ಚನ್ನಪಟ್ಟಣಕ್ಕೆ ನಿಖಿಲ್ ಅಭ್ಯರ್ಥಿಯಾದರೂ ಬೆಂಬಲಿಸುತ್ತೇನೆ: ಯೋಗೇಶ್ವರ್

Update: 2024-07-01 12:17 GMT

ʻʻಚನ್ನಪಟ್ಟಣ ಉಪಚುನಾವಣೆಯಲ್ಲಿ ನೀವು ಸಂಪೂರ್ಣವಾಗಿ ಒಪ್ಪಿದರೆ ನಾನೇ ಅಭ್ಯರ್ಥಿ ಆಗುತ್ತೇನೆ. ಇಲ್ಲವಾದಲ್ಲಿ ನಿಖಿಲ್ ಅಭ್ಯರ್ಥಿಯಾದರೂ ನಾನು ಬೆಂಬಲ ನೀಡುತ್ತೇನೆ. ನೀವೇ ಮುಂದೆ ನಿಂತು ಉಪಚುನಾವಣೆಯನ್ನು​ ನಡೆಸಬೇಕುʼʼ ಎಂದು ಕುಮಾರಸ್ವಾಮಿ ಅವರಿಗೆ ಸಿ ಪಿ ಯೋಗೇಶ್ವರ್ ಹೇಳಿದ್ದಾರೆ.

ಕುಮಾರಸ್ವಾಮಿ ಅವರು ಲೋಕಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಬಳಿಕ ಖಾಲಿಯಾಗಿರುವ ಚನ್ನಪಟ್ಟಣ ಕ್ಷೇತ್ರಕ್ಕೆ ಉಪಚುನಾವಣೆ ನಡೆಯಲಿದ್ದು, ಈ ಚುನಾವಣೆಗೆ ಸಂಬಂಧಿಸಿದಂತೆ​​ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಅಭ್ಯರ್ಥಿ ಆಯ್ಕೆ‌ ವಿಚಾರಕ್ಕೆ ಸಂಬಂಧಿಸಿ ಕೇಂದ್ರ ಸಚಿವ ಹೆಚ್​​ಡಿ ಕುಮಾರಸ್ವಾಮಿ ಮತ್ತು ಬಿಜೆಪಿ ನಾಯಕ ಸಿಪಿ ಯೋಗೇಶ್ವರ್​​ ಭಾನುವಾರ ರಾತ್ರಿ ದೆಹಲಿಯಲ್ಲಿ ಮಹತ್ವದ ಸಭೆ ನಡೆಸಿದ್ದಾರೆ. ಈ ವೇಳೆ, ಅಭ್ಯರ್ಥಿ ಆಯ್ಕೆ ಸಂಬಂಧ ಒಂದು ವಾರದಲ್ಲಿ ಸ್ಪಷ್ಟತೆ ನೀಡುವಂತೆ ಕುಮಾರಸ್ವಾಮಿ ಬಳಿ ಯೋಗೇಶ್ವರ್ ಕೇಳಿಕೊಂಡಿದ್ದಾರೆ.

ಕಾಂಗ್ರೆಸ್​ ಪಕ್ಷ ಈಗಾಗಲೇ ಚನ್ನಪಟ್ಟಣದಲ್ಲಿ ತಯಾರಿ ಆರಂಭಿಸಿದೆ. ಅಭ್ಯರ್ಥಿಯನ್ನು ಬೇಗ ಘೋಷಿಸಿದರೆ ನಾವು ಸಿದ್ಧತೆ ಆರಂಭಿಸಬಹುದು ಎಂದು ಯೋಗೇಶ್ವರ್ ಹೇಳಿದ್ದಾರೆ. ಇದೇ ವೇಳೆ, ಈ ವಾರ ಬೆಂಗಳೂರಿಗೆ ಬರುತ್ತೇನೆ. ಮತ್ತೊಮ್ಮೆ ಚರ್ಚಿಸಿ ನಿರ್ಧರಿಸೋಣ ಎಂದು ಕುಮಾರಸ್ವಾಮಿ ಉತ್ತರಿಸಿದ್ದಾರೆ ಎನ್ನಲಾಗಿದೆ.

ಡಿಕೆ ಶಿವಕುಮಾರ್ ಅವರು ಚನ್ನಪಟ್ಟಣ ಉಪಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡು ನಿರಂತರವಾಗಿ ಪ್ರವಾಸ ಆರಂಭಿಸಿದ್ದಾರೆ. ಇದರ ಬೆನ್ನಲ್ಲೇ ಭಾನುವಾರದಿಂದ ನಿಖಿಲ್ ಕೂಡ ಚನ್ನಪಟ್ಟಣ ಪ್ರವಾಸ ಆರಂಭಿಸಿದ್ದಾರೆ. ಚನ್ನಪಟ್ಟಣ ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದರೆ ರಾಮನಗರ ಜಿಲ್ಲೆಯಲ್ಲಿ ಇದ್ದ ಒಂದು ಕ್ಷೇತ್ರವನ್ನು ಜೆಡಿಎಸ್ ಕಳೆದುಕೊಳ್ಳಬೇಕಾಗುತ್ತದೆ. ಕುಮಾರಸ್ವಾಮಿ ಕೇಂದ್ರ ಸಚಿವರಾಗಿದ್ದರೂ ಇಡೀ ಜಿಲ್ಲೆಯ ಹಿಡಿತ ಕಳೆದುಕೊಳ್ಳಬೇಕಾಗುತ್ತದೆ. ಕುಮಾರಸ್ವಾಮಿಯ ಕರ್ಮಭೂಮಿಯಲ್ಲಿ ಸೋಲಾದರೆ ಕಾರ್ಯಕರ್ತರು ಚದುರುವ ಸಾಧ್ಯತೆ ಹೆಚ್ಚಾಗಿದೆ. ಹೀಗಾಗಿ ಚನ್ನಪಟ್ಟಣ ಉಪಚುನಾವಣೆಯಲ್ಲಿ ಗೆಲ್ಲುವ ಅನಿವಾರ್ಯತೆ ಜೆಡಿಎಸ್‌ಗೆ ಇದೆ.

Tags:    

Similar News