ಸಿಎಂ ಕುರ್ಚಿಗೆ ಕಣ್ಣು | ಜಾರಕಿಹೊಳಿ, ಪರಮೇಶ್ವರ್ ಔತಣಕೂಟ ರಾಜಧಾನಿಯಲ್ಲಿ; ಡಿಕೆಶಿ ದೆಹಲಿಯಲ್ಲಿ...
ಒಂದೆಡೆ ಸಚಿವರು ಸರಣಿ ಔತಣಕೂಟಗಳನ್ನು ಏರ್ಪಡಿಸುತ್ತಿದ್ದಾರೆ. ಮತ್ತೊಂದೆಡೆ ದೆಹಲಿಯಲ್ಲಿ ಡಿಸಿಎಂ ಡಿಕೆಶಿ ಹೈಕಮಾಂಡ್ ನಾಯಕರ ಭೇಟಿ ಮಾಡುತ್ತಿರುವುದು ಕುತೂಹಲಕ್ಕೆ ಕಾರಣವಾಗಿದೆ.;
ಒಂದೆಡೆ ರಾಜ್ಯದಲ್ಲಿ ಔತಣಕೂಟ ರಾಜಕೀಯ ಶುರುವಾಗಿದೆ. ಮತ್ತೊಂದೆಡೆ ದೆಹಲಿಯಲ್ಲಿರುವ ಡಿಸಿಎಂ ಡಿಕೆ ಶಿವಕುಮಾರ್ ಹೈಕಮಾಂಡ್ ನಾಯಕರನ್ನು ಭೇಟಿ ಮಾಡುತ್ತಿದ್ದಾರೆ. ಈ ಎಲ್ಲ ಬೆಳವಣಿಗೆಗಳು ರಾಜ್ಯ ಕಾಂಗ್ರೆಸ್ ಪಕ್ಷದಲ್ಲಿ ಮಹತ್ವದ್ದೇನೊ ನಡೆಯಲಿದೆ ಎಂಬ ಮುನ್ಸೂಚನೆಯನ್ನು ಕೊಡುತ್ತಿವೆಯೆ?
2023 ವಿಧಾನಸಭಾ ಚುನಾವಣೆಗೂ ಮೊದಲೇ 50:50 ಅಧಿಕಾರ ಹಂಚಿಕೆ ಸೂತ್ರದ ಕುರಿತು ಮಾತುಗಳು ಕಾಂಗ್ರೆಸ್ ಪಕ್ಷದಲ್ಲಿಯೇ ಕೇಳಿ ಬಂದಿದ್ದವು. ಅದರಲ್ಲಿಯೂ 2023ರ ಜನವರಿಯಲ್ಲಿ ಬೆಂಗಳೂರು ಹೊರವಲಯದ ರೆಸಾರ್ಟ್ನಲ್ಲಿ ನಡೆದಿದ್ದ ಕಾಂಗ್ರೆಸ್ ಚುನಾವಣಾ ತಯಾರಿ ಸಭೆಯ ಸಂದರ್ಭದಲ್ಲಿ ಈ ವಿಚಾರ ಮೊದಲ ಬಾರಿಗೆ ಬಹಿರಂಗಗೊಂಡಿತ್ತು. ಅದರ ಪ್ರಕಾರ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮೊದಲ ಎರಡೂವರೆ ವರ್ಷ ಸಿದ್ದರಾಮಯ್ಯ ಮುಖ್ಯಮಂತ್ರಿ, ಉಳಿದ ಅವಧಿಗೆ ಡಿಕೆಶಿ ಸಿಎಂ ಎಂಬ ಅಧಿಕಾರ ಹಂಚಿಕೆ ಎಂಬ ಚರ್ಚೆ ಮುನ್ನೆಲೆಗೆ ಬಂದಿತ್ತು.
ಇದೀಗ ಇದೇ ವಿಚಾರವನ್ನಿಟ್ಟುಕೊಂಡು ಡಿಸಿಎಂ ಡಿ.ಕೆ. ಶಿವಕುಮಾರ್ ಹೈಕಮಾಂಡ್ ಕದ ತಟ್ಟುತ್ತಿದ್ದಾರೆಯೆ? ಇಂಥದ್ದೊಂದು ಬೆಳವಣಿಗೆ ದೆಹಲಿಯಲ್ಲಿ ನಡೆಯುತ್ತಿರುವುದು ಕಂಡು ಬರುತ್ತಿದೆ. ಸದಾ ಹೈಕಮಾಂಡ್ ರಕ್ಷಣೆಗೆ ನಿಲ್ಲುವ ಡಿ.ಕೆ. ಶಿವಕುಮಾರ್ ಅವರನ್ನು ಹೈಕಮಾಂಡ್ ಕೂಡ ಅದೇ ರೀತಿ ರಕ್ಷಣೆ ಮಾಡುತ್ತದೆಯೇ? ಎಂಬುದು ಇದೀಗ ಮಹತ್ವದ ಪ್ರಶ್ನೆಯಾಗಿದೆ. ಅಷ್ಟಕ್ಕೂ ಈ ವಿಚಾರವಾಗಿ ಕಾಂಗ್ರೆಸ್ ಪಕ್ಷದಲ್ಲಿ ನಡೆದಿದ್ದೇನು? ಈಗ ಆಗುತ್ತಿರುವುದೇನು?
ಅಧಿಕಾರ ಹಂಚಿಕೆ ಚರ್ಚೆ ನಿಜವಾಗಿ ನಡೆದಿತ್ತಾ?
2023ರ ಜನವರಿಯಲ್ಲಿ ನಡೆದಿದ್ದ ಚುನಾವಣೆ ಪೂರ್ವಸಿದ್ಧತೆ ಸಭೆಯಲ್ಲಿಆಗಿನ ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ನಾಯಕತ್ವ ಅಧಿಕಾರ ಹಂಚಿಕೆ ಕುರಿತು ಯಾವುದೇ ಅಧಿಕೃತ ಹೇಳಿಕೆ ನೀಡಿರಲಿಲ್ಲವಾದರೂ, ಕಾಂಗ್ರೆಸ್ ವಲಯದಿಂದಲೇ ಆ ಸುದ್ದಿ ಹೊರಗೆ ಬಂದಿತ್ತು. ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್, ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ, ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಆ ಸಭೆಯಲ್ಲಿ ಭಾಗವಹಿಸಿದ್ದರು. ಸಭೆಯ ಬಳಿಕ ವಿಪಕ್ಷ ನಾಯಕ ಹಾಗೂ ಕೆಪಿಸಿಸಿ ಅಧ್ಯಕ್ಷರ ಆಪ್ತ ಮೂಲಗಳಿಂದಲೇ ಈ ವಿಷಯ ಮಾಧ್ಯಮಗಳಿಗೆ ಸಿಕ್ಕಿತ್ತು. ಹೀಗಾಗಿ ಅಂದು ಅಧಿಕೃತವಾಗಿ ಚರ್ಚೆ ನಡೆದ ಬಳಿಕವೇ ಈ ವಿಷಯವನ್ನು ಮಾಧ್ಯಮಗಳಿಗೆ ಹರಿಬಿಡಲಾಗಿತ್ತು ಎಂಬ ಚರ್ಚೆ ಆಗ ನಡೆದಿತ್ತು.
ಬೆಂಗಳೂರಿನಲ್ಲಿ ಔತಣಕೂಟ, ದೆಹಲಿಯಲ್ಲಿ ಹೈಕಮಾಂಡ್ ಭೇಟಿ
ಬೆಂಗಳೂರಿನಲ್ಲಿ ಈಗಾಗಲೇ ಸತೀಶ್ ಜಾರಕಿಹೊಳಿ ಕಾಂಗ್ರೆಸ್ ನಾಯಕರಿಗೆ ಔತಣಕೂಟವನ್ನು ಮಾಡಿದ್ದಾರೆ. ಸಚಿವ ಸತೀಶ್ ಜಾರಕಿಹೊಳಿ ಏರ್ಪಡಿಸಿದ್ದ ಔತಣಕೂಟದಲ್ಲಿ ಭಾಗವಹಿಸಿದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವರಾದ ಡಾ. ಜಿ. ಪರಮೇಶ್ವರ್, ಕೆ.ಎನ್. ರಾಜಣ್ಣ ಹಾಗೂ ಡಾ. ಎಚ್.ಸಿ. ಮಹಾದೇವಪ್ಪ ಮಾತ್ರ. ಹೀಗಾಗಿ ಆ ಸಭೆಯಲ್ಲಿ ಏನೆಲ್ಲ ವಿಚಾರಗಳು ಚರ್ಚೆಯಾಗಿವೆ? ಔತಣಕೂಟದ ಮೂಲಕ ಯಾವ ಸಂದೇಶವನ್ನು ಕೊಡಲಾಗಿದೆ ಎಂಬುದು ಕುತೂಹಲ ಮೂಡಿಸಿದೆ. ಅಷ್ಟಕ್ಕೂ ಔತಣಕೂಟದ ಹಿಂದಿನ ಅಜೆಂಡಾವಾದರೂ ಏನು ಎಂಬ ಪ್ರಶ್ನೆ ಈಗ ಎದ್ದಿದೆ.
ದೆಹಲಿಯಲ್ಲಿ ಹೈಕಮಾಂಡ್ ಭೇಟಿ ಮಾಡುತ್ತಿರುವ ಡಿಸಿಎಂ ಡಿಕೆ ಶಿವಕುಮಾರ್, ‘ಔತಣಕೂಟಕ್ಕೆ ಏಕೆ ರಾಜಕಾರಣ ಬೆರೆಸಬೇಕು? ಇದಕ್ಕೆ ಇಲ್ಲಸಲ್ಲದ ಅರ್ಥವನ್ನು ಏಕೆ ಕಲ್ಪಿಸಬೇಕು? ನಾನು ಕಳೆದ ನಾಲ್ಕೈದು ವರ್ಷಗಳಿಂದ ಕುಟುಂಬದವರ ಜೊತೆ ಎಲ್ಲಿಯೂ ಹೋಗಿರಲಿಲ್ಲ. ಆದ ಕಾರಣಕ್ಕೆ ವಿದೇಶಿ ಪ್ರವಾಸಕ್ಕೆ ಹೋಗಿ ಬಂದಿದ್ದೇನೆ’ ಎಂದಿದ್ದಾರೆ.
ಆದರೆ ಔತಣಕೂಟ ನಡೆದಿರುವ ಬೆನ್ನಲ್ಲಿಯೇ ಡಿಕೆ ಶಿವಕುಮಾರ್ ಹೈಕಮಾಂಡ್‌ನ ಒಬ್ಬೊಬ್ಬ ನಾಯಕರನ್ನು ಭೇಟಿಯಾಗುತ್ತಿದ್ದಾರೆ. ಇದೇ ವೇಳೆ ನಾಳೆ ಬುಧವಾರ ಡ. 8 ರಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಕರೆದಿರುವ ಔತಣಕೂಟ ಕುತೂಹಲ ಮೂಡಿಸಿದೆ.
ಸಚಿವ ಸತೀಶ್ ಜಾರಕಿಹೊಳಿ ಔತಣಕೂಟದ ಬಳಿಕ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಜ.8 ರಂದು ತಾವೂ ಕೂಡ ಔತಣಕೂಟ ಏರ್ಪಡಿಸಿದ್ದಾರೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಸಮುದಾಯಗಳ ಸಂಸದರು, ಶಾಸಕರು, ವಿಧಾನ ಪರಿಷತ್ ಸದಸ್ಯರು, 2023ರ ವಿಧಾನಸಭಾ ಚುನಾವಣೆ ಹಾಗೂ ಲೋಕಸಭಾ ಚುನಾವಣೆಯಲ್ಲಿ ಪರಾಜಿತರಿಗೆ ಔತಣಕೂಟವನ್ನು ಔತಣಕೂಟದಲ್ಲಿ ಭಾಗವಹಿಸಲು ಆಹ್ವಾನಿಸಿದ್ದಾರೆ. ಬುಧವಾರ ಸಂಜೆ ಕರೆದಿರುವ ಔತಣಕೂಟ ಕೂಡ ರಾಜ್ಯ ಕಾಂಗ್ರೆಸ್ನಲ್ಲಿ ಚರ್ಚೆಗೆ ಕಾರಣವಾಗಿದೆ. ಒಂದೊಮ್ಮೆ ಸಿಎಂ ಬದಲಾವಣೆ ಆದಲ್ಲಿ ಎಸ್ಸಿ, ಎಸ್ಟಿ ಕಾಂಗ್ರೆಸ್ ಶಾಸಕರು ತಮಗೆ ಬೆಂಬಲ ಕೊಡಬೇಕು ಎಂಬರ್ಥದಲ್ಲಿ ಈ ಔತಣಕೂಟ ನಡೆಯುತ್ತಿದೆ ಎಂದು ರಾಜ್ಯ ಕಾಂಗ್ರೆಸ್ನಲ್ಲಿ ಚರ್ಚೆ ನಡೆದಿದೆ.
ಹೈಕಮಾಂಡ್ ಆಪತ್ಬಾಂಧವ ಡಿಕೆಶಿ
ಈ ಮಧ್ಯೆ ಹೈಕಮಂಡ್ ಡಿಕೆ ಶಿವಕುಮಾರ್ ‘ಕೈ’ ಹಿಡಿಯುತ್ತದೆಯಾ? ಎಂಬುದು ಕುತೂಹಲ ಮೂಡಿಸಿದೆ. ಯಾಕೆಂದರೆ ಡಿಕೆಶಿ ಯಾವತ್ತೂ ಹೈಕಮಾಂಡ್‌ಗೆ ಆಪತ್ಬಾಂಧವರಂತೆ ಕೆಲಸ ಮಾಡುತ್ತಾರೆ ಎಂಬುದನ್ನು ಆ ಪಕ್ಷದಲ್ಲಿನ ಎಲ್ಲರೂ ಒಪ್ಪಿಕೊಳ್ಳುತ್ತಾರೆ.
ಮೊದಲಿನಿಂದಲೂ ಕೂಡ ಕಾಂಗ್ರೆಸ್ ಹೈಕಮಾಂಡ್‌ಗೆ ಡಿಸಿಎಂ ಡಿಕೆ ಶಿವಕುಮಾರ್ ಆಪತ್ಬಾಂಧವ ಇದ್ದಂತೆ. ಯಾವುದೇ ರಾಜ್ಯವಿರಲಿ, ಯಾವುದೇ ವಿಷಯವಿರಲಿ ಹೈಕಮಾಂಡ್ ಸೂಚಿಸುವ ಮೊದಲೇ ʼಟ್ರಬಲ್ ಶೂಟರ್ʼನಂತೆ ಕೆಲಸ ಮಾಡುವವರು ಡಿ.ಕೆ. ಶಿವಕುಮಾರ್. ಹೀಗಾಗಿ ಕಾಂಗ್ರೆಸ್ ಹೈಕಮಾಂಡ್‌ಗೆ ಕೂಡ ಡಿಕೆಶಿ ಮೇಲೆ ಪ್ರೀತಿಯಿದೆ. ಹಿಂದೆ ರಾಜ್ಯಸಭಾ ಚುನಾವಣೆ ವೇಳೆ ಗುಜರಾತ್ ಶಾಸಕರನ್ನು ರಾಜ್ಯಕ್ಕೆ ಕರೆತಂದು ಅಹ್ಮದ್ ಪಟೇಲ್ ಚುನಾವಣೆಯಲ್ಲಿ ಗೆಲ್ಲುವಂತೆ ಮಾಡಿದ್ದು ಡಿಕೆ ಶಿವಕುಮಾರ್. ಇಂತಹ ಅನೇಕ ಸಂದರ್ಭಗಳಲ್ಲಿ ಹೈಕಮಾಂಡ್ ಹೆಗಲಿಗೆ ಹೆಗಲು ಕೊಟ್ಟಿರುವುದು ಡಿಕೆಶಿ.
ಇದರ ಜೊತೆಗೆ ಪಕ್ಷವನ್ನು ಗೆಲ್ಲಿಸಿಕೊಂಡು ಬರುವವರೂ ಕೂಡ ಯಾವುದೇ ರಾಜಕೀಯ ಪಕ್ಷಕ್ಕೆ ಅನಿವಾರ್ಯ. ಹೀಗಾಗಿ ಆಗಾಗ ಅವಮಾನಗಳಾದರೂ ಡಿಕೆ ಶಿವಕುಮಾರ್, ಹೈಕಮಾಂಡ್ ಸೂಚನೆಯಂತೆಯೆ ನಡೆದುಕೊಂಡು ತಾಳ್ಮೆಯಿಂದ ಅಧಿಕಾರವನ್ನು ಪಡೆದುಕೊಂಡಿದ್ದಾರೆ. ಇದೀಗ ಅಂತಹ ಕಾರಣಗಳ ಮೂಲಕ ಸಿಎಂ ಹುದ್ದೆ ಅಲಂಕರಿಸಲು ತೆರೆಮರೆಯ ಪ್ರಯತ್ನವನ್ನು ಡಿ.ಕೆ. ಶಿವಕುಮಾರ್ ದೆಹಲಿಯಲ್ಲಿ ಉರುಳಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಹೈಕಮಾಂಡ್ ತೀರ್ಮಾನ ಅಂತಿಮ?
ಒಟ್ಟಾರೆ ಅಧಿಕಾರ ಹಂಚಿಕೆ ಚರ್ಚೆ ಆಗಿದೆಯೋ ಇಲ್ಲವೋ ಎಂಬುದು ಬೇರೆ ವಿಚಾರ. ಅದರೆ ರಾಜ್ಯ ವಿಧಾನಸಭಾ ಚುನಾವಣೆಗೂ ಮುನ್ನ ಮೇಕೆದಾಟು ಪಾದಯಾತ್ರೆ, ಮೇಕೆದಾಟು ಪಾದಯಾತ್ರೆ 2.O ಅನ್ನು ಅತ್ಯಂತ ಸಮರ್ಪಕವಾಗಿ ಸಂಘಟಿಸಿದ್ದು ಡಿಕೆ ಶಿವಕುಮಾರ್. ಜೊತೆಗೆ ಮೊನ್ನೆ ಬೆಳಗಾವಿಯಲ್ಲಿ ನಡೆದ ಎಐಸಿಸಿ ಅಧಿವೇಶನವನ್ನೂ ಸಂಪೂರ್ಣವಾಗಿ ನಿರ್ವಹಿಸಿದ್ದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್. ಹೀಗಾಗಿ, ಈ ಎಲ್ಲ ವಿಷಯಗಳ ಬಗ್ಗೆ ಹೈಕಮಾಂಡ್ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಹೇಳಲಾಗಿದೆ.