ರೈಲ್ವೆ ನೇಮಕಾತಿ | ಕನ್ನಡದಲ್ಲಿ ಸಲ್ಲಿಸಿದ ಅರ್ಜಿಗಳು ತಿರಸ್ಕೃತ
ನೈರುತ್ಯ ರೈಲ್ವೆಯ ಬಡ್ತಿ, ಇನ್ನಿತರ ಪರೀಕ್ಷೆಗಳನ್ನು ಕನ್ನಡದಲ್ಲಿ ನಡೆಸುವಂತೆ ಸಚಿವರ ಇತ್ತೀಚೆಗೆ ರೈಲ್ವೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದರು. ಸಚಿವರ ಸೂಚನೆಗೂ ಸೊಪ್ಪು ಹಾಕದ ರೈಲ್ವೆ ಅಧಿಕಾರಿಗಳು ಹಿಂದಿ ಹಾಗೂ ಇಂಗ್ಲಿಷ್ನಲ್ಲಿ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ ನೀಡಿ, ಕನ್ನಡವನ್ನು ನಿರ್ಬಂಧಿಸಿದ್ದಾರೆ.;
ಕನ್ನಡದಲ್ಲಿ ರೈಲ್ವೆ ನೇಮಕಾತಿ ಪರೀಕ್ಷೆ ನಡೆಸುವಂತೆ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಅವರು ಸೂಚಿಸಿದರೂ ನೇಮಕಾತಿ ಪರೀಕ್ಷೆಯಲ್ಲಿ ಕನ್ನಡದಲ್ಲಿ ಸಲ್ಲಿಸಿದ್ದ ಅರ್ಜಿಗಳನ್ನು ಹುಬ್ಬಳ್ಳಿಯ ನೈರುತ್ಯ ರೈಲ್ವೆ ಕೇಂದ್ರ ಕಚೇರಿ ತಿರಸ್ಕರಿಸಿದೆ.
ನೈರುತ್ಯ ರೈಲ್ವೆಯ ಬಡ್ತಿ, ಇನ್ನಿತರ ಪರೀಕ್ಷೆಗಳನ್ನು ಕನ್ನಡದಲ್ಲಿ ನಡೆಸುವಂತೆ ಸಚಿವರ ಇತ್ತೀಚೆಗೆ ರೈಲ್ವೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದರು. ಸಚಿವರ ಸೂಚನೆಗೂ ಸೊಪ್ಪು ಹಾಕದ ರೈಲ್ವೆ ಅಧಿಕಾರಿಗಳು ಹಿಂದಿ ಹಾಗೂ ಇಂಗ್ಲಿಷ್ನಲ್ಲಿ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ ನೀಡಿ, ಕನ್ನಡ ಅರ್ಜಿಗಳನ್ನು ತಿರಸ್ಕರಿಸಿದ್ದಾರೆ. ಇದು ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದೆ.
ನೈರುತ್ಯ ರೈಲ್ವೆಯಲ್ಲಿ ಕ್ರೀಡಾಪಟುಗಳಿಗಾಗಿ ಗ್ರೂಪ್ ಸಿ ಹಾಗೂ ಡಿ ದರ್ಜೆಯ 46 ಹುದ್ದೆಗಳಿಗೆ ಆಫ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ರೈಲ್ವೆ ನೇಮಕಾತಿ ವೆಬ್ಸೈಟ್ಗೆ ಹೋಗಿ ಅರ್ಜಿ ಡೌನ್ಲೋಡ್ ಮಾಡಿದರೆ ಕೇವಲ ಹಿಂದಿ ಹಾಗೂ ಇಂಗ್ಲೀಷ್ ಅರ್ಜಿಗಳ ಫಾರಂ ಬರುತ್ತಿದೆ. ಕನ್ನಡದಲ್ಲಿ ಅರ್ಜಿ ಸಲ್ಲಿಸಲು ಅವಕಾಶವನ್ನೇ ನೀಡಿಲ್ಲ ಎಂದು ಹಲವು ಅಭ್ಯರ್ಥಿಗಳು ಅಳಲು ತೋಡಿಕೊಂಡಿದ್ದಾರೆ.
ಈ ಕುರಿತಂತೆ ಪ್ರತಿಕ್ರಿಯಿಸಿರುವ ನೈರುತ್ಯ ರೈಲ್ವೆ ಬಳಕೆದಾರರ ಸಮಿತಿ ಸದಸ್ಯ ಮಹೇಶ್ ಸಿಂಘಿ ಅವರು, ರೈಲ್ವೆ ಇಲಾಖೆಯನ್ನು ಕ್ರಮವನ್ನು ಟೀಕಿಸಿದ್ದಾರೆ.
ರೈಲ್ವೆ ನೇಮಕಾತಿಯಲ್ಲಿ ತ್ರಿಭಾಷಾ ಸೂತ್ರ ಪಾಲಿಸಬೇಕು. ಈ ಬಗ್ಗೆ ಈಗಾಗಲೇ ಕೇಂದ್ರ ಸಚಿವ ವಿ. ಸೋಮಣ್ಣ ಅವರು ಸೂಚನೆ ನೀಡಿದ್ದಾರೆ. ಆದರೂ ರೈಲ್ವೆ ಅಧಿಕಾರಿಗಳು ಮೊಂಡುತನ ಪ್ರದರ್ಶಿಸುತ್ತಿರುವುದು ಸರಿಯಲ್ಲ. ಕನ್ನಡ ರಾಜ್ಯೋತ್ಸವದ ಈ ಸಂದರ್ಭದಲ್ಲಿ ಇಂತಹ ಪ್ರಮಾದ ಸರಿಯಲ್ಲ ಎಂದು ಎಚ್ಚರಿಸಿದ್ದಾರೆ.