Namma Metro Fare Hike | ಮೆಟ್ರೋ ಪ್ರಯಾಣ ದರ ಇಳಿಸದಿದ್ದರೆ ಸಿಎಂ ಮನೆಗೆ ಮುತ್ತಿಗೆ; ಜೆಡಿಎಸ್ ಎಚ್ಚರಿಕೆ
ಮೆಟ್ರೋ ಪ್ರಯಾಣ ದರ ಇಳಿಸುವಂತೆ ಒತ್ತಾಯಿಸಿ ಗುರುವಾರ ಜೆಡಿಎಸ್ ಬೆಂಗಳೂರು ನಗರ ಘಟಕದ ಸದಸ್ಯರು ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು;
ʼನಮ್ಮ ಮೆಟ್ರೋʼ ಪ್ರಯಾಣ ದರ ಏರಿಕೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ಈ ಮಧ್ಯೆ ರಾಜಕೀಯ ಪಕ್ಷಗಳಲ್ಲಿ ಪ್ರಯಾಣ ದರದ ಏರಿಕೆಯ ಕೆಸರೆರಚಾಟ ಮುಂದುವರಿದಿದೆ.
ಪ್ರಯಾಣ ದರ ಏರಿಕೆಗೆ ಕಾಂಗ್ರೆಸ್ ಸರ್ಕಾರವೇ ನೇರ ಹೊಣೆ ಎಂಬ ಬಿಜೆಪಿ ನಾಯಕರ ಟೀಕೆಗೆ ಇದೀಗ ಜೆಡಿಎಸ್ ಕೂಡ ದನಿಗೂಡಿಸಿದೆ. ಪ್ರಯಾಣ ದರ ಏರಿಕೆ ಅಧಿಕಾರ ರಾಜ್ಯ ಸರ್ಕಾರಕ್ಕಿಲ್ಲ ಎಂದು ಸಿಎಂ ಸ್ಪಷ್ಟನೆ ನೀಡಿ, ಮರುದಿನವೇ ಬಿಎಂಆರ್‌ಸಿಎಲ್ ಅಧಿಕಾರಿಗಳಿಗೆ ದರ ಇಳಿಕೆಗೆ ಸೂಚಿಸಿರುವ ಕ್ರಮದ ಕುರಿತಂತೆ ಮತ್ತಷ್ಟು ಟೀಕೆಗಳು ವ್ಯಕ್ತವಾಗುತ್ತಿವೆ.
ಗುರುವಾರ ಜೆಡಿಎಸ್ ಬೆಂಗಳೂರು ನಗರ ಘಟಕದ ಸದಸ್ಯರು ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕರನ್ನು ಭೇಟಿ ಮಾಡಿ ಪ್ರಯಾಣ ದರ ಇಳಿಸುವಂತೆ ಒತ್ತಾಯಿಸಿದರು.
ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಜೆಡಿಎಸ್ ನಗರ ಘಟಕದ ಅಧ್ಯಕ್ಷ ಎಚ್.ಎಂ.ರಮೇಶ್ ಗೌಡ ಅವರು, ನಿರಂತರ ಬೆಲೆ ಏರಿಕೆಯಿಂದ ಜನರು ತತ್ತರಿಸಿದ್ದಾರೆ. ಮೆಟ್ರೋ ರೈಲು ಪ್ರಯಾಣ ದರವನ್ನು ರಾಜ್ಯ ಸರ್ಕಾರ ಕೂಡಲೇ ಕಡಿಮೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ನಗರದಲ್ಲಿ ಮೂಲಸೌಕರ್ಯಗಳ ಕೊರತೆ ಎದ್ದು ಕಾಣುತ್ತಿದೆ. ಎಲ್ಲಾ ಕಾಮಗಾರಿಗಳು ಆಮೆವೇಗದಲ್ಲಿ ನಡೆಯುತ್ತಿವೆ. ಕಳೆದ ಎರಡು ವರ್ಷಗಳಿಂದ ನಗರದಲ್ಲಿ ರಸ್ತೆ ಗುಂಡಿ ಮುಚ್ಚಲು ಆಗಿಲ್ಲ. ಸರ್ಕಾರದಲ್ಲಿ ಹಣ ಇಲ್ಲ. ಮೆಟ್ರೋ ಪ್ರಯಾಣ ದರ ಏರಿಕೆಗೆ ಜನ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಸರ್ಕಾರ ತಕ್ಷಣವೇ ಪ್ರಯಾಣ ದರ ಇಳಿಸದಿದ್ದರೆ ಸಿಎಂ ಮನೆಗೆ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಮೆಟ್ರೋದಲ್ಲಿ ಸಂಚರಿಸುವ ಮಧ್ಯಮ ಹಾಗೂ ಬಡವರಿಗೆ ಪ್ರಯಾಣ ದರ ಹೊರೆಯಾಗಿದೆ. ಶೇ.100 ರಷ್ಟು ದರ ಏರಿಕೆ ಮಾಡಿರುವುದು ಸರಿಯಲ್ಲ. ಸರ್ಕಾರಕ್ಕೆ ಸಾರ್ವಜನಿಕರ ಬಗ್ಗೆ ಕಾಳಜಿ ಇದ್ದರೆ ಕೂಡಲೇ ದರ ಇಳಿಸಬೇಕು. ಪೆಟ್ರೋಲ್, ಡಿಸೇಲ್ ಪ್ರತಿಯೊಂದರ ದರ ಏರಿಕೆಯಾಗಿದೆ. ಪ್ರಯಾಣ ದರ ದುಬಾರಿ ಆಗಿರುವುದರಿಂದ ಜನರು ಮೆಟ್ರೋದಲ್ಲಿ ಪ್ರಯಾಣಿಸಲು ಹಿಂದೇಟು ಹಾಕುತ್ತಿದ್ದಾರೆ ಎಂದು ರಮೇಶ್ ಗೌಡ ಆಕ್ರೋಶ ವ್ಯಕ್ತಪಡಿಸಿದರು.
ಈ ಹಿಂದೆ ಚೆನ್ನೈನಲ್ಲಿ ಇದೇ ರೀತಿ ದರ ಏರಿಕೆ ಮಾಡಿದ್ದರು. ಜನಾಕ್ರೋಶದ ಬೆನ್ನಲ್ಲೇ ಕಡಿಮೆ ಮಾಡಿದ್ದರು. ರಾಜ್ಯ ಸರ್ಕಾರ ದರ ಕಡಿಮೆ ಮಾಡದೇ ಇದ್ದರೆ ಜೆಡಿಎಸ್ ಪಕ್ಷದ ವತಿಯಿಂದ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಪಕ್ಷದ ಅನೇಕ ಮುಖಂಡರು ಮತ್ತು ಕಾರ್ಯಕರ್ತರು ಇದ್ದರು.