ಜಾತಿಗಣತಿ ಸಮೀಕ್ಷೆ ಮಾಹಿತಿ ಸೋರಿಕೆ, ಡಾಟ ಸುರಕ್ಷತೆ ಬಗ್ಗೆ ಸರ್ಕಾರಕ್ಕೆ ಜೆಡಿಎಸ್‌ ಪ್ರಶ್ನೆ

ರಾಜ್ಯ ಸರ್ಕಾರ ನಡೆಸುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಭಾಗವಹಿಸುವುದು ಜನರ ಸ್ವಯಂ ಇಚ್ಛೆಗೆ ಬಿಟ್ಟಿದ್ದು, ಇದು ಕಡ್ಡಾಯವಲ್ಲ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.

Update: 2025-10-18 09:52 GMT

ಸಿಎಂ ಸಿದ್ದರಾಮಯ್ಯ, ರಾಜ್ಯಸಭೆ ಸದಸ್ಯೆ ಸುಧಾಮೂರ್ತಿ ಹಾಗೂ ಕೇಂದ್ರ ಸಚಿವ ಹೆಚ್‌.ಡಿ. ಕುಮಾರಸ್ವಾಮಿ

Click the Play button to listen to article

ರಾಜ್ಯ ಸರ್ಕಾರ ನಡೆಸುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ (ಜಾತಿಗಣತಿ) ಮಾಹಿತಿ ಸೋರಿಕೆಯಾಗಿದ್ದು, ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ ಮತ್ತು ರಾಜ್ಯಸಭಾ ಸದಸ್ಯೆ ಸುಧಾ ಮೂರ್ತಿ ಅವರ ಖಾಸಗಿ ಪತ್ರ ಬಹಿರಂಗಗೊಂಡಿರುವುದು ತೀವ್ರ ವಿವಾದಕ್ಕೆ ಕಾರಣವಾಗಿದೆ. ಈ ಬೆಳವಣಿಗೆಯನ್ನು 'ಸರ್ಕಾರ ಪ್ರಾಯೋಜಿತ ಕೃತ್ಯ' ಎಂದು ತೀಕ್ಷ್ಣವಾಗಿ ಆರೋಪಿಸಿರುವ ಜೆಡಿಎಸ್, ಸಮೀಕ್ಷೆಯ ವಿಶ್ವಾಸಾರ್ಹತೆ ಮತ್ತು ಪಾರದರ್ಶಕತೆಯನ್ನೇ ಪ್ರಶ್ನಿಸಿದೆ.

ಈ ಕುರಿತು ಸಾಮಾಜಿಕ ಜಾಲತಾಣ 'ಎಕ್ಸ್‌'ನಲ್ಲಿ ಕಿಡಿಕಾರಿರುವ ಜೆಡಿಎಸ್, "ಸಮೀಕ್ಷೆಯಲ್ಲಿ ಭಾಗವಹಿಸುವುದಿಲ್ಲ ಎಂದು ಮೂರ್ತಿ ದಂಪತಿ ನೀಡಿದ್ದ ಸ್ವಯಂ ದೃಢೀಕರಣ ಪತ್ರವನ್ನು ಸಾರ್ವಜನಿಕಗೊಳಿಸಿರುವುದು ಮಾಹಿತಿ ಸೋರಿಕೆಗೆ ಸ್ಪಷ್ಟ ನಿದರ್ಶನ. ಇದು ಗೌರವಾನ್ವಿತ ವ್ಯಕ್ತಿಗಳ ತೇಜೋವಧೆ ಮಾಡುವ ಸರ್ಕಾರದ ಪ್ರಾಯೋಜಿತ ಕೃತ್ಯ," ಎಂದು ದೂರಿದೆ.

"ಸಮೀಕ್ಷೆ ಕಡ್ಡಾಯವಲ್ಲ, ಇದರಲ್ಲಿ ಸಂಗ್ರಹಿಸಿದ ಜನರ ಮಾಹಿತಿಯನ್ನು ಗೌಪ್ಯವಾಗಿಡಬೇಕು ಎಂದು ಹೈಕೋರ್ಟ್ ಸ್ಪಷ್ಟ ನಿರ್ದೇಶನ ನೀಡಿದ್ದರೂ, ಸರ್ಕಾರವೇ ಮಾಹಿತಿ ಸೋರಿಕೆ ಮಾಡುತ್ತಿರುವುದು ನ್ಯಾಯಾಂಗ ನಿಂದನೆಯಾಗುವುದಿಲ್ಲವೇ?" ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಜೆಡಿಎಸ್ ಪ್ರಶ್ನಿಸಿದೆ.

ಕಾಂಗ್ರೆಸ್‌ನ ಹಿರಿಯ ನಾಯಕ ಬಿ.ಕೆ. ಹರಿಪ್ರಸಾದ್ ಅವರು 'ಜಾತಿಗಣತಿಗೆ ಸಹಕರಿಸದವರು ದೇಶದ್ರೋಹಿಗಳು' ಎಂದು ನೀಡಿರುವ ಹೇಳಿಕೆಯನ್ನು ಉಲ್ಲೇಖಿಸಿರುವ ಜೆಡಿಎಸ್, "ಈ ಘಟನೆಯಲ್ಲಿ ಕಾಂಗ್ರೆಸ್ ನಾಯಕರೇ ಮುಂಚೂಣಿಯಲ್ಲಿದ್ದಾರೆ. ಇದು ಸಮೀಕ್ಷೆಯ ವಿಶ್ವಸನೀಯತೆಯ ಬಗ್ಗೆಯೇ ಅನುಮಾನ ಮೂಡಿಸಿದೆ. ಮಾಹಿತಿಯೂ ಸುರಕ್ಷಿತವಾಗಿಲ್ಲ ಎಂಬುದಕ್ಕೆ ಇದೇ ಪ್ರತ್ಯಕ್ಷ ಸಾಕ್ಷಿ," ಎಂದು ಟೀಕಿಸಿದೆ.

'ಇನ್ಫೋಸಿಸ್‌ನವರು ಬೃಹಸ್ಪತಿಗಳಾ?': ಸಿಎಂ ಕಿಡಿ

ಈ ವಿವಾದಕ್ಕೆ ಈ ಹಿಂದೆ ಪ್ರತಿಕ್ರಿಯಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ, "ಇನ್ಫೋಸಿಸ್‌ನವರು ಬೃಹಸ್ಪತಿಗಳಾ? ಅವರಿಗಿರುವ ತಪ್ಪು ಮಾಹಿತಿಯಿಂದಾಗಿ ಹೀಗೆ ಅಸಹಕಾರ ತೋರುತ್ತಿರಬಹುದು. ಇದು ಕೇವಲ ಹಿಂದುಳಿದವರ ಸಮೀಕ್ಷೆ ಎಂದು ಭಾವಿಸುವುದು ತಪ್ಪು. ಶಕ್ತಿ ಯೋಜನೆಯನ್ನು ಮೇಲ್ಜಾತಿಯ ಬಡವರೂ ಬಳಸುತ್ತಿಲ್ಲವೇ?" ಎಂದು ಪ್ರಶ್ನಿಸಿದ್ದರು. "ಇದು ಸುಮಾರು 7 ಕೋಟಿ ಜನರ ಆರ್ಥಿಕ, ಶೈಕ್ಷಣಿಕ ಹಾಗೂ ಸಾಮಾಜಿಕ ಸ್ಥಿತಿಗತಿ ಅರಿಯುವ ಸಮೀಕ್ಷೆ. ನಾಳೆ ಕೇಂದ್ರ ಸರ್ಕಾರ ಜಾತಿಗಣತಿ ಮಾಡಿದಾಗಲೂ ಇವರು ಹೀಗೆಯೇ ಸಹಕರಿಸುವುದಿಲ್ಲವೇ?" ಎಂದು ಸಿಎಂ ಆಕ್ರೋಶ ವ್ಯಕ್ತಪಡಿಸಿದ್ದರು.

ವಿವಾದದ ಹಿನ್ನೆಲೆ

"ನಾವು ಹಿಂದುಳಿದವರಲ್ಲ, ಹೀಗಾಗಿ ರಾಜ್ಯ ಸರ್ಕಾರ ನಡೆಸುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಪಾಲ್ಗೊಳ್ಳುವುದಿಲ್ಲ," ಎಂದು ಇನ್ಫೋಸಿಸ್ ಸಂಸ್ಥಾಪಕ ನಾರಾಯಣಮೂರ್ತಿ ಹಾಗೂ ರಾಜ್ಯಸಭಾ ಸದಸ್ಯೆ ಸುಧಾಮೂರ್ತಿ ಅವರು ಸರ್ಕಾರಕ್ಕೆ ದೃಢೀಕರಣ ಪತ್ರ ನೀಡಿದ್ದರು. ಈ ಪತ್ರದ ವಿಚಾರ ಬಹಿರಂಗವಾಗುತ್ತಿದ್ದಂತೆ, ಕೆಲವರು ಮೂರ್ತಿ ದಂಪತಿಯ ನಿಲುವನ್ನು ಬೆಂಬಲಿಸಿದರೆ, ಕಾಂಗ್ರೆಸ್ ನಾಯಕರು ತೀವ್ರ ವಿರೋಧ ವ್ಯಕ್ತಪಡಿಸಿ, ರಾಜ್ಯ ರಾಜಕಾರಣದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿತ್ತು.. 

Tags:    

Similar News