ರಾಜ್ಯದ 14,670 ಸಹಕಾರ ಸಂಘಗಳು ನಷ್ಟದ ಹಾದಿಯಲ್ಲಿ! ವಸೂಲಾತಿಗಿಂತ ಅಕ್ರಮ ವಹಿವಾಟೇ ನಷ್ಟಕ್ಕೆ ರಹದಾರಿ

ಸಹಕಾರ ಸೊಸೈಟಿಗಳಲ್ಲಿ ಹಣದ ದುರುಪಯೋಗ, ನಕಲಿ ಲೆಕ್ಕಪತ್ರಗಳ ಸೃಷ್ಟಿ, ಸದಸ್ಯರ ಹಣದ ವಂಚನೆ, ಆಸ್ತಿ ನಷ್ಟ, ಆಡಳಿತ ದೋಷಗಳು ಮತ್ತು ಅಧಿಕಾರದ ದುರುಪಯೋಗದಂತಹ ಹಲವು ರೂಪಗಳಲ್ಲಿ ಕಂಡುಬಂದಿವೆ.;

Update: 2025-09-03 02:30 GMT
Click the Play button to listen to article

ಸಮಾಜದ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿಗಾಗಿ ಶ್ರಮಿಸುತ್ತಿರುವ ಸಹಕಾರ ಇಲಾಖೆಯಡಿಯಲ್ಲಿ  ಕಾರ್ಯನಿರ್ವಹಿಸುತ್ತಿರುವ ಸಹಕಾರ  ಸೊಸೈಟಿಗಳಲ್ಲಿ ಹಲವು ರೀತಿಯ ಹಣಕಾಸು ಅಕ್ರಮಗಳು ನಡೆದ ಪರಿಣಾಮ ನಷ್ಟ ಅನುಭವಿಸುವಂತಾಗಿದೆ. ಅಕ್ರಮವಾಗಿ ಆರ್ಥಿಕ ವಹಿವಾಟಿಗೆ ಸಹಕಾರ ಸೊಸೈಟಿಗಳು ಬಳಕೆಯಾಗುತ್ತಿದ್ದು, ಹಲವು ಪ್ರಕರಣಗಳಲ್ಲಿ ಇದಕ್ಕೆ ನಿದರ್ಶನವಾಗಿದೆ. 

ಮುಖ್ಯಮಂತ್ರಿ ಸಿದ್ದರಾಮಯ್ಯ ಇತ್ತೀಚೆಗೆ ರಾಜ್ಯದಲ್ಲಿ 43 ಸಾವಿರಕ್ಕೂ ಹೆಚ್ಚಿನ ಸಹಕಾರ ಸಂಘಗಳಿದ್ದು, ಇವುಗಳಲ್ಲಿ14,670 ಸಂಘಗಳು ನಷ್ಟದಲ್ಲಿವೆ. ಅವುಗಳ ಆರ್ಥಿಕ ಸಬಲಗೊಳಿಸಲು ಸಾಲ ವಸೂಲಾತಿಗೆ ಹೆಚ್ಚಿನ ಒತ್ತು ನೀಡಬೇಕು ಎಂದು ಹೇಳಿದ್ದರು. ಈ ಹೇಳಿಕೆಯ ಹಿನ್ನೆಲೆಯನ್ನು ಪರಿಶೀಲಿಸಿದಾಗ ಸಹಕಾರ ಸೊಸೈಟಿಗಳ ನಷ್ಟಕ್ಕೆ ಅವ್ಯವಹಾರವೇ ಕಾರಣ ಎಂಬುದು ಗೊತ್ತಾಗಿದೆ. 

ಸಹಕಾರ ಸೊಸೈಟಿಯಲ್ಲಿ ವಿವಿಧ ರೀತಿಯ ಹಣಕಾಸು ಅಕ್ರಮಗಳು ವರದಿಯಾಗಿವೆ. ಸಹಕಾರ ಸೊಸೈಟಿಗಳಲ್ಲಿ ಅಕ್ರಮಗಳು ಹಣದ ದುರುಪಯೋಗ, ನಕಲಿ ಲೆಕ್ಕಪತ್ರಗಳ ಸೃಷ್ಟಿ, ಸದಸ್ಯರ ಹಣದ ವಂಚನೆ, ಆಸ್ತಿ ನಷ್ಟ, ಆಡಳಿತ ದೋಷಗಳು, ಮತ್ತು ಅಧಿಕಾರದ ದುರುಪಯೋಗದಂತಹ ಹಲವು ರೂಪಗಳಲ್ಲಿ ಕಂಡುಬಂದಿವೆ. ಈ ಕಾರಣದಿಂದಾಗಿ ಸಹಕಾರ ಸೊಸೈಟಿಗಳಿಗೆ ಗಣನೀಯ ನಷ್ಟವಾಗಿದ್ದು, ಪೊಲೀಸರು ದೂರು ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ. ಅಕ್ರಮಗಳ ಕುರಿತು ಪ್ರಕರಣ ದಾಖಲಿಸಲಾಗುತ್ತದೆ.  ಈ ಬಗ್ಗೆ ತನಿಖೆ ನಡೆಸಿ, ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಸಹಕಾರ ಸಚಿವಾಲಯದ ಅಡಿಯಲ್ಲಿ ಸಹಕಾರ ಇಲಾಖೆ ಅಥವಾ ಪೊಲೀಸ್‌ ಇಲಾಖೆಯು ಕ್ರಮ ಕೈಗೊಳ್ಳಲಿದೆ.

ಸೊಸೈಟಿಯಲ್ಲಿನ ಅಕ್ರಮದ ಲಕ್ಷಣಗಳು

ಹಣದ ದುರುಪಯೋಗ: ಸೊಸೈಟಿ ಹಣವನ್ನು ವೈಯಕ್ತಿಕ ಉದ್ದೇಶಗಳಿಗೆ ಬಳಸಿಕೊಳ್ಳುವುದು, ಸದಸ್ಯರಿಗೆ ಸಾಲ ನೀಡುವ ನೆಪದಲ್ಲಿ ದುರುಪಯೋಗಪಡಿಸಿಕೊಳ್ಳಲಾಗುತ್ತದೆ. ಇಂತಹ ಅಕ್ರಮಗಳಿಂದ ಸೊಸೈಟಿಗಳು ನಷ್ಟಕ್ಕೊಳಗಾಗುತ್ತಿವೆ. 

ನಕಲಿ ಲೆಕ್ಕಪತ್ರ:

ಲೆಕ್ಕಪತ್ರಗಳಲ್ಲಿ ಹಣದ ನಕಲಿ ವಹಿವಾಟುಗಳನ್ನು ನಡೆಸುವುದು, ಸದಸ್ಯರಿಗೆ ನೀಡಬೇಕಾದ ಲಾಭಾಂಶವನ್ನು ಕಡಿಮೆ ತೋರಿಸಲಾಗುತ್ತದೆ. ರಾಜ್ಯದಲ್ಲಿನ ಸೊಸೈಟಿಯಲ್ಲಿ ಲಾಭದತ್ತ ನಡೆಯುತ್ತಿದ್ದರೂ ನಕಲಿ ವಹಿವಾಟು ನಡೆಸಲಾಗುತ್ತದೆ. ಅಲ್ಲದೇ, ಸದಸ್ಯರಿಗೆ ಲಾಭಾಂಶ ನೀಡುವಲ್ಲಿ ಕಡಿಮೆ ತೋಡಿಸಲಾಗುತ್ತದೆ. ಈ ಮೂಲಕ ಬಂದಂತಹ ಲಾಭವನ್ನು ಸೊಸೈಟಿಯವರೇ ದುರ್ಬಳಕೆ ಮಾಡಿಕೊಳ್ಳುತ್ತಿರುವುದು ಕಂಡು ಬಂದಿದೆ. 

ಸದಸ್ಯರ ಹಣ ವಂಚನೆ: ಸದಸ್ಯರ ಠೇವಣಿಗಳನ್ನು ಆಯಾ ಉದ್ದೇಶಕ್ಕೆ ಬಳಸದೆ ಬೇರೆ ಕಡೆ ದುರುಪಯೋಗಪಡಿಸಿಕೊಳ್ಳುವುದು ಮತ್ತು ನಿರ್ವಹಣೆಯಲ್ಲಿ ಲೋಪ, ಸದಸ್ಯರ ಸಭೆಗಳನ್ನು ಸರಿಯಾಗಿ ನಡೆಸದಿರುವುದು, ನಿಯಮಗಳ ಉಲ್ಲಂಘನೆ ಮಾಡುವುದರಿಂದ ಬಹುತೇಕ ಸೊಸೈಟಿಗಳು ನಷ್ಟದ ಹಾದಿ ಹಿಡಿದಿವೆ ಎಂಬುದು ಸಹಕಾರ ಇಲಾಖೆ ನಡೆಸಿರುವ ತನಿಖೆಯಲ್ಲಿ ಗೊತ್ತಾಗಿವೆ. ಸೊಸೈಟಿಯಲ್ಲಿ ನಡೆಯುತ್ತಿರುವ ದುರುಪಯೋಗದ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವ ಕಾರ್ಯವನ್ನು ಇಲಾಖೆಯನ್ನು ಕೈಗೊಳ್ಳುತ್ತಿದೆ ಎಂದು ಹೇಳಲಾಗಿದೆ. 

ಈ ಕುರಿತು ಇಲಾಖೆಯ ಅಧಿಕಾರಿಯೊಬ್ಬರು ದ ಫೆಡರಲ್‌ ಕರ್ನಾಟಕ ಜತೆ ಮಾತನಾಡಿ, ಸೊಸೈಟಿಗಳಲ್ಲಿ ಅಕ್ರಮ ನಡೆಯುತ್ತಿರುವ ಬಗ್ಗೆ ಅನುಮಾನಗಳು ವ್ಯಕ್ತವಾದರೆ, ತಕ್ಷಣವೇ ಪೊಲೀಸರಿಗೆ ದೂರು ನೀಡಬಹುದು. ಅಲ್ಲದೇ, ಸಹಕಾರ ಸಚಿವಾಲಯದ ಅಡಿಯಲ್ಲಿನ ಸಂಬಂಧಪಟ್ಟ ಸಹಕಾರ ಇಲಾಖೆಯಲ್ಲಿ ದೂರು ದಾಖಲಿಸಲು ಅವಕಾಶ ಇದೆ. ಇಂತಹ ದೂರುಗಳ ಆಧಾರದ ಮೇಲೆ ತನಿಖೆ ಕೈಗೊಳ್ಳಲಾಗುತ್ತದೆ. ಪ್ರತಿ ಸೊಸೈಟಿಯಲ್ಲಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗುತ್ತದೆ. ಅವುಗಳ ಫೂಟೇಜ್‌ಗಳನ್ನು ಆಧಾರವಾಗಿಟ್ಟುಕೊಂಡು ದೂರು ನೀಡಬಹುದು. ಇದಲ್ಲದೇ, ಸೊಸೈಟಿಯ ಲೆಕ್ಕಪತ್ರಗಳು, ನಿಯಮಗಳು ಹಾಗೂ ನಡೆದ ವಹಿವಾಟುಗಳ ಬಗ್ಗೆ ಮಾಹಿತಿ ಪಡೆಯಲು ಆರ್‌ಟಿಐ ಅನ್ವಯ ಅರ್ಜಿ ಸಲ್ಲಿಸಬಹುದು. ಅದರ ಆಧಾರದ ಮೇಲೆ ದೂರ ನೀಡಲು ಅವಕಾಶ ಇದೆ ಎಂದು ತಿಳಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೀಡಿರುವ ಹೇಳಿಕೆಯಂತೆ ಹಲವು ಸೊಸೈಟಿಗಳು ಆರ್ಥಿಕ ನಷ್ಟದ ಹಾದಿಯಲ್ಲಿವೆ. ಇವುಗಳು ಸಾಲ ವಸೂಲಾತಿಯಲ್ಲಿ ಹಿನ್ನಡೆಯಾಗಿರುವುದರಿಂದ ನಷ್ಟ ಅನುಭವಿಸುತ್ತಿವೆ. ಅಕ್ರಮಗಳು ಸಹ ನಷ್ಟಕ್ಕೆ ಕಾರಣವಾಗಿದ್ದು, ಯಾವ ಸೊಸೈಟಿಯಲ್ಲಿ ಅಕ್ರಮ ನಡೆದಿದೆ ಅವುಗಳ ಕುರಿತು ತನಿಖೆ ನಡೆಸಿ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು. 

ಸಹಕಾರ ಸಂಘಗಳ ಉದ್ದೇಶ

ಸಹಕಾರ ಸಂಘಗಳು ತಮ್ಮ ಸದಸ್ಯರ ಆರ್ಥಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಹಿತಾಸಕ್ತಿಗಳನ್ನು ಉತ್ತೇಜಿಸಲು ಒಟ್ಟಾಗಿ ಸೇರುವ ವ್ಯಕ್ತಿಗಳ ಸ್ವಯಂಪ್ರೇರಿತ ಸಂಘಟನೆಗಳಾಗಿವೆ. ಈ ಸಂಘಗಳು 'ಸ್ವಯಂ ಸಹಾಯ' ಮತ್ತು 'ಪರಸ್ಪರ ಸಹಾಯ' ತತ್ವಗಳ ಮೇಲೆ ಕಾರ್ಯನಿರ್ವಹಿಸುತ್ತವೆ. ಸದಸ್ಯರ ಕಲ್ಯಾಣವನ್ನು ಕೇಂದ್ರವಾಗಿರಿಸಿಕೊಂಡು, ಲಾಭ ಗಳಿಸುವುದಕ್ಕಿಂತ ಹೆಚ್ಚಿನ ಆದ್ಯತೆಯನ್ನು ಸದಸ್ಯರಿಗೆ ಸೇವೆ ಸಲ್ಲಿಸುವುದಕ್ಕೆ ನೀಡುತ್ತವೆ. ಇವುಗಳು ಸಹಕಾರ ಸಂಘಗಳ ಕಾಯಿದೆ 1912 ಅಡಿಯಲ್ಲಿ ನೋಂದಾಯಿಸಲ್ಪಟ್ಟು, ಪ್ರತ್ಯೇಕ ಕಾನೂನು ಘಟಕಗಳಾಗಿ ಕಾರ್ಯನಿರ್ವಹಿಸುತ್ತವೆ. 

ಸಹಕಾರ ಸಂಘಗಳ ಸದಸ್ಯರ ಆರ್ಥಿಕ ಮತ್ತು ಸಾಮಾಜಿಕ ಕಲ್ಯಾಣವನ್ನು ಉತ್ತೇಜಿಸುವುದು. ಪರಸ್ಪರ ಸಹಾಯದ ಮೂಲಕ ತಮ್ಮ ಆರ್ಥಿಕ ಸ್ಥಿತಿಯನ್ನು ಸುಧಾರಿಸುವಂತಹ ಕಲ್ಯಾಣ ಕಾರ್ಯಕ್ರಮಗಳನ್ನು ನಿರ್ವಹಿಸಲಾಗುತ್ತದೆ. 

ಸಹಕಾರ ಸಂಘಗಳ ವಿಧಗಳು

ಸಹಕಾರ ಸಂಘಗಳಲ್ಲಿ ಹಲವು ವಿಧದಿಂದ ಕೂಡಿವೆ. ಕೃಷಿ ಪತ್ತಿನ ಸಹಕಾರ ಸಂಘಗಳು ರೈತರಿಗೆ ಕೃಷಿ ಉಪಕರಣಗಳು, ಬೀಜಗಳು ಇತ್ಯಾದಿಗಳನ್ನು ಒದಗಿಸುತ್ತವೆ ಮತ್ತು ಅವರ ಉತ್ಪನ್ನಗಳನ್ನು ಮಾರಾಟ ಮಾಡಲು ಸಹಾಯ ಮಾಡುತ್ತವೆ. ಹಾಲು ಉತ್ಪಾದಕರ ಸಹಕಾರ ಸಂಘಗಳು ಹಾಲು ಉತ್ಪಾದಕರನ್ನು ಒಟ್ಟುಗೂಡಿಸಿ, ಅವರ ಹಾಲನ್ನು ಖರೀದಿಸಿ, ಉತ್ತಮ ಮಾರುಕಟ್ಟೆ ಒದಗಿಸುತ್ತವೆ. ಗೃಹ ನಿರ್ಮಾಣ ಸಹಕಾರ ಸಂಘಗಳು ಸ್ವಂತ ಮನೆ ಇಲ್ಲದ ಸದಸ್ಯರಿಗೆ ಮನೆ ನಿರ್ಮಿಸಲು ಅಥವಾ ಜಾಗಗಳನ್ನು ಖರೀದಿಸಲು ಸಹಾಯ ಮಾಡುತ್ತವೆ. ಪತ್ತಿನ ಸಂಘಗಳು ನಗರ ಪ್ರದೇಶದ ಜನರಿಗೆ ಸಾಲ ಮತ್ತು ಇತರ ಹಣಕಾಸು ಸೇವೆಗಳನ್ನು ಒದಗಿಸುತ್ತವೆ. ಈ ಸಂಘಗಳು ಸಮಾಜದ ವಿವಿಧ ವರ್ಗಗಳ, ವಿಶೇಷವಾಗಿ ರೈತರು ಮತ್ತು ಸಣ್ಣ ಉತ್ಪಾದಕರ ಆರ್ಥಿಕ ಉನ್ನತಿಗಾಗಿ ಮಹತ್ವದ ಪಾತ್ರ ವಹಿಸುತ್ತವೆ. 

ಸಿಎಂ ಹೇಳಿದ್ದೇನು

ರಾಜ್ಯದಲ್ಲಿ 43 ಸಾವಿರಕ್ಕೂ ಹೆಚ್ಚು ಸಹಕಾರ ಸಂಘಗಳಿವೆ. ಇವುಗಳಲ್ಲಿ 28,516 ಸಹಕಾರ ಸಂಘಗಳು ಲಾಭದಲ್ಲಿದ್ದು, 14,670 ಸಂಘಗಳು ನಷ್ಟದಲ್ಲಿವೆ. ಸಾಲ ವಸೂಲಾತಿ ಸರಿಯಾಗಿ ಆಗದ ಕಾರಣ ಬಹುತೇಕ ಸಂಘಗಳು ನಷ್ಟದಲ್ಲಿದ್ದು, ಅಂತಹ ಸಂಘಗಳು ಸಾಲ ವಸೂಲಾತಿಗೆ ಕೈಗೊಂಡ ಕ್ರಮಗಳ ಬಗ್ಗೆ ಪರಿಶೀಲನೆ ನಡೆಸಬೇಕು. ಇದರಲ್ಲಿ 2,200 ಹಾಲು ಉತ್ಪಾದಕ ಸಂಘಗಳು ನಷ್ಟದಲ್ಲಿವೆ. ಹಾಲು ಉತ್ಪಾದಕ ಸಹಕಾರ ಸಂಘಗಳ ವೆಚ್ಚದ ಮೇಲೆ ನಿಗಾ ಇರಿಸಬೇಕು. ಹಾಲು ಉತ್ಪಾದನೆಯನ್ನು ಹೆಚ್ಚಿಸುವುದು ಸಂಘಗಳ ಕಾರ್ಯದರ್ಶಿಗಳ ಜವಾಬ್ದಾರಿ. ಹಾಲು ಉತ್ಪಾದಕ ಸಹಕಾರ ಸಂಘಗಳ ಪುನಶ್ಚೇತನಕ್ಕೆ ಕ್ರಮ ಕೈಗೊಳ್ಳಬೇಕು ಎಂದಿದ್ದರು. 

ಹಾಲು ಉತ್ಪಾದಕರ ಸಹಕಾರದಲ್ಲಿ ನಡೆಯುವ ಅಕ್ರಮ

ಹಾಲು ಉತ್ಪಾದಕರ ಸಹಕಾರ ಸಂಘಗಳಲ್ಲಿ ಸಾಮಾನ್ಯವಾಗಿ ಹಣದ ದುರುಪಯೋಗ, ಅವ್ಯವಹಾರ, ಮತ್ತು ನಿರ್ವಹಣೆಯಲ್ಲಿನ ದೋಷಗಳಿಂದ ಕೂಡಿರುತ್ತವೆ. ಇಂತಹ ಅವ್ಯವಹಾರಗಳ ವಿರುದ್ಧ ಕ್ರಮಕ್ಕಾಗಿ ತನಿಖೆ, ಗ್ರಾಮಸ್ಥರ ಪ್ರತಿಭಟನೆಗಳು, ಮತ್ತು ಆಡಳಿತ ಮಂಡಳಿ ಸದಸ್ಯರ ರಾಜೀನಾಮೆಗಳು ನಡೆಯುತ್ತವೆ ಎಂದು ಹೇಳಲಾಗಿದೆ. 

ಸಂಘದ ನಿಧಿಗಳನ್ನು ದುರುಪಯೋಗ ಪಡಿಸಿಕೊಳ್ಳಲಾಗುತ್ತದೆ. ಹಣಕಾಸಿನ ಲೆಕ್ಕಪತ್ರಗಳಲ್ಲಿ ಲೋಪಗಳು, ನಕಲಿ ದಾಖಲೆಗಳ ಸೃಷ್ಟಿ, ಮತ್ತು ಮೋಸ ಮಾಡುವ ಚಟುವಟಿಕೆಗಳು ಜರುಗುತ್ತವೆ. ಅಲ್ಲದೇ, ನಿರ್ದೇಶಕರು ಅಥವಾ ಅಧಿಕಾರಿಗಳು ಸಂಘದ ಕೆಲಸಗಳಲ್ಲಿ ಪಕ್ಷಪಾತದಿಂದ ನಡೆದುಕೊಳ್ಳುವುದು ಅಥವಾ ನಿರ್ಲಕ್ಷ್ಯ ವಹಿಸುವುದು ಸಹ ನಡೆಯುತ್ತವೆ. ಕೊಳ್ಳೆಗಾಲ ತಾಲೂಕಿನ ಐನೋರಹೊಸಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರದ ಬಗ್ಗೆ ತನಿಖೆ ನಡೆಯುತ್ತಿದೆ.

ಇದಲ್ಲದೇ, ಹಾವೇರಿ ಜಿಲ್ಲೆಯ ಚಿಗಹಳ್ಳಿ ಹಾಲು ಉತ್ಪಾದಕರ ಸಂಘದಲ್ಲಿ ಹಣ ದುರುಪಯೋಗದ ಆರೋಪ ಕೇಳಿ ಬಂದಿದೆ. ಈ ರೀತಿಯ ಅಕ್ರಮಗಳು ರಾಜ್ಯದ ಹಾಲು ಉತ್ಪಾದಕರ ಸಹಕಾರ ಸಂಘಗಳಲ್ಲಿ ನಡೆಯುತ್ತವೆ. ಈ ರೀತಿಯ ಅಕ್ರಮಗಳಿಗೆ ಕಡಿವಾಣ ಹಾಕಿದರೆ ಸಹಕಾರ ಸಂಘಗಳು ಅಭಿವೃದ್ಧಿಯಾಗಲಿವೆ ಎಂಬುದು ಹಾಲು ಉತ್ಪಾದಕರ ಸಹಕಾರ ಸಂಘಗಳ ನಿರ್ದೇಶಕರ ಅಭಿಪ್ರಾಯವಾಗಿದೆ. 

Tags:    

Similar News