ಡಿ.5 ರಂದು ದಳಪತಿಗಳ ಅಖಾಡದಲ್ಲಿ ಸಿದ್ದರಾಮಯ್ಯ ಅಭಿಮಾನಿಗಳಿಂದ ಬೃಹತ್‌ ಸಮಾವೇಶ

ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ಅವರ ರಾಜೀನಾಮೆಗೆ ಒತ್ತಾಯಿಸಿದ ವಿರೋಧ ಪಕ್ಷಗಳಿಗೆ ತಿರುಗೇಟು ನೀಡಲು ಬೃಹತ್ ಸಮಾವೇಶ ನಡೆಸಲು ಉದ್ದೇಶಿಸಲಾಗಿದೆ ಎಂದು ತಿಳಿದುಬಂದಿದೆ.;

Update: 2024-11-24 13:57 GMT

ರಾಜ್ಯದ ಮೂರು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆ ಫಲಿತಾಂಶ ಕಾಂಗ್ರೆಸ್‌ ನಾಯಕರಲ್ಲಿ ಆತ್ಮವಿಶ್ವಾಸ ಹೆಚ್ಚಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಭಿಮಾನಿಗಳೇ ಸೇರಿ ಬೃಹತ್‌ ಸಮಾವೇಶ ನಡೆಸಲು ನಿರ್ಧರಿಸಿದ್ದಾರೆ.. ಹಾಸನದಲ್ಲಿ ಡಿ.5 ರಂದು ಸಿದ್ದರಾಮಯ್ಯ ಅಭಿಮಾನಿಗಳ ಹೆಸರಿನಲ್ಲಿ ಬೃಹತ್ ಸಮಾವೇಶ ನಡೆಸಲು ಈಗಾಗಲೇ ತಯಾರಿ ಆರಂಭವಾಗಿದೆ.

ಮುಡಾ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ಅವರ ರಾಜೀನಾಮೆಗೆ ಒತ್ತಾಯಿಸಿದ ವಿರೋಧ ಪಕ್ಷಗಳಿಗೆ ತಿರುಗೇಟು ನೀಡಲು ಬೃಹತ್ ಸಮಾವೇಶ ನಡೆಸಲು ಉದ್ದೇಶಿಸಲಾಗಿದೆ ಎಂದು ತಿಳಿದುಬಂದಿದೆ.

ಸಮಾವೇಶ ಆಯೋಜಿಸುವ ಸಂಬಂಧ ಈಗಾಗಲೇ ಸಿಎಂ ಸಿದ್ದರಾಮಯ್ಯ ಅವರ ಪುತ್ರ ಹಾಗೂ ವಿಧಾನ ಪರಿಷತ್ ಸದಸ್ಯರಾದ ಡಾ. ಯತೀಂದ್ರ ಸಿದ್ದರಾಮಯ್ಯ ಅವರು ಈಗಾಗಲೇ ನಾಲ್ವರು ಸಚಿವರ ಜೊತೆ ಸಭೆ ಮಾಡಿದ್ದು, ಸ್ವಾಭಿಮಾನಿ ಸಮಾವೇಶ ನಡೆಸುವುದಾಗಿ ಘೋಷಿಸಿದ್ದಾರೆ.

ಬೃಹತ್‌ ಸಮಾವೇಶದಲ್ಲಿ ಹಾಸನ, ಮಂಡ್ಯ, ಮೈಸೂರು, ಚಾಮರಾಜನಗರ, ಕೊಡಗು, ಮೈಸೂರು, ಚಿಕ್ಕಮಗಳೂರು ಜಿಲ್ಲೆಯ ಜನರನ್ನು ಸೇರಿಸಲು ಯೋಜಿಸಲಾಗಿದೆ. ಲೋಕಸಭೆ ಚುನಾವಣೆಯಲ್ಲಿ ಹಾಸನ ಕ್ಷೇತ್ರವನ್ನು ಕೈವಶ ಮಾಡಿಕೊಳ್ಳಲಾಗಿದೆ. ಮೂರು ವಿಧಾನಸಭಾ ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸಲಾಗಿದೆ. ರಾಜ್ಯ ಸರ್ಕಾರ ಹಾಗೂ ಸಿಎಂ ಸಿದ್ದರಾಮಯ್ಯ ವಿರುದ್ಧ ಅನಗತ್ಯ ಆರೋಪಗಳನ್ನು ಮಾಡಿರುವ ವಿಪಕ್ಷಗಳಿಗೆ ಈ ಮೂಲಕ ಎದುರೇಟು ನೀಡಲಯು ನಿರ್ಧರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಸಿಎಂ ಆಪ್ತಬಳಗದ ಸಚಿವರಾದ ಡಾ. ಎಚ್. ಸಿ. ಮಹದೇವಪ್ಪ, ಕೆ. ಎನ್. ರಾಜಣ್ಣ, ವೆಂಕಟೇಶ್, ಬೋಸರಾಜು, ಶಾಸಕರಾದ ಶಿವಲಿಂಗೇಗೌಡ, ಹಾಸನ ಸಂಸದ ಶ್ರೇಯಸ್ ಪಟೇಲ್, ಯತೀಂದ್ರ ಸಿದ್ದರಾಮಯ್ಯ ನೇತೃತ್ವದಲ್ಲಿ ಸಮಾವೇಶ ನಡೆಯಲಿದೆ.

ಕಳೆದ ವರ್ಷ ದಾವಣಗೆರೆ, ಮೈಸೂರಿನಲ್ಲಿ ಸಿದ್ದರಾಮಯ್ಯ ಅವರ ಅಭಿಮಾನಿಗಳು ಬೃಹತ್ ಸಮಾವೇಶವನ್ನು ನಡೆಸಿದ್ದರು. ಈಗ ಅದಕ್ಕಿಂತಲೂ ಹೆಚ್ಚಿನ ಜನರನ್ನು ಸೇರಿಸಿ ದಳಪತಿಗಳ ತವರಲ್ಲಿ ಸಮಾವೇಶ ನಡೆಸಲಾಗುವುದು ಎಂದು ತಿಳಿಸಿವೆ.

ಉಪ ಚುನಾವಣೆ ಪ್ರಚಾರ ಸಂದರ್ಭದಲ್ಲಿ ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡ ಅವರು ಸಿದ್ದರಾಮಯ್ಯ ವಿರುದ್ಧ ಮಾಡಿದ್ದ ಆರೋಪಗಳಿಗೆ ಅವರ ತವರು ಜಿಲ್ಲೆಯಲ್ಲೇ ಸಮಾವೇಶದ ಮೂಲಕ ತಿರುಗೇಟು ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ.

ಸಮಾವೇಶ ಕುರಿತು ಸಚಿವ ಡಾ. ಎಚ್. ಸಿ. ಮಹದೇವಪ್ಪ ಮಾತನಾಡಿ, ಇದು ಸರ್ಕಾರದ ಕಾರ್ಯಕ್ರಮ ಅಲ್ಲ, ಪಕ್ಷದ ಕಾರ್ಯಕ್ರಮವೂ ಅಲ್ಲ. ಸಿದ್ದರಾಮಯ್ಯ ಅವರ ಅಭಿಮಾನಿಗಳು ನಡೆಸುತ್ತಿರುವ ಸಮಾವೇಶ. ಹಾಗಾಗಿ ನಾವು ಅವರಿಗೆ ಸಹಾಯ ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದ್ದಾರೆ.

ಮುಡಾ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ಒತ್ತಾಯಿಸಿ ಬಿಜೆಪಿ-ಜೆಡಿಎಸ್ ಜಂಟಿಯಾಗಿ ಹೋರಾಟ ನಡೆಸಿದ್ದವು. ಬೆಂಗಳೂರಿನಿಂದ ಮೈಸೂರು ತನಕ ಪಾದಯಾತ್ರೆ ನಡೆಸಿದ್ದವು. ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್‌ ಪಕ್ಷ ಮೈಸೂರಿನಲ್ಲಿ ಬೃಹತ್ ಸಮಾವೇಶ ನಡೆಸಿತ್ತು.

Tags:    

Similar News