Lake Encroachment: Part 2 |ಕಾಗದದಲ್ಲೇ ಉಳಿದ ನ್ಯಾ.ಎನ್. ಕೆ. ಪಾಟೀಲ್ ಸಮಿತಿ ಶಿಫಾರಸು; ಸುಗ್ರೀವಾಜ್ಞೆಯಿಂದ ಮಾತ್ರ ಕೆರೆ ಸಂರಕ್ಷಣೆ ಸಲೀಸು
ಕಾಲಮಿತಿಯಲ್ಲಿ ಕೆರೆಗಳ ಒತ್ತುವರಿ ತೆರವು, ಕೆರೆ, ಕುಂಟೆ ಹಾಗೂ ಇತರೆ ಜಲಮೂಲಗಳು ಸಂರಕ್ಷಣೆಗೆ ಸಮರೋಪಾದಿಯಲ್ಲಿ ಕಾರ್ಯ ನಿರ್ವಹಿಸಬೇಕು ಎಂಬ ನ್ಯಾ. ಎನ್. ಕೆ. ಪಾಟೀಲ್ ಸಮಿತಿಯ ಶಿಫಾರಸುಗಳು ಕಾಗದದಲ್ಲಿ ಮಾತ್ರ ಉಳಿದಿವೆ.;
ಕೆರೆಗಳ ಒತ್ತುವರಿ ತೆರವಿಗೆ ಪರಿಸರವಾದಿಗಳು, ಸಂಘ ಸಂಸ್ಥೆಗಳು ಮೊರೆ ಇಟ್ಟರೂ, ನ್ಯಾಯಾಲಯಗಳು ಆದೇಶ ಹೊರಡಿಸಿದರೂ ಅನುಷ್ಟಾನಾಧಿಕಾರಿಗಳ ಅಸಡ್ಡೆಯಿಂದ ಕೆರೆ ಸಂರಕ್ಷಣೆಯ ಕಾಳಜಿ ಕಡತಗಳಲ್ಲಷ್ಟೇ ಉಳಿಯುವಂತಾಗಿದೆ.
2012 ರಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆ ನಡೆಸಿದ್ದ ಹೈಕೋರ್ಟ್, ವಾಸ್ತವ ಸ್ಥಿತಿ ಅಧ್ಯಯನ ಮಾಡಿ, ಕ್ರಿಯಾ ಯೋಜನೆ ಸಿದ್ಧಪಡಿಸಲು ನ್ಯಾ.ಎನ್.ಕೆ. ಪಾಟೀಲ್ ನೇತೃತ್ವದಲ್ಲಿ ತಾಂತ್ರಿಕ ಸಲಹಾ ಸಮಿತಿ ರಚಿಸಿತ್ತು. ಅದರಂತೆ ಕ್ರಿಯಾ ಯೋಜನೆ ಸಿದ್ದಪಡಿಸಿದ್ದ ಸಮಿತಿ ಬೆಂಗಳೂರು ನಗರದ ಎಲ್ಲ ಕೆರೆಗಳನ್ನು 2014ರೊಳಗೆ ಪುನರುಜ್ಜೀವನಗೊಳಿಸಬೇಕು ಎಂದು ಶಿಫಾರಸು ಮಾಡಿತ್ತು. ಅಲ್ಲದೇ ಕಾಲಮಿತಿಯಲ್ಲಿ ಕೆರೆಗಳ ಒತ್ತುವರಿ ತೆರವು, ಕೆರೆ, ಕುಂಟೆ ಹಾಗೂ ಇತರೆ ಜಲಮೂಲಗಳು ಸಂರಕ್ಷಣೆಗೆ ಸಮರೋಪಾದಿಯಲ್ಲಿ ಕಾರ್ಯ ನಿರ್ವಹಿಸಬೇಕು ಎಂದು ಹೇಳಿತ್ತು. ಆದರೆ, ಸರ್ಕಾರ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಆ ಶಿಫಾರಸುಗಳು ದಾಖಲೆಯಲ್ಲಷ್ಟೇ ಉಳಿದಿವೆ. ಕೆರೆ ಒತ್ತುವರಿ ತೆರವಿನ ಪ್ರಹಸನ ಹಾಗೆಯೇ ಮುಂದುವರಿದಿದೆ.
ಹೈಕೋರ್ಟ್ ಆದೇಶಕ್ಕೂ ಕಿಮ್ಮತ್ತಿಲ್ಲ
2022 ರಲ್ಲಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಅಭಯ್ ಎಸ್. ಓಕಾ ಅವರು ಕೆರೆಗಳ ಸಂರಕ್ಷಣೆಗೆ ತಕ್ಷಣ ಕ್ರಮ ಕೈಗೊಳ್ಳಲು ಸೂಚಿಸಿದ್ದರು. ಕೆರೆಗಳ ಒತ್ತುವರಿ ತೆರವು ಪ್ರಕರಣಗಳ ಪುನರ್ ಪರಿಶೀಲನೆ ಮಾಡಿ ಆಯಾ ಜಿಲ್ಲಾಧಿಕಾರಿಗಳನ್ನೇ ಕಸ್ಟೋಡಿಯನ್‌ಗಳಾಗಿ ನೇಮಿಸಬೇಕು. ಕರ್ನಾಟಕ ಕಾನೂನು ಸೇವಾ ಪ್ರಾಧಿಕಾರಕ್ಕೆ ಉಸ್ತುವಾರಿ ನಿಗದಿಪಡಿಸಬೇಕು. ಒತ್ತುವರಿ ತೆರವಿಗೆ ನಿರ್ಲಕ್ಷ್ಯ ವಹಿಸುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲು ಕಾನೂನು ಸೇವಾ ಪ್ರಾಧಿಕಾರಕ್ಕೆ ಅಧಿಕಾರ ನೀಡಬೇಕು ಎಂದು ಆದೇಶಿಸಿದ್ದರು. ಆದರೆ, ಇಲ್ಲಿಯವರೆಗೆ ಕೆರೆ ಸಂರಕ್ಷಣೆಗೆ ಯಾವುದೇ ರಚನಾತ್ಮಕ ಕೆಲಸ ಮಾಡುವಲ್ಲಿ ಸರ್ಕಾರ, ಸಂಬಂಧಪಟ್ಟ ಇಲಾಖೆ ಅಥವಾ ಜಿಲ್ಲಾಧಿಕಾರಿಗಳು ಪ್ರಯತ್ನ ಮಾಡಿಲ್ಲ ಎಂಬ ಆರೋಪಗಳು ಕೇಳಿ ಬಂದಿವೆ.
ಸುಗ್ರೀವಾಜ್ಞೆಯಿಂದ ಕೆರೆ ಸಂರಕ್ಷಣೆ ಸಾಧ್ಯ
ಅರಣ್ಯ ಜಾಗ ಗುರುತಿಸುವುದು ಆ ಇಲಾಖೆಗೆ ಇರುವ ಪರಮಾಧಿಕಾರ. ಅದೇ ರೀತಿ ಕೆರೆ ಜಾಗ ಗುರುತಿಸುವುದು ಕಂದಾಯ ಇಲಾಖೆ ಜವಾಬ್ದಾರಿ. ಕೆರೆಯ ಮಾಹಿತಿ, ನಕ್ಷೆಗಳು ಲಭ್ಯವಿರುವಾಗ ಒತ್ತುವರಿಗೆ ಅವಕಾಶ ಮಾಡಿಕೊತ್ತಿರುವುದರ ಹಿಂದೆ ರಾಜಕಾರಣಿಗಳು ಹಾಗೂ ರಿಯಲ್ ಎಸ್ಟೇಟ್ ಕುಳಗಳ ಲಾಬಿಯಿದೆ.
ರಾಜ್ಯ ಸರ್ಕಾರ ಕೆರೆ ಸಂರಕ್ಷಣೆಗೆ ಸುಗ್ರೀವಾಜ್ಞೆ ಜಾರಿಗೊಳಿಸಿದರೆ ಜೀವನಾಡಿ ಕೆರೆಗಳು ಉಳಿಯುವ ಸಾಧ್ಯತೆ ಇದೆ. ಇಲ್ಲವಾದರೆ ಕೆರೆಗಳ ಜಾಗ ರಾಜಕಾರಣಿಗಳು, ಪಟ್ಟಭದ್ರರ ಪಾಲಾಗುವುದು ಖಚಿತ. ಕೆಲ ಪ್ರಕರಣಗಳಲ್ಲಿ ಕೆರೆಯ ಜಾಗದ ದಾಖಲೆಗಳನ್ನೇ ಅಧಿಕಾರಿಗಳು ತಾರುಮಾರು ಮಾಡುವ ಉದಾಹರಣೆಗಳಿವೆ. ಹಾಗಾಗಿ ಸುಗ್ರೀವಾಜ್ಞೆ ಜಾರಿ ಮಾಡಬೇಕು ಎಂದು ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಆಂಜನೇಯ ರೆಡ್ಡಿ ಅವರು ದ ಫೆಡರಲ್ ಕರ್ನಾಟಕಕ್ಕೆ ತಿಳಿಸಿದರು.
ಸರ್ಕಾರಗಳು ಅವೈಜ್ಞಾನಿಕ ಯೋಜನೆಗಳಿಗೆ ಸಾವಿರಾರು ಕೋಟಿ ಖರ್ಚು ಮಾಡುತ್ತಿವೆ. ಜನಸಂಖ್ಯೆಗೆ ಅನುಗುಣವಾಗಿ ಕೃಷಿ ಪ್ರದೇಶ, ಆಹಾರ ಭದ್ರತೆ, ನೀರಿನ ಮೂಲಗಳನ್ನು ಖಾತರಿಪಡಿಸಿಕೊಳ್ಳುವುದು ನಮ್ಮ ಜವಾಬ್ದಾರಿ. ಆದರೆ, ಇಂದು ನೀರಿನ ಮೂಲಗಳು ಹಾಳಾಗಿ ಕೃಷಿ ಚಟುವಟಿಕೆ ಕಡಿಮೆಯಾಗಿವೆ. ಇದರ ಪರಿಣಾಮ ಕುಡಿಯುವ ನೀರು, ಕೃಷಿ ಹಾಗೂ ಜೀವ ವೈವಿದ್ಯದ ಮೇಲೆ ದುಷ್ಪರಿಣಾಮ ಬೀರಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಪರಿಸರವಾದಿ ಸಿ. ಚೌಡಪ್ಪ ಅವರು ದ ಫೆಡರಲ್ ಕರ್ನಾಟಕದೊಂದಿಗೆ ಮಾತನಾಡಿ, ಗ್ರಾಮೀಣ ಭಾಗದ ಸ್ಥಳೀಯ ಸಂಸ್ಥೆಗಳಲ್ಲೂ ಕೆರೆಗಳು ಮಾಯವಾಗಿವೆ. ಗೌರಿಬಿದನೂರು ತಾಲೂಕಿನ ಹಿರೇಬಿದನೂರು ಕೆರೆಯ ಜಾಗದಲ್ಲಿ ಬಸ್ ನಿಲ್ದಾಣ ತಲೆ ಇಟ್ಟಿದೆ. ಇನ್ನು ಕೆಲ ಕೆರೆಗಳು ಭೂಗಳ್ಳರ ಪಾಲಾಗಿವೆ. ಅಧಿಕಾರಿಗಳು, ರಾಜಕಾರಣಿಗಳು ಲಾಲಸೆಗೆ ಕೆರೆಗಳು ಅವನತಿ ಹೊಂದುತ್ತಿವೆ ಎಂದು ಹೇಳಿದರು.
ಕೆರೆಗಳ ಮೇಲೆ ದೌರ್ಜನ್ಯ, ಅವುಗಳ ಅಸ್ತಿತ್ವಕ್ಕೆ ಅಪಾಯ ತಂದೊಡ್ಡುವ ಕಾನೂನು ಬಾಹಿರ ಕೆಲಸಗಳಿಗೆ ಕಡಿವಾಣ ಹಾಕಬೇಕೆಂದು ಹೈಕೋರ್ಟ್, ಸುಪ್ರೀಂಕೋರ್ಟ್, ಹಸಿರು ನ್ಯಾಯಪೀಠ ಸಾಕಷ್ಟು ಆದೇಶಗಳನ್ನು ನೀಡಿವೆ. ಆದರೆ, ಅವುಗಳನ್ನು ಜಾರಿ ಮಾಡುವಲ್ಲಿ ಕಾರ್ಯಾಂಗ ಎಡವಿದೆ. ಈ ರೀತಿಯ ನಿರ್ಲಕ್ಷ್ಯ ಮುಂದುವರಿದರೆ ನ್ಯಾಯಾಲಯದ ಆದೇಶಗಳು ಕೇವಲ ಹಾಳೆಯ ಮೇಲಷ್ಟೇ ಇರುತ್ತವೆ. ಕೆರೆ ಸಂರಕ್ಷಣೆ ವಿಚಾರದಲ್ಲಿ ರಾಜಕೀಯ ಬಿಡಬೇಕು. ಅಧಿಕಾರಿಗಳು ಈಗಿನಿಂದಲೇ ಕೆರೆಗಳ ಉಳಿವಿಗೆ ಶಪಥ ಮಾಡಬೇಕು. ಜೊತೆಗೆ ಸಮುದಾಯಗಳು ಕೂಡ ಬದ್ಧತೆ ತೋರಿಸಬೇಕು ಎಂದು ಮನವಿ ಮಾಡಿದರು.
ಒತ್ತುವರಿ ತೆರವು ಪ್ರಹಸನ
ರಾಜ್ಯದಲ್ಲಿ ಸಾಕಷ್ಟು ಕೆರೆಗಳು ಒತ್ತುವರಿಯಾಗಿವೆ. ರಾಜ್ಯದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಸಣ್ಣ ನೀರಾವರಿ ಇಲಾಖೆ, ಬಿಬಿಎಂಪಿ, ಬಿಡಿಎ, ನಗರ ಸ್ಥಳೀಯ ಸಂಸ್ಥೆಗಳು, ಬೃಹತ್ ನೀರಾವರಿ ಇಲಾಖೆ, ಅರಣ್ಯ, ಕಂದಾಯ ಹಾಗೂ ಇತರೆ ಕೆರೆಗಳು ಒಟ್ಟು 41,875 ಇವೆ. ಇವುಗಳ ಪೈಕಿ 31,033 ಕೆರೆಗಳನ್ನು ಅಳತೆ ಮಾಡಿದ್ದು, 11,212ಕೆರೆಗಳು ಒತ್ತುವರಿಯಾಗಿವೆ.
ಬೆಂಗಳೂರಿನಲ್ಲಿ ಬಿಬಿಎಂಪಿ(202) ಹಾಗೂ ಬಿಡಿಎ(4) ವ್ಯಾಪ್ತಿಯಲ್ಲಿ 206 ಕೆರೆಗಳಿವೆ. ಅವುಗಳಲ್ಲಿ 171ಕೆರೆಗಳು ಅಳತೆಯಾಗಿದ್ದು, 118 ಕೆರೆಗಳು ಒತ್ತುವರಿಯಾಗಿವೆ. ಆದರೆ, ಒತ್ತುವರಿ ತೆರವು ಮಾಡಿರುವುದು 20ಕೆರೆಗಳು ಮಾತ್ರ. ಇದರಲ್ಲಿ ಬಿಬಿಎಂಪಿಯ 18, ಬಿಡಿಎನ 2 ಕೆರೆಗಳಿವೆ. ಬಿಬಿಎಂಪಿಯ 96 ಹಾಗೂ ಬಿಡಿಎನ 2ಕೆರೆಗಳನ್ನು ಒತ್ತುವರಿ ಮಾಡಬೇಕಾಗಿದೆ.
ಎ. ಟಿ. ರಾಮಸ್ವಾಮಿ ಸಮಿತಿಯ ವರದಿ ಪ್ರಕಾರ ಬೆಂಗಳೂರು ನಗರ ಒಂದರಲ್ಲೇ 1848 ಎಕರೆ ಕೆರೆ ಜಾಗ ಒತ್ತುವರಿಯಾಗಿದೆ. ಆದರೆ, ಬಿಬಿಎಂಪಿ ಅಧಿಕಾರಿಗಳ ಪ್ರಕಾರ ಕೇವಲ 69 ಎಕರೆ ಒತ್ತುವರಿಯಾಗಿದೆಯಂತೆ.
ಕೆರೆಗಳ ಒತ್ತುವರಿ ತೆರವಿಗೆ ಬಿಬಿಎಂಪಿ 2023 ಸೆಪ್ಟೆಂಬರ್ ಮೊದಲ ವಾರದಲ್ಲಿ ಹೈಕೋರ್ಟ್‌ಗೆ ಪ್ರಮಾಣ ಪತ್ರದೊಂದಿಗೆ ಕ್ರಿಯಾಯೋಜನೆ ಸಲ್ಲಿಸಿತ್ತು. 159 ಕೆರೆಗಳಲ್ಲಿನ ಒತ್ತುವರಿ ತೆರವಿಗೆ 16 ವಾರಗಳ ಕ್ರಿಯಾಯೋಜನೆ ರೂಪಿಸಿತ್ತು. ಆದರೆ, ಆ ಕ್ರಿಯಾಯೋಜನೆ ಡಿಸೆಂಬರ್ ಅಂತ್ಯಕ್ಕೆ ಮುಗಿದರೂ ಅಧಿಕಾರಿಗಳು ತೆರವು ಕಾರ್ಯಾಚರಣೆ ಆರಂಭಿಸಿರಲಿಲ್ಲ.
2024ರ ಅ.25ರಂದು ಕೆರೆ ಸಂರಕ್ಷಣೆ ಕುರಿತು ಸಭೆ ನಡೆಸಿದ ಬಿಬಿಎಂಪಿ ಮುಖ್ಯ ಆಯುಕ್ತರು ಕ್ರಿಯಾಯೋಜನೆಯಂತೆ ಕೆಲಸ ಆಗದ ಕಾರಣ ಅಸಮಾಧಾನ ವ್ಯಕ್ತಪಡಿಸಿದ್ದರು. ಆ ಸಭೆಯಲ್ಲಿ ಮತ್ತೆ ನ.25ರೊಳಗೆ ಎಲ್ಲ ಕೆರೆಗಳ ಒತ್ತುವರಿ ಕಾರ್ಯ ಪೂರ್ಣಗೊಳಿಸಲು ಸೂಚನೆ ನೀಡಲಾಗಿತ್ತು. ಒತ್ತುವರಿ ತೆರವು ಮಾಡದಿದ್ದರೆ ಸಂಬಂಧಪಟ್ಟ ಅಧಿಕಾರಿಗಳ ಮೇಲೆ ಕರ್ನಾಟಕ ನಾಗರಿಕ ಸೇವಾ ನಿಯಮಾವಳಿ ಮತ್ತು ಕರ್ನಾಟಕ ಮುನಿಸಿಪಾಲಿಟಿ ಕಾಯ್ದೆಯನ್ವಯ ಶಿಸ್ತು ಕ್ರಮ ಜರುಗಿಸುವ ಎಚ್ಚರಿಕೆ ಸಹ ನೀಡಲಾಗಿತ್ತು.
2024 ನ.30 ರಂದು ಅರಣ್ಯ, ಪರಿಸರ ಮತ್ತು ಹವಾಮಾನ ವೈಪರೀತ್ಯ ನಿರ್ವಹಣೆಯ ವಿಶೇಷ ಆಯುಕ್ತರು ಅಭಿಯಾನದ ರೀತಿಯಲ್ಲಿ ಪಾಲಿಕೆ ವ್ಯಾಪ್ತಿಯ 202 ಕೆರೆಗಳ ಪೈಕಿ 162 ಕೆರೆಗಳ ಸರ್ವೆ ಕಾರ್ಯ ಮುಗಿಸಿದರು. 49 ಕೆರೆಗಳಲ್ಲಿ ಒತ್ತುವರಿ ತೆರವು ಮಾಡಲಾಯಿತು. ಇದರಲ್ಲಿ 23 ಕೆರೆಗಳಲ್ಲಿ ಸರ್ಕಾರವೇ ಒತ್ತುವರಿ ಮಾಡಿರುವುದು ಬೆಳಕಿಗೆ ಬಂದಿತ್ತು.
4618 ಕೆರೆಗಳ ಒತ್ತುವರಿ ತೆರವು, 8697 ಎಕರೆ ಭೂಮಿ ವಶ
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ರಾಜ್ಯದಾದ್ಯಂತ ಒತ್ತುವರಿಯಾದ 9140 ಕೆರೆಗಳನ್ನು ಗುರುತಿಸಿದ್ದು, ಈ ಪೈಕಿ 4618 ಕೆರೆಗಳ ಒತ್ತುವರಿ ತೆರವುಗೊಳಿಸಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ರಾಜ್ಯದ ಜಿಲ್ಲಾ ಪಂಚಾಯತಿಗಳ ವ್ಯಾಪ್ತಿಯಲ್ಲಿ 32648 ಕೆರೆಗಳಿದ್ದು, 9140 ಕೆರೆಗಳು ಒತ್ತುವರಿಗೊಂಡಿದ್ದವು. 4618 ಕೆರೆಗಳ 8697 ಎಕರೆ ಒತ್ತುವರಿ ಭೂಮಿಯನ್ನು ಜಿಲ್ಲಾ ಪಂಚಾಯತಿಗಳ ವಶಕ್ಕೆ ಪಡೆಯಲಾಗಿದೆ. ಉಳಿದ 4522 ಕೆರೆಗಳನ್ನು ತೆರವುಗೊಳಿಸುವ ಕೆಲಸ ಪ್ರಗತಿಯಲ್ಲಿದೆ ಎಂದು ಸಚಿವರು ಹೇಳಿದ್ದಾರೆ.
ಬಾಕಿ ಇರುವ 8151 ಕೆರೆಗಳ ಸಮೀಕ್ಷೆಯನ್ನು ಮುಂದಿನ 30 ದಿನಗಳ ಒಳಗೆ ಮುಗಿಸುವಂತೆಯೂ ಎಲ್ಲಾ ಜಿಲ್ಲಾ ಪಂಚಾಯತಿಗಳ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಹಾಸನ ಜಿಲ್ಲೆಯಲ್ಲಿ 6367 ಕೆರೆಗಳಿದ್ದು, ಬಳ್ಳಾರಿ ಜಿಲ್ಲೆ ಅತಿ ಕಡಿಮೆ ಅಂದರೆ 21 ಕೆರೆಗಳನ್ನು ಹೊಂದಿದೆ. ಶಿವಮೊಗ್ಗ 4354 ಹಾಗೂ ಮೈಸೂರು 2805 ಕೆರೆಗಳನ್ನು ಹೊಂದಿವೆ. ಕಲಬುರಗಿಯಲ್ಲಿ 33 ಮತ್ತು ಕೊಪ್ಪಳದಲ್ಲಿ 39 ಕೆರೆಗಳಿವೆ ಎಂದು ಸಚಿವರು ವಿವರಿಸಿದ್ದಾರೆ.