ಹಿರಿಯ ನಾಗರಿಕರಿಗೆ ಭಾನುವಾರ ಸೆಂಟ್ ಜೋಸೆಫ್ಸ್ ವಿಶ್ವವಿದ್ಯಾಲಯದಲ್ಲಿ ಉದ್ಯೋಗ ಮೇಳ
ಸೆಂಟ್‌ಜೋಸೆಫ್ಸ್ ವಿಶ್ವವಿದ್ಯಾಲಯದಲ್ಲಿ ಭಾನುವಾರ ಬೆಳಗ್ಗೆ9 ಗಂಟೆಯಿಂದ ಮಧ್ಯಾಹ್ಯ 3 ಗಂಟೆಯವರೆಗೆ ಉದ್ಯೋಗ ಮೇಳ ನಡೆಯಲಿದೆ. 650ಕ್ಕೂ ಹೆಚ್ಚಿನ ಹಿರಿಯ ನಾಗರಿಕರು ನೋಂದಾಯಿಸಿಕೊಂಡಿದ್ದಾರೆ.;
ನಿವೃತ್ತಿಯ ನಂತರವೂ ಮತ್ತು ಗೌರವಾನ್ವಿತ ಜೀವನ ನಡೆಸಲು ಬಯಸುವ ಹಿರಿಯ ನಾಗರಿಕರಿಗೆ ಉದ್ಯೋಗ ಕಲ್ಪಿಸುವ ಮಹತ್ವದ ದೃಷ್ಟಿಯಿಂದ, ನೈಟಿಂಗೇಲ್ ಎಂಪವರ್‌ಮೆಂಟ್ ಫೌಂಡೇಶನ್, ಸೇಂಟ್ ಜೋಸೆಫ್ಸ್ ವಿಶ್ವವಿದ್ಯಾಲಯ ಹಾಗೂ ಆರ್ಚ್‌ಡಯೋಸಿಸ್ ಜಂಟಿಯಾಗಿ ಇದೇ ಭಾನುವಾರ ಉಚಿತ ಉದ್ಯೋಗ ಮೇಳವನ್ನು ಆಯೋಜಿಸಿವೆ.
ಈ ಕುರಿತು ಮಾಹಿತಿ ನೀಡಿದ ನೈಟಿಂಗೇಲ್ಸ್ ಮೆಡಿಕಲ್ ಟ್ರಸ್ಟ್‌ನ ಕಾರ್ಯದರ್ಶಿ ಎಸ್. ಪ್ರೇಮ್ ಕುಮಾರ್ ರಾಜ್, "ಈ ಉದ್ಯೋಗ ಮೇಳವು ಸೇಂಟ್ ಜೋಸೆಫ್ಸ್ ವಿಶ್ವವಿದ್ಯಾಲಯದಲ್ಲಿ ಭಾನುವಾರ ಬೆಳಿಗ್ಗೆ 9 ರಿಂದ ಮಧ್ಯಾಹ್ನ 3 ಗಂಟೆಯವರೆಗೆ ನಡೆಯಲಿದೆ," ಎಂದು ತಿಳಿಸಿದರು.
ದೇಶದಲ್ಲಿ ಸುಮಾರು 15 ಕೋಟಿ ಹಿರಿಯ ನಾಗರಿಕರಿದ್ದು, ಅವರಲ್ಲಿ ಶೇ. 75ರಷ್ಟು ಮಂದಿ ಆರ್ಥಿಕ ಅಗತ್ಯಗಳಿಗಾಗಿ ಇತರರನ್ನು ಅವಲಂಬಿಸಿದ್ದಾರೆ. ಇದು ಅವರನ್ನು ನಿರ್ಲಕ್ಷ್ಯ ಮತ್ತು ನಿಂದನೆಗೆ ಹೆಚ್ಚು ಗುರಿಯಾಗುವಂತೆ ಮಾಡಿದೆ ಎಂದು ಪ್ರೇಮ್ ಕುಮಾರ್ ಕಳವಳ ವ್ಯಕ್ತಪಡಿಸಿದರು. "50 ರಿಂದ 70 ವರ್ಷ ವಯಸ್ಸಿನ ಅನೇಕ ಹಿರಿಯರು ದೈಹಿಕವಾಗಿ ಮತ್ತು ಮಾನಸಿಕವಾಗಿ ಸದೃಢರಾಗಿದ್ದು, ಕೆಲಸ ಮಾಡಲು ಸಿದ್ಧರಾಗಿದ್ದಾರೆ. ಆದರೆ, ಅವರಿಗೆ ಸೂಕ್ತ ಅವಕಾಶಗಳು ಸಿಗುತ್ತಿಲ್ಲ. ಈ ಆರ್ಥಿಕ ಅಭದ್ರತೆಯನ್ನು ಹೋಗಲಾಡಿಸಿ, ಹಿರಿಯರಿಗೆ ಆರ್ಥಿಕ ಸ್ವಾವಲಂಬನೆ ನೀಡುವುದೇ ಈ ಉದ್ಯೋಗ ಮೇಳದ ಪ್ರಮುಖ ಉದ್ದೇಶ," ಎಂದರು.
ನೈಟಿಂಗೇಲ್ಸ್ ವೈದ್ಯಕೀಯ ಟ್ರಸ್ಟ್ 2002ರಿಂದ ಬೆಂಗಳೂರು ನಗರ ಪೊಲೀಸ್ ಇಲಾಖೆಯ ಸಹಯೋಗದೊಂದಿಗೆ ಹಿರಿಯರ ಸಹಾಯವಾಣಿಯನ್ನು ನಡೆಸುತ್ತಿದ್ದು, ಆರ್ಥಿಕ ಸಮಸ್ಯೆಗಳೇ ಹಿರಿಯರ ಮೇಲಿನ ದೌರ್ಜನ್ಯಕ್ಕೆ ಮೂಲ ಕಾರಣ ಎಂಬುದನ್ನು ಮನಗಂಡಿದೆ. "ಹಿರಿಯರಿಗೆ ಆರ್ಥಿಕ ಭದ್ರತೆ ನೀಡುವುದು ಕೇವಲ ಸ್ವಾವಲಂಬನೆಯ ವಿಷಯವಲ್ಲ, ಅದು ಅವರ ಸಂರಕ್ಷಣೆಯ ವಿಷಯವೂ ಆಗಿದೆ," ಎಂದು ಅವರು ಪ್ರತಿಪಾದಿಸಿದರು.
ಫೌಂಡೇಶನ್ ಕಳೆದ 9 ವರ್ಷಗಳಿಂದ ನಿರಂತರವಾಗಿ ಉದ್ಯೋಗ ಮೇಳಗಳನ್ನು ಆಯೋಜಿಸುತ್ತಾ ಬಂದಿದ್ದು, ಈವರೆಗೆ 8,500ಕ್ಕೂ ಅಧಿಕ ಹಿರಿಯ ನಾಗರಿಕರು ನೋಂದಾಯಿಸಿಕೊಂಡು, 450ಕ್ಕೂ ಹೆಚ್ಚು ಮಂದಿಗೆ ಯಶಸ್ವಿಯಾಗಿ ಉದ್ಯೋಗ ಒದಗಿಸಲಾಗಿದೆ. ಈ ಬಾರಿಯ ಮೇಳದಲ್ಲಿ 55ಕ್ಕೂ ಹೆಚ್ಚು ಖಾಸಗಿ ಕಂಪನಿಗಳು ಭಾಗವಹಿಸುತ್ತಿದ್ದು, ಈಗಾಗಲೇ ವಿವಿಧ ಶೈಕ್ಷಣಿಕ ಹಿನ್ನೆಲೆಯ 650ಕ್ಕೂ ಹೆಚ್ಚು ಹಿರಿಯ ನಾಗರಿಕರು ನೋಂದಾಯಿಸಿಕೊಂಡಿದ್ದಾರೆ.
ಆಸಕ್ತರು 080-42426565 ಸಂಖ್ಯೆಗೆ ಕರೆ ಮಾಡಿ ಮಾಹಿತಿ ಪಡೆಯಬಹುದು.