Internal Reservation Part 3| ಮತ್ತೆ ಆದಿ ಕರ್ನಾಟಕ ಗೊಂದಲ ; 8 ಲಕ್ಷ ಮಂದಿ ಉಪಜಾತಿಯನ್ನೇ ನಮೂದಿಸಿಲ್ಲ ?

ಸದಾಶಿವ ಆಯೋಗದ ವರದಿಯಲ್ಲಿನ ಜಾತಿ ಸೂಚಕ ಪದಗಳಿಗೆ ಪರಿಹಾರ ಕಂಡುಕೊಳ್ಳಲು ಉಪಜಾತಿಗಳ ದತ್ತಾಂಶ ಸಂಗ್ರಹಕ್ಕೆ‌ ಮುಂದಾಗಿದ್ದ ನ್ಯಾ.ನಾಗಮೋಹನ್ ದಾಸ್ ಸಮೀಕ್ಷೆಯಲ್ಲೂ ಲಕ್ಷಾಂತರ ಜನರು ಉಪಜಾತಿ ಹೆಸರನ್ನೇ ಬರೆಸಿಲ್ಲ.;

Update: 2025-07-08 04:30 GMT

ನ್ಯಾ.ಎ.ಜೆ.ಸದಾಶಿವ ಆಯೋಗದ ವರದಿಯ ಗೊಂದಲಗಳಿಗೆ ಪರಿಹಾರ ಕಂಡುಕೊಳ್ಳಲು ಹೊಸದಾಗಿ ನಡೆಸಲಾದ ನ್ಯಾ. ನಾಗಮೋಹನ್ ದಾಸ್ ನೇತೃತ್ವದ ಸಮೀಕ್ಷೆಯಲ್ಲೂ ಬಹಳಷ್ಟು ಜನರು ಉಪಜಾತಿ ಬದಲು ಜಾತಿ ಸೂಚಕ ಪದಗಳನ್ನೇ ಬರೆಸಿರುವುದು ತಲೆ ಬಿಸಿ ತಂದಿದೆ.

ನ್ಯಾ.ಎಚ್.ಎನ್.ನಾಗಮೋಹನ್ ದಾಸ್ ನೇತೃತ್ವದಲ್ಲಿ ಇತ್ತೀಚೆಗೆ ಪೂರ್ಣಗೊಂಡ ಪರಿಶಿಷ್ಟ ಜಾತಿಗಳ ಸಮಗ್ರ ಸಮೀಕ್ಷೆಯಲ್ಲಿ ಸುಮಾರು 8 ಲಕ್ಷ ಜನರು ಜಾತಿ ಸೂಚಕವಾಗಿರುವ ಆದಿ ಕರ್ನಾಟಕ ಎಂದು ಬರೆಸಿದ್ದಾರೆ ಎಂಬುದು ತಿಳಿದು ಬಂದಿದೆ.

ಪರಿಶಿಷ್ಟ ಜಾತಿಗಳಲ್ಲಿ ಒಳ ಮೀಸಲಾತಿ ಹಂಚಿಕೆಗಾಗಿ‌ ಸದಾಶಿವ ಆಯೋಗ ನಡೆಸಿದ್ದ ಸಮೀಕ್ಷೆಯಲ್ಲಿ ಬಹುತೇಕರು ಆದಿ ಕರ್ನಾಟಕ, ಆದಿ ದ್ರಾವಿಡ ಹಾಗೂ ಆದಿ ಆಂಧ್ರ ಎಂದು ಬರೆಸಿದ್ದರು.  ಉಪಜಾತಿಗಳ ದತ್ತಾಂಶ ಇರದ ಕಾರಣ ಮೀಸಲಾತಿ ಹಂಚಿಕೆ ಸಾಧ್ಯವಾಗಿರಲಿಲ್ಲ.

ಸದಾಶಿವ ಆಯೋಗದ ವರದಿ ಅಧ್ಯಯನ ಮಾಡಿ ಒಳ ಮೀಸಲಾತಿ ಹಂಚಿಕೆಗೆ ಕ್ರಮ ಕೈಗೊಳ್ಳುವಂತೆ ರಾಜ್ಯ ಸರ್ಕಾರ ನಿವೃತ್ತ ನ್ಯಾ. ನಾಗ ಮೋಹನ್ ದಾಸ್ ನೇತೃತ್ವದಲ್ಲಿ ಏಕ ಸದಸ್ಯ ಆಯೋಗ ರಚಿಸಿತ್ತು. ಸಂವಿಧಾನದ 341ನೇ ವಿಧಿಯಡಿ ಪರಿಶಿಷ್ಟ ಜಾತಿ ಪಟ್ಟಿಯಲ್ಲಿ 101 ಜಾತಿಗಳನ್ನು ಗುರುತಿಸಲಾಗಿದೆ. ಈ ಜಾತಿಗಳ ವೈಜ್ಞಾನಿಕ ವರ್ಗೀಕರಣ ದತ್ತಾಂಶ ಸಂಗ್ರಹಿಸಲು ಹೊಸದಾಗಿ ಸಮೀಕ್ಷೆ ನಡೆಸಲು ಆಯೋಗ ಶಿಫಾರಸು ಮಾಡಿತ್ತು. 

ನ್ಯಾ.ನಾಗಮೋಹನ್ ದಾಸ್ ಸಮಿಕ್ಷೆಯಲ್ಲೂ ಗೊಂದಲ

ನಿವೃತ್ತ ನ್ಯಾ.ನಾಗಮೋಹನ್ ದಾಸ್ ಸಮೀಕ್ಷೆಯಲ್ಲೂ ಸುಮಾರು 8 ಲಕ್ಷ ಜನರು ಆದಿ ಕರ್ನಾಟಕ ಎಂದು ನಮೂದಿರುವುದು ಆಯೋಗಕ್ಕೆ ತಲೆ ನೋವಾಗಿ ಪರಿಣಮಿಸಿದೆ.

ಜಾತಿ ಸೂಚಕ ಪದಗಳ ಗೊಂದಲಕ್ಕೆ ಪರಿಹಾರ ಕಂಡುಕೊಳ್ಳಬೇಕಾಗಿದ್ದ‌ ಸಮೀಕ್ಷೆ ಮತ್ತದೇ ಸಮಸ್ಯೆಯನ್ನು ಪುನರಾವರ್ತಿಸಿದೆ ಎಂದು ಹೇಳಲಾಗಿದೆ. 

ಎಂಟು ಲಕ್ಷ ಜನರು ಜಾತಿ ಸೂಚಕ ಪದವನ್ನೇ ಬರೆಸಿದ್ದಾರೆ ಎಂದು ದಲಿತ ಸಂಘಟನೆಗಳು ಹೇಳಿವೆ. ಆದರೆ, ಈ ಕುರಿತು ಆಯೋಗ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ.

ನಾಗಮೋಹನ್ ದಾಸ್ ನೇತೃತ್ವದ ಒಳ ಮೀಸಲಾತಿ ಸಮೀಕ್ಷೆಯಲ್ಲಿ ಮೂಲ ಜಾತಿಯ ಹೆಸರು ಬರೆಸುವಂತೆ ರಾಜ್ಯ ಸರ್ಕಾರ, ಆಯೋಗ ಹಾಗೂ ದಲಿತ ಸಂಘಟನೆಗಳು ಸಾಕಷ್ಟು ಜಾಗೃತಿ ಮೂಡಿಸಿದರೂ ಕೆಲವರು ಮತ್ತದೇ ಜಾತಿ ಸೂಚಕ ಬರೆಸಿದ್ದಾರೆ ಎಂಬುದು ಗೊತ್ತಾಗಿದೆ. ಇಷ್ಟೆಲ್ಲಾ ಪ್ರಚಾರ, ಅಭಿಯಾನ ಕೈಗೊಂಡರೂ ಜನರಿಗೆ ಮನವರಿಕೆ ಆಗಿಲ್ಲ ಎಂದಾದರೆ ಜನರ ಅಜ್ಞಾನವಲ್ಲದೇ‌ ಮತ್ತೇನು ಎಂದು ದಲಿತ ಮುಖಂಡ ಮಾವಳ್ಳಿ ಶಂಕರ್‌ 'ದ ಫೆಡರಲ್ ಕರ್ನಾಟಕ'ಕ್ಕೆ ತಿಳಿಸಿದರು.

ಜಾತಿಸೂಚಕದ‌ ಮುಂದೆ ಉಪಜಾತಿ ಉಲ್ಲೇಖಿಸುವುದರಿಂದ ನಿರ್ದಿಷ್ಟ ಉಪಜಾತಿಯ ದತ್ತಾಂಶ ತಿಳಿಯುವಂತೆ ಆಯೋಗ ತಂತ್ರಾಂಶ ಸಿದ್ದಪಡಿಸಿದೆ. ಈಗ ಎಂಟು ಲಕ್ಷ ಮಂದಿ ಬರೀ ಜಾತಿ ಸೂಚಕ ಬರೆಸಿರುವುದರಿಂದ ಯಾವ ರೀತಿ ಪರಿಗಣಿಸಬಹುದು‌ ಎಂಬುದು ಪ್ರಶ್ನೆಯಾಗಿದೆ. ಈ ಹಿಂದೆ ತಪ್ಪು ಮಾಹಿತಿ‌ ನೀಡಿದರೆ ಒಳ ಮೀಸಲಾತಿಯಿಂದ ವಂಚಿತರಾಗಬಹುದು‌ ಎಂದು ಆಯೋಗ ಎಚ್ಚರಿಸಿತ್ತು. 

ಗಣತಿದಾರರ ಎಡವಟ್ಟು ?

ರಾಜ್ಯದ ಹಲವು ಕಡೆಗಳಲ್ಲಿ ಗಣತಿದಾರರ ಎಡವಟ್ಟು ಕೂಡ ಸಮೀಕ್ಷೆಯ ಲೋಪಗಳಿಗೆ ಕಾರಣವಾಗಿದೆ ಎಂದು ಹೇಳಲಾಗಿದೆ.

ಮಾದಿಗ ಹಾಗೂ ಹೊಲೆಯರು ಹೆಚ್ಚು ವಾಸಿಸುವ ಗ್ರಾಮಗಳಲ್ಲಿ ಈ ರೀತಿಯ ವ್ಯತ್ಯಾಸಗಳು ಕಂಡು ಬರುವ ಸಾಧ್ಯತೆ ಇದೆ ಎನ್ನಲಾಗಿದೆ.

ಹೇಗೆಂದರೆ, ಒಂದು ಗ್ರಾಮದಲ್ಲಿ 80 ಮನೆಗಳು ಹೊಲೆಯ‌ , 20 ಮನೆಗಳು  ಮಾದಿಗ ಸಮುದಾಯಕ್ಕೆ ಸೇರಿದವು ಇದ್ದರೆ ಗಣತಿದಾರರು ಹೆಚ್ಚು ಮನೆಗಳಿರುವ ಸಮುದಾಯದ ಜಾತಿ ಸಂಖ್ಯೆಯನ್ನೇ ಎಲ್ಲದಕ್ಕೂ ಬಳಸಿದ್ದಾರೆ ಎಂದು ದಲಿತ ಸಂಘಟನೆಗಳು ಆರೋಪಿಸಿವೆ.

ಮಾದಿಗ, ಹೊಲೆಯ ಹಾಗೂ ಇತರೆ ಉಪಜಾತಿಗಳಿಗೆ ಬೇರೆ ಬೇರೆಯ ಜಾತಿ ಸಂಖ್ಯೆ ಇರುತ್ತದೆ. ಆದರೆ, ಜನ‌ಸಾಮಾನ್ಯರಿಗೆ ತಿಳಿದಿರುವುದಿಲ್ಲ. ಗಣತಿದಾರರು ಸಣ್ಣಪುಟ್ಟ‌ ಸಮುದಾಯಗಳನ್ನು ಕಡೆಗಣಿಸಿ, ಒಂದೇ ಸಮುದಾಯದ ಜಾತಿ ಸಂಖ್ಯೆ ನಮೂಸಿರಬಹುದಾದ ಆತಂಕವೂ ಇದೆ. 

ಪ್ರಾದೇಶಿಕವಾಗಿ ಜಾತಿಸೂಚಕಗಳು ಭಿನ್ನವಾಗಿರುವುದರಿಂದ ಯಾವ‌ ರೀತಿ ದತ್ತಾಂಶ ವಿಶ್ಲೇಷಿಸಲಾಗುತ್ತದೆ ಎಂಬುದು ಕುತೂಹಲ ಮೂಡಿಸಿದೆ.

ಒಳ‌ ಮೀಸಲಾತಿ‌ ಸಮೀಕ್ಷೆ ಬೋಗಸ್

ಕರ್ನಾಟಕದಲ್ಲಿ ಒಳಮೀಸಲಾತಿಗೆ ಸಂಬಂಧಿಸಿ ನಡೆಸಿದ ಪರಿಶಿಷ್ಟ ಜಾತಿಯ ಮನೆ-ಮನೆ ಸಮೀಕ್ಷೆ ಬೋಗಸ್ ಮತ್ತು ನಕಲಿ ಎಂದು ವಂಚಿತ್‌ ಬಹುಜನ ಅಘಾಡಿ ಸಂಸ್ಥಾಪಕ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಅವರ ಮೊಮ್ಮಗ ಪ್ರಕಾಶ್ ಅಂಬೇಡ್ಕ‌ರ್ ಟೀಕಿಸಿದ್ದಾರೆ.

ಕರ್ನಾಟಕದಲ್ಲಿ ಕಾಂಗ್ರೆಸ್‌ ನೇತೃತ್ವದ ಸರ್ಕಾರ ಪರಿಶಿಷ್ಟ ಜಾತಿಯ ಬೋಗಸ್ ಸರ್ವೆ ನಡೆಸಿದೆ. ನಿವಾಸಿಗಳೊಂದಿಗೆ ಮಾತನಾಡದೆ ಅಥವಾ ಯಾವುದೇ ನೈಜ ಮಾಹಿತಿ ಸಂಗ್ರಹಿಸದೆ ಮನೆಗಳಿಗೆ ರಹಸ್ಯವಾಗಿ ಸ್ಟಿಕ್ಕರ್ ಅಂಟಿಸುವುದು ಯಾವ ರೀತಿಯ ಕಾನೂನುಬದ್ಧ ಸಮೀಕ್ಷೆ? ಅಂತಹ ನಕಲಿ ಸಮೀಕ್ಷೆ ನಡೆಸುವುದರಿಂದ ಏನು ಪ್ರಯೋಜನ?' ಎಂದು ಪ್ರಶ್ನಿಸಿದ್ದಾರೆ.

'ಪರಿಶಿಷ್ಟ ಜಾತಿಗಳ ಅನುಚಿತ ಮತ್ತು ಸುಳ್ಳು ಅಂಕಿ– ಅಂಶಗಳನ್ನು ದಾಖಲಿಸಲು ಕಾಂಗ್ರೆಸ್ ಸಂಚು ರೂಪಿಸುತ್ತಿದೆಯೇ? ಎಂದು  ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಪ್ರಶ್ನಿಸಿದ್ದಾರೆ.

ಕೂಗುಮಾರಿಗಳಿಂದ ಅಪಪ್ರಚಾರ

ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ ಸಮೀಕ್ಷೆ ಕುರಿತು ದಲಿತರಲ್ಲೇ ಕೆಲ ಕೂಗುಮಾರಿಗಳು ಅಪಪ್ರಚಾರ ನಡೆಸಿದ್ದಾರೆ. ಏಕಸದಸ್ಯ ಆಯೋಗವು ಸಮೀಕ್ಷೆ ಆರಂಭಿಸಿದ ನಂತರ ಕೆಲವರು ರಾಜ್ಯಾದ್ಯಂತ ಯಾತ್ರೆ ನಡೆಸಿ, ರಾಜ್ಯ ಸರ್ಕಾರದ ವಿರುದ್ಧ ಮನಬಂದಂತೆ ಹೇಳಿಕೆ ನೀಡಿದ್ದರು. ಒಳ ಮೀಸಲಾತಿ ಹೋರಾಟಕ್ಕಾಗಿ ಶ್ರಮಿಸಿದ ಹಲವು ನಾಯಕರು ಇಂತಹ ಕೂಗುಮಾರಿಗಳಿಂದಾಗಿಯೇ ಮೂಲೆಗುಂಪಾಗಬೇಕಾಯಿತು ಎಂದು ದಲಿತ ಮುಖಂಡ ಕೇಶವಮೂರ್ತಿ ʼದ ಫೆಡರಲ್‌ ಕರ್ನಾಟಕʼದ ಬಳಿ ಬೇಸರ ಹೊರಹಾಕಿದರು.

ಒಟ್ಟಾರೆ ಸಮೀಕ್ಷೆ ಯಶಸ್ವಿಯಾಗಿ ಪೂರ್ಣಗೊಂಡಿದ್ದು, ದತ್ತಾಂಶ ವಿಶ್ಲೇಷಣೆ ನಡೆಯುತ್ತಿದೆ. ಹೀಗಿರುವಾಗ ಮತ್ತೆ ಎಂಟು ಲಕ್ಷ ಜನರು ಜಾತಿ ಸೂಚಕ‌ ಬರೆಸಿದ್ದು, ವಿಶ್ಲೇಷಣೆ ವೇಳೆ ಅವರ ಹೆಸರನ್ನು ಸಮೀಕ್ಷೆಯಿಂದ ಹೊರಬಿಡುವರೇ ಅಥವಾ ಪರ್ಯಾಯ‌ ಮಾರ್ಗ ಸೂಚಿಸುವರೇ ಎಂಬ ಕುತೂಹಲ ಮುಡಿಸಿದೆ.

Tags:    

Similar News