ತೆರಿಗೆ ಅನ್ಯಾಯ | ಕೇಂದ್ರದಿಂದ ಅನುದಾನದ ಬದಲು ಅವಮಾನ: ಕೃಷ್ಣ ಬೈರೇಗೌಡ
ಕೇಂದ್ರದಿಂದ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯದ ಬಗ್ಗೆ ಮಾತನಾಡಲು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಸಚಿವ ಕೃಷ್ಣ ಬೈರೇಗೌಡ ಅವರು ಬಹಿರಂಗ ಚರ್ಚೆಗೆ ಆಹ್ವಾನಿಸಿದ್ದರು.;
ಕೇಂದ್ರ ಸರ್ಕಾರ ಕರ್ನಾಟಕಕ್ಕೆ ಆರ್ಥಿಕ ಅನ್ಯಾಯ ಮುಂದುವರಿಸಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ದೂರಿದ್ದಾರೆ.
ಕೇಂದ್ರದಿಂದ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯದ ಬಗ್ಗೆ ಮಾತನಾಡಲು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಸಚಿವ ಕೃಷ್ಣ ಬೈರೇಗೌಡ ಅವರು ಬಹಿರಂಗ ಚರ್ಚೆಗೆ ಆಹ್ವಾನಿಸಿದ್ದರು. ಆದರೆ, ನಿರ್ಮಲಾ ಸೀತಾರಾಮನ್ ಅವರು ಈ ಚರ್ಚೆಯಲ್ಲಿ ಭಾಗವಹಿಸಲಿಲ್ಲ.
ಜಾಗೃತ ಕರ್ನಾಟಕ, ರೈತ ಸಂಘ ಹಾಗೂ ಕನ್ನಡಪರ ಸಂಘಟನೆಗಳು ಬೆಂಗಳೂರಿನ ಗಾಂಧಿ ಭವನದಲ್ಲಿ ಆಯೋಜಿಸಿದ್ದ ಜಿಎಸ್‌ಟಿ, ಸೆಸ್, ತೆರಿಗೆ, ಬರ ಪರಿಹಾರದಲ್ಲಿ ಕರ್ನಾಟಕಕ್ಕೆ ಕೇಂದ್ರದಿಂದ ಅನ್ಯಾಯ ಎನ್ನುವ ಬಹಿರಂಗ ಚರ್ಚೆಯಲ್ಲಿ ಅವರು ಮಾತನಾಡಿದರು. ಸಭೆಯಲ್ಲಿ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೂ ಒಂದು ಕುರ್ಚಿ ಮೀಸಲಿರಿಸಲಾಗಿತ್ತು.
ಸಂವಾದದಲ್ಲಿ ಮಾತನಾಡಿದ ಕೃಷ್ಣ ಬೈರೇಗೌಡ ಅವರು ಕೇಂದ್ರ ಸರ್ಕಾರದಿಂದ ಕರ್ನಾಟಕಕ್ಕೆ ಆರ್ಥಿಕವಾಗಿ ಅನ್ಯಾಯವಾಗಿದ್ದೇ ಹೆಚ್ಚು. ಕೇಂದ್ರ ಸರ್ಕಾರದ ಅಸಮರ್ಪಕ ಆರ್ಥಿಕ ನೀತಿಯಿಂದಾಗಿ ರಾಜ್ಯಕ್ಕೆ ಕಳೆದ ಐದು ವರ್ಷಗಳಲ್ಲಿ ಬರೋಬ್ಬರಿ 1.85 ಲಕ್ಷ ಕೋಟಿ ರೂಪಾಯಿ ನಷ್ಟವಾಗಿದ್ದು, ಪ್ರತಿ ವರ್ಷವೂ ಅಂದಾಜು 52 ಸಾವಿರ ಕೋಟಿ ರೂಪಾಯಿ ನಷ್ಟವಾಗಿದೆ ಎಂದು ಅಂಕಿ- ಸಂಖ್ಯೆಗಳ ಸಮೇತ ವಿವರಿಸಿದರು.
ಈ ಹಿಂದೆ ರಾಜ್ಯಗಳಿಗೆ ವ್ಯಾಟ್ ವಿಧಿಸುವ ಅಧಿಕಾರವಿತ್ತು. ಆ ಸಂದರ್ಭದಲ್ಲಿ ಕರ್ನಾಟಕ ಪ್ರಗತಿ ಸಾಧಿಸಿತ್ತು. ವಾರ್ಷಿಕವಾಗಿ ಸರಾಸರಿ ಶೇ.15ರಷ್ಟು ತೆರಿಗೆ ಸಂಗ್ರಹ ಮಾಡುವ ಮೂಲಕ ಕರ್ನಾಟಕ ಪ್ರಗತಿ ಸಾಧಿಸಿತ್ತು. ಜಿಎಸ್‌ಟಿ ಜಾರಿಯಾದ ನಂತರದಲ್ಲಿ ರಾಜ್ಯಕ್ಕೆ ಅಂದಾಜು 60 ಸಾವಿರ ಕೋಟಿ ರೂಪಾಯಿ ವಾರ್ಷಿಕ ನಷ್ಟವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ವಿರೋಧದ ನಡುವೆಯೂ 14ನೇ ಹಣಕಾಸು ಆಯೋಗ ರಾಜ್ಯಗಳ ತೆರಿಗೆ ಪಾಲನ್ನು ಶೇ.42ಕ್ಕೆ ಏರಿಕೆ ಮಾಡಿತ್ತು. ಆದರೆ, ಶೇ. 35ರಷ್ಟು ಮಾತ್ರ ತೆರಿಗೆ ಪಾಲನ್ನು ನೀಡಲಾಗಿದೆ. 15ನೇ ಹಣಕಾಸು ಆಯೋಗ ಶೇ. 41 ರಷ್ಟು ತೆರಿಗೆ ಪಾಲನ್ನು ಹಂಚಿಕೆ ಮಾಡಿದ್ದರೂ, ಶೇ.30ರಷ್ಟು ಮಾತ್ರ ತೆರಿಗೆಯನ್ನು ಕೇಂದ್ರ ಸರ್ಕಾರ ನೀಡಿದೆ ಎಂದರು.
ಯುಪಿಎ ಅವಧಿಯಲ್ಲಿ ಶೇ.8ರಷ್ಟು ಸೆಸ್, ಸಬ್‌ಚಾರ್ಜ್‌ಗಳಿತ್ತು. ಅದನ್ನು ಎನ್‌ಡಿಎ ಸರ್ಕಾರ ಬರೋಬ್ಬರಿ ಶೇ.22ರಷ್ಟು ಹೆಚ್ಚಳ ಮಾಡಿದೆ. ಆದರೆ, ಕೇಂದ್ರ ಸರ್ಕಾರದ ಯೋಜನೆಗಳಿಗೆ ಶೇ.50ಕ್ಕಿಂತ ಹೆಚ್ಚಿನ ಅನುದಾನವನ್ನು ಆಯಾ ರಾಜ್ಯ ಸರ್ಕಾರಗಳಿಂದಲೇ ಭರಿಸಲಾಗುತ್ತಿದೆ ಎಂದರು.
ಕೇಂದ್ರದಿಂದ ಅವಮಾನ
ಕೇಂದ್ರದಿಂದ ನಾವು ನಮಗೆ ಬರಬೇಕಿರುವ ಅನುದಾನವನ್ನು ಕೇಳುತ್ತಿದ್ದೇವೆ. ಆದರೆ, ಕೇಂದ್ರ ಸರ್ಕಾರ ಅನುದಾನ ನೀಡುವುದರ ಬದಲಿಗೆ ಅವಮಾನ ಮಾಡುತ್ತಿದೆ ಎಂದು ಸಚಿವ ಕೃಷ್ಣ ಬೈರೇಗೌಡ ಅಸಮಾಧಾನ ವ್ಯಕ್ತಪಡಿಸಿದರು. ನಮಗೆ ರಾಜ್ಯದ ಹಿತದೃಷ್ಟಿ ಮುಖ್ಯ. ಇದರಲ್ಲಿ ಯಾವ ರಾಜಕೀಯವನ್ನೂ ನಾವು ಮಾಡುತ್ತಿಲ್ಲ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಈ ಚರ್ಚೆಗೆ ಬರಲಿದ್ದಾರೆ ಎಂದು ನಿರೀಕ್ಷಿಸಿದ್ದೆ. ನಮ್ಮಿಬ್ಬರ ನಡುವೆ ಉತ್ತಮ ವಿಶ್ವಾಸವಿದೆ. ಇದರಲ್ಲಿ ಯಾವ ವೈಯಕ್ತಿಕ ವಾದ- ವ್ಯಾಜ್ಯವೂ ಇಲ್ಲ ಎಂದು ಹೇಳಿದರು.
ಸಂವಾದದಲ್ಲಿ ರೈತ ಮುಖಂಡರಾದ ಬಡಗಲಾಪುರ ನಾಗೇಂದ್ರ, ಸಾಮಾಜಿಕ ಕಾರ್ಯಕರ್ತ ವಾಸು, ಪಿಚ್ಚಳ್ಳಿ ಶ್ರೀನಿವಾಸ್, ನಿಕೇತ್ ರಾಜ್ ಮೌರ್ಯ ಸೇರಿದಂತೆ ಹಲವರು ಇದ್ದರು.