ಸಿಎಂ ಸ್ಥಾನದಿಂದ ಕೆಳಗಿಳಿಸಿದರೆ ಕ್ರಾಂತಿ; ಸಿದ್ದರಾಮಯ್ಯ ಪರ ವಾಟಾಳ್‌ ನಾಗರಾಜ್‌ ಬ್ಯಾಟಿಂಗ್‌

ಮುಖ್ಯಮಂತ್ರಿ ಸಿದ್ದರಾಮಯ್ಯ ನಂತರ ರಾಜ್ಯದಲ್ಲಿ ದಕ್ಷ ಆಡಳಿತ ನೀಡುವವರು ಕಾಂಗ್ರೆಸ್, ಬಿಜೆಪಿ, ಜೆಡಿಎಸ್‌ನಲ್ಲಿ ಯಾರೂ ಇಲ್ಲ. ಸಂವಿಧಾನಬದ್ಧವಾಗಿ ಯಾರೂ ಬೇಕಾದರೂ ಸಿಎಂ ಆಗಬಹುದು. ಆದರೆ, ಸಿದ್ದರಾಮಯ್ಯ ಅವರ ಇತಿಹಾಸ, ಕನ್ನಡ ನಾಡಿಗೆ ಅವರ ಕೊಡುಗೆ ಏನು ಎಂಬುದನ್ನು ತಿಳಿದುಕೊಳ್ಳಬೇಕು.

Update: 2024-11-01 12:59 GMT

ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಸಿದರೆ ಕರ್ನಾಟಕದಲ್ಲಿ ದೊಡ್ಡಕ್ರಾಂತಿ ಆಗಲಿದೆ ಎಂದು ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಎಚ್ಚರಿಸಿದರು.

ಬೆಂಗಳೂರಿನ ಮೈಸೂರು ಬ್ಯಾಂಕ್ ಸರ್ಕಲ್ ಬಳಿ ಅಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು, ಸಿಎಂ ಸ್ಥಾನದಿಂದ ಸಿದ್ದರಾಮಯ್ಯ ಅವರನ್ನು ಕೆಳಗಿಳಿಸಿದರೆ ಪ್ರಜಾಪ್ರಭುತ್ವಕ್ಕೆ ಅನ್ಯಾಯ ಮಾಡಿದಂತಾಗುತ್ತದೆ. ಈ ಬಗ್ಗೆ ಎಲ್ಲಾ ಪಕ್ಷದವರು ಚಿಂತನೆ ಮಾಡಬೇಕು ಎಂದು ಕಿವಿಮಾತು ಹೇಳಿದರು.

ಮುಖ್ಯಮಂತ್ರಿ ಅವರೊಂದಿಗೆ ಸ್ನೇಹವಿದೆ ಎಂಬ ಕಾರಣಕ್ಕೆ ಅವರನ್ನು ನಾನು ಹೊಗಳುತ್ತಿಲ್ಲ. 40 ವರ್ಷದ ಸುದೀರ್ಘ ರಾಜಕಾರಣದಲ್ಲಿ ಸಿದ್ದರಾಮಯ್ಯ ಅವರಿಗೆ ಏನೂ ಸಿಕ್ಕಿಲ್ಲ. ಯಾರೋ ಹಾದಿ ಬೀದಿಯಲ್ಲಿ ಹೋಗುವವರಿಬ್ಬರು ರಾಜ್ಯಪಾಲರಿಗೆ ದೂರು ಕೊಟ್ಟರು. ವಿರೋಧ ಪಕ್ಷದವರು ಎತ್ತಿಕಟ್ಟಿ ಪ್ರಾಸಿಕ್ಯೂಷನ್‌ಗೆ ಅನುಮತಿ ಕೊಡಿಸಿದರು. ಸಿಎಂಗೆ ನೋಟಿಸ್ ಬಂದ ದಿನವೇ ರಾಜ್ಯಪಾಲರ ವಿರುದ್ಧ ಮೊದಲು ಪ್ರತಿಭಟನೆ ನಡೆಸಿದೆ ಎಂದು ಹೇಳಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ನಂತರ ರಾಜ್ಯದಲ್ಲಿ ದಕ್ಷ ಆಡಳಿತ ನೀಡುವವರು ಕಾಂಗ್ರೆಸ್, ಬಿಜೆಪಿ, ಜೆಡಿಎಸ್‌ನಲ್ಲಿ ಯಾರೂ ಇಲ್ಲ. ಸಂವಿಧಾನಬದ್ಧವಾಗಿ ಯಾರೂ ಬೇಕಾದರೂ ಸಿಎಂ ಆಗಬಹುದು. ಆದರೆ, ಸಿದ್ದರಾಮಯ್ಯ ಅವರ ಇತಿಹಾಸ, ಕನ್ನಡ ನಾಡಿಗೆ ಅವರ ಕೊಡುಗೆ ಏನು ಎಂಬುದನ್ನು ತಿಳಿದುಕೊಳ್ಳಬೇಕು. ಜೆಡಿಎಸ್‌ನಿಂದ  ಸಿದ್ದರಾಮಯ್ಯ ಅವರನ್ನು ಉಚ್ಛಾಟಿಸಿದಾಗ ನಾನೇ ಪ್ರತಿಭಟನೆ ನಡೆಸಿ, ಆ ಪಕ್ಷದ ನಾಯಕರನ್ನು ಪ್ರಶ್ನೆ ಮಾಡಿದ್ದೆ ಎಂದು ಸ್ಮರಿಸಿದರು.

ಕರ್ನಾಟದಲ್ಲಿ ಬಂದ್‌ಗೆ ಕರೆ ಕೊಡಬೇಡಿ ಅಂತ ಎಂದೂ ಸಹ ಸಿದ್ದರಾಮಯ್ಯ ಹೇಳಲಿಲ್ಲ. ಬಂದ್ ಮಾಡಲಿಬಿಡಿ ಎಂದು ಪೊಲೀಸರಿಗೆ ಅವರೇ ಹೇಳುತ್ತಿದ್ದರು. ಕನ್ನಡದ ಅಸ್ಮಿತೆ ಬಗೆಗಿನ ಕಾಳಜಿಯಿಂದ ಅವರು ಹಾಗೆ ಹೇಳುತ್ತಿದ್ದರು. ನಾನು 1962ರಿಂದ 73 ರವರೆಗೆ ನಿರಂತರವಾಗಿ ಚಳವಳಿ ಮಾಡಿದ್ದೇನೆ. ಆಗ ಬೇರೆ ಬೇರೆ ಭಾಷಿಕರು ನನ್ನನ್ನು ಕಂಡರೆ ನಡುಗುತ್ತಿದ್ದರು. ಈಗ ಕನ್ನಡಿಗರ ಸಂಖ್ಯೆ ಕಡಿಮೆಯಾಗಿದೆ. ಮುಂದೊಂದು ದಿನ ನಾವು ಮತ್ತೆ ಬೀದಿಗೆ ಇಳಿಯುತ್ತೇವೆ. ಪರಭಾಷೆ ಚಿತ್ರಗಳನ್ನು ಬಿಡುಗಡೆ ಮಾಡಲು ಬಿಡುವುದಿಲ್ಲ. ಇಂದು ಕನ್ನಡದ ಅಸ್ಮಿತೆಗಾಗಿ ಹೋರಾಟ ಅನಿವಾರ್ಯವಾಗಿದೆ ಎಂದರು.

ಸಿದ್ದರಾಮಯ್ಯ ಅವರು ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ಕಲ್ಪಿಸುವ ಮಸೂದೆ ತಂದರು. ಆದರೆ, ಮೋಹನ್ ದಾಸ್ ಪೈ ಅಂತವರಿಂದಾಗಿ ವಾಪಸ್ ಪಡೆಯಬೇಕಾಯಿತು. ಸಿದ್ದರಾಮಯ್ಯ ಅವರು ಕನ್ನಡದ‌ ಕಟ್ಟಾ ಅಭಿಮಾನಿ. ಈ ಹಿಂದೆ ಕೂಡ ತುಂಬಾ ಅದ್ಭುತವಾದ ವ್ಯಕ್ತಿಗಳಿದ್ದರು. ಸಿದ್ದರಾಮಯ್ಯ ಅವರ ಮುಂದೆ ರಾಮಕೃಷ್ಣ ಹೆಗ್ಡೆ ಕೂಡ ನಡುಗುತ್ತಿದ್ದರು. ಈಗಿನ ರಾಜಕೀಯದಲ್ಲಿ ಅಂತವರು ಯಾರಿದ್ದಾರೆ. ವಿಧಾನಸಭೆ ಅಂದರೆ ಹೇಗಿರಬೇಕು? ವಿಧಾನಸಭೆಗೆ ಯಾರು ಬರಬೇಕು. ಜೈಲಿಗೆ ಹೋದರು, ದರೋಡೆ ಮಾಡಿದವರು ಬರಬೇಕಾ ಎಂದು ಪ್ರಶ್ನಿಸಿದರು.

ಇದಕ್ಕೂ ಮುನ್ನ ಕರ್ನಾಟಕ ರಾಜ್ಯೋತ್ಸವ ಸಮಿತಿ ನೃಪತುಂಗ ಮಂಟಪದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು, ಕನ್ನಡೇತರರು ಕನ್ನಡ ಕಲಿಯುವ ವಾತಾವರಣವನ್ನು ನಾವು ನಿರ್ಮಿಸಿದಾಗ ಮಾತ್ರ ಭಾಷೆ ಎತ್ತರಕ್ಕೆ ಬೆಳೆಯಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.

ನಾನು ಅಧಿಕಾರದಲ್ಲಿರುವಾಗ ಕನ್ನಡಕ್ಕೆ ಚ್ಯುತಿಯಾಗಲು ಬಿಡುವುದಿಲ್ಲ. 1983ರ ಕನ್ನಡ ಕಾವಲು ಸಮಿತಿಯ ಅಧ್ಯಕ್ಷನಾಗಿದ್ದೆ. ಕನ್ನಡವನ್ನು ಕಾಯಲು ಸಮಿತಿ ಬೇಕೆನ್ನುವ ಪರಿಸ್ಥಿತಿ ಕರ್ನಾಟಕದಲ್ಲಿ ಉಂಟಾಗಿದೆ. ಇಂದಿಗೂ ಅದು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಹೆಸರಿನಲ್ಲಿ ಕಾರ್ಯನಿರ್ವಹಿಸುತ್ತಿದೆ. ಮನುಷ್ಯ ಮನುಷ್ಯನನ್ನು ಪ್ರೀತಿಸುವ ವಿಷಯದಲ್ಲಿ ಉದಾರತನವಿರುವಂತೆ ಭಾಷೆ, ಸಂಸ್ಕೃತಿಯ ಬಗ್ಗೆ ಅಭಿಮಾನವಿರಬೇಕು. ಬೇರೆ ಭಾಷೆ ಕಲಿತರೂ, ಕನ್ನಡ ತಾಯಿಭಾಷೆಯನ್ನು ಮರೆಯಬಾರದು. ವಿಧಾನಸೌಧದ ಆವರಣದಲ್ಲಿ ಭುವನೇಶ್ವರಿ ತಾಯಿಯ ಪ್ರತಿಮೆ ಸದ್ಯದಲ್ಲೇ ಸ್ಥಾಪಿಸಲಾಗುವುದು ಎಂದರು.

ಅಧಿಕಾರಕ್ಕೆ ಹಪಹಪಿಸಿದವರಲ್ಲ

ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಅವರು ಎಂದಿಗೂ ಅಧಿಕಾರಕ್ಕೆ ಹಪಹಪಿಸಿದವರಲ್ಲ. ದೀರ್ಘ ಕಾಲದಿಂದ ಕನ್ನಡ ನಾಡು, ನುಡಿ, ನೆಲ,ಜಲಗಳ ಸಂರಕ್ಷಣೆಗೆ ಶ್ರಮಿಸಿದ್ದಾರೆ. ರಾಜಕೀಯವಾಗಿ ಬೇರೆ ಪಕ್ಷಗಳಿಂದ ಆಹ್ವಾನ ಬಂದಿದ್ದರೂ, ಕನ್ನಡ ಚಳವಳಿ ಪಕ್ಷ ಬಿಟ್ಟು ಬೇರೆಡೆಗೆ ಅವರು ಮುಖ ಮಾಡಲಿಲ್ಲ. ನನ್ನನ್ನೂ ಸೇರಿದಂತೆ, ಕೆಂಗಲ್ ಹನುಮಂತಯ್ಯ , ವೀರೇಂದ್ರ ಪಾಟೀಲ್, ದೇವರಾಜ ಅರಸು , ಗುಂಡೂರಾಯರು ಸೇರಿದಂತೆ ಹಲವು ರಾಜಕೀಯ ಧುರೀಣರಿಗೆ ಆಪ್ತರಾಗಿದ್ದರೂ, ಎಂದಿಗೂ ಅಧಿಕಾರಕ್ಕೆ ಹಪಹಪಿಸಿದವರಲ್ಲ ಎಂದು ಶ್ಲಾಘಿಸಿದರು.

ಮಾತೃಭಾಷೆ, ನೆಲ ಜಲದ ಬಗ್ಗೆ ಬದ್ಧತೆಯಿರುವ ವಾಟಾಳ್ ನಾಗರಾಜ್ ಅವರ ಬಗ್ಗೆ ಅಪಾರ ಗೌರವಾದರವಿದೆ. ನನ್ನ ವಿದ್ಯಾರ್ಥಿದೆಸೆಯಿಂದಲೂ ಅವರ ಭಾಷಣ ಕೇಳುತ್ತಾ ಬಂದಿದ್ದೇನೆ ಎಂದು ಸ್ಮರಿಸಿದರು.

Tags:    

Similar News