ಜ್ಯುವೆಲ್ಲರಿ ಶಾಪ್ನಲ್ಲಿ ಕಳ್ಳತನ: 36 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ವಶ, ಆರೋಪಿ ಸೆರೆ
ರಾಜಾಜಿನಗರ 3ನೇ ಬ್ಲಾಕ್ನ 17ನೇ 'ಡಿ' ಮುಖ್ಯರಸ್ತೆಯಲ್ಲಿರುವ ಜ್ಯುವೆಲ್ಲರಿ ಅಂಗಡಿಯೊಂದರಲ್ಲಿ ಈ ಕಳ್ಳತನ ನಡೆದಿತ್ತು. ಅಂಗಡಿಯ ಮಾಲೀಕರು ಸೆಪ್ಟೆಂಬರ್ 9ರಂದು ರಾಜಾಜಿನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಸಾಂದರ್ಭಿಕ ಚಿತ್ರ
ನಗರದ ಜ್ಯುವೆಲ್ಲರಿ ಅಂಗಡಿಯೊಂದರಲ್ಲಿ ಕೆಲಸಕ್ಕಿದ್ದ ನೌಕರನೇ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಕದ್ದು ಪರಾರಿಯಾಗಿದ್ದ ಪ್ರಕರಣವನ್ನು ರಾಜಾಜಿನಗರ ಪೊಲೀಸರು ಯಶಸ್ವಿಯಾಗಿ ಭೇದಿಸಿದ್ದಾರೆ. ಆರೋಪಿಯನ್ನು ಬಂಧಿಸಿ, ಆತನಿಂದ 36 ಲಕ್ಷ ರೂಪಾಯಿ ಮೌಲ್ಯದ 243 ಗ್ರಾಂ ಚಿನ್ನಾಭರಣ, 22 ಗ್ರಾಂ ಬೆಳ್ಳಿ ಮತ್ತು ವಜ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.
ರಾಜಾಜಿನಗರ 3ನೇ ಬ್ಲಾಕ್ನ 17ನೇ 'ಡಿ' ಮುಖ್ಯರಸ್ತೆಯಲ್ಲಿರುವ ಜ್ಯುವೆಲ್ಲರಿ ಅಂಗಡಿಯೊಂದರಲ್ಲಿ ಈ ಕಳ್ಳತನ ನಡೆದಿತ್ತು. ಅಂಗಡಿಯ ಮಾಲೀಕರು ಸೆಪ್ಟೆಂಬರ್ 9ರಂದು ರಾಜಾಜಿನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ತಮ್ಮ ವರ್ಕ್ಶಾಪ್ನಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬ ಸೆಪ್ಟೆಂಬರ್ 4ರಂದು 351.19 ಗ್ರಾಂ ತೂಕದ ಚಿನ್ನದ ನೆಕ್ಲೇಸ್, ಅಮೂಲ್ಯ ಹರಳುಗಳು, ಪೋಲ್ಕಿ ಡೈಮಂಡ್, 22.22 ಗ್ರಾಂ ಬೆಳ್ಳಿ ವಸ್ತುಗಳು ಹಾಗೂ 62,190 ರೂ. ನಗದನ್ನು ಕಳ್ಳತನ ಮಾಡಿಕೊಂಡು ಹೋಗಿರುವುದಾಗಿ ದೂರಿನಲ್ಲಿ ತಿಳಿಸಿದ್ದರು. ಈ ಸಂಬಂಧ ಪೊಲೀಸರು ನೌಕರನಿಂದ ಕಳ್ಳತನ ಪ್ರಕರಣ ದಾಖಲಿಸಿಕೊಂಡಿದ್ದರು.
ಪ್ರಕರಣದ ತನಿಖೆ ಕೈಗೆತ್ತಿಕೊಂಡ ಪೊಲೀಸರು, ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿ, ಖಚಿತ ಮಾಹಿತಿ ಆಧರಿಸಿ ಸೆಪ್ಟೆಂಬರ್ 16ರಂದು ರಾಜಾಜಿನಗರದ ಇಎಸ್ಐ ಆಸ್ಪತ್ರೆ ಬಳಿ ಆರೋಪಿಯನ್ನು ವಶಕ್ಕೆ ಪಡೆದರು. ವಿಚಾರಣೆ ವೇಳೆ ಆರೋಪಿ ತನ್ನ ತಪ್ಪೊಪ್ಪಿಕೊಂಡಿದ್ದಾನೆ. ಕದ್ದ ಚಿನ್ನಾಭರಣ ಮತ್ತು ವಜ್ರದ ಹರಳುಗಳನ್ನು ಇಎಸ್ಐ ಆಸ್ಪತ್ರೆ ಸಮೀಪದ ಲಾಡ್ಜ್ವೊಂದರಲ್ಲಿ ಬಚ್ಚಿಟ್ಟಿರುವುದಾಗಿ ಮಾಹಿತಿ ನೀಡಿದ್ದಾನೆ.
ಉತ್ತರ ವಿಭಾಗದ ಡಿಸಿಪಿ ಶ್ರೀ ಬಿ.ಎಸ್. ನೇಮಗೌಡ ಅವರ ಮಾರ್ಗದರ್ಶನದಲ್ಲಿ, ಮಲ್ಲೇಶ್ವರಂ ಉಪ ವಿಭಾಗದ ಎಸಿಪಿ ಶ್ರೀ ಕೃಷ್ಣಮೂರ್ತಿ ಹೆಚ್. ಅವರ ನೇತೃತ್ವದಲ್ಲಿ ರಾಜಾಜಿನಗರ ಪೊಲೀಸ್ ಇನ್ಸ್‌ಪೆಕ್ಟರ್ ಶ್ರೀ ಪ್ರಮೋದ್ ಕುಮಾರ್ ಮತ್ತು ಸಿಬ್ಬಂದಿ ತಂಡ ಈ ಯಶಸ್ವಿ ಕಾರ್ಯಾಚರಣೆ ನಡೆಸಿದೆ.