Infosys | ಇನ್ಫೋಸಿಸ್‌ನಿಂದ 700 ಐಟಿ ಉದ್ಯೋಗಿಗಳ ವಜಾ; ಕಂಪೆನಿ ವಿರುದ್ಧ ದೂರು

ಹೊಸ ಉದ್ಯೋಗಿಗಳನ್ನು ಇನ್ಫೋಸಿಸ್‌ ಕಂಪೆನಿಯು ಕೆಲಸದಿಂದ ತೆಗೆದು ಹಾಕುತ್ತಿರುವ ಆತಂಕಕಾರಿ ಮಾಹಿತಿಯನ್ನು ಐಟಿ ಉದ್ಯೋಗಿಗಳ ಒಕ್ಕೂಟ ನೈಟ್ಸ್(ನಸೆಂಟ್ ಇನ್ಫರ್ಮೇಷನ್ ಟೆಕ್ನಾಲಜಿ ಎಂಪ್ಲಾಯೀಸ್ ಸೆನೆಟ್ ) ಶುಕ್ರವಾರ ಬಹಿರಂಗಪಡಿಸಿದೆ.;

Update: 2025-02-07 14:28 GMT
ಇನ್ಫೋಸಿಸ್‌

ಕ್ಯಾಂಪಸ್‌ ಆಯ್ಕೆ(ಕ್ಯಾಂಪಸ್‌ ಸೆಲೆಕ್ಷನ್‌) ಮೂಲಕ ಕೆಲಸ ಗಿಟ್ಟಿಸಿಕೊಂಡಿದ್ದ 700 ಮಂದಿ ಹೊಸ ಐಟಿ ಉದ್ಯೋಗಿಗಳನ್ನು ಕೆಲಸದಿಂದ ತೆಗೆದು ಹಾಕುತ್ತಿರುವ ಇನ್ಫೋಸಿಸ್‌ ಕ್ರಮವು ತೀವ್ರ ವಿವಾದ ಸೃಷ್ಟಿಸಿದೆ. ಹೊಸ ಉದ್ಯೋಗಿಗಳನ್ನು ಇನ್ಫೋಸಿಸ್‌ ಕಂಪೆನಿಯು ಕೆಲಸದಿಂದ ತೆಗೆದು ಹಾಕುತ್ತಿರುವ ಆತಂಕಕಾರಿ ಮಾಹಿತಿಯನ್ನು ಐಟಿ ಉದ್ಯೋಗಿಗಳ ಒಕ್ಕೂಟ ನೈಟ್ಸ್(ನಸೆಂಟ್ ಇನ್ಫರ್ಮೇಷನ್ ಟೆಕ್ನಾಲಜಿ ಎಂಪ್ಲಾಯೀಸ್ ಸೆನೆಟ್ ) ಶುಕ್ರವಾರ ಬಹಿರಂಗಪಡಿಸಿದೆ.

2024 ಅಕ್ಟೋಬರ್‌ ತಿಂಗಳಲ್ಲಿ ಕ್ಯಾಂಪಸ್‌ ಸೆಲೆಕ್ಷನ್‌ ಮೂಲಕ ಆಯ್ಕೆಯಾದ ಹೊಸ ಐಟಿ ಉದ್ಯೋಗಿಗಳನ್ನು ಕೆಲಸದಿಂದ ತೆಗೆದು ಹಾಕಲು ಪ್ರಯತ್ನಿಸಿದೆ. ಇದರ ಭಾಗವಾಗಿ ಉದ್ಯೋಗಿಗಳನ್ನು ಗೌಪ್ಯತಾ ಒಪ್ಪಂದಕ್ಕೆ ಸಹಿ ಹಾಕುವಂತೆ ಬೆದರಿಕೆ ಹಾಕುತ್ತಿದೆ ಎಂದು ಒಕ್ಕೂಟ ಆರೋಪಿಸಿದೆ.

"ಐಟಿ ಕ್ಷೇತ್ರದಲ್ಲಿ ಕೆಲಸ ಗಿಟ್ಟಿಸಿಕೊಂಡ ಹೊಸ ಉದ್ಯೋಗಿಗಳನ್ನು ದಿಢೀರ್‌ ಕೆಲಸದಿಂದ ತೆಗೆದುಹಾಕುತ್ತಿರುವ ಇನ್ಫೋಸಿಸ್ ಕಂಪೆನಿಯ ಕ್ರಮ ಆಘಾತಕಾರಿಯಾಗಿದೆ" ಎಂದು NITES ಅಧ್ಯಕ್ಷ ಹರ್‌ಪ್ರೀತ್ ಸಿಂಗ್ ಸಲೂಜಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಬೌನ್ಸರ್‌ ಬಿಟ್ಟು ಬೆದರಿಕೆ

ಇನ್ಫೋಸಿಸ್‌ ಕಂಪನಿಯು ಉದ್ಯೋಗಿಗಳನ್ನು ಬೆದರಿಸಲು ಬೌನ್ಸರ್ ಹಾಗೂ ಭದ್ರತಾ ಸಿಬ್ಬಂದಿ ಬಳಕೆ ಮಾಡಲಾಗುತ್ತಿದೆ. ಗೌಪ್ಯತಾ ಒಪ್ಪಂದಕ್ಕೆ ಸಹಿ ಹಾಕುವಂತೆ ಬೆದರಿಸಲಾಗುತ್ತಿದೆ. ಉದ್ಯೋಗಿಗಳ ಮೊಬೈಲ್‌ ಕಸಿದುಕೊಂಡು, ಸಹಿ ಹಾಕಲು ಒತ್ತಾಯಿಸಲಾಗುತ್ತಿದೆ. ಇದರಿಂದ ಐಟಿ ಕ್ಷೇತ್ರ ಪ್ರವೇಶಿಸಿದ ಹೊಸ ಉದ್ಯೋಗಿಗಳಿಗೆ ತೀವ್ರ ತೊಂದರೆಯಾಗಲಿದೆ. ಆದಾಗ್ಯೂ,  ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕುತ್ತಿರುವ ಕ್ರಮವನ್ನು ಸಮರ್ಥಿಸಿಕೊಳ್ಳುತ್ತಿರುವ ಇನ್ಫೋಸಿಸ್‌  ಧೋರಣೆ ಸರಿಯಲ್ಲ ಎಂದು ನೈಟ್ಸ್‌ ಟೀಕಿಸಿದೆ. 

ಇನ್ಫೋಸಿಸ್‌ ಸಮರ್ಥನೆ ಏನು?

ಕ್ಯಾಂಪಸ್‌ ಸೆಲೆಕ್ಷನ್‌ನಲ್ಲಿ ಆಯ್ಕೆಯಾದ ಹೊಸ ಉದ್ಯೋಗಿಗಳಿಗೆ ಮೈಸೂರು ಕ್ಯಾಂಪಸ್‌ನಲ್ಲಿ ತರಬೇತಿ ನೀಡಲಾಗಿದೆ. ಅದಾದ ಬಳಿಕ ಉದ್ಯೋಗಿಗಳಿಗೆ ಬಹು ಆಂತರಿಕ ಪರೀಕ್ಷೆ ನೀಡಲಾಗುತ್ತು. ಅದರಲ್ಲಿ 450ಮಂದಿ ಫೇಲ್‌ ಆಗಿದ್ದಾರೆ. ಹೊಸಬರಿಗೆ ಆಂತರಿಕ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಮೂರು ಅವಕಾಶ ನೀಡಿದ ಹೊರತೂ ಫೇಲ್‌ ಆದ ಹಿನ್ನೆಲೆಯಲ್ಲಿ ಕಂಪೆನಿಯಲ್ಲಿ ಮುಂದುವರಿಯಲು ಅವಕಾಶ ಇರುವುದಿಲ್ಲ. ಈ ಬಗ್ಗೆ ಉದ್ಯೋಗಿಗಳೊಂದಿಗೆ ಮಾಡಿಕೊಂಡಿರುವ ಒಪ್ಪಂದದಲ್ಲಿಯೂ ಉಲ್ಲೇಖಿಸಲಾಗಿದೆ. ಯಾವುದೇ ಬೌನ್ಸರ್‌ ಬಿಟ್ಟು ಬೆದರಿಸಿಲ್ಲ ಎಂದು ಸ್ಪಷ್ಟನೆ ನೀಡಿದೆ. 

ಆಂತರಿಕ ಪರೀಕ್ಷೆ  ಪ್ರಕ್ರಿಯೆಯು ಸಂಸ್ಥೆಯಲ್ಲಿ ಎರಡು ದಶಕಗಳಿಗೂ ಹೆಚ್ಚು ಕಾಲದಿಂದ ಅಸ್ತಿತ್ವದಲ್ಲಿದೆ. ಅದರಂತೆ ಉದ್ಯೋಗಿಗಳನ್ನು ಕೆಲಸದಿಂದ ತೆಗೆಯಲಾಗುತ್ತಿದೆ ಎಂದು ಹೇಳಿದೆ.

ಇನ್ಫೋಸಿಸ್‌ ವಿರುದ್ಧ ದೂರು

ಐಟಿ ಉದ್ಯೋಗಿಗಳನ್ನು ವಜಾಗೊಳಿಸುತ್ತಿರುವ ಇನ್ಫೋಸಿಸ್‌ ಕ್ರಮವನ್ನು ಖಂಡಿಸಿ NITES ಸಂಸ್ಥೆಯು ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯಕ್ಕೆ ಅಧಿಕೃತವಾಗಿ ದೂರು ಸಲ್ಲಿಸಿದೆ. ಇನ್ಫೋಸಿಸ್ ವಿರುದ್ಧ ತಕ್ಷಣ ಕಠಿಣ ಕ್ರಮ ಜರುಗಿಸುವಂತೆ ಒತ್ತಾಯಿಸಿದೆ.

ಕಾರ್ಪೊರೇಟ್ ಶೋಷಣೆ ಮುಂದುವರಿಯಲು ಯಾವುದೇ ಕಾರಣಕ್ಕೂ ಬಿಡುವುದಿಲ್ಲ. ಭಾರತೀಯ ಐಟಿ ಕಾರ್ಮಿಕರ ಹಕ್ಕುಗಳು ಮತ್ತು ಘನತೆಯನ್ನು ಎತ್ತಿಹಿಡಿಯಲು ಕೇಂದ್ರ ಸರ್ಕಾರ ತ್ವರಿತ ಕ್ರಮ ಕೈಗೊಳ್ಳಬೇಕೆಂದು ದೂರಿನಲ್ಲಿ ಒತ್ತಾಯಿಸಿದ್ದೇವೆ ಎಂದು ಒಕ್ಕೂಟದ ಅಧ್ಯಕ್ಷ ಹರ್‌ಪ್ರೀತ್‌ ಸಲುಜಾ ತಿಳಿಸಿದ್ದಾರೆ.

Tags:    

Similar News