ʼನಯಾಗರʼವಾಗಲಿದೆ ಜೋಗ | ನಾಳೆ ಜಲಾಶಯದಿಂದ ನೀರು ಬಿಡುಗಡೆ

ಗುರುವಾರ(ಆ.1) ಜಲಾಶಯದಿಂದ ಭಾರೀ ಪ್ರಮಾಣದ ನೀರನ್ನು ನದಿಗೆ ಬಿಡುವುದಾಗಿ ಕೆಪಿಸಿ ಘೋಷಿಸಿದೆ. ಆ ಹಿನ್ನೆಲೆಯಲ್ಲಿ ಜೋಗ ಜಲಪಾತಕ್ಕೆ ಸುಮಾರು ಆರು ವರ್ಷಗಳ ಬಳಿಕ ಭಾರೀ ಪ್ರಮಾಣದ ನೀರು ಹರಿದುಬರಲಿದ್ದು, ಜಲಾಶಯದ ಎಲ್ಲಾ ಧಾರೆಗಳೂ ಒಂದಾಗಿ ನಯಾಗರ ಜಲಪಾತದಂತೆ ಧುಮ್ಮಿಕ್ಕುವ ಅಪರೂಪದ ನೋಟ ಕಾಣಸಿಗಲಿದೆ.;

Update: 2024-07-31 08:26 GMT

ಮಲೆನಾಡಿನ ಶರಾವತಿ ಅಚ್ಚುಕಟ್ಟು ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಲಿಂಗನಮಕ್ಕಿ ಜಲಾಶಯ ಬಹುತೇಕ ಭರ್ತಿಯಾಗಿದ್ದು, ಗುರುವಾರ(ಆ.1) ಜಲಾಶಯದಿಂದ ಭಾರೀ ಪ್ರಮಾಣದ ನೀರನ್ನು ನದಿಗೆ ಬಿಡುವುದಾಗಿ ಕೆಪಿಸಿ ಘೋಷಿಸಿದೆ. ಆ ಹಿನ್ನೆಲೆಯಲ್ಲಿ ಜೋಗ ಜಲಪಾತಕ್ಕೆ ಸುಮಾರು ಆರು ವರ್ಷಗಳ ಬಳಿಕ ಭಾರೀ ಪ್ರಮಾಣದ ನೀರು ಹರಿದುಬರಲಿದ್ದು, ಜಲಾಶಯದ ಎಲ್ಲಾ ಧಾರೆಗಳೂ ಒಂದಾಗಿ ನಯಾಗರ ಜಲಪಾತದಂತೆ ಧುಮ್ಮಿಕ್ಕುವ ಅಪರೂಪದ ನೋಟ ಕಾಣಸಿಗಲಿದೆ.

1819 ಅಡಿ ಎತ್ತರದ ಲಿಂಗನಮಕ್ಕಿ ಜಲಾಶಯದ ಬುಧವಾರ ಬೆಳಿಗ್ಗೆ 8 ರ ನೀರಿನ ಮಟ್ಟ 1812 ಅಡಿಯಾಗಿದ್ದು, ಜಲಾಶಯಕ್ಕೆ ಬರೋಬ್ಬರಿ 82,000 ಕ್ಯೂಸೆಕ್‌ ನೀರು ಹರಿದುಬರುತ್ತಿದೆ. ಅಲ್ಲದೆ ಅಚ್ಚುಕಟ್ಟು ಪ್ರದೇಶವಾದ ಹೊಸನಗರ, ನಗರ ಮತ್ತು ತುಮರಿ ಭಾಗದಲ್ಲಿ ನಿರಂತರ ಮಳೆ ಮುಂದುವರಿದಿದೆ. ಆ ಹಿನ್ನೆಲೆಯಲ್ಲಿ ಮುಂದಿನ 24 ತಾಸುಗಳಲ್ಲಿ ಇನ್ನಷ್ಟು ಒಳಹರಿವು ಹೆಚ್ಚು ಸೂಚನೆ ಪಡೆದಿರುವ ಕೆಪಿಸಿ, ಜಲಾಶಯದ ಸುರಕ್ಷತೆ ದೃಷ್ಟಿಯಿಂದ ಮುಂಜಾಗ್ರತಾ ಕ್ರಮವಾಗಿ ಗುರುವಾರ ಬೆಳಿಗ್ಗೆ 10,000 ಕ್ಯೂಸೆಕ್‌ ನೀರನ್ನು ನದಿಗೆ ಹರಿಸಲು ಸಿದ್ಧತೆ ನಡೆದಿದೆ.

ಈ ಸಂಬಂಧ ಈಗಾಗಲೇ ಅಧಿಕೃತ ಮುನ್ನೆಚ್ಚರಿಕಾ ಸೂಚನೆಯನ್ನು ನೀಡಿರುವ ಕೆಪಿಸಿ, ನದಿ ತಟದ ಜನ ಮತ್ತು ಜಾನುವಾರು ರಕ್ಷಣೆಗೆ ಮುನ್ನೆಚ್ಚರಿಕೆ ಕೈಗೊಳ್ಳುವಂತೆ ಸಾರ್ವಜನಿಕರಿಗೆ ಕರೆ ನೀಡಿದೆ. ಅಲ್ಲದೆ ಮಂಗಳವಾರ ನದಿ ತಟದ ಪ್ರದೇಶಗಳಲ್ಲಿ ಮೈಕ್‌ ಪ್ರಚಾರವನ್ನು ಕೂಡ ನಡೆಸಲಾಗಿದೆ.

ಪ್ರವಾಸಿಗರಿಗೆ ರಸದೌತಣ

ಜೋಗ ಜಲಪಾತದ ವೀಕ್ಷಣೆಗೆ ಈ ಬಾರಿ ದಾಖಲೆಯ ಸಂಖ್ಯೆಯ ಪ್ರವಾಸಿಗರು ಆಗಮಿಸುತ್ತಿದ್ದು, ವಾರಾಂತ್ಯದ ರಜೆಯ ಶನಿವಾರ ಮತ್ತು ಭಾನುವಾರ ಜೋಗ ಪ್ರದೇಶ ಜನಜಂಗುಳಿಯಿಂದ ಕೂಡಿರುತ್ತದೆ. ದಿನವೊಂದಕ್ಕೆ ಐವತ್ತು ಸಾವಿರಕ್ಕೂ ಅಧಿಕ ಪ್ರವಾಸಿಗಳು ಭೇಟಿ ನೀಡುತ್ತಿದ್ದು, ಜಲಪಾತದ ಸೌಂದರ್ಯ ಸವಿಯುತ್ತಿದ್ದಾರೆ. 

ಈ ನಡುವೆ, ನದಿಗೆ ಹತ್ತು ಸಾವಿರ ಕ್ಯೂಸೆಕ್‌ನಷ್ಟು ಅಪಾರ ಪ್ರಮಾಣದ ನೀರು ಹರಿಸಿದ್ದಲ್ಲಿ ಜಲಪಾತದ ರಾಜಾ, ರಾಣಿ, ರೋರರ್‌, ರಾಕೆಟ್‌ ಧಾರೆಗಳು ಕೂಡಿ ಒಂದಾಗಿ ಏಕಧಾರೆಯಾಗಿ ನೀರು ಧುಮ್ಮಿಕ್ಕಲಿದೆ. ಆಗ ವಿಶ್ವವಿಖ್ಯಾತ ನಯಾಗರ ಜಲಪಾತದಂತೆ ಜೋಗ ಜಲಪಾತ ಕಾಣಿಸಲಿದ್ದು, 2018ರಲ್ಲಿ ಕಳೆದ ಬಾರಿ ಇಂತಹ ಅಪರೂಪದ ನೋಟಕ್ಕೆ ಪ್ರವಾಸಿಗರು ಸಾಕ್ಷಿಯಾಗಿದ್ದರು. ಇದೀಗ ಮತ್ತೊಮ್ಮೆ ಅಂತಹ ಅಪರೂಪದ ನೋಟ ಪ್ರವಾಸಿಗರಿಗೆ ಲಭ್ಯವಾಗಲಿದೆ.

ಮಳೆ ಪರಿಸ್ಥಿತಿಯನ್ನು ಅವಲಂಬಿಸಿ ನದಿಗೆ ನೀರು ಬಿಡುವ ಅವಧಿಯನ್ನು ನಿರ್ಧರಿಸಲಾಗುವುದರಿಂದ ಭಾರೀ ಮಳೆ ಮುಂದುವರಿದಲ್ಲಿ ಮಾತ್ರ ಜೋಗದ ಆ ಅಪರೂಪದ ದೃಶ್ಯಾವಳಿ ನೋಡುಗರಿಗೆ ಲಭ್ಯವಾಗಲಿದೆ. ಮಳೆ ಕಡಿಮೆಯಾದಲ್ಲಿ ಜಲಾಶಯದಿಂದ ನದಿಗೆ ಬಿಡುವ ನೀರು ನಿಲ್ಲಿಸುವುದರಿಂದ ಜೋಗ ಜಲಪಾತ ತನ್ನ ಸಾಮಾನ್ಯ ನೋಟಕ್ಕೆ ಮರಳಲಿದೆ.

Tags:    

Similar News