CM RACE ISSUE | ಮುಖ್ಯಮಂತ್ರಿಯಾಗಿ ನಾನೇ ಮುಂದುವರಿಯುತ್ತೇನೆ: ಸಿದ್ದರಾಮಯ್ಯ
ಮುಡಾ ಹಗರಣದಲ್ಲಿ ತನಿಖೆಗೆ ಸಹಕರಿಸಿ ಸಿದ್ದರಾಮಯ್ಯ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ವಿರೋಧ ಪಕ್ಷಗಳು ಒತ್ತಾಯಿಸಿವೆ. ಈ ನಡುವೆ ಮುಂದಿನ ಸಿಎಂ ಯಾರು ಎನ್ನುವ ಪ್ರಶ್ನೆಗೆ ಸಿದ್ದರಾಮಯ್ಯ ಅವರು ಸ್ಪಷ್ಟನೆ ನೀಡಿದ್ದಾರೆ.
ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ ಮುಡಾ ಹಗರಣದ ತನಿಖೆಗೆ ಸಹಕರಿಸಬೇಕು ಎಂದು ವಿರೋಧ ಪಕ್ಷಗಳು ಒತ್ತಾಯಿಸುತ್ತಿವೆ. ಆ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬದಲಾವಣೆಯ ಚರ್ಚೆಗಳಿಗೆ ಸ್ವತಃ ಸಿದ್ದರಾಮಯ್ಯ ಅವರೇ ಪೂರ್ಣ ವಿರಾಮ ಹಾಕುವ ಯತ್ನ ಮಾಡಿದ್ದು, ನಾನೇ ಸಿಎಂ ಆಗಿರುತ್ತೇನೆ ಎಂದಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ''ಮುಖ್ಯಮಂತ್ರಿಯಾಗಿ ನಾನೇ ಮುಂದುವರಿಯುತ್ತೇನೆ. ಇದರಲ್ಲಿ ಯಾವುದೇ ಅನುಮಾನವೇ ಇಲ್ಲ. ಸಿಎಂ ಸ್ಥಾನ ಖಾಲಿ ಇಲ್ಲ'' ಎಂದು ಖಡಾಖಂಡಿತವಾಗಿ ಹೇಳಿದ್ದಾರೆ.
ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡುತ್ತಾರೆ ಎಂಬ ಚರ್ಚೆಯ ಬೆನ್ನಲ್ಲೇ ಹಲವು ಸಚಿವರು, ನಾನೂ ಸಿಎಂ ಆಕಾಂಕ್ಷಿ ಎಂದು ಹೇಳಿಕೆ ಕೊಟ್ಟಿದ್ದಾರೆ. ಎಂ ಬಿ ಪಾಟೀಲ್, ಆರ್ ವಿ ದೇಶಪಾಂಡೆ, ಸತೀಶ್ ಜಾರಕಿಹೊಳಿ, ಡಿಕೆ ಶಿವಕುಮಾರ್, ಜಿ ಪರಮೇಶ್ವರ್, ಶಿವಾನಂದ ಪಾಟೀಲ್, ಶಾಮನೂರು ಶಿವಶಂಕರಪ್ಪ ಸೇರಿದಂತೆ ಹಲವರು ಆಕಾಂಕ್ಷಿಗಳಾಗಿದ್ದಾರೆ.
ಅಲ್ಲದೆ ವಿಧಾನಪರಿಷತ್ ಸದಸ್ಯರಾದ ದಿನೇಶ್ ಗೂಳಿಗೌಡ ಹಾಗೂ ಮಂಜುನಾಥ್ ಬಂಡಾರಿ ಮತ್ತಿತರರು ಎಐಸಿಸಿ ಅಧ್ಯಕ್ಷರಿಗೆ ಪತ್ರ ಬರೆದಿದ್ದರು. ಸಿಎಂ ಸ್ಥಾನದ ಬಗ್ಗೆ ಬಹಿರಂಗ ಹೇಳಿಕೆ ಕೊಡದಂತೆ ಪಕ್ಷದ ಮುಖಂಡರಿಗೆ ಎಚ್ಚರಿಕೆ ನೀಡಬೇಕು ಎಂದು ಮನವಿ ಮಾಡಿದ್ದರು.
ಆದರೆ ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದ ಕೆಲವು ಹಿರಿಯ ಸಚಿವರು ತಾವು ಸಿಎಂ ಸ್ಥಾನದ ಆಕಾಂಕ್ಷಿ ಎಂಬ ಹೇಳಿಕೆಗಳನ್ನು ಮುಂದುವರಿಸಿದ್ದಾರೆ. ಸಿಎಂ ಬದಲಾವಣೆ ಆಗುವುದಾದರೆ ನಾನೂ ಕೂಡ ಸ್ಪರ್ಧಿಸುವೆ ಎಂದು ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ ಕೂಡ ಬುಧವಾರ ಹೇಳಿದ್ದಾರೆ.
ಇದೀಗ ಈ ಎಲ್ಲಾ ಹೇಳಿಕೆಗಳಿಗೆ ತಣ್ಣೀರೆರಚುವ ಪ್ರಯತ್ನವನ್ನು ಸಿಎಂ ಸಿದ್ದರಾಮಯ್ಯ ಮಾಡಿದ್ದು, ಪೂರ್ಣಾವಧಿಗೆ ತಾವೇ ಸಿಎಂ ಆಗಿ ಮುಂದುವರಿಯುವುದಾಗಿ ಘೋಷಿಸಿದ್ದಾರೆ.