IT Employees Protest | ಇನ್ಫೊಸಿಸ್‌ ಸಂಸ್ಥಾಪಕ ನಾರಾಯಣ ಮೂರ್ತಿ, ಎಲ್&ಟಿ ಅಧ್ಯಕ್ಷ ಸುಬ್ರಹ್ಮಣ್ಯನ್‌ ವಿರುದ್ಧ ಆಕ್ರೋಶ

ಶಾಂತಿಯುತ ಪ್ರತಿಭಟನೆಗೆ ತಡೆಯೊಡ್ಡಲು ಯತ್ನಿಸಿದ ಪೊಲೀಸರ ವರ್ತನೆಯನ್ನು ಐಟಿ ಉದ್ಯೋಗಿಗಳ ಸಂಘ ಖಂಡಿಸಿದೆ. ರಾಜ್ಯ ಸರ್ಕಾರ ಕಾರ್ಪೊರೇಟ್‌ ಉದ್ಯಮಿಗಳ ಪರವಾಗಿರುವುದು ಇದರಿಂದ ಸಾಬೀತುಪಡಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದೆ.;

Update: 2025-03-10 18:50 GMT
ಬೆಂಗಳೂರಿನಲ್ಲಿ ಇನ್ಫೊಸಿಸ್‌ ಹಾಗೂ ಎಲ್‌ ಅಂಡ್‌ ಟಿ ವಿರುದ್ಧ ಪ್ರತಿಭಟನೆ ನಡೆಸಿದ ಐಟಿ ಉದ್ಯೋಗಿಗಳು ಪೊಲೀಸರೊಂದಿಗೆ ವಾಗ್ವಾದ ನಡೆಸಿದರು

ಹೆಚ್ಚುವರಿ ಕೆಲಸದ ಅವಧಿ ಕುರಿತು ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ ಹಾಗೂ ಎಲ್ ಅಂಡ್‌ ಟಿ ಅಧ್ಯಕ್ಷ ಎಸ್.ಎನ್. ಸುಬ್ರಹ್ಮಣ್ಯನ್ ನೀಡಿದ್ದ ಹೇಳಿಕೆ ಖಂಡಿಸಿ ಐಟಿ ಉದ್ಯೋಗಿಗಳು ನಡೆಸಿದ ಪ್ರತಿಭಟನೆ ಹತ್ತಿಕ್ಕಲು ಮುಂದಾದ ರಾಜ್ಯ ಸರ್ಕಾರದ ಕ್ರಮವನ್ನು ಕರ್ನಾಟಕ ರಾಜ್ಯ ಐಟಿ ಉದ್ಯೋಗಿಗಳ ಸಂಘಟನೆ ತೀವ್ರವಾಗಿ ಖಂಡಿಸಿದೆ.

ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಮಾ.9 ರಂದು ಕರ್ನಾಟಕ ಐಟಿ/ ಐಟಿಇಎಸ್‌ ನೌಕರರ ಸಂಘದ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು. ಪ್ರತಿಭಟನಾನಿರತ ಐಟಿ ಉದ್ಯೋಗಿಗಳು ನಾರಾಯಣಮೂರ್ತಿ ಹಾಗೂ ಎಸ್‌.ಎನ್‌. ಸುಬ್ರಹ್ಮಣ್ಯನ್‌ ಪ್ರತಿಕೃತಿ ದಹಿಸಲು ಮುಂದಾದಾಗ ಪೊಲೀಸರು ಮಧ್ಯಪ್ರವೇಶಿಸಿ ತಡೆಯಲು ಯತ್ನಿಸಿದರು. ಪೊಲೀಸರ ನಡೆ ಖಂಡಿಸಿದಾಗ ಪರಸ್ಪರ ವಾಗ್ವಾದ ನಡೆಯಿತು.

ಶಾಂತಿಯುತ ಪ್ರತಿಭಟನೆ ತಡೆಗೆ ಪ್ರಯತ್ನಿಸಿದ ಪೊಲೀಸರ ವರ್ತನೆಯನ್ನು ಐಟಿ ನೌಕರರ ಸಂಘ ತರಾಟೆಗೆ ತೆಗೆದುಕೊಂಡಿತು. ರಾಜ್ಯ ಸರ್ಕಾರ ಕಾರ್ಪೊರೇಟ್‌ ಉದ್ಯಮಿಗಳ ಪರವಾಗಿರುವುದನ್ನು ಸಾಬೀತುಪಡಿಸಿದೆ. ಇದರಿಂದ ಸರ್ಕಾರ ಧೋರಣೆ ಬಹಿರಂಗವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬೆಂಗಳೂರಿನಲ್ಲಿ ಐಟಿ ಉದ್ಯೋಗಿಗಳು ಇನ್ಪೊಸಿಸ್‌ ಹಾಗೂ ಎಲ್‌ ಅಂಡ್‌ ಟಿ ಮುಖ್ಯಸ್ಥರ ಪ್ರತಿಕೃತಿ  ದಹಿಸಿದರು

"ಆರೋಗ್ಯಕರ ಕೆಲಸ; ಸಮತೋಲಿತ ಜೀವನ” ಪ್ರತಿಯೊಬ್ಬರ ಉದ್ಯೋಗಿಯ ಹಕ್ಕು. ಕಾರ್ಪೊರೇಟ್‌ ಉದ್ಯಮಿಗಳ ಲಾಭಕರ ಉದ್ದೇಶದ ಹೇಳಿಕೆಗಳು ಖಂಡನೀಯ ಎಂದು ವಾಗ್ದಾಳಿ ನಡೆಸಿದರು. ಅಲ್ಲದೇ ಇಬ್ಬರೂ ಉದ್ಯಮಿಗಳ ಪ್ರತಿಕೃತಿ ದಹಿಸುವಲ್ಲಿ ಐಟಿ ಉದ್ಯೋಗಿಗಳು ಯಶಸ್ವಿಯಾದರು.

ವಾರದಲ್ಲಿ 70 ಗಂಟೆ ಕೆಲಸ ಮಾಡುವಂತೆ ಇನ್ಫೋಸಿಸ್‌ ಸಂಸ್ಥಾಪಕ ನಾರಾಯಣಮೂರ್ತಿ ಹೇಳಿದ್ದರೆ, ಎಲ್‌ ಅಂಡ್‌ ಟಿ ಅಧ್ಯಕ್ಷ ಎಸ್‌.ಎನ್‌ ಸುಬ್ರಹ್ಮಣ್ಯನ್‌ ಅವರು ವಾರದಲ್ಲಿ 90ಗಂಟೆ ಕೆಲಸ ಮಾಡಬೇಕು. ಭಾರತದ ಐಟಿ ಉದ್ಯೋಗಿಗಳು ಸೋಮಾರಿಗಳು. ಮನೆಯಲ್ಲಿ ಹೆಂಡತಿಯ ಮುಖವನ್ನು ಎಷ್ಟು ಅಂತ ನೋಡುತ್ತೀರಿ ಎಂದು ಐಟಿ ಉದ್ಯೋಗಿಗಳನ್ನು ಹಿಯ್ಯಾಳಿಸಿ ಮಾತನಾಡಿದ್ದರು.

ಕಾರ್ಪೊರೇಟ್‌ ಉದ್ಯಮಿಗಳಿಬ್ಬರ ಹೇಳಿಕೆಗೆ ಮಹಿಳಾ ಸಮುದಾಯ ಸೇರಿದಂತೆ ಐಟಿ ಉದ್ಯೋಗಿಗಳಿಂದ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು.

Tags:    

Similar News