ನನ್ನ ಹೇಳಿಕೆಯಲ್ಲಿ ತಪ್ಪು ಹುಡುಕುವುದೇ ಕೆಲವರ ಕೆಲಸ: ಡಿಸಿಎಂ ಡಿಕೆಶಿ ಬೇಸರ
ರಾಜಕೀಯ ನಾಯಕರು, ಮಾಧ್ಯಮಗಳು, ಪ್ರಮೋದಾದೇವಿ, ಸಂಸದ ಯದುವೀರ್ ಸೇರಿದಂತೆ ಎಲ್ಲರೂ ತಪ್ಪು ಹುಡುಕುವವರೇ. ಹೀಗಾಗಿ ನಾನು ಮಾತನಾಡದಿರುವುದೇ ಲೇಸು ಅನಿಸುತ್ತದೆ ಎಂದು ಡಿ.ಕೆ. ಶಿವಕುಮಾರ್ ತಿಳಿಸಿದರು.;
ಸದನವೂ ಸೇರಿದಂತೆ ನಾನು ಎಲ್ಲಿ, ಏನೇ ಮಾತನಾಡಿದರೂ ಅದರಲ್ಲಿ ಕೇವಲ ತಪ್ಪು ಕಂಡು ಹಿಡಿಯುವುದೇ ಕೆಲವರ ಕೆಲಸವಾಗಿದೆ. ಸತ್ಯ ಹೇಳಿದರೆ ಸಹಿಸಲ್ಲ, ಆದ್ದರಿಂದ ನಾನು ಮಾತನಾಡದಿರುವುದೇ ಉತ್ತಮ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದರು.
ಬೆಂಗಳೂರಿನ ಸದಾಶಿವನಗರದ ನಿವಾಸದಲ್ಲಿ ಗುರುವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜಕೀಯ ನಾಯಕರು, ಮಾಧ್ಯಮಗಳು, ಪ್ರಮೋದಾ ದೇವಿ, ಸಂಸದ ಯದುವೀರ್ ಸೇರಿದಂತೆ ಎಲ್ಲರೂ ತಪ್ಪು ಹುಡುಕುವವರೇ. ಹೀಗಾಗಿ ನಾನು ಮಾತನಾಡದಿರುವುದೇ ಲೇಸು ಅನಿಸುತ್ತದೆ ಎಂದು ಬೇಸರ ವ್ಯಕ್ತಪಡಿಸಿದರು.
ದಸರಾ ಉದ್ಘಾಟಕರ ಆಯ್ಕೆ ವಿಚಾರವಾಗಿ ಬಿಜೆಪಿ ಮುಖಂಡ ಬಿ.ಎಲ್. ಸಂತೋಷ್ ಪೋಸ್ಟ್ ಬಗ್ಗೆ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, "ಈ ವಿಚಾರಗಳ ಬಗ್ಗೆ ಪ್ರತಿಕ್ರಿಯಿಸಲು ಬೇರೆ ನಾಯಕರು ಹಾಗೂ ಪಕ್ಷದ ವಕ್ತಾರರಿದ್ದಾರೆ. ಅವರ ಬಳಿ ಮಾತನಾಡಿ" ಎಂದು ಹೇಳಿದರು.
ಇತ್ತೀಚೆಗೆ ತಮ್ಮ ಹೇಳಿಕೆಗಳಿಂದ ಡಿಸಿಎಂ ಡಿ.ಕೆ. ಶಿವಕುಮಾರ್ ಸ್ವಪಕ್ಷೀಯರು ಸೇರಿದಂತೆ ಹಲವರಿಂದ ಟೀಕೆಗೆ ಗುರಿಯಾಗಿದ್ದರು.
"ಚಾಮುಂಡಿ ಬೆಟ್ಟ ಕೇವಲ ಹಿಂದೂಗಳ ಸ್ವತ್ತಲ್ಲ. ಅದು ಸರ್ವಧರ್ಮೀಯರ ಶ್ರದ್ಧಾ ಕೇಂದ್ರ. ನಾವು ಹೇಗೆ ಮಸೀದಿ, ಚರ್ಚ್‌ಗಳಿಗೆ ಹೋಗುತ್ತೇವೆಯೋ, ಹಾಗೆಯೇ ಬೇರೆ ಧರ್ಮದವರೂ ಇಲ್ಲಿಗೆ ಬರುತ್ತಾರೆ. ಅವರನ್ನು ತಡೆಯಲು ನಾವ್ಯಾರು?, ಇದೊಂದು ಶುದ್ಧ ರಾಜಕೀಯ" ಎಂದು ಹೇಳಿಕೆ ನೀಡುವ ಮೂಲಕ ಮೈಸೂರು ರಾಜವಂಶಸ್ಥರಾದ ಪ್ರಮೋದ ದೇವಿ ಒಡೆಯರ್ ಹಾಗೂ ಸಂಸದ ಯದುವೀರ್ ಸೇರಿದಂತೆ ಪ್ರತಿಪಕ್ಷಗಳ ಟೀಕೆಗೆ ಗುರಿಯಾಗಿದ್ದರು.
ವಿಧಾನಸಭೆ ಅಧಿವೇಶನದಲ್ಲಿ ʼಆರ್‌ಎಸ್‌ಎಸ್ʼ ಗೀತೆ ಹಾಡುವ ಮೂಲಕ ಸ್ವಪಕ್ಷೀಯ ಸಚಿವರು ಹಾಗೂ ಶಾಸಕರ ಟೀಕೆಗೆ ಗುರಿಯಾಗಿದ್ದರು. ಪಕ್ಷದೊಳಗೆ ಟೀಕೆಗಳು ಹೆಚ್ಚಾದಾಗ "ನಾನೂ ಅಪ್ಪಟ ಕಾಂಗ್ರೆಸಿಗ, ಸಾಯುವಾಗಲೂ ಕಾಂಗ್ರೆಸಿಗನಾಗಿ ಸಾಯುತ್ತೇನೆ" ಎಂದು ಹೇಳಿಕೆ ನೀಡಿ ಕ್ಷಮೆಯಾಚಿಸಿದ್ದರು.