HSRP NUMBER PLATE | ವಾಹನ ಮಾಲೀಕರಿಗೆ ಹೈಕೋರ್ಟ್ ರಿಲೀಫ್: ಗಡುವು ಮತ್ತೆ ವಿಸ್ತರಣೆ
ಈ ಮೊದಲು ಸರ್ಕಾರ ನೀಡಿದ್ದ ಸೆ.15ರ ಗಡುವು ಮುಗಿದಿರುವ ಹಿನ್ನೆಲೆಯಲ್ಲಿ ಗಡುವು ವಿಸ್ತರಣೆಗೆ ಅವಕಾಶ ನೀಡಬೇಕು ಎಂದು ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್, ಗಡುವು ವಿಸ್ತರಣೆ ಮಾಡಲು ಸರ್ಕಾರಕ್ಕೆ ಸೂಚಿಸಿದ್ದು, ಮುಂದಿನ ವಿಚಾರಣೆಯನ್ನು ನವೆಂಬರ್ 20ಕ್ಕೆ ಮುಂದೂಡಿದೆ.
ಸರ್ಕಾರದ ಗಡುವಿನ ಹೊರತಾಗಿಯೂ ಎಚ್ಎಸ್ಆರ್‌ಪಿ (High Security Number Plate) ನಂಬರ್ ಪ್ಲೇಟ್ ಅಳವಡಿಸಿಕೊಳ್ಳದೆ ದಂಡ ಕಟ್ಟುವ ಆತಂಕದಲ್ಲಿದ್ದ ವಾಹನ ಮಾಲೀಕರಿಗೆ ಹೈಕೋರ್ಟ್ ಬುಧವಾರ ಸಮಾಧಾನಕರ ಸುದ್ದಿ ನೀಡಿದೆ.
ಈ ಮೊದಲು ಸರ್ಕಾರ ನೀಡಿದ್ದ ಸೆ.15ರ ಗಡುವು ಮುಗಿದಿರುವ ಹಿನ್ನೆಲೆಯಲ್ಲಿ ಗಡುವು ವಿಸ್ತರಣೆಗೆ ಅವಕಾಶ ನೀಡಬೇಕು ಎಂದು ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್, ಗಡುವು ವಿಸ್ತರಣೆ ಮಾಡಲು ಸರ್ಕಾರಕ್ಕೆ ಸೂಚಿಸಿದ್ದು, ಮುಂದಿನ ವಿಚಾರಣೆಯನ್ನು ನವೆಂಬರ್ 20ಕ್ಕೆ ಮುಂದೂಡಿದೆ.
ಎಚ್ಎಸ್ಆರ್‌ಪಿ ನಂಬರ್ ಪ್ಲೇಟ್ ಅಳವಡಿಕೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ, ಕಳೆದ ಒಂದು ವರ್ಷದಲ್ಲಿ ನಾಲ್ಕು ಬಾರಿ ಗಡುವು ವಿಸ್ತರಿಸಿತ್ತು. ಕೊನೆಯದಾಗಿ ಸೆ.15ರ ಒಳಗೆ ಎಚ್ಎಸ್ಆರ್‌ಪಿ ನಂಬರ್ ಪ್ಲೇಟ್ ಅಳವಡಿಸಿಕೊಳ್ಳದೇ ಇದ್ದಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಸರ್ಕಾರ ಹೇಳಿತ್ತು. ಆದರೆ, ಮತ್ತೊಮ್ಮೆ ಗಡುವು ವಿಸ್ತರಿಸುವಂತೆ ಕೋರಿ ಕೆಲವರು ಕೋರ್ಟ್ ಮೊರೆಹೋದ ಹಿನ್ನೆಲೆಯಲ್ಲಿ ಸೆ.18ರಂದು ಹೈಕೋರ್ಟ್ ವಿಚಾರಣೆಯನ್ನು ಕಾದು ನೋಡಿ ಬಳಿಕ 500 ರೂ. ದಂಡ ವಿಧಿಸುವುದೂ ಸೇರಿದಂತೆ ಕಾನೂನು ಕ್ರಮದ ಕುರಿತು ನಿರ್ಧರಿಸಲಾಗುವುದು ಎಂದು ಸರ್ಕಾರ ಹೇಳಿತ್ತು.
ಇದೀಗ ಹೈಕೋರ್ಟ್ ಎಚ್ಎಸ್ಆರ್‌ಪಿ ನಂಬರ್ ಪ್ಲೇಟ್ ಅಳವಡಿಕೆ ಗಡುವನ್ನು ವಿಸ್ತರಿಸಿದ್ದು, ನ್ಯಾಯಾಲಯ ಗಡುವು ದಿನಾಂಕವನ್ನು ಸ್ಪಷ್ಟಪಡಿಸಿಲ್ಲವಾದರೂ, ಅರ್ಜಿಯ ವಿಚಾರಣೆ ನಡೆದು ತೀರ್ಪು ಹೊರಬೀಳುವವರೆಗೆ ಸರ್ಕಾರ ಯಾವುದೇ ಬಲವಂತದ ಕ್ರಮ ಕೈಗೊಳ್ಳಲಾಗದು. ಹಾಗಾಗಿ ಸದ್ಯ ನವೆಂಬರ್ 20ರವರೆಗೆ ಎಚ್ಎಸ್ಆರ್‌ಪಿ ನಂಬರ್ ಪ್ಲೇಟ್ ತಲೆನೋವಿನಿಂದ ವಾಹನ ಮಾಲೀಕರಿಗೆ ಮುಕ್ತಿ ಸಿಕ್ಕಂತಾಗಿದೆ.
ಏನಿದು ಎಚ್ಎಸ್ಆರ್ಪಿ ನಂಬರ್ ಪ್ಲೇಟ್?
2019ರ ಏಪ್ರಿಲ್ 1 ರ ಮೊದಲು ನೋಂದಾಯಿಸಲ್ಪಟ್ಟ ವಾಹನಗಳಿಗೆ ವಾಹನ ಕಳವು, ಸಂಚಾರ ನಿಯಮ ಉಲ್ಲಂಘನೆಯಂತಹ ಸಂದರ್ಭದಲ್ಲಿ ವಾಹನದ ಸಂಪೂರ್ಣ ವಿವರವನ್ನು ಡಿಜಿಟಲ್ ಆಗಿ ಪಡೆಯುವ ಅವಕಾಶ ನೀಡುವ ಉದ್ದೇಶದಿಂದ ಎಚ್ಎಸ್ಆರ್‌ಪಿ ನಂಬರ್ ಪ್ಲೇಟ್ ಅಳವಡಿಕೆಯನ್ನು ಕಡ್ಡಾಯಗೊಳಿಸಲಾಗಿದೆ.
ಕೇಂದ್ರ ಸರ್ಕಾರದ ನಿರ್ದೇಶನದಂತೆ ರಾಜ್ಯ ಸಾರಿಗೆ ಇಲಾಖೆ, 2023ರ ಆಗಸ್ಟ್ನಲ್ಲಿ ಅಧಿಸೂಚನೆಯನ್ನು ಪ್ರಕಟಿಸಿತ್ತು. ಮೊದಲಿಗೆ 2023 ರ ನವೆಂಬರ್ 17 ರ ಗಡುವನ್ನು ನಿಗದಿಪಡಿಸಲಾಗಿತ್ತು. ನಿಧಾನಗತಿಯ ಅಳವಡಿಕೆಯ ಕಾರಣ ಆ ನಂತರದಲ್ಲಿ ಮೂರು ಬಾರಿ ಗಡುವು ವಿಸ್ತರಿಸಲಾಗಿತ್ತು. ಇದೀಗ ಹೈಕೋರ್ಟ್ ಆದೇಶದ ನಂತರ 4ನೇ ಬಾರಿ ಗಡುವು ವಿಸ್ತರಣೆ ಮಾಡಿದಂತಾಗಿದೆ.
ರಾಜ್ಯ ಸಾರಿಗೆ ಇಲಾಖೆ ಅಂಕಿಅಂಶಗಳ ಪ್ರಕಾರ, ಸೆಪ್ಟೆಂಬರ್ 15ರ ಗಡುವಿನ ವರೆಗೆ ರಾಜ್ಯದಲ್ಲಿರುವ ಎರಡು ಕೋಟಿ ಹಳೆಯ ವಾಹನಗಳ ಪೈಕಿ ಶೇ.26ರಷ್ಟು ವಾಹನಗಳಿಗೆ ಮಾತ್ರ ಎಚ್ಎಸ್ಆರ್‌ಪಿ ಅಳವಡಿಕೆಯಾಗಿದೆ. ಅಂದರೆ; ಸದ್ಯ 52 ಲಕ್ಷ ವಾಹನಗಳಿಗಷ್ಟೇ ಎಚ್ಎಸ್ಆರ್ಪಿ ಅಳವಡಿಸಲಾಗಿದೆ. ಇನ್ನೂ ಒಂದೂವರೆ ಕೋಟಿ ವಾಹನಗಳಿಗೆ ಎಚ್ಎಸ್ಆರ್‌ಪಿ ಅಳವಡಿಕೆ ಬಾಕಿ ಇದೆ.