ಒಳ ಮೀಸಲಾತಿ ಹಂಚಿಕೆ| ಸಂಪುಟದ ನಿರ್ಣಯ ಪ್ರಶ್ನಿಸಿ ಹೈಕೋರ್ಟ್‌ ಮೊರೆ ಹೋದ ಸ್ಪೃಶ್ಯ ಜಾತಿಗಳು

ಆ.19ರಂದು ಸಚಿವ ಸಂಪುಟವು ನಿವೃತ್ತ ನ್ಯಾಯಮೂರ್ತಿ ಎಚ್. ನಾಗಮೋಹನ್ ದಾಸ್ ಆಯೋಗದ ವರದಿಯಲ್ಲಿ ಉಲ್ಲೇಖಿಸಿದ್ದ ಐದು ಪ್ರವರ್ಗಗಳನ್ನು ಮೂರಕ್ಕೆ ಇಳಿಸಿ 101 ಪರಿಶಿಷ್ಟ ಜಾತಿಗಳಿಗೆ ಶೇ.17 ಮೀಸಲಾತಿಯನ್ನು ಹಂಚಿಕೆ ಮಾಡಿತ್ತು.

Update: 2025-10-18 08:00 GMT

ಪರಿಶಿಷ್ಟ ಜಾತಿಯ 101 ಉಪ ಜಾತಿಗಳನ್ನು ಮೂರು ಪ್ರವರ್ಗಗಳಾಗಿ ವಿಂಗಡಿಸಿ ಒಳಮೀಸಲಾತಿ ಹಂಚಿಕೆ ಮಾಡಿರುವ ಸಂಪುಟ ಸಭೆಯ ನಿರ್ಣಯಕ್ಕೆ ಆಕ್ಷೇಪ ವ್ಯಕ್ತಪಡಿಸಿ ಸ್ಪೃಶ್ಯ ಜಾತಿಗಳಾದ ಬಂಜಾರ, ಭೋವಿ, ಕೊರಮ, ಕೊರಚ ಸಮುದಾಯಗಳು ಹೈಕೋರ್ಟ್ ಮೆಟ್ಟಿಲೇರಿವೆ.

ಆ.19ರಂದು ಸಚಿವ ಸಂಪುಟವು ನಿವೃತ್ತ ನ್ಯಾಯಮೂರ್ತಿ ಎಚ್. ನಾಗಮೋಹನ್ ದಾಸ್ ಆಯೋಗದ ವರದಿಯಲ್ಲಿ ಉಲ್ಲೇಖಿಸಿದ್ದ ಐದು ಪ್ರವರ್ಗಗಳನ್ನು ಮೂರಕ್ಕೆ ಇಳಿಸಿ 101 ಪರಿಶಿಷ್ಟ ಜಾತಿಗಳಿಗೆ ಶೇ.17 ಮೀಸಲಾತಿಯನ್ನು ಹಂಚಿಕೆ ಮಾಡಿತ್ತು. 

ಎಡಗೈ ಹಾಗೂ ಸಂಬಂಧಿತ ಜಾತಿಗಳನ್ನು ʼಪ್ರವರ್ಗ ಎʼ ಗುಂಪಿಗೆ ಸೇರಿಸಲಾಗಿತ್ತು. ಬಲಗೈ ಹಾಗೂ ಸಂಬಂಧಿತ ಜಾತಿಗಳನ್ನು ʼಪ್ರಬರ್ಗ ಬಿʼಗೆ ಸೇರಿಸಿ ತಲ ಸೇ 6 ರಷ್ಟು ಮೀಸಲಾತಿ ಕಲ್ಪಸಲಾಗಿತ್ತು. ಸ್ಪೃಶ್ಯ ಜಾತಿಗಳಾದ ಬಂಜಾರ, ಲಂಬಾಣಿ, ಭೋವಿ, ಕೊರಚ, ಕೊರಮ ಸಮುದಾಯ ಹಾಗೂ 59 ಅಲೆಮಾರಿ ಸಮುದಾಯಗಳನ್ನು ʼಪ್ರವರ್ಗ ಸಿʼಗೆ ಸೇರಿಸಿ ಶೇ 5 ರಷ್ಟು ಮೀಸಲಾತಿ ನೀಡಲಾಗಿತ್ತು.

ರಾಜ್ಯ ಸರ್ಕಾರ ಮೀಸಲಾತಿ ಹಂಚಿಕೆಯಲ್ಲಿ ತಾರತಮ್ಯ ಮಾಡಿದೆ ಎಂದು ಆರೋಪಿಸಿ, ಸಂಪುಟದ ನಿರ್ಣಯವನ್ನು ಪ್ರಶ್ನಿಸಿ ಬಂಜಾರ, ಭೋವಿ, ಕೊರಮ, ಕೊರಚ ಸಮಾಜ ಕಲ್ಯಾಣ ಸಂಘದ ಶಾಮರಾವ್ ಕೆ. ಪವಾರ್ ಎಂಬುವರು ಹೈಕೋರ್ಟ್ ಮೊರೆ ಹೋಗಿದ್ದಾರೆ. ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ಸಮಾಜ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಹಾಗೂ ಕರ್ನಾಟಕ ರಾಜ್ಯ ಎಸ್ಸಿ-ಎಸ್ಟಿ ಆಯೋಗದ ಅಧ್ಯಕ್ಷರನ್ನು ಅರ್ಜಿಯಲ್ಲಿ ಪ್ರತಿವಾದಿಗಳಾಗಿ ಸೇರಿಸಲಾಗಿದೆ.

ಅಲೆಮಾರಿಗಳಿಂದಲೂ ಕೋರ್ಟ್‌ ಮೊರೆ

ʼಸ್ಪೃಶ್ಯʼ ಜಾತಿಗಳ ಗುಂಪಿಗೆ ತಮ್ಮನ್ನು ಸೇರಿಸಿರುವುದಕ್ಕೆ ವಿರೋಧ ವ್ಯಕ್ತಪಡಿಸಿ ಅಲೆಮಾರಿ ಸಮುದಾಯಗಳು ಹೈಕೋರ್ಟ್‌ ಮೊರೆ ಹೋಗಿವೆ. ನಿವೃತ್ತ ನ್ಯಾಯಮೂರ್ತಿ ಡಾ.ಎಚ್‌.ಎನ್. ನಾಗಮೋಹನ್‌ ದಾಸ್ ವರದಿಯ ಶಿಫಾರಸಿನಂತೆ ತಮ್ಮನ್ನು ಪ್ರತ್ಯೇಕ ಪ್ರವರ್ಗದಲ್ಲಿರಿಸಿ, ಶೇ 1 ರಷ್ಟು ಮೀಸಲಾತಿ ನೀಡಬೇಕು ಎಂದು ಒತ್ತಾಯಿಸಲಾಗಿದೆ. ಅರ್ಜಿಯು ಇನ್ನಷ್ಟೇ ವಿಚಾರಣೆ ಬರಬೇಕಾಗಿದೆ.

ಈ ಹಿನ್ನೆಲೆಯಲ್ಲಿ ಒಳ ಮೀಸಲಾತಿ ಜಾರಿಗೆ ಮತ್ತೆ ಸಂಕಷ್ಟ ಶುರುವಾಗಿದೆ. ರಾಜ್ಯ ಸರ್ಕಾರ ಈಗಾಗಲೇ ಒಳ ಮೀಸಲಾತಿ ಆಧರಿಸಿ ಉದ್ಯೋಗ ನೇಮಕಾತಿ ಪ್ರಕ್ರಿಯೆ ಕೂಡ ಆರಂಭಿಸಿದೆ. ಹೀಗಿರುವಾಗ, ಒಳ ಮೀಸಲಾತಿ ಹಂಚಿಕೆಯು ವಿವಾದಕ್ಕೆ ಒಳಗಾಗಿ ನ್ಯಾಯಾಲಯದ ಅಂಗಳ ತಲುಪಿರುವುದು ಆತಂಕ ಉಂಟು ಮಾಡಿದೆ.

Tags:    

Similar News