HSRP Number Plate | ಗಡುವು ವಿಸ್ತರಣೆ? ಹೈಕೋರ್ಟಿಗೆ ಸರ್ಕಾರ ಹೇಳಿದ್ದೇನು?
ವಾಹನಗಳಿಗೆ ಎಚ್ಎಸ್ಆರ್‌ಪಿ ನಂಬರ್ ಪ್ಲೇಟ್ (HSRP Number Plate) ಅಳವಡಿಸಲು ಮೇ 31ರವರೆಗೆ ಗಡುವು ನೀಡಿದ್ದ ರಾಜ್ಯ ಸರ್ಕಾರ, ಆ ಬಳಿಕ ದಂಡ ವಿಧಿಸಲಾಗುವುದು ಎಂದು ಹೇಳಿತ್ತು. ಆದರೆ, ಇದೀಗ ಸರ್ಕಾರ ವಾಹನ ಮಾಲೀಕರಿಗೆ ತಾತ್ಕಾಲಿಕವಾಗಿ ಸಮಾಧಾನಕರ ಸುದ್ದಿ ನೀಡಿದೆ.
ವಾಹನಗಳಿಗೆ ಎಚ್ಎಸ್ಆರ್‌ಪಿ ನಂಬರ್ ಪ್ಲೇಟ್ (HSRP Number Plate) ಅಳವಡಿಸಲು ಮೇ 31ರವರೆಗೆ ಗಡುವು ನೀಡಿದ್ದ ರಾಜ್ಯ ಸರ್ಕಾರ, ಆ ಬಳಿಕ ದಂಡ ವಿಧಿಸಲಾಗುವುದು ಎಂದು ಹೇಳಿತ್ತು. ಆದರೆ, ಇದೀಗ ಸರ್ಕಾರ ವಾಹನ ಮಾಲೀಕರಿಗೆ ತಾತ್ಕಾಲಿಕವಾಗಿ ಸಮಾಧಾನಕರ ಸುದ್ದಿ ನೀಡಿದೆ.
ಜೂನ್ 12ರವರೆಗೆ ಯಾವುದೇ ದಂಡ ಕ್ರಮ ಕೈಗೊಳ್ಳುವುದಿಲ್ಲ ಎಂದು ರಾಜ್ಯ ಸರ್ಕಾರ ಹೈಕೋರ್ಟಿಗೆ ಮಾಹಿತಿ ನೀಡಿದೆ. ಆದರೆ, ಆ ಬಳಿಕ ದಂಡ ಬೀಳುವ ಸಾಧ್ಯತೆ ಇದ್ದೇ ಇದೆ.
ವಾಹನಗಳಿಗೆ ಹೈ ಸೆಕ್ಯುರಿಟಿ ರಿಜಿಸ್ಟ್ರೇಷನ್ ಪ್ಲೇಟ್ ಅಥವಾ ಎಚ್ಎಸ್ಆರ್‌ಪಿ ನಂಬರ್ ಪ್ಲೇಟ್ ಅಳವಡಿಸಲು ಮೇ 31ರ ಗಡುವು ನೀಡಿದ್ದರೂ, ಈವರೆಗೆ ರಾಜ್ಯದಲ್ಲಿ ಶೇ.20ರಷ್ಟು ವಾಹನಗಳಿಗೂ ಅಳಡಿಸುವುದು ಸಾಧ್ಯವಾಗಿಲ್ಲ. ಇನ್ನೂ 1.6 ಕೋಟಿ ವಾಹನಗಳಿಗೆ ಎಚ್ಎಸ್ಆರ್ಪಿ ಅಳವಡಿಕೆ ಬಾಕಿ ಇದೆ.
ಆ ಹಿನ್ನೆಲೆಯಲ್ಲಿ ಎಚ್ಎಸ್ಆರ್‌ಪಿ ನಂಬರ್ ಪ್ಲೇಟ್ ಉತ್ಪಾದಕ ಕಂಪನಿಗಳಲ್ಲಿ ಒಂದಾದ ಬಿಎನ್ಡಿ ಎನರ್ಜಿ ಲಿಮಿಟೆಡ್ ಹೊಸ ನಂಬರ್ ಪ್ಲೇಟ್ ಅಳವಡಿಸಲು ಇರುವ ಮೇ 31ರ ಗಡುವನ್ನು ವಿಸ್ತರಿಸಬೇಕು ಎಂದು ಕೋರಿ ರಾಜ್ಯ ಹೈಕೋರ್ಟಿನಲ್ಲಿ ಮಧ್ಯಂತರ ಅರ್ಜಿ ಸಲ್ಲಿಸಿತ್ತು. ಆ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟಿನ ರಜಾ ಕಾಲದ ವಿಭಾಗೀಯ ಪೀಠದ ಮುಂದೆ ರಾಜ್ಯ ಸರ್ಕಾರ ಮಾಹಿತಿ ನೀಡಿ, ಜೂ.12ರವರೆಗೆ ಎಚ್ಎಸ್ಆರ್‌ಪಿ ಅಳವಡಿಸದ ವಾಹನಗಳಿಗೆ ದಂಡ ಮತ್ತಿತರ ಕಠಿಣ ಕ್ರಮ ಕೈಗೊಳ್ಳುವುದಿಲ್ಲ ಎಂದು ಹೇಳಿದೆ. ಪೀಠವು ಮುಂದಿನ ವಿಚಾರಣೆಯನ್ನು ಜೂನ್ 11ಕ್ಕೆ ಮುಂದೂಡಿದೆ.
ಹಾಗಾಗಿ ಸದ್ಯಕ್ಕೆ ವಾಹನ ಮಾಲೀಕರು ನಿರಾಳರಾಗಿರಬಹುದು. ಆದರೆ, ಆ ಗಡುವಿನ ನಂತರ ದಂಡ ಬೀಳುವ ಸಾಧ್ಯತೆ ಹೆಚ್ಚಿದ್ದು, ಈವರೆಗೆ ಎಚ್ಎಸ್ಆರ್‌ಪಿ ಅಳವಡಿಸಿಕೊಂಡಿರದೇ ಇರುವವರು ಸಾಧ್ಯವಾದಷ್ಟು ಬೇಗ ಹೊಸ ನಂಬರ್ ಪ್ಲೇಟ್ ಹಾಕಿಸಲು ನೋಂದಣಿ ಮಾಡಿಕೊಳ್ಳುವುದು ಸುರಕ್ಷಿತ.
ಏನಿದು ಎಚ್ಎಸ್ಆರ್‌ಪಿ ನಂಬರ್ ಪ್ಲೇಟ್?
ಎಚ್ಎಸ್ಆರ್‌ಪಿ ಎಂಬುದು ʼಹೈ ಸೆಕ್ಯುರಿಟಿ ರಿಜಿಸ್ಟ್ರೇಷನ್ ಪ್ಲೇಟ್ʼ ಎಂಬುದರ ಸಂಕ್ಷಿಪ್ತ ರೂಪ. ಇದು ನಿಮ್ಮ ಕಾರಿನ ಸಂಪೂರ್ಣ ಮಾಹಿತಿಯನ್ನು ಒಳಗೊಂಡಿರುವ ಕೋಡ್ ಮತ್ತು ಕ್ರೋಮಿಯಂ ಹಾಲೋಗ್ರಾಮ್ ಸ್ಟಿಕರ್ ಕೂಡ ಇರುತ್ತದೆ. ಜೊತೆಗೆ ಒಂದೇ ಮಾದರಿ, ಅಳತೆಯ ನಂಬರನ್ನು ಆ ಪ್ಲೇಟ್ ಮೇಲೆ ಉಬ್ಬು ಅಚ್ಚಿನಲ್ಲಿರುತ್ತವೆ. ಜೊತೆಗೆ ಲಾಕ್ ಪಿನ್ ಮೂಲಕ ಈ ಪ್ಲೇಟನ್ನು ವಾಹನಕ್ಕೆ ಕೂರಿಸಲಾಗುತ್ತದೆ.
ಯಾವ ವಾಹನಗಳಿಗೆ ಈ ಪ್ಲೇಟ್ ಕಡ್ಡಾಯ?
ಕೇಂದ್ರ ಸರ್ಕಾರ 2019ರಲ್ಲಿ ಈ ಎಚ್ಎಸ್ಆರ್‌ಪಿಯನ್ನು ಹೊಸ ವಾಹನಗಳಿಗೆ ಕಡ್ಡಾಯಗೊಳಿಸಿತ್ತು. ಆ ಬಳಿಕ ನೋಂದಣಿಯಾಗಿರುವ ಎಲ್ಲಾ ವಾಹನಗಳಿಗೆ ವಾಹನ ಮಾರಾಟಗಾರರೇ ಎಚ್ಎಸ್ಆರ್‌ಪಿ ಅಳವಡಿಸುತ್ತಾರೆ. ಅಂದರೆ, 2019ರ ಏಪ್ರಿಲ್ 1ರ ನಂತರ ನೋಂದಣಿಯಾಗಿರುವ ವಾಹನಗಳಿಗೆ ಎಚ್ಎಸ್ಆರ್‌ಪಿ ನಂಬರ್ ಪ್ಲೇಟ್ ಪ್ರತ್ಯೇಕವಾಗಿ ಅಳಡಿಸುವ ಅಗತ್ಯವಿರುವುದಿಲ್ಲ. ಅದಕ್ಕೂ ಮುನ್ನ ನೋಂದಣಿಯಾಗಿರುವ ದ್ವಿಚಕ್ರ ಮತ್ತು ನಾಲ್ಕು ಚಕ್ರದ ವಾಹನಗಳಿಗೆ ಎಚ್ಎಸ್ಆರ್‌ಪಿ ನಂಬರ್ ಪ್ಲೇಟ್ ಹಾಕುವುದು ಕಡ್ಡಾಯ.
ಎಚ್ಎಸ್ಆರ್‌ಪಿ ಪ್ಲೇಟ್ ಅಳವಡಿಕೆ ಎಷ್ಟಾಗಿದೆ ಈಗ?
ಎಚ್ಎಸ್ಆರ್‌ಪಿ ಅಳವಡಿಸಿಕೊಳ್ಳಬೇಕಿದ್ದ ರಾಜ್ಯದ ಒಟ್ಟು ಎರಡು ಕೋಟಿ ವಾಹನಗಳ ಪೈಕಿ, ಈವರೆಗೆ ಕೇವಲ 38 ಲಕ್ಷ ವಾಹನಗಳಿಗೆ ಮಾತ್ರ ಎಚ್ಎಸ್ಆರ್‌ಪಿ ಪ್ಲೇಟ್ ಅಳವಡಿಸಲಾಗಿದೆ. ಅಂದರೆ ಕೇವಲ ಶೇ.19ರಷ್ಟು ಮಾತ್ರ ಪ್ರಗತಿಯಾಗಿದೆ. ಇನ್ನೂ 1.62 ಲಕ್ಷ ವಾಹನಗಳಿಗೆ ಹೊಸ ಪ್ಲೇಟ್ ಅಳವಡಿಕೆ ಬಾಕಿ ಇದೆ.
ಗಡುವಿನೊಳಗೆ ಹಾಕಿಸದೇ ಇದ್ದರೆ ದಂಡ ಎಷ್ಟು?
ಸರ್ಕಾರದ ಸದ್ಯದ ಗಡುವಿನ ಪ್ರಕಾರ, ಜೂನ್ 12ರಿಂದ ಎಚ್ಎಸ್ಆರ್‌ಪಿ ನಂಬರ್ ಪ್ಲೇಟ್ ಇಲ್ಲದ ವಾಹನಗಳಿಗೆ ದಂಡ ಬೀಳಲಿದೆ. ಮೊದಲ ಬಾರಿಗೆ ₹ 500, ಎರಡನೇ ಬಾರಿಗೆ ₹1000 ದಂಡ ಬೀಳಲಿದೆ. ಆ ಬಳಿಕ ಪ್ರತಿ ಬಾರಿ ಸಿಕ್ಕಿಬಿದ್ದಾಗಲೂ ತಲಾ ₹1000 ದಂಡ ತೆರಬೇಕಾಗುತ್ತದೆ ಎಂದು ಇಲಾಖೆಯ ಮಾಹಿತಿ. ಆ ಹಿನ್ನೆಲೆಯಲ್ಲಿ ದಂಡ ಕಟ್ಟುವುದನ್ನು ತಪ್ಪಿಸಿಕೊಳ್ಳಲು ಆದಷ್ಟು ಬೇಗ ಎಚ್ಎಸ್ಆರ್‌ಪಿ ನೋಂದಣಿಯಾದರೂ ಮಾಡಿಸಿಕೊಳ್ಳಿ ಎಂದು ಇಲಾಖೆ ವಾಹನ ಮಾಲೀಕರಿಗೆ ಕರೆ ನೀಡಿದೆ.
ದಂಡ ತಪ್ಪಿಸಿಕೊಳ್ಳಲು ಏನು ಮಾಡಬಹುದು?
ಈಗ ವಾಹನಕ್ಕೆ ಎಚ್ಎಸ್ಆರ್‌ಪಿ ಅಳವಡಿಸಿಕೊಳ್ಳದೇ ಹೋದರೆ ದಂಡ ಪಕ್ಕಾ. ಆದರೆ, ದಂಡ ತಪ್ಪಿಸಿಕೊಳ್ಳಲು ಒಂದು ಅವಕಾಶವಿದೆ. ಕೂಡಲೇ ರಾಜ್ಯ ಸಾರಿಗೆ ಇಲಾಖೆಯ https://transport.karnataka.gov.in ಅಥವಾ ಸೊಸೈಟಿ ಆಫ್ ಇಂಡಿಯನ್ ಆಟೋಮೊಬೈಲ್ ಮಾನುಫ್ಯಾಕ್ಚರರ್ಸ್ ನ https://www.siam.in ನಲ್ಲಿ ನಿಮ್ಮ ವಾಹನದ ವಿವರ ತುಂಬಿ ಎಚ್ಎಸ್ಆರ್‌ಪಿ ಪ್ಲೇಟ್ ಗಾಗಿ ನೋಂದಣಿ ಮಾಡಿಕೊಳ್ಳಬಹುದು. ಹಾಗೆ ನೋಂದಣಿ ಮಾಡಿದ ಬಳಿಕ ಒಂದು ತಿಂಗಳ ಕಾಲ ನಿಮ್ಮ ವಾಹನಕ್ಕೆ ಯಾವುದೇ ದಂಡ ವಿಧಿಸುವುದಿಲ್ಲ. ಆ ಒಂದು ತಿಂಗಳ ಕಾಲಾವಧಿಯಲ್ಲಿ ಹೊಸ ನಂಬರ್ ಪ್ಲೇಟ್ ಅಳಡಿಸಿಕೊಂಡರೆ ನಿಮ್ಮ ಜೇಬು ಸೇಫ್ ಆಗಲಿದೆ.
ಎಚ್ಎಸ್ಆರ್‌ಪಿ ಅಳವಡಿಸಲು ಎಷ್ಟು ದುಡ್ಡು?
ಎಚ್ಎಸ್ಆರ್‌ಪಿ ನಂಬರ್ ಪ್ಲೇಟ್ ಅಳವಡಿಸಲು ದ್ವಿಚಕ್ರ ಮತ್ತು ತ್ರಿಚಕ್ರ ವಾಹನಕ್ಕೆ ₹450 -550, ಕಾರು ಅಥವಾ 4 ಚಕ್ರದ ವಾಹನಗಳಿಗೆ ರೂಪಾಯಿ ₹650-780. ಭಾರೀ ವಾಹನಗಳಾದ ಟ್ರಕ್, ಬಸ್ ಸೇರಿದಂತೆ 10 ಚಕ್ರದ ವಾಹನಗಳಿಗೆ ₹650- 800 ಶುಲ್ಕವನ್ನು ಸರ್ಕಾರ ನಿಗದಿಪಡಿಸಿದೆ.