Federal Exclusive Interview | ಜಯಮೃತ್ಯುಂಜಯ ಸ್ವಾಮೀಜಿ ಪಂಚಮಸಾಲಿ ಸಮಾಜದ ದಾರಿ ತಪ್ಪಿಸುತ್ತಿದ್ದಾರೆ: ಕಾಶಪ್ಪನವರ್

ಮೀಸಲಾತಿಗಾಗಿ ಹೋರಾಟದ ನೇತೃತ್ವ ವಹಿಸಿರುವ ಪಂಚಮಸಾಲಿ ನಾಯಕರು ಮತ್ತು ಸ್ವಾಮೀಜಿ ನಡುವೆ ಒಡಕು ಬಹಿರಂಗವಾಗಿದ್ದು, "ಹೋರಾಟಕ್ಕೆ ಕರೆದರೂ ಬರುತ್ತಿಲ್ಲ" ಎಂದು ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದ್ದರೆ, "ಸ್ವಾಮೀಜಿ ಸಮಾಜದ ದಾರಿ ತಪ್ಪಿಸುತ್ತಿದ್ದಾರೆ" ಎಂದು ಕಾಶಪ್ಪನವರ್ ಆರೋಪಿಸಿದ್ದಾರೆ.;

By :  Anil Basur
Update: 2024-12-02 13:06 GMT
ಪಂಚಮಸಾಲಿ ಸ್ವಾಮೀಜಿಯೊಂದಿಗೆ ವಿಜಯಾನಂದ ಕಾಶಪ್ಪನವರ್

ಪಂಚಮಸಾಲಿ ಸಮುದಾಯದ ಪ್ರವರ್ಗ 2ಎ ಮೀಸಲಾತಿ ಹೋರಾಟದ ನೇತೃತ್ವ ವಹಿಸಿರುವ ಸ್ವಾಮೀಜಿ ಮತ್ತು ಸಮುದಾಯದ ಮುಖಂಡರ ನಡುವೆ ವಾಗ್ವಾದ ಬಹಿರಂಗಗೊಂಡಿದ್ದು, "ಕೂಡಲಸಂಗಮ ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಪಂಚಮಸಾಲಿ ಸಮುದಾಯದ ದಾರಿ ತಪ್ಪಿಸುತ್ತಿದ್ದಾರೆ" ಎಂದು ಅಖಿಲ ಭಾರತ ಪಂಚಮಸಾಲಿ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ್‌ ಗಂಭೀರ ಆರೋಪ ಮಾಡಿದ್ದಾರೆ.

‘ದ ಫೆಡರಲ್ ಕರ್ನಾಟಕ’ಕ್ಕೆ ನೀಡಿರುವ ವಿಶೇಷ ಸಂದರ್ಶನದಲ್ಲಿ ಅವರು, "ಯಾವುದೇ ಧರ್ಮದ ಸ್ವಾಮೀಜಿಗಳು ಯಾವುದೇ ಒಂದು ಪಕ್ಷದ ಪರವಾಗಿ ಮಾತನಾಡುವುದು ಸರಿಯಲ್ಲ" ಎಂದು ಶಾಸಕ ಕಾಶಪ್ಪನವರ್, ಜಯ ಮೃತ್ಯುಂಜಯ ಸ್ವಾಮೀಜಿಯವರ ನಡೆಯನ್ನು ವಿರೋಧಿಸಿದ್ದಾರೆ.

ಯತ್ನಾಳ್‌ ಅಸ್ತಿತ್ವಕ್ಕಾಗಿ ಈ ಹೋರಾಟ

"ಕಳೆದ 6 ತಿಂಗಳುಗಳಿಂದ ಪಂಚಮಸಾಲಿ ಮೀಸಲಾತಿ ಹೋರಾಟ ತನ್ನ ಸ್ವರೂಪವನ್ನು ಕಳೆದುಕೊಂಡಿದೆ. ನಮ್ಮದು ಪಕ್ಷಾತೀತ ಹಾಗೂ ಒಗ್ಗಟ್ಟಿನ ಹೋರಾಟವಾಗಿತ್ತು. ಆದರೆ ಕಳೆದ ಆರು ತಿಂಗಳುಗಳಿಂದ ಸ್ವಾಮೀಜಿ ಅವರಿಂದ ಯಾವುದೇ ದೂರವಾಣಿ ಕರೆ ನನಗೆ ಬಂದಿಲ್ಲ. ಮೊದಲು ಪಕ್ಷಾತೀತವಾಗಿ ಎಲ್ಲ ಪಕ್ಷಗಳಲ್ಲಿನ ಪಂಚಮಸಾಲಿ ಶಾಸಕರು ಭಾಗವಹಿಸುತ್ತಿದ್ದರು. ಆದರೆ ಈಗ ಯಾರಿದ್ದಾರೆ? ಸ್ವಾಮೀಜಿ ಪಕ್ಕಕ್ಕೆ ಕೇವಲ ಬಸನಗೌಡ ಪಾಟೀಲ್ ಯತ್ನಾಳ್ ಮಾತ್ರ ಇದ್ದಾರೆ. ಯತ್ನಾಳ್ ಅವರ ಅಸ್ತಿತ್ವಕ್ಕಾಗಿ ಮಾತ್ರ ಈ ಹೋರಾಟ ಮಾಡುತ್ತಿದ್ದಾರೆ. ಯತ್ನಾಳ್ ಅವರನ್ನು ಮುಖ್ಯಮಂತ್ರಿ ಮಾಡುತ್ತೇವೆ ಎಂದು ಹೇಳಿದ್ದಾರೆ. ಹೀಗೆ ಸಮಾಜವನ್ನು ದಾರಿ ತಪ್ಪಿಸುವ ಕೆಲಸವನ್ನು ಸ್ವಾಮೀಜಿಗಳು ಮಾಡುತ್ತಿದ್ದಾರೆ" ಎಂದು ಕಾಶಪ್ಪನವರ್ ಸಂದರ್ಶನದಲ್ಲಿ ಹೇಳಿದ್ದಾರೆ.

"ನಮ್ಮ ಸರ್ಕಾರ ಬಂದ ನಂತರ 4 ಬಾರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಮಯ ಕೊಟ್ಟು ಪಂಚಮಸಾಲಿ ಮೀಸಲಾತಿ ಕುರಿತು ನಮ್ಮೊಂದಿಗೆ ಚರ್ಚೆ ಮಾಡಿದ್ದಾರೆ. ಆದರೂ ಕೂಡ ಸರ್ಕಾರ ಸ್ಪಂದಿಸುತ್ತಿಲ್ಲ. ಹೋರಾಟವನ್ನು ಹತ್ತಿಕ್ಕುವ ಕೆಲಸವನ್ನು ಸರ್ಕಾರ ಮಾಡುತ್ತಿದೆ ಎಂದು ಶ್ರೀಗಳು ಹೇಳುತ್ತಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮೀಸಲಾತಿ ವಿಚಾರವಾಗಿ ಸ್ಪಷ್ಟವಾಗಿ ಹೇಳಿದ ಮೇಲೂ ಪ್ರತಿಭಟನೆ ಮಾಡುವುದು ಸರಿಯಲ್ಲ. ಹೀಗಾಗಿ ನಾವು ಹೋರಾಟದಿಂದ ದೂರ ಉಳಿದಿದ್ದೇವೆ" ಎಂದು ಕಾಶಪ್ಪವರ್ ಸ್ಪಷ್ಟಪಡಿಸಿದ್ದಾರೆ.

ಸ್ವಾಮೀಜಿ ಯತ್ನಾಳ್​ಗೆ​ ಸೀಮಿತರಾಗಿದ್ದಾರೆ

"ಒಬ್ಬ ಧರ್ಮಗುರುವಿಗೆ ಎಲ್ಲರೂ ಸಮಾನರು ಎಂಬ ಮನಸ್ಥಿತಿ ಇರಬೇಕು. ಮಾತೆತ್ತಿದರೆ ಯತ್ನಾಳ್ ಅಂತಾರೆ. ಯತ್ನಾಳ್ ಸಕ್ಕರೆ ಕಾರ್ಖಾನೆ ವಿಷಯದಲ್ಲಿ ಸರ್ಕಾರದ ವಿರುದ್ದ ಯಾಕೆ ಸ್ವಾಮೀಜಿ ಮಾತನಾಡಿದ್ದರು?. ಪಂಚಮಸಾಲಿ ಹೋರಾಟ ಯತ್ನಾಳ್​ಗೆ ಸೀಮಿತವಾದ ಹೋರಾಟ ಆಗಿದೆ. ಜಯ ಮೃತ್ಯುಂಜಯ ಸ್ವಾಮೀಜಿಗಳು ಕೇವಲ ಯತ್ನಾಳ್ ಪರ ಮಾತನಾಡುತ್ತಾರೆ. ಹೋರಾಟದಲ್ಲಿ ಒಗ್ಗಟ್ಟು ಮುರಿದು ಹಾಕಿದ್ದಾರೆ. ನಮ್ಮ ಹೋರಾಟ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಮುಂದುವರೆಸುತ್ತೇವೆ. ಈ ರೀತಿ ಆದರೆ ನಮ್ಮ ಹೋರಾಟದ ದಾರಿ ತಪ್ಪುತ್ತದೆ ಎಂಬುದನ್ನು ನಾವು ಸ್ವಾಮೀಜಿ ಗಮನಕ್ಕೆ ತಂದಿದ್ದೇವೆ. ಕಾನೂನಾತ್ಮಕವಾಗಿ ನಾವು ಮೀಸಲಾತಿಯನ್ನು ಪಡೆಯಲು ನಮ್ಮ ಹೋರಾಟ ಮುಂದುವರೆಸುತ್ತೇವೆ" ಎಂದು ಸಂದರ್ಶನದಲ್ಲಿ ವಿವರಿಸಿದ್ದಾರೆ.

"ಹಿಂದುಳಿದ ವರ್ಗಗಳ ಆಯೋಗದ ಪೂರ್ಣ ಪ್ರಮಾಣದ ವರದಿ ಬಂದ ಮೇಲೆ ಮೀಸಲಾತಿ ಕೊಡುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಈಗಲೂ ಕೂಡ ನಾವು ಪಂಚಮಸಾಲಿ ಹೋರಾಟದಿಂದ ಹಿಂದೆ ಸರಿದಿಲ್ಲ. ಬಸವರಾಜ ಬೊಮ್ಮಾಯಿ ಮಧ್ಯಂತರ ವರದಿ ಮೇಲೆ ಮೀಸಲಾತಿ ಕೊಟ್ಟಿದ್ದರು. ಮಧ್ಯಂತರ ವರದಿ ಮೇಲೆ ಮೀಸಲಾತಿ ತೀರ್ಮಾನ ಮಾಡಲಿಕ್ಕೆ ಆಗುತ್ತದೆಯಾ? ಆಗುವುದಿಲ್ಲ. ಹೀಗಾಗಿ ಪೂರ್ಣ ಪ್ರಮಾಣದ ವರದಿ ಬಂದ ನಂತರ ತೀರ್ಮಾನ ಮಾಡುತ್ತೇವೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಹೀಗಾಗಿ ನಾವು ಸಂವಿಧಾನಾತ್ಮಕವಾಗಿ ಮೀಸಲಾತಿ ಕೊಡುತ್ತೇವೆ" ಎಂದು ಕಾಶಪ್ಪನವರ್ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಈ ಮೊದಲು "ಹೋರಾಟಕ್ಕೆ ಕರೆದರೂ ಕಾಶಪ್ಪನರ್ ಬರುತ್ತಿಲ್ಲ" ಎಂದು ಕೂಡಲಸಂಗಮ ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ʼದ ಫೆಡರಲ್‌ ಕರ್ನಾಟಕʼಕ್ಕೆ ನೀಡಿದ ಸಂದರ್ಶನದಲ್ಲೇ ಹೇಳಿದ್ದರು. ಇದೀಗ "ಸ್ವಾಮೀಜಿ ಸಮಾಜದ ದಾರಿ ತಪ್ಪಿಸುತ್ತಿದ್ದಾರೆ" ಎಂದು ಕಾಶಪ್ಪನವರ್ ಆರೋಪಿಸಿದ್ದಾರೆ. ಒಟ್ಟಾರೆ ಮೀಸಲಾತಿಗಾಗಿ ಹೋರಾಟ ಆರಂಭಿಸಿದ್ದ ಲಿಂಗಾಯತ ಪಂಚಮಸಾಲಿ ನಾಯಕರು ಹಾಗೂ ಸ್ವಾಮೀಜಿ ನಡುವೆ ಒಡಕು ಬಹಿರಂಗವಾಗಿದೆ.

ಸಂದರ್ಶನದ ಪೂರ್ಣ ವಿಡಿಯೋ ಇಲ್ಲಿದೆ...

Full View


Tags:    

Similar News