Hampi Incident | ಇಸ್ರೇಲ್ ಮಹಿಳೆ ಮೇಲೆ ಅತ್ಯಾಚಾರ; ಮೂರನೇ ಆರೋಪಿ ತಮಿಳುನಾಡಿನಲ್ಲಿ ಬಂಧನ

ಅತ್ಯಾಚಾರ ಪ್ರಕರಣದ ಮೂರನೇ ಆರೋಪಿಯ ಮೊಬೈಲ್ ಜಾಡು ಹಿಡಿದಿರುವ ಪೊಲೀಸರಿಗೆ ಮಹತ್ವದ ಸುಳಿವು ಲಭ್ಯವಾಗಿದ್ದು, ತಮಿಳುನಾಡಿನಲ್ಲಿ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.;

Update: 2025-03-09 13:05 GMT

ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಸಾಣಾಪುರ ಕೆರೆಯ ಬಳಿ ಇಸ್ರೇಲ್ ಮಹಿಳೆ ಹಾಗೂ ಖಾಸಗಿ ಹೋಂ ಸ್ಟೇ ಒಡತಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಪರಾರಿಯಾಗಿರುವ ಮೂರನೇ ಆರೋಪಿಯನ್ನು ಗಂಗಾವತಿ ಪೊಲೀಸರು ಭಾನುವಾರ ತಮಿಳುನಾಡಿನಲ್ಲಿ ಬಂಧಿಸಿದ್ದಾರೆ.

ಆರೋಪಿಯ ಮೊಬೈಲ್ ನೆಟ್ವರ್ಕ್ ಜಾಡು ಹಿಡಿದು ಕಾರ್ಯಾಚರಣೆ ನಡೆಸಿದ ವಿಶೇಷ ತನಿಖಾ ತಂಡಗಳಿಗೆ ಆರೋಪಿ ಸಾಯಿರಾಂ ಎಂಬಾತ ತಮಿಳುನಾಡಿನಲ್ಲಿ ಸಿಕ್ಕಿ ಬಿದ್ದಿದ್ದಾನೆ. ಆರೋಪಿಯನ್ನು ಪೊಲೀಸರು ರಾಜ್ಯಕ್ಕೆ ಕರೆತರುತ್ತಿದ್ದಾರೆ ಎಂದು ಪೊಲೀಸ್ ಮೂಲಗಳು ಖಚಿತಪಡಿಸಿವೆ.

ಪ್ರಕರಣಕ್ಕೆ ಸಂಬಂಧ ಈಗಾಗಲೇ ಗಂಗಾವತಿ ಪೊಲೀಸರು ಇಬ್ಬರು ಆರೋಪಿಗಳನ್ನು ಶನಿವಾರ ಬಂಧಿಸಿದ್ದರು. ಬಂಧಿತರನ್ನು ಮಲ್ಲೇಶ್ ಹಾಗೂ ಚೇತನ ಸಾಯಿ ಶಿಳ್ಳೆಖ್ಯಾತರ್ ಎಂದು ಗುರುತಿಸಲಾಗಿದೆ. ಒಟ್ಟಾರೆ ಪ್ರಕರಣದ ಮೂವರು ಆರೋಪಿಗಳಿಗೆ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. 


ಅತ್ಯಾಚಾರ ಪ್ರಕರಣದಲ್ಲಿ ಮೂರನೇ ಆರೋಪಿಯ ಸುಳಿವು ದೊರೆತಿದ್ದು, ಶೀಘ್ರವೇ ಬಂಧಿಸಲಾಗುವುದು ಎಂದು ಭಾನುವಾರ ಬೆಳಿಗ್ಗೆ ಗೃಹ ಸಚಿವ ಡಾ. ಜಿ. ಪರಮೇಶ್ವರ್ ತಿಳಿಸಿದ್ದರು.

ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಸಾಣಾಪುರ ಸಮೀಪದ ತುಂಗಭದ್ರಾ ಎಡದಂಡೆ ಮೇಲೆ ಮಾ. 6 ರಂದು ಇಬ್ಬರು ವಿದೇಶಿಗರು ಸೇರಿ ಐವರು  ಗಿಟಾರ್ ನುಡಿಸುತ್ತಾ ನಕ್ಷತ್ರ ವೀಕ್ಷಿಸುತ್ತಿದ್ದರು. ರಾತ್ರಿ ಸುಮಾರು 10.30ರ ಸುಮಾರಿಗೆ ದ್ವಿಚಕ್ರ ವಾಹನದಲ್ಲಿ ಬಂದ ಮೂವರು ಪೆಟ್ರೋಲ್ ಎಲ್ಲಿ ಸಿಗುತ್ತದೆ ಎಂದು ಕೇಳಿದ್ದರು. ಹೋಂ ಸ್ಟೇ ಒಡತಿಯು,  ಸಾಣಾಪುರ ಗ್ರಾಮದಲ್ಲಿ ಪೆಟ್ರೋಲ್ತಿ ಸಿಗಲಿದೆ ಎಂದು ಹೇಳಿದ್ದರು. ಆದರೆ, ದುಷ್ಕರ್ಮಿಗಳು ಹಣ ನೀಡುವಂತೆ ಒತ್ತಾಯಿಸಿದ್ದರು. ಓಡಿಶಾ ಮೂಲದ ಬಿಬಾಸು ಎಂಬಾತ 20 ರೂ ನೀಡಿದಾಗ ಇದು ಸಾಕಾಗುವುದಿಲ್ಲ ಎಂದು ಹೇಳಿ ಗಲಾಟೆ ಮಾಡಿದ್ದರು. ಆರೋಪಿಗಳು ಅಮೇರಿಕಾ ಪ್ರಜೆ ಡೇನಿಯಲ್, ಮಹಾರಾಷ್ಟ್ರ ಹಾಗೂ ಒಡಿಶಾದ ಪುರುಷ ಪ್ರವಾಸಿಗರನ್ನು ಕಾಲುವೆಗೆ ದೂಡಿದ್ದರು. 

ಇಸ್ರೇಲ್ ಮಹಿಳೆ ಹಾಗೂ ಹೋಂ ಸ್ಟೇ ಒಡತಿಯ ಮೇಲೆ ಅತ್ಯಾಚಾರ ಎಸಗಿದ್ದು, ಹೋಂ ಸ್ಟೇ ಒಡತಿಯ ಪರ್ಸ್ ನಲ್ಲಿದ್ದ 9,500 ನಗದು ಹಾಗೂ ಮೊಬೈಲ್ ಕಸಿದುಕೊಂಡು ಪರಾರಿಯಾಗಿದ್ದರು. 

ಮಾ.7 ರಂದು ಸಂತ್ರಸ್ತ ಮಹಿಳೆಯರು ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಅತ್ಯಾಚಾರ ಪ್ರಕರಣ ದಾಖಲಿಸಿದ ಬೆನ್ನಲ್ಲೇ ಪೊಲೀಸರು ಆರೋಪಿಗಳ ಶೋಧಕ್ಕೆ ವಿಶೇಷ ತನಿಖಾ ತಂಡಗಳನ್ನು ರಚಿಸಿದರು.

ಪುರುಷ ಪ್ರವಾಸಿಗರ ಪೈಕಿ ಒಡಿಶಾ ಮೂಲದ ಬಿಬಾಸು ಕಾಲುವೆಯಲ್ಲಿ ಕೊಚ್ಚಿ ಹೋಗಿ, ಮೃತದೇಹ ಪತ್ತೆಯಾಗಿತ್ತು.


ಪ್ರಕರಣ ದಾಖಲಿಸಿಕೊಂಡು ಕಾರ್ಯಾಚರಣೆ ನಡೆಸಿದ ಪೊಲೀಸರು ಮಾ. 8 ರಂದು ಇಬ್ಬರು ಆರೋಪಿಗಳನ್ನು ಬಂಧಿಸಿದ್ದರು.  

ಬಂಧಿತ ಆರೋಪಿಗಳನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದು, ತನಿಖೆ ಮುಂದುವರಿದಿದೆ ಎಂದು ಪರಮೇಶ್ವರ್ ಹೇಳಿದ್ದಾರೆ.

ಈ ಮಧ್ಯೆ ಪ್ರಕರಣವನ್ನು ಇಸ್ರೇಲ್ ದೂತವಾಸ ಕಚೇರಿ ಗಂಭೀರವಾಗಿ ಪರಿಗಣಿಸಿದೆ. ತ್ವರಿತವಾಗಿ ಆರೋಪಿಗಳನ್ನು ಬಂಧಿಸುವಂತೆ ಒತ್ತಡ ಹೇರುತ್ತಿದೆ.  ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೂಡ ಆರೋಪಿಗಳ ಬಂಧನಕ್ಕೆ ಪೊಲೀಸರಿಗೆ ಖಡಕ್ ಸೂಚನೆ ನೀಡಿದ್ದಾರೆ.

ಅಲ್ಲದೇ ಪ್ರವಾಸಿಗರಿಗೆ ಸೂಕ್ತ ರಕ್ಷಣೆ ನೀಡುವಂತೆ ತಾಕೀತು ಮಾಡಿದ್ದಾರೆ.  ಹಂಪಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದೇಶಿ ಪ್ರವಾಸಿಗರು ಹಾಗೂ ಸ್ಥಳೀಯರ ನಡುವೆ ಪದೇ ಪದೇ ಘರ್ಷಣೆಗಳು ನಡೆಯುತ್ತಿದ್ದು, ಇಂತಹ ಅವಘಡ ಗಳಿಗೆ ಕಾರಣವಾಗುತ್ತಿದೆ.   

Tags:    

Similar News