ಲೋಕಸಭೆ ಚುನಾವಣೆಗೂ ಮುನ್ನ ಡಿಕೆಶಿ ಟೆಂಪಲ್‌ ರನ್‌!

ಜನರ ಮಧ್ಯೆ ಹೋಗಿ ನಮಗೆ ಮತ್ತಷ್ಟು ಹೆಚ್ಚಿನ ಶಕ್ತಿ ಕೊಡಿ ಎಂದು ಮತ ಕೇಳುತ್ತೇವೆ. ಈ ದೇವರು ನಮಗೆ ನುಡಿದಂತೆ ನಡೆಯಲು ಶಕ್ತಿ ನೀಡಿರುವುದೇ ನಮ್ಮ ಭಾಗ್ಯ.;

Update: 2024-03-26 11:29 GMT
ಧರ್ಮಸ್ಥಳದ ಮಂಜುನಾಥ ಸ್ವಾಮಿ ಸನ್ನಿಧಾನಕ್ಕೆ ಡಿ.ಕೆ. ಶಿವಕುಮಾರ್ ಭೇಟಿ ನೀಡಿ ದರ್ಶನ ಪಡೆದರು.
Click the Play button to listen to article

ರಾಜ್ಯದಲ್ಲಿ ಲೋಕಸಭೆ ಚುನಾವಣೆ ಕಾವು ತಾರಕಕ್ಕೇರುತ್ತಿದೆ. ಈ ಹಿನ್ನೆಲೆಯಲ್ಲಿ ಲೋಕಸಭೆ ಚುನಾವಣಾ ಪ್ರಚಾರಕ್ಕೂ ಮುನ್ನ, ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ರಾಜ್ಯದಲ್ಲಿ ದೇವಸ್ಥಾನಗಳ ಭೇಟಿಗೆ ಆರಂಭಿಸಿದ್ದಾರೆ.

ಡಿ.ಕೆ.ಶಿವಕುಮಾರ್‌ ಮಂಗಳವಾರ (ಮಾ. 26) ಧರ್ಮಸ್ಥಳಕ್ಕೆ ಭೇಟಿ ನೀಡಿ ಮಂಜುನಾಥ ದೇವರ ದರ್ಶನ ಪಡೆದು ಪೂಜೆ ಸಲ್ಲಿಸಿದರು.

ಬಳಿಕ ಅಲ್ಲಿ ಮಾಧ್ಯಮಗಳಿಗೆ ಮಾತನಾಡಿದ ಅವರು, ʼʼಈ ಬಾರಿಯ ಧರ್ಮ ಯುದ್ಧ ಆರಂಭಿಸುವ ಮುನ್ನ ಧರ್ಮಸ್ಥಳದ ಮಂಜುನಾಥನ ಹಾಗೂ ಅಣ್ಣಪ್ಪ ಸ್ವಾಮಿ ದರ್ಶನ ಪಡೆದು ಆಶೀರ್ವಾದ ಪಡೆಯುತ್ತಿದ್ದೇನೆ” ಎಂದು ಡಿಸಿಎಂ ಹೇಳಿದರು.

“ನಾನು ಪ್ರತಿ ಬಾರಿ ಧರ್ಮ ಯುದ್ಧದ ಸಂದರ್ಭದಲ್ಲಿ ಮಂಜುನಾಥನ ದರ್ಶನ ಪಡೆಯುತ್ತೇನೆ. ಶ್ರೀ ಮಂಜುನಾಥ, ಗಂಗಾಧರ ಅಜ್ಜ ನನ್ನ ಬದುಕಿನಲ್ಲಿ ರಕ್ಷಣೆ ಮಾಡಿಕೊಂಡು ಬಂದಿದ್ದಾರೆ” ಎಂದರು.

ಲೋಕಸಭೆ ಚುನಾವಣೆ ತಯಾರಿ ಹೇಗಿದೆ ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಡಿಕೆಶಿ, “ನಾನೀಗ ಮಂಜುನಾಥನ ಸನ್ನಿಧಿಯಲ್ಲಿ ಇದ್ದೇನೆ. ಧರ್ಮಸ್ಥಳ ಹಾಗೂ ಮಂಜುನಾಥನ ಶಕ್ತಿಯನ್ನು ʼಮಾತು ಬಿಡದ ಮಂಜುನಾಥʼ ಎಂದೇ ಬಣ್ಣಿಸುತ್ತಾರೆ. ಅದೇ ರೀತಿ ನಾವು ಕೂಡ ಚುನಾವಣೆಗೂ ಮುನ್ನ ಕೊಟ್ಟ ಮಾತನ್ನು ಬಿಡದೆ ಪಾಲಿಸಿದ್ದೇವೆ. ಐದು ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಕ್ಕೆ ತಂದು ನುಡಿದಂತೆ ನಡೆದಿದ್ದೇವೆ, ಜನರ ಮಧ್ಯೆ ಹೋಗಿ ನಮಗೆ ಮತ್ತಷ್ಟು ಹೆಚ್ಚಿನ ಶಕ್ತಿ ಕೊಡಿ ಎಂದು ಮತ ಕೇಳುತ್ತೇವೆ. ಈ ದೇವರು ನಮಗೆ ನುಡಿದಂತೆ ನಡೆಯಲು ಶಕ್ತಿ ನೀಡಿರುವುದೇ ನಮ್ಮ ಭಾಗ್ಯ" ಎಂದರು.

ʼʼನಾವು ನಮ್ಮ ಕೆಲಸ ಮಾಡಿದ್ದೇವೆ. ಇದರ ಮೇಲೆ ಜನ ತೀರ್ಮಾನ ಮಾಡುತ್ತಾರೆ. ಮಹಿಳೆಯರು ಇಲ್ಲಿಗೆ ಉಚಿತವಾಗಿ ಬಸ್ ನಲ್ಲಿ ಪ್ರಯಾಣ ಮಾಡಿ ಬರುತ್ತಿದ್ದಾರೆ. ಆ ಮೂಲಕ ತೀರ್ಥಯಾತ್ರೆ, ಧರ್ಮಯಾತ್ರೆ ನಡೆಯುತ್ತಿದೆ. ಇದಕ್ಕೆ ಜನ ಕೊಟ್ಟ ಶಕ್ತಿ ಕಾರಣ. ನಾವು ಜನರ ಋಣ ತೀರಿಸಿದ್ದೇವೆ. ಜನರೂ ಕೂಡ ಉಪಕಾರ ಸ್ಮರಣೆ ಇಟ್ಟುಕೊಳ್ಳುವ ವಿಶ್ವಾಸವಿದೆ” ಎಂದು ತಿಳಿಸಿದರು.

ʼಲೋಕಸಮರʼಕ್ಕಾಗಿ ಡಿಕೆಶಿ ಟೆಂಪಲ್‌ ರನ್‌

ಧರ್ಮಸ್ಥಳಕ್ಕೆ ಭೇಟಿ ನೀಡಿದ ಬಳಿಕ, ಕುಕ್ಕೆ ಸುಬ್ರಮಣ್ಯ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದರು. ಮಧ್ಯಾಹ್ನ ಶೃಂಗೇರಿ ಶಾರದಾಂಬ ದೇವಸ್ಥಾನಕ್ಕೆ ತೆರಳಿ ದೇವಿಯ ದರ್ಶನ ಪಡೆದರು. ಬಳಿಕ ಸಂಜೆ ವೇಳೆ ಕೊಲ್ಲೂರುಗೆ ತೆರಳಿ ಮೂಕಾಂಬಿಕೆ ದೇವಿಯ ದರ್ಶನ ಪಡೆಯಲಿದ್ದಾರೆ.

ಮಾರ್ಚ್ 27ರಂದು ಗೋಕರ್ಣಗೆ ತೆರಳಲಿರುವ ಡಿಕೆಶಿ, ಶ್ರೀ ಮಹಾಬಲೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಲಿದ್ದಾರೆ. ಬಳಿಕ ಕುಮುಟಾದ ಇಡಗುಂಜಿ ಗಣಪತಿ ದೇವಸ್ಥಾನಕ್ಕೆ, ಮೈಸೂರಿನ ಚಾಮುಂಡೇಶ್ವರಿ ಅದಕ್ಕೂ ಮೊದಲು ಕಬ್ಬಾಳಮ್ಮ, ಕೆಂಕೇರಮ್ಮ ದೇವಸ್ಥಾನಗಳಿಗೆ ಭೇಟಿ ನೀಡುತ್ತಿದ್ದಾರೆ.

Tags:    

Similar News