ಒಳ ಮೀಸಲಾತಿ ಜಾರಿ: ಬಿರುಸುಗೊಂಡ ಸರ್ಕಾರ, ಪ್ರತಿಪಕ್ಷಗಳ ಸಮರ
ಒಳ ಮೀಸಲಾತಿ ವಿಚಾರದಲ್ಲಿ ಬಿಜೆಪಿ ನಾಯಕರು ಜನರನ್ನು ದಾರಿ ತಪ್ಪಿಸುತ್ತಿದ್ದಾರೆ. ಈ ಹಿಂದೆ ಬಿಜೆಪಿ ಸರ್ಕಾರವಿದ್ದಾಗ ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗದ ವರದಿಯನ್ನು ತಿರಸ್ಕರಿಸಲಾಗಿತ್ತು ಎಂದು ಸಚಿವ ಎಚ್.ಸಿ. ಮಹದೇವಪ್ಪ ತಿಳಿಸಿದ್ದಾರೆ.;
ಸಚಿವ ಹೆಚ್. ಸಿ. ಮಹದೇವಪ್ಪ ಹಾಗೂ ಸಂಸದ ಗೋವಿಂದ ಕಾರಜೋಳ
ಪರಿಶಿಷ್ಟ ಜಾತಿಯ ಒಳ ಮೀಸಲಾತಿ ವಿಚಾರವಾಗಿ ರಾಜ್ಯ ರಾಜಕೀಯದಲ್ಲಿ ಚರ್ಚೆ ಬಿರುಸುಗೊಂಡಿದೆ. ನಿವೃತ್ತ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನ್ ದಾಸ್ ನೇತೃತ್ವದ ಆಯೋಗವು ವರದಿ ಸಲ್ಲಿಸಿದ 20 ದಿನಗಳಲ್ಲಿ ಒಳ ಮೀಸಲಾತಿ ಜಾರಿ ಮಾಡುವುದಾಗಿ ಸಮಾಜ ಕಲ್ಯಾಣ ಸಚಿವ ಎಚ್.ಸಿ. ಮಹದೇವಪ್ಪ ಸ್ಪಷ್ಟಪಡಿಸಿದ್ದಾರೆ. ಮತ್ತೊಂದೆಡೆ, ರಾಜ್ಯ ಸರ್ಕಾರದ ವಿಳಂಬ ನೀತಿಯನ್ನು ಖಂಡಿಸಿ ಆಗಸ್ಟ್ 16 ರಿಂದ ಅಸಹಕಾರ ಚಳವಳಿ ನಡೆಸುವುದಾಗಿ ಬಿಜೆಪಿ ಎಚ್ಚರಿಕೆ ನೀಡಿದೆ.
ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಎಚ್.ಸಿ. ಮಹದೇವಪ್ಪ, "ಒಳ ಮೀಸಲಾತಿ ವಿಚಾರದಲ್ಲಿ ಬಿಜೆಪಿ ನಾಯಕರು ಜನರನ್ನು ದಾರಿ ತಪ್ಪಿಸುತ್ತಿದ್ದಾರೆ. ಈ ಹಿಂದೆ ಬಿಜೆಪಿ ಸರ್ಕಾರವಿದ್ದಾಗ ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗದ ವರದಿಯನ್ನು ತಿರಸ್ಕರಿಸಲಾಗಿತ್ತು. ಆಗ ಗೋವಿಂದ ಕಾರಜೋಳ ರಾಜ್ಯದಲ್ಲಿ ಮತ್ತು ಎ. ನಾರಾಯಣ ಸ್ವಾಮಿ ಕೇಂದ್ರದಲ್ಲಿ ಸಚಿವರಾಗಿದ್ದರು. ಈಗ ಹೋರಾಟದ ಮಾತುಗಳನ್ನು ಆಡುತ್ತಿದ್ದಾರೆ," ಎಂದು ಟೀಕಿಸಿದರು.
"ನಮ್ಮ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣವೇ ಒಳ ಮೀಸಲಾತಿ ಜಾರಿಗೆ ಕ್ರಮ ಕೈಗೊಂಡಿದೆ. ಸುಪ್ರೀಂ ಕೋರ್ಟ್ ತೀರ್ಪಿನ ಅನ್ವಯ, ದತ್ತಾಂಶ ಸಂಗ್ರಹಿಸಲು ನಾಗಮೋಹನ್ ದಾಸ್ ಏಕಸದಸ್ಯ ಆಯೋಗವನ್ನು ರಚಿಸಲಾಗಿದೆ. ಆಯೋಗ ವರದಿ ಸಲ್ಲಿಸಿದ 15 ರಿಂದ 20 ದಿನಗಳೊಳಗೆ ನಾವು ಒಳ ಮೀಸಲಾತಿ ಜಾರಿ ಮಾಡುತ್ತೇವೆ. ಚಿತ್ರದುರ್ಗದ ಸಮಾವೇಶದಲ್ಲಿ ನೀಡಿದ ಮಾತಿಗೆ ನಾವು ಬದ್ಧರಿದ್ದೇವೆ" ಎಂದು ಅವರು ಭರವಸೆ ನೀಡಿದರು.
ಕಾರಜೋಳ ಪ್ರತಿರೋಧ
ಇದೇ ವೇಳೆ, ನವದೆಹಲಿಯಲ್ಲಿ ಮಾತನಾಡಿದ ಸಂಸದ ಗೋವಿಂದ ಕಾರಜೋಳ, "ಒಳ ಮೀಸಲಾತಿ ಜಾರಿಗೆ ವಿಳಂಬ ಮಾಡುತ್ತಿರುವ ರಾಜ್ಯ ಸರ್ಕಾರದ ವಿರುದ್ಧ ಆಗಸ್ಟ್ 16 ರಿಂದ ಅಸಹಕಾರ ಚಳವಳಿ ನಡೆಸಲಾಗುವುದು. ಮಂತ್ರಿಗಳ ಓಡಾಟಕ್ಕೆ ಬಿಡುವುದಿಲ್ಲ. ಅಕ್ಟೋಬರ್ 1 ರಂದು 30 ಜಿಲ್ಲೆಗಳಲ್ಲಿ ಸಾಂಕೇತಿಕ ಹೋರಾಟ ನಡೆಸಲಾಗುವುದು. ಅಕ್ಟೋಬರ್ 11 ರೊಳಗೆ ಜಾರಿ ಮಾಡದಿದ್ದರೆ ಹೋರಾಟ ತೀವ್ರಗೊಳ್ಳಲಿದೆ," ಎಂದು ಎಚ್ಚರಿಸಿದರು.
"ಈ ಸರ್ಕಾರಕ್ಕೆ ದೀನದಲಿತರ ಬಗ್ಗೆ ಕಾಳಜಿ ಇಲ್ಲ. ಪರಿಶಿಷ್ಟ ಉಪಯೋಜನೆಯ (SCSP) ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸಿಕೊಂಡು ಮತ ಬ್ಯಾಂಕ್ ರಾಜಕಾರಣ ಮಾಡುತ್ತಿದೆ," ಎಂದು ಕಾರಜೋಳ ಅವರು ಗಂಭೀರ ಆರೋಪ ಮಾಡಿದರು.