ಕಬಿನಿ ಜಲಾಶಯದ ನೀರು ಹೊರಕ್ಕೆ: ಚಾಮರಾಜನಗರ ಜಿಲ್ಲೆಯ 9 ಗ್ರಾಮಗಳಲ್ಲಿ ಪ್ರವಾಹ ಸ್ಥಿತಿ

Update: 2024-07-29 06:41 GMT
ಕಬಿನಿ ಜಲಾಶಯದ ನೀರು ಹೊರಕ್ಕೆ: ಚಾಮರಾಜನಗರ ಜಿಲ್ಲೆಯ 9 ಗ್ರಾಮಗಳಲ್ಲಿ ಪ್ರವಾಹ ಸ್ಥಿತಿ

ಜಲಾಶಯ ತುಂಬಿರುವ ಹಿನ್ನೆಲೆಯಲ್ಲಿ ಕಬಿನಿ ಜಲಾಶಯದಿಂದ ಅಪಾರ ಪ್ರಮಾಣದ ನೀರು ಹೊರ ಬಿಡಲಾಗುತ್ತಿರುವುದರಿಂದ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ದಾಸನಪುರ ಗ್ರಾಮ ಸೇರಿದಂತೆ 9 ಗ್ರಾಮಗಳಲ್ಲಿ ಪ್ರವಾಹ ಸ್ಥಿತಿ ನಿರ್ಮಾಣವಾಗಿದೆ.

ಕೊಳ್ಳೇಗಾಲ ತಾಲೂಕಿನ ಹಳೆ ಹಂಪಾಪುರ ಗ್ರಾಮದ ನೂರಾರು ಎಕರೆ ಜಮೀನು ಈಗಾಗಲೇ ನೀರಿನಲ್ಲಿ ಮುಳುಗಿ ಹೋಗಿದೆ. ಇತ್ತ ದಾಸನಪುರ ಗ್ರಾಮದ ನದಿಯ ತಟದಲ್ಲಿರುವ ದೇವಾಲಯದ ಮೆಟ್ಟಿಲುಗಳು ಸಹ ಮುಳುಗಿ ಹೋಗಿವೆ. ಕಬಿನಿಯಿಂದ ಹೊರ ಹರಿವು ಹೆಚ್ಚಾದರೆ ಕೊಳ್ಳೇಗಾಲ ತಾಲೂಕಿನ 9 ಗ್ರಾಮಗಳು ಮುಳುಗಡೆಯಾಗುವ ಸಾಧ್ಯತೆ ಇದೆ. ಜಿಲ್ಲಾಡಳಿತ ಕೂಡ 28 ಕಡೆ ಕಾಳಜಿ ಕೇಂದ್ರ ತೆರೆಯುವುದಕ್ಕೆ ಸ್ಥಳ ಗುರುತಿಸಿದ್ದು ಗ್ರಾಮಗಳಿಗೆ ನೀರು ನುಗ್ಗಿದರೆ ಅಪಾರ ಪ್ರಮಾಣದ ಆಸ್ತಿ ಪಾಸ್ತಿ ಹಾಳಾಗುವ ಸಂಭವವಿದೆ.

9 ಗ್ರಾಮಗಳ ನದಿ ಪಾತ್ರದಲ್ಲಿ ತಡೆಗೋಡೆ ನಿರ್ಮಾಣ ಆಗದೆ ಇರುವುದರಿಂದ ಈ ಅವಾಂತರ ಸಂಭವಿಸಿದೆ ಎಂದು ಗ್ರಾಮಸ್ಥರು ಹೇಳಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದು, ಸದ್ಯ ಕೆಲ ಹಾಟ್ಸ್‌ಸ್ಪಾಟ್‌ಗಳನ್ನು ಗುರುತಿಸಿ ತಡೆಗೋಡೆ ನಿರ್ಮಾಣ ಮಾಡುವುದಾಗಿ ಗ್ರಾಮಸ್ಥರಿಗೆ ಭರವಸೆ ನೀಡಿದರು.

ಕಳೆದೊಂದು ವಾರದಿಂದ ಸುರಿಯುತ್ತಿರುವ ನಿರಂತರ ಮಳೆಗೆ ಕೊಳ್ಳೆಗಾಲ ತಾಲೂಕಿನ ಬೆಟ್ಟದ ಮಾದಹಳ್ಳಿ ಗ್ರಾಮದಲ್ಲಿ ಮನೆಯ ಮೇಲ್ಚಾವಣಿ ಕುಸಿದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿಯಾಗಿಲ್ಲ. ಸರ್ಕಾರ ಸೂಕ್ತ ಪರಿಹಾರ ನೀಡುವಂತೆ ಸಂತ್ರಸ್ಥರ ಮನವಿ ಮಾಡಿದ್ದಾರೆ.

Tags:    

Similar News