KIAL | ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಿಗಿಭದ್ರತೆ; ಪ್ರಯಾಣಿಕರಿಗೆ ಸಲಹೆ ಸೂಚನೆ ನೀಡಿದ ಕೆಐಎಎಲ್‌

ವಿಮಾನ ಪ್ರಯಾಣ ಸೇವೆಗಳಲ್ಲಿ ವ್ಯತ್ಯಯವಾಗುವ ಸಾಧ್ಯತೆಯಿದ್ದು ಪ್ರಯಾಣಿಕರು ತಮ್ಮ ವಿಮಾನಯಾನ ಸಂಸ್ಥೆಗಳೊಂದಿಗೆ ಸಂಪರ್ಕದಲ್ಲಿದ್ದು, ಹೆಚ್ಚಿನ ಮಾಹಿತಿ ಪಡೆಯಬೇಕು ಎಂದು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ.;

Update: 2025-05-09 07:25 GMT

ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ.

ಪಾಕಿಸ್ತಾನ ಹಾಗೂ ಭಾರತ ವಾಯುದಾಳಿಯಿಂದ ಹೆಚ್ಚಾಗಿರುವ ಉದ್ವಿಗ್ನತೆ ಹಿನ್ನೆಲೆಯಲ್ಲಿ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಅಧಿಕಾರಿಗಳು ಪ್ರಯಾಣಿಕರಿಗೆ ಅಗತ್ಯ ಸಲಹೆ ಸೂಚನೆಗಳನ್ನು ನೀಡಿದ್ದಾರೆ.

ರಾಷ್ಟ್ರವ್ಯಾಪಿ ಭದ್ರತಾ ದೃಷ್ಟಿಯಿಂದ ಎಲ್ಲಾ ವಿಮಾನ ನಿಲ್ದಾಣಗಳಲ್ಲಿ ಸ್ಕ್ರೀನಿಂಗ್ ಕ್ರಮಗಳು ಜಾರಿಯಲ್ಲಿವೆ. ಆದ್ದರಿಂದ ಪ್ರಯಾಣಿಕರು ಸುಗಮವಾದ ಚೆಕ್-ಇನ್, ಭದ್ರತೆ ಮತ್ತು ಬೋರ್ಡಿಂಗ್ ವ್ಯವಸ್ಥೆ ಹೊಂದಲು ಕನಿಷ್ಠ ಮೂರು ಗಂಟೆಗಳ ಮೊದಲು ವಿಮಾನ ನಿಲ್ದಾಣಕ್ಕೆ ಬರಲು ಸೂಚನೆ ನೀಡಿದೆ.

ವಿಮಾನ ಸೇವೆಗಳಲ್ಲಿ ಕೆಲವೊಂದು ವ್ಯತ್ಯಯಗಳಾಗುವ ಸಾಧ್ಯತೆಯಿದ್ದು, ಪ್ರಯಾಣಿಕರು ತಮ್ಮ ವಿಮಾನಯಾನ ಸಂಸ್ಥೆಗಳೊಂದಿಗೆ ಸಂಪರ್ಕದಲ್ಲಿರಬೇಕು ಎಂದು ಕೆಐಎ ಮಾಹಿತಿ ನೀಡಿದೆ.

ಈಗಾಗಲೇ ಶ್ರೀನಗರ, ಅಮೃತಸರ ಹಾಗೂ ರಾಜಸ್ತಾನದ ವಿಮಾನ ನಿಲ್ದಾಣಗಳಲ್ಲಿ ಹೈಅಲರ್ಟ್‌ ಘೋಷಿಸಲಾಗಿದ್ದು ಶ್ರೀನಗರ ವಿಮಾನ ನಿಲ್ದಾಣವು ವಾಯುಪಡೆಯ ಅಧೀನದಲ್ಲಿದೆ. ಹಾಗಾಗಿ ಪ್ರಯಾಣಿಕರು ನಿರ್ಗಮನ ಅವಧಿಗೂ ಮುನ್ನ ವಿಮಾನ ನಿಲ್ದಾಣಕ್ಕೆ ಬಂದು ಪ್ರಯಾಣದ ಪ್ರಕ್ರಿಯೆಗಳಿಗೆ ಒಳಪಡಬೇಕು ಎಂದು ಹೇಳಿದೆ. 

ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ನಡೆದ ಗುಂಡಿನ ದಾಳಿಗೆ ಪ್ರತೀಕಾರವಾಗಿ ಭಾರತೀಯ ಸೇನಾಪಡೆ ʼಆಪರೇಷನ್‌ ಸಿಂದೂರʼ ಹೆಸರಿನಲ್ಲಿ ಒಂಬತ್ತು ಉಗ್ರರ ಅಡಗುತಾಣಗಳನ್ನು ನಾಶ ಮಾಡಿತ್ತು. ಭಾರತೀಯ ಸೇನೆಯ ದಾಳಿಗೆ ಪಾಕ್‌ ಪ್ರತಿದಾಳಿ ಆರಂಭಿಸಿದೆ. ಅದಕ್ಕೆ ಭಾರತ ತಿರುಗೇಟು ನೀಡುತ್ತಿದೆ. ಹೀಗಾಗಿ ಉಭಯ ರಾಷ್ಟ್ರಗಳ ಮಧ್ಯೆ ಉದ್ವಿಗ್ನತೆ ನಿರ್ಮಾಣವಾಗಿದೆ. 

ಜಮ್ಮುಕಾಶ್ಮೀರದ ಗಡಿ ಭಾಗದಲ್ಲಿ ಪಾಕ್‌ ಡ್ರೋಣ್‌ ದಾಳಿ ಮಾಡಿತ್ತು. ಆದರೆ, ಭಾರತದ ಎಸ್‌ 400 ವಾಯುರಕ್ಷಣೆ ಫಲವಾಗಿ ಆಗಸದಲ್ಲೇ ಪಾಕಿಸ್ತಾನದ ಡ್ರೋಣ್‌ಗಳನ್ನು ಹೊಡೆದುರುಳಿಸಲಾಗಿತ್ತು.

Tags:    

Similar News