IT Raid |ಪಿಇಎಸ್ ಶಿಕ್ಷಣ ಸಂಸ್ಥೆಗಳ ಮೇಲೆ ಐಟಿ ದಾಳಿ; ದಾಖಲೆಗಳ ಪರಿಶೀಲನೆ

ಹೊಸಕೆರೆಹಳ್ಳಿಯಲ್ಲಿರುವ ಪಿಇಎಸ್ ಕಾಲೇಜು ಸೇರಿದಂತೆ ಹಲವು ಕಡೆಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಲಾಗಿದೆ.

Update: 2025-09-24 04:26 GMT

ಬೆಂಗಳೂರಿನ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾಗಿರುವ ಪಿಇಎಸ್ ಶಿಕ್ಷಣ ಸಂಸ್ಥೆಗಳ ಮೇಲೆ ಬುಧವಾರ ಬೆಳ್ಳಂ ಬೆಳಿಗ್ಗೆ ಆದಾಯ ತೆರಿಗೆ ಇಲಾಖೆ(ಐಟಿ) ಅಧಿಕಾರಿಗಳು ದಾಳಿ ನಡೆಸಿದ್ದು, ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ.

ಹೊಸಕೆರೆಹಳ್ಳಿಯಲ್ಲಿರುವ ಪಿಇಎಸ್ ಕಾಲೇಜು ಸೇರಿದಂತೆ ಹಲವು ಕಡೆಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಲಾಗಿದೆ.

ಆದಾಯಕ್ಕೂ ಮೀರಿದ ಆಸ್ತಿ ಗಳಿಕೆ ಆರೋಪದ ಹಿನ್ನೆಲೆಯಲ್ಲಿ ಈ ಶೋಧ ನಡೆಯುತ್ತಿದೆ ಎಂದು ಆದಾಯ ತೆರಿಗೆ ಇಲಾಖೆ ಮೂಲಗಳು ತಿಳಿಸಿವೆ. ಶಿಕ್ಷಣ ಸಂಸ್ಥೆಯ ಹಣಕಾಸು ವ್ಯವಹಾರಗಳು, ಅಭಿವೃದ್ಧಿ ಯೋಜನೆಗಳ ಖರ್ಚು, ಪೀಠೋಪಕರಣಗಳ ಖರೀದಿ, ಶುಲ್ಕದ ಸಂಗ್ರಹಣೆ ಮತ್ತು ವಹಿವಾಟಿನ ವಿವರಗಳನ್ನು ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ.

ಮಂಗಳೂರು, ಚೆನ್ನೈ ಹಾಗೂ ಆಂಧ್ರಪ್ರದೇಶದಿಂದ ಬಂದಿರುವ 200ಕ್ಕೂ ಹೆಚ್ಚು ಅಧಿಕಾರಿಗಳ ತಂಡ ಹೊಸಕೆರೆಹಳ್ಳಿ ಪಿಇಎಸ್ ಕಾಲೇಜು, ಎಲೆಕ್ಟ್ರಾನಿಕ್ ಸಿಟಿ ಪಿಇಎಸ್ ಕಾಲೇಜು, ಹನುಮಂತನಗರ ಪಿಇಎಸ್ ಕಾಲೇಜು, ಬನಶಂಕರಿ ಬಿಡಿಎ ಕಾಂಪ್ಲೆಕ್ಸ್ ಬಳಿಯ ದೊರೆಸ್ವಾಮಿ ನಾಯ್ಡು ಮನೆ, ಅವರ ಸಂಬಂಧಿಕರ ಮನೆಗಳು, ಆಂಧ್ರದ ಕುಪ್ಪಂನ ಪಿಇಎಸ್ ಕಾಲೇಜು ಸೇರಿ ಹಲವೆಡೆ ದಾಳಿ ನಡೆಸಿದೆ.

ಪಿಇಎಸ್ ಶಿಕ್ಷಣ ಸಂಸ್ಥೆಯನ್ನು ದಿ. ದೊರೆಸ್ವಾಮಿ ನಾಯ್ಡು ಸ್ಥಾಪಿಸಿದ್ದರು. ಕಳೆದ ಮಾರ್ಚ್ 25ರಂದು ದೊರೆಸ್ವಾಮಿ ನಿಧನರಾಗಿದ್ದು, ಅವರ ಪುತ್ರ ಜವಹರ್ ದೊರೆಸ್ವಾಮಿ ಸಂಸ್ಥೆಯ ನಿರ್ವಹಣೆ ನೋಡಿಕೊಳ್ಳುತ್ತಿದ್ದಾರೆ. ಪಿಇಎಸ್ ಶಿಕ್ಷಣ ಸಂಸ್ಥೆಗಳಲ್ಲಿ ದಾಖಲೆಗಳ ಪರಿಶೀಲನೆ ಮುಂದುವರಿದಿದೆ.

ಇತ್ತೀಚೆಗಷ್ಟೇ ಬೆಂಗಳೂರಿನ ಮೈಸೂರು ರಸ್ತೆಯ ಟೆಂಬರ್ ಲೇಔಟ್ ಹಾಗೂ ಗಾಂಧಿನಗರದಲ್ಲಿರುವ ಪೋಥಿಸ್ ಬಟ್ಟೆ ಶೋ ರೂಮ್‌ಗಳ ಮೇಲೂ ಐಟಿ ದಾಳಿ ನಡೆದಿತ್ತು. ತಮಿಳುನಾಡು ಮೂಲದ ಉದ್ಯಮಿಗಳಿಗೆ ಸೇರಿದ ಈ ಶೋರೂಮ್‌ಗಳ ಮೇಲಿನ ದಾಳಿಗೆ ಚೆನ್ನೈಯಿಂದ ಅಧಿಕಾರಿಗಳು ಆಗಮಿಸಿದ್ದರು.

Tags:    

Similar News