ಹೈದರಾಬಾದ್ ವಿಮೋಚನಾ‌ ದಿನ| ದಾಖಲೆಗಳಲ್ಲಿ 'ಕಲ್ಯಾಣ': ಸಾವಿರಾರು ಕೋಟಿ ಅನುದಾನ, ಅಭಿವೃದ್ಧಿ ನಗಣ್ಯ

'ಹೈದರಾಬಾದ್‌ ಕರ್ನಾಟಕ'ದ ಹೆಸರನ್ನು 'ಕಲ್ಯಾಣ ಕರ್ನಾಟಕ'ವೆಂದು ನಾಮಕರಣ ಮಾಡಿ ದಶಕಗಳೇ ಗತಿಸಿದರೂ ಕಲ್ಯಾಣ ಎಂಬುದು ಮಾತ್ರ ಈವರೆವಿಗೂ ಮರೀಚಿಕೆಯಾಗಿಯೇ ಉಳಿದಿದೆ.;

Update: 2025-09-17 02:30 GMT

ಕಲ್ಯಾಣ ಕರ್ನಾಟಕದ ಜಿಲ್ಲೆಗಳಾದ ಕಲಬುರಗಿ, ಬೀದರ್, ಯಾದಗಿರಿ, ರಾಯಚೂರು, ಬಳ್ಳಾರಿ, ಕೊಪ್ಪಳ ಮತ್ತು ವಿಜಯನಗರ ಜಿಲ್ಲೆಗಳಲ್ಲಿ ಬುಧವಾರ (ಸೆ.17) ಸ್ವಾತಂತ್ರ್ಯ ದಿನದ ಸಂಭ್ರಮ. ದೇಶಕ್ಕೆ 1947 ರಲ್ಲಿ ಸ್ವಾತಂತ್ರ್ಯ ಸಿಕ್ಕರೆ, ಹೈದರಾಬಾದ್-ಕರ್ನಾಟಕ ಪ್ರದೇಶಕ್ಕೆ 1948 ರ ಸೆ.17 ರಂದು ವಿಮೋಚನೆಯಾಗಿದೆ. 13 ತಿಂಗಳ ಕಾಲ ನಡೆದ ಹೈದರಾಬಾದ್‌ ವಿಮೋಚನಾ ಚಳವಳಿ ಫಲವಾಗಿ ನಿಜಾಮನಿಂದ ವಿಮುಕ್ತಿ ಸಿಕ್ಕಿತ್ತು. ಅದಕ್ಕಾಗಿ ಪ್ರತಿವರ್ಷ ಈ ದಿನದಂದು ಹೈ-ಕ ವಿಮೋಚನಾ ದಿನ ಆಚರಿಸಲಾಗುತ್ತಿದೆ. 

ಈ ನಡುವೆ, ರಾಜ್ಯ ಸರ್ಕಾರವು ಹಿಂದುಳಿದ 'ಹೈದರಾಬಾದ್‌ ಕರ್ನಾಟಕ'ದ ಹೆಸರನ್ನು 'ಕಲ್ಯಾಣ ಕರ್ನಾಟಕ'ವೆಂದು ನಾಮಕರಣ ಮಾಡಿ ದಶಕಗಳೇ ಗತಿಸಿದರೂ ಕಲ್ಯಾಣ ಎಂಬುದು ಮಾತ್ರ ಈವರೆವಿಗೂ ಮರೀಚಿಕೆಯಾಗಿಯೇ ಉಳಿದಿದೆ. 2019ರಲ್ಲಿ ಕಲ್ಯಾಣ ಕರ್ನಾಟಕವೆಂದು ಹೆಸರು ಬದಲಿಸಲಾಯಿತು. ಆದರೆ ಹೆಸರಿಗಷ್ಟೇ ಕಲ್ಯಾಣವಾಗಿದೆಯೇ ಹೊರತು ಆ ಪ್ರದೇಶದ ಕಲ್ಯಾಣ ಮಾತ್ರ ದಾಖಲೆಗೆ ಮಾತ್ರ ಸೀಮಿತವಾಗುವಂತಾಗಿದೆ. ಇದಕ್ಕೆ ಸರ್ಕಾರಗಳ ಆರ್ಥಿಕ, ಆರೋಗ್ಯ ಸಮೀಕ್ಷೆಗಳೇ ನಿದರ್ಶನ.

ಬೆಂಗಳೂರು, ಮೈಸೂರು, ಮಲೆನಾಡು ಭಾಗಗಳಿಗೆ ಹೋಲಿಸಿದರೆ ತಲಾ ಆದಾಯ, ಮಾನವ ಅಭಿವೃದ್ಧಿ ಸೂಚ್ಯಂಕ, ಶಿಕ್ಷಣ ಸೇರಿದಂತೆ ಹಲವು ಕ್ಷೇತ್ರದಲ್ಲಿ ಕಲ್ಯಾಣ ಕರ್ನಾಟಕದ ಜಿಲ್ಲೆಗಳೇ ಯಾವಾಗಲೂ ಕೊನೆ ಸ್ಥಾನದಲ್ಲಿರುತ್ತವೆ. ಹಿಂದುಳಿದ ಭಾಗದ ಅಭಿವೃದ್ಧಿಗಾಗಿ ಸಂವಿಧಾನದ 371ಜೆ ತಿದ್ದುಪಡಿ ಜಾರಿಗೊಳಿಸಲಾಗಿದೆ. ಆದರೆ ಇದು ಅನುಷ್ಠಾನಕ್ಕೆ ಬಂದು ಒಂದು ದಶಕ ಗತಿಸಿದರೂ ಜನಜೀವನ ಸುಧಾರಿಸಿಲ್ಲ ಎಂಬುದು ಹಲವು ಕ್ಷೇತ್ರಗಳ ತಜ್ಞರ ಅಭಿಮತವಾಗಿದೆ. ಕರ್ನಾಟಕದಲ್ಲಿ ಎರಡು ಕರ್ನಾಟಕಗಳಿವೆ. ಒಂದು ಸಮೃದ್ಧ ಕರ್ನಾಟಕ, ಇನ್ನೊಂದು ಹಿಂದುಳಿದಿರುವ ಕರ್ನಾಟಕ' ಎಂಬ ತಜ್ಞರ ಅಭಿಪ್ರಾಯವು ರಾಜ್ಯದಲ್ಲಿ ಪ್ರಾದೇಶಿಕ ಅಸಮತೋಲನೆ ಜ್ವಲಂತವಾಗಿದೆ ಎನ್ನುವುದಕ್ಕೆ ನಿದರ್ಶನವಾಗಿದೆ.

ಸರ್ಕಾರದ ವಿವಿಧ ಇಲಾಖೆಗಳಡಿ ಸಾವಿರಾರು ಖಾಲಿ ಹುದ್ದೆಗಳನ್ನು ಗುರುತಿಸಿ ವರ್ಷಗಳೇ ಕಳೆದರೂ ಭರ್ತಿಯಾಗಿಲ್ಲ. ಉದ್ಯೋಗ ಸೃಷ್ಟಿಸುವ ಉದ್ದಿಮೆಗಳು ನಿರೀಕ್ಷೆಗೆ ತಕ್ಕಂತೆ ಬರುತ್ತಿಲ್ಲ. 'ಇಲ್ಲ'ಗಳ ನಡುವೆಯೇ ಸಮಾನ ಮತ್ತು ಸರ್ವಾಂಗೀಣ ಅಭಿವೃದ್ಧಿ ಭರವಸೆಯೊಂದಿಗೆ ರಾಜ್ಯದ ಇತರೆ ಭಾಗಗಳೊಂದಿಗೆ ಕಲ್ಯಾಣ ಕರ್ನಾಟಕ ಜಿಲ್ಲೆಗಳು ಪೈಪೋಟಿಗಿಳಿದಿವೆ.

ಏಳು ಜಿಲ್ಲೆಯ ಪೈಕಿ ಕಲಬುರಗಿ ಜಿಲ್ಲೆಗೆ ಆದ್ಯತೆ: 

ಕಲ್ಯಾಣ ಕರ್ನಾಟಕ ವ್ಯಾಪ್ತಿಗೆ ಒಟ್ಟು ಏಳು ಜಿಲ್ಲೆಗಳು ಬರಲಿವೆ. ಬೀದರ್‌, ಕಲಬುರಗಿ, ಯಾದಗಿರಿ, ರಾಯಚೂರು, ಬಳ್ಳಾರಿ, ವಿಜಯನಗರ ಮತ್ತು ಕೊಪ್ಪಳ ಜಿಲ್ಲೆಗಳ ಸರ್ವಾಂಗೀಣ ಅಭಿವೃದ್ಧಿಗೆ ಒತ್ತು ನೀಡಬೇಕು. ಈ ಜಿಲ್ಲೆಗಳ ಅಭಿವೃದ್ಧಿ ಕಾರ್ಯಗಳನ್ನು ಕಲ್ಯಾಣ ಕರ್ನಾಟಕ  ಪ್ರಾದೇಶಿಕ ಅಭಿವೃದ್ಧಿ ಮಂಡಳಿ (ಕೆಕೆಆರ್‌ಡಿಬಿ) ಮೂಲಕ ಕೈಗೊಳ್ಳಲಾಗುತ್ತದೆ. ಕಲಬುರಗಿ ಜಿಲ್ಲೆಯು ಕೇಂದ್ರ ಸ್ಥಾನವಾಗಿಟ್ಟುಕೊಂಡು ಮಂಡಳಿಯು ಕಾರ್ಯ ನಿರ್ವಹಿಸುತ್ತದೆ. ಆದರೆ, ಅಭಿವೃದ್ಧಿ ಕಾರ್ಯಗಳು ಹೆಚ್ಚಾಗಿ ಕಲಬುರಗಿಯಲ್ಲಿ ಆಗಿವೆಯೇ ಹೊರತು ಇತರೆ ಜಿಲ್ಲೆಗಳಲ್ಲಿ ಅಭಿವೃದ್ಧಿಯನ್ನು ಕಡೆಗಣಿಸಲಾಗಿದೆ ಎಂದು ಆರೋಪಗಳು ಕೇಳಿಬಂದಿವೆ. 

ವಿಮಾನ ನಿಲ್ದಾಣ, ಸುಸಜ್ಜಿತ ಆಸ್ಪತ್ರೆ, ಶಿಕ್ಷಣ ಸಂಸ್ಥೆಗಳು, ಪ್ರಮುಖ ಸರ್ಕಾರಿ ಕಚೇರಿಗಳು ಸೇರಿದಂತೆ ಇತರೆ ಕ್ಷೇತ್ರಗಳಲ್ಲಿಯೂ ಕಲಬುರಗಿ ಜಿಲ್ಲೆ ಅಭಿವೃದ್ಧಿ ಕಂಡಿದೆಯೇ ಹೊರತು ಇತರೆ ಆರು ಜಿಲ್ಲೆಗಳಲ್ಲಿ ಅಭಿವೃದ್ಧಿ ಅಷ್ಟಕಷ್ಟೇ ಎಂಬಂತಾಗಿದೆ. ಹುದ್ದೆಗಳು ಭರ್ತಿಯಾಗುವುದರ ಜತೆಗೆ ಕಲ್ಯಾಣಕ್ಕೆ ಪ್ರತ್ಯೇಕ ಕೈಗಾರಿಕಾ ನೀತಿ ಜಾರಿಗೊಳಿಸಬೇಕು ಎಂಬ ಒತ್ತಾಯವಾಗಿದೆ. 371ಜೆ ಅಡಿ ಶಿಕ್ಷಣ, ಉದ್ಯೋಗ ಮತ್ತು ಬಡ್ತಿಯಲ್ಲಿ ಆಗುತ್ತಿರುವ ಅನ್ಯಾಯ ಸರಿಪಡಿಸಬೇಕು. ಯಾದಗಿರಿಯಲ್ಲಿ ಕೈಗಾರಿಕೆಗಳ ಸ್ಥಾಪಿಸಬೇಕು, ಮೂಲಸೌಕರ್ಯ ವೃದ್ಧಿಯಾಗಬೇಕು. ಬೀದರ್‌ನಲ್ಲಿ ಜಿಲ್ಲಾ ಕಚೇರಿಗಳ ಸಂಕೀರ್ಣ ಆಗಬೇಕು. ಕೈಗಾರಿಕೆಗಳು ಬೇಕು. ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಬೇಕು ಎಂಬ ಒತ್ತಾಯಗಳು ಕೇಳಿಬಂದಿವೆ. 

ವಿಜಯನಗರ ಜಿಲ್ಲೆಯ ಬೇಡಿಕೆ

* ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಯಾಗಬೇಕು

* ಪ್ರವಾಸೋದ್ಯಮದ ಬೆಳವಣಿಗೆಗೆ ಮೂಲ ಸೌಕರ್ಯ ಅಭಿವೃದ್ಧಿ ಅಗತ್ಯ 

* ವಿಮಾನ ನಿಲ್ದಾಣ ಸಾಕಾರವಾಗಬೇಕು

* ಕನ್ನಡ ವಿಶ್ವವಿದ್ಯಾಲಯಕ್ಕೆ ಅನುದಾನ ಬೇಕಿದೆ

ರಾಯಚೂರು ಬೇಡಿಕೆ

* ರಾಯಚೂರು ವಿಶ್ವವಿದ್ಯಾಲಯಕ್ಕೆ ಅನುದಾನ

* ವಿಮಾನ ನಿಲ್ದಾಣ ಕಾಮಗಾರಿ ತ್ವರಿತವಾಗಿ ಪ್ರಾರಂಭ

* ಜಿಲ್ಲಾಡಳಿತ ಭವನ ನಿರ್ಮಾಣಕ್ಕೆ ಅನುದಾನ

* ಒಪೆಕ್‌ ಆಸ್ಪತ್ರೆ ಉನ್ನತೀಕರಣ

* ಮಕ್ಕಳ ಅಸ್ಪತ್ರೆ ನಿರ್ಮಾಣ

ಕೊಪ್ಪಳ ಜಿಲ್ಲೆಯ ಪ್ರಮುಖ ಬೇಡಿಕೆ

*ಕೊಪ್ಪಳ ವಿಶ್ವವಿದ್ಯಾಲಯಕ್ಕೆ ಅನುದಾನ

* ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಯ ಆರಂಭ

* ನವಲಿ ಸಮಾನಾಂತರ ಜಲಾಶಯ ನಿರ್ಮಾಣ

* ವಿಮಾನ ನಿಲ್ದಾಣ ನಿರ್ಮಾಣ

ಬಳ್ಳಾರಿ ಜಿಲ್ಲೆಯ ಬೇಡಿಕೆ

* ನನಸಾಗದ ಜೀನ್ಸ್‌ ಅಪೆರಲ್‌ ಪಾರ್ಕ್ ಸ್ಥಾಪನೆ

* ಹೆಸರಿಗಷ್ಟೇ ಸೀಮಿತವಾದ ವಿಮಾನ ನಿಲ್ದಾಣ

* ಸ್ಟೀಲ್‌ ಹಬ್‌ ಕನಸು ನನೆಗುದಿಗೆ 

* ಭತ್ತ ಅಭಿವೃದ್ಧಿ ಮಂಡಳಿ ಬೇಡಿಕೆ ಸಾಕಾರವಾಗಬೇಕು

ಶಿಕ್ಷಣ ಕ್ಷೇತ್ರದಲ್ಲಿಯೂ ಹಿಂದುಳಿಕೆ: 

ರಾಜ್ಯದ ಇತರೆ ಜಿಲ್ಲೆಗಳಿಗೆ ಹೋಲಿಸಿದರೆ ಕಲ್ಯಾಣ ಕರ್ನಾಟಕ ಭಾಗದ ಸಾಕ್ಷರತೆ ದರವು ಕಡಿಮೆ ಇದೆ.  ಕಲ್ಯಾಣ ಕರ್ನಾಟಕದ ಸಾಕ್ಷರತಾ ಪ್ರಮಾಣ ಪ್ರತಿಶತ 63.7ರಷ್ಟಿದೆ. ಕರ್ನಾಟಕ ರಾಜ್ಯದ ಸರಾಸರಿ ಸಾಕ್ಷರತಾ ಪ್ರಮಾಣ ಪ್ರತಿಶತ 75.36ರಷ್ಟಿದೆ.  ಕಲ್ಯಾಣ ಕರ್ನಾಟಕದ 115 ಸರಕಾರಿ ಶಾಲೆಗಳು ಸೊನ್ನೆ ವಿದ್ಯಾರ್ಥಿಗಳನ್ನು ನೋಂದಾಯಿಸಿಕೊಂಡಿವೆ. 241 ಸರಕಾರಿ ಶಾಲೆಗಳು ಒಂದರಿಂದ ಹತ್ತು ವಿದ್ಯಾರ್ಥಿಗಳನ್ನು ನೋಂದಾಯಿಸಿಕೊಂಡಿವೆ. ದುರಂತದ ಸಂಗತಿಯೆಂದರೆ, ಪ್ರತಿಶತ 65ರಷ್ಟು ಸರ್ಕಾರಿ ಶಾಲೆಗಳು ಏಕೋಪಾಧ್ಯಾಯ ಶಾಲೆಗಳಾಗಿವೆ.

ಪಿಯುಸಿ ಮತ್ತು ಎಸೆಸೆಲ್ಸಿ ಫಲಿತಾಂಶದ ಅಂಕಿ ಸಂಖ್ಯೆಗಳನ್ನು ಗಮನಿಸಿದರೆ, ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯ ವೈಫಲ್ಯ ಎದ್ದು ಕಾಣುತ್ತದೆ. ಈ ವರ್ಷದ ಕರ್ನಾಟಕ ರಾಜ್ಯದ ಪಿಯುಸಿ ಫಲಿತಾಂಶ, ಸರಾಸರಿ ಪ್ರತಿಶತ 73.45ರಷ್ಟಿದೆ.  ಎಸೆಸೆಲ್ಸಿ ಫಲಿತಾಂಶ ಕಲ್ಯಾಣ ಕರ್ನಾಟಕದ ಶೈಕ್ಷಣಿಕ ದಿವಾಳಿತನಕ್ಕೆ ಸಾಕ್ಷಿಯಾಗಿ ನಿಂತಿದೆ. ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಒಟ್ಟು ಅನುದಾನದ ಪ್ರತಿಶತ 25ರಷ್ಟು ಹಣವನ್ನು ಶೈಕ್ಷಣಿಕ ಪ್ರಗತಿ ಸಾಧಿಸಲು ಮೀಸಲಿಟ್ಟಿದ್ದರು. ಈ ಬಗೆಯ ಕಳಪೆ ಸಾಧನೆ ಹಲವು ದಶಕಗಳಿಂದ ಮುಂದುವರಿದಿದೆ.

ವಲಸೆ ಪ್ರಮಾಣ ಹೆಚ್ಚಳ: 

ಸಾವಿರಾರು ಕೋಟಿ ಹಣ ಖರ್ಚು ಮಾಡಿಯೂ ಶೈಕ್ಷಣಿಕ ಗುಣ ಮಟ್ಟ ಹೆಚ್ಚಿಸಲು ಸಾಧ್ಯವಾಗಿಲ್ಲವೆಂದರೆ ಸಮಸ್ಯೆಯ ಮೂಲ ಅರಿತಿಲ್ಲ ಎಂಬುದು ಮನದಟ್ಟಾಗುತ್ತದೆ. ಕಲ್ಯಾಣ ಕರ್ನಾಟಕ ಪ್ರದೇಶದ ಜಿಲ್ಲೆಗಳಲ್ಲಿ ವಲಸೆ ಪ್ರಮಾಣ ಹೆಚ್ಚಾಗಿದೆ. ಬಡವರು ಹೊಟ್ಟೆಪಾಡಿಗಾಗಿ ಗೋವಾ, ಮುಂಬೈ, ಬೆಂಗಳೂರಿಗೆ ದುಡಿಯಲು ಹೋಗುತ್ತಾರೆ. ವಲಸೆ ತಡೆಯಲು ಸಾಧ್ಯವಾಗದಿದ್ದರೆ ಶೈಕ್ಷಣಿಕ ಅಭಿವೃದ್ಧಿ ಅಸಾಧ್ಯ.  ಕಲ್ಯಾಣ ಕರ್ನಾಟಕದ ಜನಪ್ರತಿನಿಧಿಗಳ ಮನೆಗಳು ಅರಮನೆಯಂತಿವೆ. ಆದರೆ ಶಾಲೆಗಳು ಕುರಿದೊಡ್ಡಿಗಿಂತಲೂ ಕನಿಷ್ಠವಾಗಿರುತ್ತವೆ. ಅತ್ಯುತ್ತಮ ಶಾಲಾ ಕಟ್ಟಡ, ಆಟದ ಮೈದಾನ, ಶೌಚಾಲಯ ವ್ಯವಸ್ಥೆ ಇಲ್ಲದಿರುವುದು ಕಳಪೆ ಫಲಿತಾಂಶಕ್ಕೆ ಕಾರಣ. ಕಲ್ಯಾಣ ಕರ್ನಾಟಕ ಪ್ರದೇಶದ ಶಾಲೆಗಳಲ್ಲಿ ಇಂಗ್ಲಿಷ್, ವಿಜ್ಞಾನ ಮತ್ತು ಗಣಿತ ಶಿಕ್ಷಕರ ಕೊರತೆ ಎದ್ದು ಕಾಣುತ್ತದೆ.  ಕಲ್ಯಾಣ ಕರ್ನಾಟಕ ಜಿಲ್ಲೆಗಳ ಕ್ಷೇತ್ರ ಶಿಕ್ಷಣಾಧಿಕಾರಿ ಮತ್ತು ಡಿಡಿಪಿಐ ಕಚೇರಿಗಳು ಭ್ರಷ್ಟಾಚಾರದ ಕೂಪಗಳಾಗಿವೆ. ಅತ್ಯುತ್ತಮ ಕಲಿಕೆ ಸಿಗದೆ ಇರುವುದರಿಂದ ಉತ್ತಮ ಫಲಿತಾಂಶ ತೆಗೆಯಲು ಸಾಧ್ಯವಾಗುತ್ತಿಲ್ಲ.

ಕಲ್ಯಾಣ ಕರ್ನಾಟಕ್ಕೆ ಅನುದಾನ 

ಕಲಬುರಗಿಯಲ್ಲಿ ಮುಖ್ಯಮಂತ್ರಿ  ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ 5 ಸಾವಿರ  ಕೋಟಿ ರೂಪಾಯಿ ಅನುದಾನ ಹಂಚಿಕೆ  ಮತ್ತು ಕೃಷಿ ಇಲಾಖೆಗೆ 100 ಕೋಟಿ ರೂ. ಅನುದಾನ ಮೀಸಲಿಡುವ ತೀರ್ಮಾನ ಕೈಗೊಳ್ಳಲಾಗಿದೆ. ಸಚಿವ ಸಂಪುಟ ಸಭೆಯಲ್ಲಿ 56 ವಿಷಯಗಳನ್ನು ಚರ್ಚಿಸಲಾಗಿದ್ದು, ಕಲ್ಯಾಣ ಕರ್ನಾಟಕಕ್ಕೆ ಸಂಬಂಧಿಸಿದ 46 ವಿಚಾರಗಳನ್ನು ಚರ್ಚಿಸಲಾಯಿತು. ಕಲ್ಯಾಣ ಕರ್ನಾಟಕ ಭಾಗದ ಒಟ್ಟು ಮೊತ್ತ 11,770 ಕೋಟಿ ರೂ. ಆಗಿದ್ದು, ಬೀದರ್ ಮತ್ತು ರಾಯಚೂರಿನಲ್ಲಿ ಮಹಾನಗರ ಪಾಲಿಕೆ ಮಾಡಲು ತೀರ್ಮಾನಿಸಲಾಗಿದೆ. ಬೀದರ್ ಮತ್ತು ಕಲಬುರಗಿಯಲ್ಲಿ 7,200 ಕೋಟಿ  ರೂ. ವೆಚ್ಚದಲ್ಲಿ ಕುಡಿಯುವ ನೀರು ಯೋಜನೆ ಜಾರಿಗೆ ತರಲು ನಿರ್ಧರಿಸಲಾಗಿದೆ. ಆದರೆ ಸಚಿವ ಸಂಪುಟ ಸಭೆಯಲ್ಲಿ ಕೈಗೊಂಡ ತೀರ್ಮಾನಗಳು ಸಮರ್ಪಕವಾಗಿ ಅನುಷ್ಠಾನಗೊಳಿಸಲಾಗುವುದೇ ಎಂಬುದು ಯಕ್ಷಪ್ರಶ್ನೆಯಾಗಿದೆ.  

ವಿಶ್ವವಿದ್ಯಾಲಯಕ್ಕೆ ಅನುದಾನ ಮೀಸಲು : ರಾಜ್ಯಪಾಲರಿಂದ ಸೂಚನೆ

ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿ ಉದ್ದೇಶದಿಂದ ಕೆಕೆಆರ್‌ಡಿಬಿ ನೀಡುವ ಅನುದಾನದಲ್ಲಿ ಕನಿಷ್ಠ ಶೇ 10 ರಷ್ಟನ್ನು ಈ ಭಾಗದ ವಿಶ್ವವಿದ್ಯಾಲಯಗಳ ಬಳಕೆಗೆ ಮೀಸಲಿಡಬೇಕು ಎಂದು ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್ ಇತ್ತೀಚೆಗೆ ನಿರ್ದೇಶನ ನೀಡಿದ್ದಾರೆ. ಕೆಕೆಆರ್‌ಡಿಬಿ ಅನುದಾನದಲ್ಲಿ ವಿಶ್ವವಿದ್ಯಾಲಯಗಳಿಗೆ ಕನಿಷ್ಠ ಶೇ 10ರಷ್ಟು ಮೀಸಲಿಡುವಂತೆ ಇದೇ ಮೊದಲ ಬಾರಿಗೆ ರಾಜ್ಯಪಾಲರು ನಿರ್ದೇಶನ ನೀಡಿದ್ದಾರೆ. ರಾಜ್ಯಪಾಲರ ನಿರ್ದೇಶನದಂತೆ ಅನುದಾನ ಮರು ಹಂಚಿಕೆ ಮಾಡಿದರೆ ಕಲ್ಯಾಣ ಕರ್ನಾಟಕ ಭಾಗದಲ್ಲಿರುವ ವಿಶ್ವವಿದ್ಯಾಲಯಗಳಿಗೆ 300 ಕೋಟಿ ರೂ. ಹಂಚಿಕೆ ಮಾಡಬೇಕಿದೆ.  

ವಿಶ್ವವಿದ್ಯಾಲಯಗಳಿಗೆ ಜಿಲ್ಲಾಧಿಕಾರಿಗಳ ಮೂಲಕ ಅನುದಾನ ಬಿಡುಗಡೆ ಮಾಡುವ  ಪ್ರಸ್ತಾವಗಳನ್ನು ಕೈಬಿಡಬೇಕು. ಅದರ ಬದಲು ನೇರವಾಗಿ ವಿಶ್ವವಿದ್ಯಾಲಯಗಳಿಗೆ ಅನುದಾನ ಬಿಡುಗಡೆ ಮಾಡಬೇಕು. ವಿಶ್ವವಿದ್ಯಾಲಯಗಳು ಸ್ವಾಯತ್ತ ಸಂಸ್ಥೆಗಳಾಗಿದ್ದು, ಶಾಸನಸಭೆ ರೂಪಿಸಿದ ಕಾಯ್ದೆಯಡಿ ಅಲ್ಲಿ ಯೋಜನೆಗಳು, ಅಭಿವೃದ್ಧಿ, ಸಂಶೋಧನೆ, ಅಕಾಡೆಮಿಕ್ ಚಟುವಟಿಕೆ ನಡೆಯುತ್ತವೆ. ಈ ಚಟುವಟಿಕೆಯ ಮೇಲುಸ್ತುವಾರಿ ಮತ್ತು ಅಗತ್ಯ ಬಿದ್ದಾಗ ಶಿಸ್ತು ಕ್ರಮಗಳನ್ನು ತೆಗೆದುಕೊಳ್ಳಲು ಉನ್ನತ ಶಿಕ್ಷಣ ಇಲಾಖೆ ಮತ್ತು ಕುಲಾಧಿಪತಿ (ರಾಜ್ಯಪಾಲ) ಕಾರ್ಯಾಲಯಕ್ಕೆ ಅಧಿಕಾರ ನೀಡಲಾಗಿದೆ. ಜಿಲ್ಲಾಧಿಕಾರಿಗಳ ಮೂಲಕ ಅನುದಾನ ಹಂಚಿಕೆ ಪ್ರಸ್ತಾವ ಸರಿಯಲ್ಲ. ಅಲ್ಲದೆ, ವಿಶ್ವವಿದ್ಯಾಲಯಗಳ ಕಾಯ್ದೆ ಪ್ರಕಾರ ವಿಶ್ವವಿದ್ಯಾಲಯಗಳ ಸಿಂಡಿಕೇಟ್‌ಗೆ ಇರುವ ಅಧಿಕಾರದ ಮೇಲೆ ಜಿಲ್ಲಾಧಿಕಾರಿ ಅತಿಕ್ರಮಿಸುವುದು ವಿವೇಕಯುತ ಅಲ್ಲ. ಸಿಂಡಿಕೇಟ್ ಮೇಲುಸ್ತುವಾರಿ ನೋಡಿಕೊಳ್ಳುವ ಸಂಸ್ಥೆಯಾಗಿದ್ದು, ಅದು ಕುಲಾಧಿಪತಿ ಮತ್ತು ಉನ್ನತ ಶಿಕ್ಷಣ ಇಲಾಖೆಗೆ ವರದಿ ನೀಡುತ್ತದೆ. ಹೀಗಾಗಿ, ಅನುದಾನವನ್ನು ಜಿಲ್ಲಾಧಿಕಾರಿಗಳಿಗೆ ಬಿಡುಗಡೆ ಮಾಡುವ ಬದಲು ನೇರವಾಗಿ ವಿಶ್ವವಿದ್ಯಾಲಯಗಳಿಗೆ ಬಿಡುಗಡೆ ಮಾಡಬೇಕು' ಎಂಬುದು ರಾಜ್ಯಪಾಲರ ವಾದವಾಗಿದೆ. 

13 ತಿಂಗಳು ತಡವಾಗಿ ಲಭಿಸಿದ ಸ್ವಾತಂತ್ರ್ಯ

ದೇಶಕ್ಕೆ ಸ್ವಾತಂತ್ರ್ಯ ಸಿಕ್ಕರು ಕೂಡಾ ಕಲ್ಯಾಣ ಕರ್ನಾಟಕಕ್ಕೆ ಮತ್ತು ಹೈದರಾಬಾದ್ ನಿಜಾಮನ ಆಳ್ವಿಕೆಯಲ್ಲಿದ್ದ ಪ್ರದೇಶದ ಜನರಿಗೆ ಮಾತ್ರ ಸ್ವಾತಂತ್ರ್ಯ ಸಿಕ್ಕಿರಲಿಲ್ಲ. ಅದು ಸಿಕ್ಕಿದ್ದು ಸೆಪ್ಟೆಂಬರ್ 17, 1948 ರಂದು. ಹೀಗಾಗಿ ಸೆಪ್ಟೆಂಬರ್ 17 ಅನ್ನು ಕಲ್ಯಾಣ ಕರ್ನಾಟಕ ಉತ್ಸವ ದಿನವನ್ನಾಗಿ ಆಚರಿಸಲಾಗುತ್ತದೆ. ಬ್ರಿಟಿಷರು ದೇಶಕ್ಕೆ ಸ್ವಾತಂತ್ರ್ಯ ನೀಡುವಾಗ ದೇಶದಲ್ಲಿ ಅನೇಕ ಸಂಸ್ಥಾನಗಳಿದ್ದವು. ಅವರಿಗೆ ಬ್ರಿಟಿಷರು, ಮೂರು ಅವಕಾಶಗಳನ್ನು ನೀಡಿದ್ದರು. ದೇಶಿಯ ಸಂಸ್ಥಾನದವರು ಇಚ್ಚಿಸಿದರೆ ಭಾರತದ ಒಕ್ಕೂಟದಲ್ಲಾಗಲಿ, ಪಾಕಿಸ್ತಾನದಲ್ಲಾಗಲಿ ಅಥವಾ ಸ್ವತಂತ್ರವಾಗಿ ಕೂಡಾ ಇರಲು ಅವಕಾಶ ನೀಡಿದ್ದರು. ಆದರೆ ಸ್ವಾತಂತ್ರ್ಯ ನಂತರ ಬಹುತೇಕ ಸಣ್ಣಪುಟ್ಟ ಸಂಸ್ಥಾನಗಳು ದೇಶದಲ್ಲಿ ವಿಲೀನವಾದವು. ಆದರೆ ಜುನಾಗಡ, ಕಾಶ್ಮೀರ, ಹೈದರಾಬಾದ್ ನಿಜಾಮ ಸೇರಿದಂತೆ ಹಲವರು ಸ್ವತಂತ್ರವಾಗಿ ಉಳಿಯಲು ನಿರ್ಧರಿಸಿದರು.

 ಹೈದರಾಬಾದ್ ಸಂಸ್ಥಾನದ ವ್ಯಾಪ್ತಿಯಲ್ಲಿದ್ದ ಬಹುತೇಕರ ಆಸೆ ಹೈದರಾಬಾದ್‌ ಸಂಸ್ಥಾನ ಕೂಡಾ ಸ್ವಾತಂತ್ರ್ಯ ಭಾರತದಲ್ಲಿ ವಿಲೀನವಾಗಬೇಕು. ಆ ಮೂಲಕ ಪ್ರಜಾಪ್ರಭುತ್ವ ಜಾರಿಯಾಗಬೇಕು ಎನ್ನುವುದಾಗಿತ್ತು. ಆದರೆ ಅಂದಿನ ಹೈದರಾಬಾದ್ ನಿಜಾಮನಾಗಿದ್ದ ಮೀರ್ ಉಸ್ಮಾನ್ ಅಲಿಖಾನ್ ಮಾತ್ರ ಸ್ವತಂತ್ರವಾಗಿ ಉಳಿಯಲು ನಿರ್ದರಿಸಿಬಿಟ್ಟಿದ್ದ. ಹೀಗಾಗಿ ಇಲ್ಲಿನ ಅನೇಕ ಜನ ಮತ್ತೆ ಸ್ವಾತಂತ್ರ್ಯಕ್ಕಾಗಿ ಹೋರಾಟಕ್ಕಿಳಿದರು. ಕಲ್ಯಾಣ ಕರ್ನಾಟಕ ಭಾಗದಲ್ಲಿ ಸ್ವಾಮಿ ರಮನಾಂದ ತೀರ್ಥರ ನೇತೃತ್ವದಲ್ಲಿ ಹೋರಾಟಗಳು ಪ್ರಾರಂಭವಾದವು. ಇದೇ ಸಮಯದಲ್ಲಿ ಹೈದರಾಬಾದ್​ ನಿಜಾಮ, ಸ್ವಾತಂತ್ರ್ಯ ಹೋರಾಟವನ್ನು ಹತ್ತಿಕ್ಕಲು ಅನೇಕ ವಾಮಮಾರ್ಗಗಳನ್ನು ಅನುಸರಿಸಿದ. ಕಲ್ಯಾಣ ಕರ್ನಾಟಕ ಭಾಗದ ಜನರು ಮೊದಲು ಬ್ರಿಟಿಷರ ವಿರುದ್ಧ ಹೋರಾಡಿದರೇ, ನಂತರ ನಮ್ಮದೇ ದೇಶದ ಹೈದರಾಬಾದ್ ನಿಜಾಮನ ವಿರುದ್ಧ ಹೋರಾಡಿ ಸ್ವಾತಂತ್ರ್ಯ ಪಡೆಯಬೇಕಾಯಿತು. 

ಉಕ್ಕಿನ ಮನುಷ್ಯನ ದಿಟ್ಟ ನಿರ್ಧಾರ

ದೇಶದ ಒಕ್ಕೂಟ ವ್ಯವಸ್ಥೆಯಲ್ಲಿ ಸೇರುವಂತೆ ಅಂದಿನ ಗೃಹ ಸಚಿವ ಸರ್ಧಾರ್ ವಲ್ಲಭಬಾಯ್ ಪಟೇಲ್  ಹೈದರಾಬಾದ್​ ನಿಜಾಮನಿಗೆ ಸಾಕಷ್ಟು ಮನವಿ ಮಾಡಿದರು. ಆದರೆ, ಸರ್ಕಾರದ ಮನವಿಗೆ ಹೈದರಾಬಾದ್​ ನಿಜಾಮ ಬಗ್ಗುವುದಿಲ್ಲ. ಬದಲಾಗಿ ಸ್ವತಂತ್ರವಾಗಿಯೇ ಇರುವ  ಮೊಂಡುತನವನ್ನು ಪ್ರದರ್ಶಿಸುತ್ತಾನೆ. ಜತೆಗೆ ಸ್ವತಂತ್ರಕ್ಕಾಗಿ ನಡೆದ ಹೋರಾಟಗಳನ್ನು ಹತ್ತಿಕ್ಕುವ ಕೆಲಸವನ್ನು ಮುಂದುವರಿಸುತ್ತಾನೆ. ಹೋರಾಟಗಳಿಂದ ಹೈದರಾಬಾದ್​ ನಿಜಾಮ ಬಗ್ಗದಿದ್ದಾಗ ಸರ್ದಾರ ವಲ್ಲಭ ಬಾಯಿ ಪಟೇಲ್  ಹೈದರಾಬಾದ್​ ಸಂಸ್ಥಾನವನ್ನು ದೇಶದ ಒಕ್ಕೂಟ ವ್ಯವಸ್ಥೆಯಲ್ಲಿ ಸೇರಿಸಲು ಮುಂದಾಗುತ್ತಾರೆ.

1948 ರ ಸೆ.13 ರಂದು ಆಪರೇಷನ್ ಪೋಲೋ ಹೆಸರಿನಲ್ಲಿ ಹೈದರಾಬಾದ್​ ಸಂಸ್ಥಾನವನ್ನು ಭಾರತ ದೇಶದಲ್ಲಿ ವಿಲೀನ ಮಾಡಲು ಕಾರ್ಯಾಚರಣೆ ಆರಂಭವಾಗುತ್ತದೆ. ಭಾರತೀಯ ಸೈನ್ಯ ಕಾರ್ಯಚರಣೆಗೆ ಇಳಿಯುತ್ತದೆ. ಕಾರ್ಯಚಾರಣೆ ಪ್ರಾರಂಭವಾದ ನಾಲ್ಕೇ ದಿನದಲ್ಲಿ ಯಾವುದೆ ಪ್ರತಿರೋದವಿಲ್ಲದೆ ಹೈದರಾಬಾದ್​ ನಿಜಾಮ ಭಾರತದಲ್ಲಿ ತನ್ನ ಸಂಸ್ಥಾನವನ್ನು ವಿಲೀನ ಮಾಡಲಿಕ್ಕೆ ಒಪ್ಪಿಗೆಯನ್ನು ಸೂಚಿಸುತ್ತಾರೆ.  ಹೀಗಾಗಿ ಸೆ.೧೭ರಂದು ಕಲ್ಯಾಣ ಕರ್ನಾಟಕದ ಜನತೆ ವಿಮೋಚನಾ ದಿನಾಚಾರಣೆ ಎಂಬುದಾಗಿ ಆಚರಿಸುತ್ತಾರೆ. 

Tags:    

Similar News