ಸಚಿವ ಜೋಶಿ ವಿರುದ್ಧ ಅಭಿಯಾನ | ಮಾನಹಾನಿ, ಜೀವಹಾನಿ ಬೆದರಿಕೆ ಬಂದಿವೆ: ದಿಂಗಾಲೇಶ್ವರ ಸ್ವಾಮೀಜಿ
ಜೋಶಿ ಅವರಿಂದಾಗಿ ನೊಂದವರಿಗೆ ನ್ಯಾಯ ಕೊಡಿಸುವ ನಿಟ್ಟಿನಲ್ಲಿ ಅವರನ್ನು ಸೋಲಿವುದು ಅನಿವಾರ್ಯ ಎಂದಿರುವ ಸ್ವಾಮೀಜಿ, ಏ.2 ರಂದು ಧಾರವಾಡದಲ್ಲಿ ಕರೆದಿರುವು ಸಭೆಯ ಮೇಲೆ ಎಲ್ಲರ ಕಣ್ಣು ನೆಟ್ಟಿವೆ. ಸ್ವಾಮೀಜಿಯ ಮುಂದಿನ ನಡೆ ಏನು? ಎಂಬುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ.;
ಧಾರವಾಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರಲ್ಹಾದ ಜೋಶಿ ಬದಲಾವಣೆಗೆ ಒತ್ತಾಯಿಸಿರುವ ತಮಗೆ ಮಾನಹಾನಿ, ಪ್ರಾಣಹಾನಿಯ ಬೆದರಿಕೆಗಳು ಬರುತ್ತಿವೆ. ಆದರೆ, ಅಂತಹ ಬೆದರಿಕೆ, ಆಮಿಷಗಳಿಗೆ ಜಗ್ಗುವ ಪ್ರಶ್ನೆಯೇ ಇಲ್ಲ. ಜೋಶಿ ಸೋಲಿಸುವುದು ಅನಿವಾರ್ಯ ಎಂದು ಶಿರಹಟ್ಟಿ ಭಾವೈಕ್ಯ ಪೀಠದ ಫಕೀರ ದಿಂಗಾಲೇಶ್ವರ ಸ್ವಾಮೀಜಿ ಹೇಳಿದ್ದಾರೆ.
ಕ್ಷೇತ್ರದ ಬಹುಸಂಖ್ಯಾತರಿಗೆ ಜೋಶಿ ಅವರಿಂದ ಅನ್ಯಾಯವಾಗಿದೆ. ಹಾಗಾಗಿ ಅವರನ್ನು ಬದಲಾಯಿಸಿ ಎಂದು ಬಿಜೆಪಿಗೆ ಒತ್ತಾಯಿಸಿದ್ದ ದಿಂಗಾಲೇಶ್ವರ ಸ್ವಾಮೀಜಿ, ಮಾ.31 ರೊಳಗೆ ಅಭ್ಯರ್ಥಿಯ ಬದಲಾವಣೆ ಮಾಡದೇ ಇದ್ದಲ್ಲಿ ಬೇರೆ ನಿರ್ಧಾರ ಕೈಗೊಳ್ಳಲಾಗುವುದು ಎಂದು ಬಿಜೆಪಿಗೆ ಗಡುವು ನೀಡಿದ್ದರು.
ಭಾನುವಾರ(ಮಾ.31) ರಂದು ಗಡುವು ಮುಗಿದಿದ್ದು, ಅಭ್ಯರ್ಥಿಯ ವಿಷಯದಲ್ಲಿ ಬಿಜೆಪಿ ಯಾವುದೇ ಬದಲಾವಣೆ ಮಾಡಿಲ್ಲ. ಆ ಹಿನ್ನೆಲೆಯಲ್ಲಿ ಹುಬ್ಬಳ್ಳಿಯಲ್ಲಿ ಭಾನುವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿರುವ ಸ್ವಾಮೀಜಿ, ಪ್ರತ್ಯಕ್ಷವಾಗಿ ಭೇಟಿ ನೀಡಿ, ದೂರವಾಣಿ ಮೂಲಕ ಬಿಜೆಪಿಯ ಹಲವು ನಾಯಕರು ಮಾತನಾಡಿ ನನ್ನ ಮನವೊಲಿಸಲು ಯತ್ನಿಸಿದ್ದಾರೆ. ಜೊತೆಗೆ ಮಾನಹಾನಿ, ಪ್ರಾಣಹಾನಿಯ ಬೆದರಿಕೆಗಳನ್ನೂ ಕೆಲವು ಒಡ್ಡಿದ್ದಾರೆ. ಆದರೆ, ಅಂತಹ ಬೆದರಿಕೆ, ಆಮಿಷಗಳಿಗೆ ಬಗ್ಗುವ ಸ್ವಾಮೀಜಿ ನಾನಲ್ಲ. ತಮ್ಮ ನಿಲುವಿನಿಂದ ಹಿಂದೆ ಸರಿಯುವುದಿಲ್ಲ ಮತ್ತು ಮಾನ, ಪ್ರಾಣ ಹೋದರೂ ಮುಂದಿಟ್ಟ ಹೆಜ್ಜೆ ಹಿಂದೆ ಇಡಲ್ಲ ಎಂದು ಘೋಷಿಸಿದರು.
ಮಾ.31 ರ ಗಡುವು ಮುಗಿದಿದೆ. ಹಾಗಾಗಿ ಏ.2ರಂದು ಬೆಳಿಗ್ಗೆ ಧಾರವಾಡದಲ್ಲಿ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಭಕ್ತರ ಸಭೆ ಕರೆಯಲಾಗಿದೆ. ಆ ಸಭೆಯಲ್ಲಿ ಮುಂದಿನ ನಿರ್ಧಾರದ ಕುರಿತು ಸಮಾಲೋಚಿಸಿ ತೀರ್ಮಾನ ಕೈಗೊಳ್ಳಲಾಗುವುದು. ನಮ್ಮದು ಭಾವೈಕ್ಯ ಮಠ, ಎಲ್ಲರ ಪರವಾಗಿ ನಿಲ್ಲುವುದು, ನೊಂದವರಿಗೆ ಸಾಂತ್ವನ ನೀಡುವುದು ನಮ್ಮ ಕರ್ತವ್ಯ. ಜೋಶಿ ಅವರ ದಮನಕಾರಿ ನೀತಿ, ನಡೆಗಳಿಂದ ಕ್ಷೇತ್ರದ ಹಲವು ಸಮುದಾಯಗಳು ನೊಂದಿವೆ. ಅಂತಹ ನೊಂದವರಿಗೆ ನ್ಯಾಯ ಕೊಡಿಸುವುದು ನಮ್ಮ ಆದ್ಯತೆ. ಚುನಾವಣೆಗೆ ನಿಲ್ಲುವುದು, ಅಥವಾ ಬೇರೊಬ್ಬರನ್ನು ನಿಲ್ಲಿಸುವುದು ಮುಖ್ಯವಲ್ಲ. ಅಂತಹ ಯೋಚನೆಯೂ ಇಲ್ಲ. ನೊಂದವರಿಗೆ ನ್ಯಾಯ ಕೊಡಿಸುವುದಷ್ಟೇ ನಮ್ಮ ಉದ್ದೇಶ ಎಂದು ಸ್ವಾಮೀಜಿ, ಚುನಾವಣೆಗೆ ನಿಲ್ಲುವ ಕುರಿತ ಊಹಾಪೋಹಗಳಿಗೆ ತೆರೆ ಎಳೆದರು. ಆದರೆ, ಜೋಶಿ ಸೋಲಿಸುವ ತಮ್ಮ ನಿರ್ಧಾರ ಅಚಲ ಎಂದರು.
ಬಿಜೆಪಿಗೆ ಜೋಶಿ ಅನಿವಾರ್ಯವಾದರೆ, ನಮಗೆ ಜನ, ಜನ ಹಿತ, ನೆಮ್ಮದಿ ಅನಿವಾರ್ಯ. ಅದಕ್ಕಾಗಿ ಯಾವ ಹೋರಾಟಕ್ಕೂ ಸಿದ್ಧ. ಜೀವ ಇರುವವರೆಗೆ ಈ ಹೋರಾಟ ಮುಂದುವರಿಯಲಿದೆ ಎಂದು ಸ್ವಾಮೀಜಿ, ನಮ್ಮೊಂದಿಗೆ ಇದ್ದ ಸ್ವಾಮೀಜಿಗಳಿಗೆ ಹೇಳಿಕೆ ಬದಲಾಯಿಸುವಂತೆ ಒತ್ತಡ ಹೇರಲಾಗುತ್ತಿದೆ. ಅವರೇ ಪತ್ರ ಬರೆದು ಮಠಗಳಿಗೆ ಕಳಿಸಿದ್ದಾರೆ. ದೇಶದಲ್ಲಿ ಪ್ರಜಾಸತ್ತೆ ಸತ್ತುಹೋಗಿ, ರಾಜಸತ್ತೆ ನಡೆಯುತ್ತಿದೆ ಎಂಬುದು ಸಾಬೀತಾಗಿದೆ. ಜೋಶಿ ಅವರಿಗೆ ಬುದ್ಧಿ ಕಲಿಸಲು ನಾನೊಬ್ಬನೇ ಸಾಕು. ದುರ್ಬಲ ಸ್ವಾಮೀಜಿ ನಾನಲ್ಲ; ಒಂದು ಬಾರಿ ತೆಗೆದುಕೊಂಡ ತೀರ್ಮಾನವನ್ನು ಎಷ್ಟೇ ದೊಡ್ಡ ವ್ಯಕ್ತಿ, ಎಂಥದ್ದೇ ಒತ್ತಡ ಹೇರಿದರೂ ಬದಲಿಸುವ ಪ್ರಶ್ನೆಯೇ ಇಲ್ಲ ಎಂದು ಖಡಾಖಂಡಿತವಾಗಿ ನುಡಿದರು.
ಜೋಶಿ ವಿರುದ್ಧ ಚುನಾವಣೆಗೆ ತಾವು ಸ್ಪರ್ಧಿಸುವುದಿಲ್ಲ, ಬೇರೊಬ್ಬರನ್ನೂ ಕಣಕ್ಕಿಳಿಸುವುದಿಲ್ಲ ಎಂದಿರುವ ಸ್ವಾಮೀಜಿ, ಜೋಶಿ ಅವರಿಂದಾಗಿ ನೊಂದವರಿಗೆ ನ್ಯಾಯ ಕೊಡಿಸುವ ನಿಟ್ಟಿನಲ್ಲಿ ಅವರನ್ನು ಸೋಲಿವುದು ಅನಿವಾರ್ಯ ಎಂಬ ಹೇಳಿಕೆ ನೀಡಿದ್ದಾರೆ. ಹಾಗಾಗಿ ಸ್ವಾಮೀಜಿ ಅವರು ಏಪ್ರಿಲ್ 2 ರಂದು ಧಾರವಾಡದಲ್ಲಿ ಕರೆದಿರುವು ಸಭೆಯ ಮೇಲೆ ಎಲ್ಲರ ಕಣ್ಣು ನೆಟ್ಟಿವೆ. ಸ್ವಾಮೀಜಿಯ ಮುಂದಿನ ನಡೆ ಏನು? ಎಂಬುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ.