಭಾಗದ ವಿದ್ಯಾರ್ಥಿಗಳೊಂದಿಗೆ ಸ್ಪರ್ಧೆ ಮಾಡುವುದು ಹೇಗೆ?' ಎಂದು ಪ್ರಶ್ನಿಸಿದ ಅವರು, 'ಮುಂದಿನ ಸಂಪುಟ ಸಭೆಯಲ್ಲಿ 22 ಸಾವಿರ ಶಿಕ್ಷಕರ ಭರ್ತಿಗೆ ನಿರ್ಣಯ ಕೈಗೊಳ್ಳಬೇಕು' ಎಂದು ಒತ್ತಾಯಿಸಿದರು. 'ದ್ವಿದಳ ಧಾನ್ಯಗಳ ಅಭಿವೃದ್ಧಿ ಮಂಡಳಿಯು ಅಸ್ಥಿಪಂಜರದಂತಾಗಿದೆ. ತೊಗರಿ ಮಂಡಳಿ ಬಲವರ್ಧನೆ, ಸಂಶೋಧನೆಗೆ ಹೆಚ್ಚಿನ ಕ್ರಮದ ಬಗ್ಗೆ ಏನನ್ನೂ ಹೇಳಿಲ್ಲ. ತೊಗರಿ ಬೆಳೆಯ ಬಗ್ಗೆ ಸಂಪುಟದಲ್ಲಿ ಪ್ರಸ್ತಾಪಿಸಿ ನೆರವು ಘೋಷಣೆ ನಿರೀಕ್ಷೆಯಲ್ಲಿದ್ದವು' ಎಂದರು.

'ಬೀದರ್, ಕಲಬುರಗಿಗೆ ₹7,200 ಕೋಟಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ಒಪ್ಪಿಗೆ ನೀಡಲಾಗಿದೆ. ಇಲ್ಲಿವರೆಗೆ ಎಲ್ಲಿಯೂ ಬಹುಗ್ರಾಮ ನೀರಿನ ಯೋಜನೆ ಯಶಸ್ವಿಯಾಗಿಲ್ಲ. ಈ ಯೋಜನೆಗೆ ಕೇಂದ್ರ ಸರ್ಕಾರ ಅರ್ಧ ಹಣ ನೀಡಬೇಕು. ಕೇಂದ್ರ ಸರ್ಕಾರ ನೀಡುತ್ತದೆಯೇ? ಮೊದಲಿಗೆ ಅಂತರ್ಜಲ ಹೆಚ್ಚಳಕ್ಕೆ ಕ್ರಮ ಕೈಗೊಂಡ ನಂತರ ಇಂತಹ ಯೋಜನೆ ಬಗ್ಗೆ ಯೋಚಿಸಬೇಕು' ಎಂದು ಹೇಳಿದರು.

Tags:    

Similar News