ಅಕ್ರಮ ಚಿನ್ನ ಕಳ್ಳಸಾಗಣೆ: ನಟಿ ರನ್ಯಾ ರಾವ್‌ಗೆ 102.55 ಕೋಟಿ ರೂ. ದಂಡ ವಿಧಿಸಿದ ಡಿಆರ್‌ಐ
ನಟಿ ರನ್ಯಾ ರಾವ್‌ಗೆ ರೂ. 102.55 ಕೋಟಿ ರೂ. ದಂಡ ಪಾವತಿಸುವಂತೆ ಆದಾಯ ಗುಪ್ತಚರ ನಿರ್ದೇಶನಾಲಯ ನೋಟಿಸ್ ಜಾರಿ ಮಾಡಿದೆ.;
ಅಕ್ರಮ ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಜೈಲು ಶಿಕ್ಷೆಗೆ ಅನುಭವಿಸುತ್ತಿರು ನಟಿ ರನ್ಯಾ ರಾವ್‌ಗೆ ರೂ. 102.55 ಕೋಟಿ ರೂ. ದಂಡ ಪಾವತಿಸುವಂತೆ ಆದಾಯ ಗುಪ್ತಚರ ನಿರ್ದೇಶನಾಲಯ ನೋಟಿಸ್ ಜಾರಿ ಮಾಡಿದೆ.
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಕ್ರಮವಾಗಿ ಚಿನ್ನ ಕಳ್ಳಸಾಗಣೆ ಮಾಡುತ್ತಿದ್ದ ವೇಳೆ ರನ್ಯಾ ರಾವ್ ಬಂಧಿತರಾಗಿದ್ದರು. ಈ ಸಮಯದಲ್ಲಿ ಅಧಿಕಾರಿಗಳು 14.8 ಕೆಜಿ ಚಿನ್ನವನ್ನು ವಶಪಡಿಸಿಕೊಂಡಿದ್ದರು. ತನಿಖೆಯಲ್ಲಿ, ಕೇವಲ 15 ದಿನಗಳಲ್ಲಿ ನಾಲ್ಕು ಬಾರಿ ದುಬೈಗೆ ತೆರಳಿ ರನ್ಯಾ ರಾವ್ ಚಿನ್ನ ಕಳ್ಳಸಾಗಣೆ ನಡೆಸಿದ ಸಂಗತಿ ಬಹಿರಂಗವಾಗಿತ್ತು.
ಈ ಪ್ರಕರಣದಲ್ಲಿ ಕಾಫಿಫೋಸಾ (COFEPOSA) ಕಾಯ್ದೆಯಡಿ ರನ್ಯಾ ರಾವ್ ಅವರಿಗೆ ಒಂದು ವರ್ಷದ ಜೈಲು ಶಿಕ್ಷೆ ವಿಧಿಸಲಾಗಿದ್ದು, ಜಾಮೀನು ಪಡೆಯುವ ಅವಕಾಶವಿಲ್ಲ. ಇನ್ನು ವಿದೇಶಿ ವಿನಿಮಯ ನಿಯಂತ್ರಣ ಹಾಗೂ ಕಳ್ಳಸಾಗಣೆ ಚಟುವಟಿಕೆಗಳ ತಡೆ ಕಾಯ್ದೆಯ ಅಡಿಯಲ್ಲಿ ಕೂಡ ಕ್ರಮ ಜಾರಿಯಾಗಿದೆ. ಸಲಹಾ ಮಂಡಳಿಯು ಕೂಡಾ ಬಂಧನದ ಅವಧಿಯಲ್ಲಿ ಜಾಮೀನು ಸಿಗುವುದಿಲ್ಲ ಎಂದು ಸ್ಪಷ್ಟಪಡಿಸಿದೆ.
ಪ್ರಕರಣದ ಹಿನ್ನೆಲೆ
ಕಳೆದ ಮಾರ್ಚ್ 3ರ ರಾತ್ರಿ ದುಬೈನಿಂದ ಎಮಿರೇಟ್ಸ್ ಏರ್‌ಲೈನ್ಸ್ ವಿಮಾನದಲ್ಲಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದ ನಟಿಯನ್ನು ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ)ದ ಅಧಿಕಾರಿಗಳು ತಪಾಸಣೆ ನಡೆಸಿದ್ದರು. ಈ ವೇಳೆ ನಟಿ ರನ್ಯಾ ರಾವ್ ಬಳಿ 14.80 ಕೆ.ಜಿ. ಚಿನ್ನ ಪತ್ತೆಯಾಗಿತ್ತು. ತಕ್ಷಣವೇ ನಟಿಯನ್ನು ಬಂಧಿಸಲಾಗಿತ್ತು.
ಚಿನ್ನ ಕಳ್ಳಸಾಗಣೆ ಮಾಡುತ್ತಿದ್ದ ರನ್ಯಾ ರಾವ್ ಮತ್ತು ಅವರ ಇಬ್ಬರು ಸಹಚರರಾದ ತರುಣ್ ಕೊಡೂರು ರಾಜು ಹಾಗೂ ಸಾಹಿಲ್ ಸಕರಿಯಾ ಜೈನ್ ಅವರನ್ನು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಇರಿಸಲಾಗಿದೆ. ಜಾಮೀನು ಮಂಜೂರಾಗಿದ್ದರೂ, ಕಠಿಣ ವಿದೇಶಿ ವಿನಿಮಯ ನಿಯಂತ್ರಣ ಮತ್ತು ಕಳ್ಳಸಾಗಣೆ ಚಟುವಟಿಕೆಗಳ ತಡೆ ಕಾಯ್ದೆ 1974 (COFEPOSA ಕಾಯ್ದೆ, 1974) ಅಡಿಯಲ್ಲಿ ಬಂಧಿಸಿರುವ ಕಾರಣ ರನ್ಯಾ ರಾವ್ ಅವರನ್ನು ಇನ್ನೂ ಜೈಲಿನಿಂದ ಬಿಡುಗಡೆ ಮಾಡಿಲ್ಲ.