ಪಹಲ್ಗಾಮ್​ ಉಗ್ರರ ದಾಳಿ ಸಮರ್ಥಿಸಿಕೊಂಡು ಫೇಸ್ ​ಬುಕ್​ನಲ್ಲಿ ಪೋಸ್ಟ್​; ಕೇಸ್​ ದಾಖಲು

ಪೋಸ್ಟ್​ಗೆ ಸಾಮಾಜಿಕ‌ ಜಾಲತಾಣದಲ್ಲಿ ನೆಟ್ಟಿಗರು ಭಾರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಫೇಸ್‌ಬುಕ್‌ ​ ಪೇಜ್​ನ ಡಿಪಿಯಲ್ಲಿರುವ ಯುವಕ ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯ ನಿವಾಸಿ‌ಯಾಗಿದ್ದು, ಪೊಲೀಸರು ಆತನಿಗಾಗಿ ಹುಡುಕಾಟ ನಡೆಸಿದ್ದಾರೆ.;

Update: 2025-04-25 06:10 GMT

ಸಾಂದರ್ಭಿಕ ಚಿತ್ರ

ಜಮ್ಮು-ಕಾಶ್ಮೀರದ ಪಹಲ್ಗಾಮ್​ನಲ್ಲಿ ನಡೆದ ಉಗ್ರರ ಗುಂಡಿನ ದಾಳಿಯನ್ನು ಸಮರ್ಥಿಸಿಕೊಂಡು ಪೋಸ್ಟ್​ ಹಾಕಿದ್ದ ಫೇಸ್ ಬುಕ್ ಪೇಜ್ ವಿರುದ್ಧ ಮಂಗಳೂರಿನ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಉಳ್ಳಾಲದ ಸತೀಶ್ ಕುಮಾರ್ ಎಂಬವರು‌ ನೀಡಿದ ದೂರಿನ ಆಧಾರದ ಮೇಲೆ ಬಿಎನ್​ಎಸ್​ ಸೆಕ್ಷನ್ 192 ಮತ್ತು 353(1)(,b) ಅಡಿಯಲ್ಲಿ ಪ್ರಕರಣ ದಾಖಲಾಗಿದೆ. 

ನಿಚ್ಚು ಮಂಗಳೂರು ಎಂಬ‌ ಫೇಸ್​ಬುಕ್​ ಪೇಜ್​ನಲ್ಲಿ, “2023ರಲ್ಲಿ ಮಹಾರಾಷ್ಟ್ರದ ಪಾಲ್ಗರ್​ನಲ್ಲಿ ಮೂವರು ಮುಸ್ಲಿಮರನ್ನು‌ ಕೊಲ್ಲಲಾಗಿತ್ತು. ಆರೋಪಿ ಚೇತನ್ ಸಿಂಗ್​ ನನ್ನು  ಸಾರ್ವಜನಿಕವಾಗಿ ನೇಣಿಗೆ ಹಾಕಲಿಲ್ಲ. ಪಾಲ್ಗರ್ ಘಟನೆ ಕಾರಣಕ್ಕೆ ಕಾಶ್ಮೀರದಲ್ಲಿ ಧರ್ಮ ಕೇಳಿ ಉಗ್ರರು ಹತ್ಯೆ ಮಾಡಿದ್ದಾರೆ” ಎಂದು ಪೋಸ್ಟ್​ ಹಾಕಲಾಗಿದೆ.

ಈ ಪೋಸ್ಟ್​ಗೆ ಸಾಮಾಜಿಕ‌ ಜಾಲತಾಣದಲ್ಲಿ ನೆಟ್ಟಿಗರು ಭಾರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಫೇಸ್‌ಬುಕ್‌ ​ ಪೇಜ್​ನ ಡಿಪಿಯಲ್ಲಿರುವ ಯುವಕ ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯ ನಿವಾಸಿ‌ಯಾಗಿದ್ದು, ಪೊಲೀಸರು ಆತನಿಗಾಗಿ ಹುಡುಕಾಟ ನಡೆಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಮಂಗಳೂರು ನಗರ ಪೊಲೀಸ್ ಕಮೀಷನರ್ ಅನುಪಮ್‌ ಅಗರ್ವಾಲ್, "ನಿಚ್ಚು ಮಂಗಳೂರು ಎಂಬ ಖಾತೆಯ ಬಳಕೆದಾರರಿಂದ ಫೇಸ್‌ಬುಕ್‌ನಲ್ಲಿ ಪ್ರಚೋದನಕಾರಿ ಪೋಸ್ಟ್‌ಗೆ ಸಂಬಂಧಿಸಿದಂತೆ ಉಳ್ಳಾಲದ ನಿವಾಸಿ ಸತೀಶ್ ಕುಮಾರ್ ಅವರು ನೀಡಿದ ದೂರಿನ ಆಧಾರದ ಮೇಲೆ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಸಾರ್ವಜನಿಕ ಶಾಂತಿಗೆ ಭಂಗ ತರುವ ಉದ್ದೇಶದಿಂದ ಪೋಸ್ಟ್‌ನಲ್ಲಿ ಪ್ರಚೋದನಕಾರಿ ಮತ್ತು ಆಕ್ಷೇಪಾರ್ಹ ಹೇಳಿಕೆಗಳಿವೆ. ದೂರುದಾರರು ಪೋಸ್ಟ್‌ನ ಸ್ಕ್ರೀನ್‌ಶಾಟ್‌ಗಳನ್ನು ಮತ್ತು ಬಳಕೆದಾರರ ಪ್ರೊಫೈಲ್ ಅನ್ನು ಸಾಕ್ಷ್ಯಕ್ಕಾಗಿ ಸಲ್ಲಿಸಿದ್ದಾರೆ. ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್), 2023ರ ಸೆಕ್ಷನ್ 192 ಮತ್ತು 353(1)(ಬಿ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ತನಿಖೆ ಮುಂದುವರಿದಿದೆ'' ಎಂದು ಅವರು ತಿಳಿಸಿದ್ದಾರೆ. 

ಜಮ್ಮು-ಕಾಶ್ಮೀರದ ಪಹಲ್ಗಾಮ್​ನಲ್ಲಿ ಉಗ್ರರು ನಡೆಸಿದ ಗುಂಡಿನ ದಾಳಿಯಲ್ಲಿ ಮೂವರು ಕನ್ನಡಿಗರು ಒಟ್ಟು 28 ಜನರು ಸಾವನ್ನಪ್ಪಿದ್ದರು. ಹಲವರು ಗಾಯಗೊಂಡಿದ್ದರು. 

Tags:    

Similar News