ಹುಬ್ಬಳ್ಳಿ ವಿದ್ಯಾರ್ಥಿನಿ ಹತ್ಯೆ ಪ್ರಕರಣ| ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ: ಗೃಹ ಸಚಿವ ಪರಮೇಶ್ವರ
ಹುಬ್ಬಳ್ಳಿಯ ನೇಹಾ ಹತ್ಯೆ ಪ್ರಕರಣದ ಬಗ್ಗೆ ಗೃಹ ಸಚಿವ ಜಿ. ಪರಮೇಶ್ವರ ಅವರು ಮಾತನಾಡಿದ್ದಾರೆ. ಆರೋಪಿಯನ್ನು ಬಂಧಿಸಲಾಗಿದ್ದು, ಕಠಿಣ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.;
ಲೋಕಸಭಾ ಚುನಾವಣೆಯ ಈ ಹೊತ್ತಿನಲ್ಲಿ ಘಟಿಸಿರುವ ಹುಬ್ಬಳ್ಳಿಯ ನೇಹಾ ಹಿರೇಮಠ ಅವರ ಕೊಲೆ ಪ್ರಕರಣವನ್ನು ಬಿಜೆಪಿ ರಾಜಕೀಕರಣಗೊಳಿಸುವ ಪ್ರಯತ್ನ ಮಾಡುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದೆ.
ರಾಜ್ಯದ ಹಿರಿಯ ಪೊಲೀಸ್ ಅಧಿಕಾರಿಗ ಅಲೋಕ್ ಮೋಹನ್ ಅವರನ್ನು ಕರೆಸಿಕೊಂಡು ವಿವರಗಳನ್ನು ಪಡೆದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಕರಣದಲ್ಲಿ ಕಾನೂನಾತ್ಮಕವಾಗಿ ಎಲ್ಲ ಕ್ರಮಗಳನ್ನು ಕೈಗೊಳ್ಳುವಂತೆ ಆದೇಶ ನೀಡಿದ್ದಾರೆ, ಎಂದು ಮುಖ್ಯಮಂತ್ರಿ ಕಛೇರಿ ತಿಳಿಸಿದೆ.
ಹುಬ್ಬಳ್ಳಿ - ಧಾರವಾಡ ಮಹಾನಗರ ಪಾಲಿಕೆಯ ಕಾಂಗ್ರೆಸ್ ಸದಸ್ಯ ನಿರಂಜನ ಹಿರೇಮಠ ಅವರ ಪುತ್ರಿ ನೇಹಾ ಹಿರೇಮಠ ಅವರ ಹತ್ಯೆ ಖಂಡನೀಯ. ಮೃತ ಯುವತಿಯ ಕುಟುಂಬಕ್ಕೆ ನನ್ನ ಸಂತಾಪಗಳು.
— Siddaramaiah (@siddaramaiah) April 18, 2024
ಘಟನೆ ಸಂಬಂಧ ಈಗಾಗಲೇ ಓರ್ವ ಆರೋಪಿಯನ್ನು ಬಂಧಿಸಲಾಗಿದ್ದು, ಕಟ್ಟುನಿಟ್ಟಿನ ತನಿಖೆ ನಡೆಸಿ, ಆರೋಪಿಗೆ ಗರಿಷ್ಠ ಶಿಕ್ಷೆಯಾಗುವಂತೆ ಕ್ರಮವಹಿಸಲು ಪೊಲೀಸ್…
ಇದೇ ಸಂದರ್ಭದಲ್ಲಿ ರಾಜ್ಯ ಗೃಹ ಸಚಿವ ಜಿ. ಪರಮೇಶ್ವರ್, ತುಮಕೂರಿನಲ್ಲಿ ಪತ್ರಕರ್ತರೊಂದಿಗೆ ಮಾತನಾಡಿ ತಪ್ಪಿತಸ್ಥರ ವಿರುದ್ಧ ಕಾನೂನಿನಡಿಯಲ್ಲಿ ಎಲ್ಲ ಕಠಿಣ ಕ್ರಮಕೈಗೊಳ್ಳುವುದಾಗಿ ತಿಳಿಸಿದ್ದಾರೆ.
ಗೃಹ ಸಚಿವರು ಪ್ರಕರಣಕ್ಕೆ ಸಂಬಂಧಿಸಿದಂತೆ ನೀಡಿರುವ ವಿವರ ಈ ರೀತಿ ಇದೆ.
ಹುಬ್ಬಳ್ಳಿ – ಧಾರವಾಡ ಪಾಲಿಕೆಯ ಕಾಂಗ್ರೆಸ್ ಸದಸ್ಯನ ಪುತ್ರಿ ಹಾಗೂ ಕಾಲೇಜಿನ ವಿದ್ಯಾರ್ಥಿನಿ ನೇಹಾ ಹಿರೇಮಠ ಅವರನ್ನು ಹುಬ್ಬಳ್ಳಿಯ ಬಿವಿಬಿ ಇಂಜಿನಿಯರ್ ಕಾಲೇಜಿನ ಆವರಣದಲ್ಲಿ ಗುರುವಾರ ಫಯಾಜ್ ಎನ್ನುವ ವ್ಯಕ್ತಿ ಇರಿದು ಕೊಲೆ ಮಾಡಿದ್ದಾನೆಂದು ಪ್ರಾಥಮಿಕ ಮಾಹಿತಿಗಳಿಂದ ತಿಳಿದುಬಂದಿದೆ.
ʻಕೊಲೆಯಾಗಿರುವ ನೇಹಾ ಮತ್ತು ಆರೋಪಿ ಫಯಾಜ್ ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದರು. ಇತ್ತೀಚಿನ ದಿನಗಳಲ್ಲಿ ಫಯಾಜ್ನಿಂದ ನೇಹಾ ದೂರವಾಗಲು ಪ್ರಯತ್ನಿಸಿದ್ದಾರೆ. ಇದರಿಂದ ಕೋಪಿತನಾದ ಫಯಾಜ್ ಕೊಲೆ ಮಾಡಿದ್ದಾನೆ. ನೇಹಾ ಕೊಲೆ ಪ್ರಕರಣಕ್ಕೂ ರಾಜಕೀಯಕ್ಕೂ ಯಾವುದೇ ಸಂಬಂಧವಿಲ್ಲʼ.
ʻಕೊಲೆ ನಡೆದ ಸಂದರ್ಭದಲ್ಲಿ ನೇಹಾ ಅವರ ತಾಯಿಯೂ ಸಹ ಸ್ಥಳದಲ್ಲಿ ಇದ್ದರು. ಆರೋಪಿ ಫಯಾಜ್, ನೇಹಾ ಅವರ ತಾಯಿಯ ಮೇಲೂ ಹಲ್ಲೆ ಮಾಡಿದ್ದಾನೆ. ಆದರೆ, ಸ್ಥಳೀಯರು ಅವರ ತಾಯಿಯನ್ನು ರಕ್ಷಿಸಿದ್ದಾರೆʼ ಎಂದರು.
ವಿದ್ಯಾರ್ಥಿ ನೇಹಾ ಅವರನ್ನು ಕೊಲೆ ಮಾಡಿದ ಆರೋಪಿ ಫಯಾಜ್ನನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಇದು ಲವ್ ಜಿಹಾದ್ ಅಲ್ಲ: ಪರಮೇಶ್ವರ
ʻನೇಹಾ ಅವರ ಹತ್ಯೆ ಪ್ರಕರಣದಲ್ಲಿ ಯಾವುದೇ ರೀತಿಯ ʼ ಲವ್ ಜಿಹಾದ್ʼ ಚಹರೆ ಕಂಡು ಬಂದಿಲ್ಲ. ಯುವತಿ ತನ್ನನ್ನು ಬಿಟ್ಟು ಬೇರೆಯವನನ್ನು ಮದುವೆ ಮಾಡಿಕೊಳ್ಳುತ್ತೀದ್ದಾಳೆ ಎನ್ನುವ ಕೋಪದಲ್ಲಿ ಆರೋಪಿ ಕೊಲೆ ಮಾಡಿದ್ದಾನೆ. ಈ ರೀತಿಯ ಘಟನೆಗಳು ಆಕಸ್ಮಿಕವಾಗಿ ನಡೆಯುತ್ತವೆ. ಕೊಲೆ ಆರೋಪಿ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದುʼ ಎಂದರು.
ಯುವಕರ ಮೇಲೆ ಹಲ್ಲೆ ದುರದೃಷ್ಟಕರ
ರಾಜ್ಯದಲ್ಲಿ ರಾಮನವಮಿಯ ದಿನ ನಡೆದ ಘಟನೆಯ ಬಗ್ಗೆ ಮಾತನಾಡಿರುವ ಪರಮೇಶ್ವರ ಅವರು, ʻಜೈ ಶ್ರೀರಾಮ್ ಎಂದು ಹೇಳಿರುವುದಕ್ಕೆ ಯುವಕರ ಮೇಲೆ ಹಲ್ಲೆ ಮಾಡಿರುವುದು ದುರದೃಷ್ಟಕರ. ಈ ರೀತಿಯ ಯಾವುದೇ ಘಟನೆಗಳನ್ನು ಸರ್ಕಾರ ಸಹಿಸುವುದಿಲ್ಲ. ಕಾನೂನಿಗೆ ವಿರುದ್ಧವಾಗಿ ಯಾರೇ ನಡೆದುಕೊಂಡರೂ, ಅವರ ಮೇಲೆ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು. ರಾಮನವಮಿಯಂದು ಜೈ ಶ್ರೀರಾಮ್ ಎಂದು ಘೋಷಣೆ ಕೂಗುವುದು ಸಹಜ. ಆದರೆ, ಮತ್ತೊಬ್ಬರು ಬೇರೆ ಘೋಷಣೆ ಕೂಗಿದ್ದಾರೆ. ಈ ರೀತಿ ಪ್ರಚೋದನೆ ನೀಡುವವರನ್ನು ರಕ್ಷಣೆ ಮಾಡುವುದಿಲ್ಲ, ಓಲೈಕೆಯೂ ಮಾಡುವುದಿಲ್ಲʼ ಎಂದು ಸ್ಪಷ್ಟಪಡಿಸಿದರು.
ʻಜೈ ಶ್ರೀರಾಮ ಎಂದು ಕೂಗಿದವರ ಮೇಲೆ ಹಲ್ಲೆ ಮಾಡಿದವರನ್ನು ಬಂಧಿಸಲಾಗಿದೆ. ಪ್ರಕರಣ ತನಿಖೆಯ ಹಂತದಲ್ಲಿದ್ದು ಸಾಕ್ಷಾಧಾರಗಳ ಆಧಾರದ ಮೇಲೆ ಸೆಕ್ಷನ್ ನಿಗದಿಯಾಗಲಿದೆʼ ಎಂದರು.
ಕಾಂಗ್ರೆಸ್ ಸರ್ಕಾರದ ನೀತಿಗಳಿಂದ ಈ ರೀತಿಯ ಘಟನೆಗಳು ನಡೆಯುತ್ತಿವೆ ಎನ್ನುವ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಪರಮೇಶ್ವರ ಅವರು, ʻಆರ್. ಅಶೋಕ್, ಆರಗ ಜ್ಞಾನೇಂದ್ರ ಹಾಗೂ ಬಸವರಾಜ್ ಬೊಮ್ಮಾಯಿ ಅವರು ಗೃಹ ಸಚಿವರಾಗಿದ್ದಾಗಲೂ ರಾಜ್ಯದಲ್ಲಿ ಈ ರೀತಿಯ ಘಟನೆಗಳು ನಡೆದಿವೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ಹೊಸದಾಗಿ ಆರಂಭವಾದದ್ದಲ್ಲ ಎಂದು ವಾಗ್ದಾಳಿ ನಡೆಸಿದರು.
ʻಕರ್ನಾಟಕದಲ್ಲಿ ಶ್ರೀರಾಮನವಮಿಯಂದು ಈ ರೀತಿ ಬೇರೆ ಎಲ್ಲಿ ನಡೆದಿದೆ ಎಷ್ಟು ಘಟನೆ ನಡೆದಿವೆ?” ಎಂದು ಪ್ರಶ್ನಿಸಿದ ಅವರು, ಇದೊಂದು ಘಟನೆಯನ್ನು ಹೊರತು ಪಡಿಸಿದರೆ, ಬೇರೆ ಎಲ್ಲೂ, ಏನೂ ಆಗಿಲ್ಲ. ಕಾನೂನು ಬಾಹಿರವಾಗಿ ಯಾರೇ ನಡೆದುಕೊಳ್ಳಲಿ, ಯಾವುದೇ ಸಮುದಾಯವಾಗಲಿ ಮುಲಾಜಿಲ್ಲದೆ ಕಾನೂನು ಕ್ರಮ ತೆಗೆದುಕೊಳ್ಳುತ್ತೇವೆ. ಯಾರನ್ನೂ ಓಲೈಸುವ ಕೆಲಸ ನಾವು ಮಾಡುವುದಿಲ್ಲ. ಶಾಂತಿ – ಕಾನೂನು ಸುವ್ಯವಸ್ಥೆ ಕಾಪಾಡುವುದು ನಮ್ಮ ಉದ್ದೇಶʼ ಎಂದು ಪರಮೇಶ್ವರ ಸರ್ಕಾರದ ನಿಲುವನ್ನು ಸ್ಪಷ್ಟಪಡಿಸಿದ್ದಾರೆ.