Internal Reservation| ದಲಿತರ ಒಳ ಮೀಸಲಾತಿ ದತ್ತಾಂಶ: ಏನು ಮಾನದಂಡ? ಯಾವ ವರದಿ ಪರಿಗಣನೆ?

ಪರಿಶಿಷ್ಟ ಜಾತಿಗಳ ಎಡಗೈ-ಬಲಗೈ ಒಳ ಮೀಸಲಾತಿ ಜಾರಿ ಸಂಕಷ್ಟದಿಂದ ಪಾರಾಗಲು ಅಧಿಕೃತ ದಾಖಲೆ ಮತ್ತು ದತ್ತಾಂಶ ಸಂಗ್ರಹಿಸಲು ನಿವೃತ್ತ ನ್ಯಾಯಮೂರ್ತಿ ನೇತೃತ್ವದ ಸಮಿತಿ ರಚನೆಗೆ ರಾಜ್ಯ ಸರ್ಕಾರ ಮುಂದಾಗಿದೆ. ಅಧಿಕೃತ ದಾಖಲೆ ಮತ್ತು ದತ್ತಾಂಶ ಎಲ್ಲಿಂದ ಪಡೆಯುತ್ತಾರೆ ಎನ್ನುವುದೇ ಕುತೂಹಲದ ಸಂಗತಿ.

Update: 2024-10-29 03:18 GMT

ಪರಿಶಿಷ್ಟ ಜಾತಿಗಳ ಎಡಗೈ-ಬಲಗೈ ಒಳ ಮೀಸಲಾತಿ ಜಾರಿ ಸಂಕಷ್ಟದಿಂದ ಪಾರಾಗಲು ಅಧಿಕೃತ ದಾಖಲೆ ಮತ್ತು ದತ್ತಾಂಶ ಸಂಗ್ರಹಿಸಲು ನಿವೃತ್ತ ನ್ಯಾಯಮೂರ್ತಿ ನೇತೃತ್ವದ ಸಮಿತಿ ರಚನೆಗೆ  ರಾಜ್ಯ ಸರ್ಕಾರ ಮುಂದಾಗಿದೆ. ಅಧಿಕೃತ ದಾಖಲೆ ಮತ್ತು ದತ್ತಾಂಶ ಎಲ್ಲಿಂದ ಪಡೆಯುತ್ತಾರೆ ಎನ್ನುವುದೇ ಕುತೂಹಲದ ಸಂಗತಿ.

ಸರ್ಕಾರಕ್ಕೆ ಒಳ ಮೀಸಲಾತಿ ಜಾರಿ ಬಿಸಿ ತುಪ್ಪವಾಗಿ ಪರಿಣಮಿಸಿದ್ದು, ಮೂರು ಕ್ಷೇತ್ರಗಳ ಉಪ ಚುನಾವಣೆ ಸಂದರ್ಭದಲ್ಲಿ ಏನೇ ತೀರ್ಮಾನ ತೆಗೆದುಕೊಂಡರೂ ಪರಿಣಾಮ ಬೀರುವ ಸಾಧ್ಯತೆ ಇದ್ದು, ಅದರಿಂದ ತಪ್ಪಿಸಿಕೊಳ್ಳಲು ʼಒಳ ಮೀಸಲಾತಿಗೆ ಬದ್ಧʼ ಎಂದು ಹೇಳಿಕೊಂಡೇ, ಅಧಿಕೃತ ದಾಖಲೆ ಮತ್ತು ದತ್ತಾಂಶ ಸಂಗ್ರಹಿಸಲು ನಿವೃತ್ತ ನ್ಯಾಯಮೂರ್ತಿ ನೇತೃತ್ವದ ಸಮಿತಿ ರಚನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯೆ ಸಚಿವ ಸಂಪುಟ ತೀರ್ಮಾನಿಸಿದೆ.

ಆ ಸಮಿತಿ ಮೂರು ತಿಂಗಳಲ್ಲಿ ರಾಜ್ಯದಲ್ಲಿರುವ ಎಸ್ಸಿ ಸಮುದಾಯಗಳ ಎಡಗೈ ಮತ್ತು ಬಲಗೈ - ಉಪ ಜಾತಿವಾರು ಜನಸಂಖ್ಯೆಯನ್ನು ಅಧಿಕೃತವಾಗಿ ಕಲೆ ಹಾಕಿ ಅದರ ಆಧಾರದ ಮೇಲೆ ಯಾವ ಸುಮುದಾಯಗಳಿಗೆ ಎಷ್ಟು ಪ್ರಮಾಣದಲ್ಲಿ ಶೇಕಡಾವಾರು ಮೀಸಲಾತಿ ಹಂಚಿಕೆ ಮಾಡಬಹುದು ಎಂದು ಸರ್ಕಾರ ತೀರ್ಮಾನಿಸಲು ಯೋಚಿಸಿದೆ.

ಒಳಮೀಸಲಾತಿ ಜಾರಿ ಮಾಡಲು ರಾಜ್ಯ ಸರ್ಕಾರ ನಿವೃತ್ತ ನ್ಯಾಯ ಮೂರ್ತಿಗಳ ನೇತೃತ್ವದ ಸಮಿತಿ ಮಾಡಿರುವುದು ಸಮಯ ದೂಡುವ ಪ್ರಯತ್ನ. ಸುಪ್ರೀಂಕೋರ್ಟ್ ಆದೇಶ ಇದೆ. ಈ ನೆಲದ ಕಾನೂನು ಅದು. ಕಾಂಗ್ರೆಸ್ ಗೆ ಒಳಮೀಸಲಾತಿ ತರಲು ಇಷ್ಟ ಇಲ್ಲ. ದಲಿತರು ಎಲ್ಲಿದ್ದಾರೋ ಅಲ್ಲೇ ಇರಬೇಕು ಎಂದು ಕಾಂಗ್ರೆಸ್ ಬಯಸುತ್ತಿದೆ ಎಂದು ಪರಿಶಿಷ್ಟ ಎಡಗೈ ಸಮುದಾಯದ ನಾಯಕ , ಸಂಸದ ಗೋವಿಂದ ಕಾರಜೋಳ ಅಭಿಪ್ರಾಯಪಟ್ಟಿದ್ದಾರೆ.

ಹಿಂದೆ ಬಿಜೆಪಿ ಸರ್ಕಾರವೇ ನ್ಯಾ. ಸದಾಶಿವ ಆಯೋಗದ ವರದಿಯನ್ನು ತಿರಸ್ಕರಿಸಿ, ಮಾಧುಸ್ವಾಮಿ ನೇತೃತ್ವದ ಕಮಿಟಿ ರಚಿಸಿತ್ತು. ಅವರ ವರದಿಯಲ್ಲಿ ಹಲವು ಅಂಶಗಳನ್ನ ಬಿಟ್ಟಿದ್ದರು. ಹಾಗಾಗಿ ನಾವು ದಲಿತ ಒಳ ಪಂಗಡಗಳು ಚರ್ಚೆ ಮಾಡಿದ್ದೆವು. ಸುಪ್ರೀಂಕೋರ್ಟ್ ತೀರ್ಪಿನ ಹಿನ್ನೆಲೆಯಲ್ಲಿ ದಲಿತ ಒಳ ಪಂಗಡಗಳು ಒಳ‌ಮೀಸಲಾತಿಗೆ ಬದ್ದರಿದ್ದಾರೆ. ನಿವೃತ್ತ ನ್ಯಾಯಮೂರ್ತಿ ಕಮಿಟಿಗೆ ವಾಸ್ತವಿಕ ಡಾಟಾ ಸಂಗ್ರಹಿಸಿ ಕೊಡುವಂತೆ ಸೂಚಿಸಿದ್ದೇವೆ. ಕಮಿಟಿಯ ವರದಿ ಬಂದ ನಂತರ ಒಳ‌ಮೀಸಲಾತಿಯನ್ನು ಜಾರಿಗೆ ತರಲು ನಮ್ಮ ಸರ್ಕಾರ ಸಿದ್ದವಿದೆ ಎಂದು ಸಮಾಜ ಕಲ್ಯಾಣ ಸಚಿವ ಡಾ. ಹೆಚ್.ಸಿ.ಮಹದೇವಪ್ಪ ತಿಳಿಸಿದ್ದಾರೆ.

ಯಾವ ದಾಖಲೆ ಪರಿಗಣನೆ?

ಎಸ್ಸಿ ಸಮುದಾಯಗಳ ಎಲ್ಲ ಒಳ ಪಂಗಡಗಳಿಗೆ ನ್ಯಾಯ ಸಮ್ಮತವಾದ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಪ್ರಮಾಣ ಹಂಚಿಕೆ ಮಾಡಲು ರಾಜ್ಯ ಸರ್ಕಾರದ ಬಳಿ ಅಧಿಕೃತ ದಾಖಲೆ ಅಥವಾ ದತ್ತಾಂಶಗಳು ಮೂರು ರೂಪದಲ್ಲಿವೆ.

ಮೊದಲನೆಯದ್ದು ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗ ನೀಡಿರುವ ವರದಿ, ಎರಡನೇಯದ್ದು, ಬಿಜೆಪಿ ಸರ್ಕಾರದ ಅವಧಿಯಲ್ಲಿ ಜೆ.ಸಿ. ಮಾಧುಸ್ಬಾಮಿ ನೇತೃತ್ವದ ಸಚಿವ ಸಂಪುಟದ ಉಪ ಸಮಿತಿ 2011 ರ ಜನಸಂಖ್ಯೆ ಆಧಾರದಲ್ಲಿ ಸಮುದಾಯಗಳ ಜನಸಂಖ್ಯೆ ವರ್ಗೀಕರಿಸಿ ನೀಡಿರುವ ವರದಿ ಇನ್ನೊಂದು ರಾಜ್ಯ ಶಾಸ್ವತ ಹಿಂದುಳಿದ ವರ್ಗಗಳ ಆಯೋಗ ತಯಾರಿಸಿರುವ ಕಾಂತರಾಜ್ ಅವರ ಶೈಕ್ಷಣಿಕ ಸಾಮಾಜಿಕ ಹಾಗೂ ಅರ್ಥಿಕ ಸಮೀಕ್ಷಾ ವರದಿ (ಜಾತಿ ಗಣತಿ).

ಸದಾಶಿವ ಆಯೋಗ

ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗ ಎಸ್ಸಿ ಸಮುದಾಯಕ್ಕೆ ಮೀಸಲಿದ್ದ ಶೇ 15 ರಲ್ಲಿ ನಾಲ್ಕು ವರ್ಗಗಳಾಗಿ ವಿಂಗಡಿಸಿ, ಎಸ್ಸಿ ಎಡಗೈ ಸಮುದಾಯಕ್ಕೆ ಶೇ 6% ಎಸ್ಸಿ ಬಲಗೈ ಸಮುದಾಯಕ್ಕೆ ಶೇ 5 % ಬೇಡ ಜಂಗಮ, ಆದಿ ದ್ರಾವಿಡ ಸಮುದಾಯಳಿಗೆ ಶೇ 3% ಹಾಗೂ ಲಂಬಾಣಿ, ಭೋವಿ, ಕೊರಚ, ಕೊರಮ ಸಮುದಾಯಗಳಿಗೆ ಶೇ1% ರಷ್ಟು ಮೀಸಲಾತಿ ನೀಡಬಹುದು ಎಂದು ವರ್ಗೀಕರಣ ಮಾಡಿದೆ. ಆದರೆ, ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗ ಒಳ ಮೀಸಲಾತಿ ವಿಂಗಡಿಸುವ ಮುನ್ನ ರಾಜ್ಯದ ಎಲ್ಲ ಎಸ್ಸಿ ಸಮುದಾಯಗಳನ್ನು ಸಂಪೂರ್ಣವಾಗಿ ಸಮೀಕ್ಷೆ ಮಾಡಿಲ್ಲ, ನಗರ ಪ್ರದೇಶದ ಶೇ 30% ರಷ್ಟು ದಲಿತ ಎಸ್ಸಿ ಸಮುದಾಯದವರು ಈ ಸಮೀಕ್ಷೆಯಿಂದ ಹೊರಗುಳಿದಿದ್ದಾರೆ. ಹೀಗಾಗಿ ಅದು ಅವೈಜ್ಞಾನಿಕವಾಗಿದ್ದು, ಈಗಾಗಲೇ ಆ ವರದಿ ಅಪ್ರಸ್ತುತವಾಗಿದ್ದು ಅದನ್ನು ಪರಿಗಣಿಸಬಾರದು ಎಂದು ಆಡಳಿತ ಪಕ್ಷದ ಶಾಸಕರೇ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.

ಮಾಧುಸ್ವಾಮಿ ಸಂಪುಟ ಸಮಿತಿ

ಇನ್ನು ಬಿಜೆಪಿ ಸರ್ಕಾರದ ಅವಧಿಯಲ್ಲಿ ಅಂದಿನ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಅವರ ನೇತೃತ್ವದ ಸಚಿವ ಸಂಪುಟ ಉಪ ಸಮಿತಿಯು 2011ರ ಜನಗಣತಿಯ ಆಧಾರದಲ್ಲಿ ಪರಿಶಿಷ್ಟ ಜಾತಿಯ ಜನಸಂಖ್ಯೆಯನ್ನು ಪರಿಗಣಿಸಿದೆ. 1 ಕೋಟಿಯಷ್ಟಿರುವ ಜನಸಂಖ್ಯೆಯನ್ನು ನಾಲ್ಕು ಗುಂಪುಗಳನ್ನಾಗಿ ವಿಂಗಡಿಸಿದೆ. ಪ್ರತಿ ಆರು ಲಕ್ಷ ಜನಸಂಖ್ಯೆಗೆ ಶೇ 1ರಷ್ಟು ಮೀಸಲಾತಿಯಂತೆ ಲೆಕ್ಕಹಾಕಿದೆ.

ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಅವಧಿಯಲ್ಲಿ ಎಸ್ಸಿ ಸಮುದಾಯದ ಮೀಸಲಾತಿ ಪ್ರಮಾಣವನ್ನು 15% ರಿಂದ ಶೇ 17% ಕ್ಕೆ ಹೆಚ್ಚಿಸಿರುವುದನ್ನು ಪರಿಗಣಿಸಿ ಒಳ ಮೀಸಲಾತಿಯನ್ನು ವರ್ಗೀಕರಿಸಿ ಎಸ್ಸಿ ಸಮುದಾಯಕ್ಕೆ ಮೀಸಲಿದ್ದ ಶೇ 17% ರಲ್ಲಿ ಎಡಗೈ ಸಮುದಾಯಕ್ಕೆ ಶೇ 6%, ಬಲಗೈ ಸುಮದಾಯಕ್ಕೆ ಶೇ 5.5, ಲಂಬಾಣಿ, ಭೋವಿ, ಕೊರಚ, ಕೊರಮ ಸಮುದಾಯಗಳಿಗೇ ಶೇ 4.5% ಹಾಗೂ ಇತರೇ ಎಸ್ಪಿ ಸಮುದಾಯಗಳಿಗೆ ಶೇ 1% ರಷ್ಟು ಮೀಸಲಾತಿ ನೀಡಬಹುದು ಎಂದು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಲಾಗಿತ್ತು. ಅಂದಿನ ಬಿಜೆಪಿ ಸರ್ಕಾರ ಹಂಚಿಕೆ ಮಾಡಿರುವ ಒಳ ಮೀಸಲಾತಿ ಕೂಡ ನ್ಯಾಯ ಸಮ್ಮತವಾಗಿಲ್ಲ, ಜನಸಂಖ್ಯೆಗೆ ಅನುಗುಣವಾಗಿ ಆಗಿಲ್ಲ ಎಂಬ ಆರೋಪ ಕೇಳಿ ಬಂದಿದ್ದು, ಒಳ ಮೀಸಲಾತಿ ಹಂಚಿಕೆಗೆ ಈ ವರದಿಯನ್ನು ಪರಿಗಣಿಸಬಾರದು ಎಂಬ ವಾದ ಇದೆ.

ಜಾತಿ ಗಣತಿ

ಇನ್ನು ಸಿದ್ದರಾಮಯ್ಯ ನೇತೃತ್ವದ ಹಿಂದಿನ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ಕಾಂತರಾಜ ನೇತೃತ್ವದ ಸಾಮಾಜಿಕ ಶೈಕ್ಷಣಿಕ ಆರ್ಥಿಕ ವರದಿ ಜಾತಿ ಗಣತಿ ಎಂದೇ ಬಿಂಬಿತವಾಗಿದ್ದು, ಸರ್ಕಾರಕ್ಕೆ ವರದಿ ಸಲ್ಲಿಕೆಯಾಗುವ ಮುನ್ನವೇ ಸೋರಿಕೆಯಾಗಿದ್ದು, ಸೋರಿಕೆಯಾದ ಕಾಂತರಾಜ ವರದಿಯ ಪ್ರಕಾರ ರಾಜ್ಯದಲ್ಲಿ ಎಸ್ಸಿ ಎಸ್ಟಿ ಸಮುದಾಯ ಸುಮಾರು 1.20 ಕೋಟಿ ಜಮಸಂಖ್ಯೆ ಇದೆ. ಆದರೆ, ಆ ವರದಿಯನ್ನು ರಾಜ್ಯ ಸರ್ಕಾರ ಇನ್ನೂ ಅಧಿಕೃತವಾಗಿ ಒಪ್ಪಿಕೊಳ್ಳದೇ ಇರುವುದರಿಂದ ಆ ವರದಿಯ ಅಂಕಿ ಅಂಶಗಳನ್ನು ಅಧಿಕೃತವಾಗಿ ಪರಿಗಣಿಸಲು ಅವಾಕಾಶವಿಲ್ಲ.

ರಾಜ್ಯ ಸರ್ಕಾರದ ಬಳಿ ಇರುವ ಮೂರು ವರದಿಗಳ ಅಂಕಿ ಅಂಶಗಳು ಮತ್ತು ದತ್ತಾಂಶಗಳ ಬಗ್ಗೆ ಒಂದಿಲ್ಲೊಂಡು ರೀತಿಯಲ್ಲಿ ಅಪಸ್ವರ ಕೇಳಿ ಬಂದಿರುವುದರಿಂದ ರಾಜ್ಯ ಸರ್ಕಾರ ಯಾವ ದಾಖಲೆ ಹಾಗೂ ದತ್ತಾಂಶವನ್ನು ಪರಿಗಣಿಸಲು ನೂತಮವಾಗಿ ರಚಿಸಲು ತೀರ್ಮಾನಿಸಿರುವ ಸಮಿತಿಗೆ ಸೂಚಿಸುತ್ತಾರೆ ಎನ್ನುವುದು ಪ್ರಶ್ನಾರ್ಹ.

ಇನ್ನು ದಲಿತ ಬಲಗೈ ಸಮುದಾಯ ಒಳ ಮೀಸಲಾತಿ ಜಾರಿಗೊಳುಸುವ ಮುನ್ನ ವೈಜ್ಞಾನಿಕವಾಗಿ ಎಸ್ಸಿ ಸಮುದಾಯಗಳ ಜಾತಿ ಸಮೀಕ್ಷೆ ನಡೆಸಿ ಒಳ ಮೀಸಲಾತಿ ವರ್ಗೀಕರಣ ಮಾಡಬೇಕೆಂಬ ಒತ್ತಡವನ್ನು ರಾಜ್ಯ ಸರ್ಕಾರದ ಮೇಲೆ ಹೇರುತ್ತಿರುವುದರಿಂದ ರಾಜ್ಯ ಸರ್ಕಾರ ಈಗ ರಚಿಸಲು ತೀರ್ಮಾನಿಸಿರುವ ಸಮಿತಿ ಯಾವ ರೀತಿ ಕಾರ್ಯ ನಿರ್ವಹಿಸುತ್ತದೆ. ಮೂರು ತಿಂಗಳಲ್ಲಿ ಯಾವ ರೀತಿಯ ವರದಿ ನೀಡುತ್ತದೆ ಎನ್ನುವುದನ್ನು ಕಾದು ನೋಡಬೇಕು.

Tags:    

Similar News