HPPL PROJECT | ಹೊನ್ನಾವರದ ಕಡಲಮಕ್ಕಳ ಬದುಕನ್ನೇ ಮುಳುಗಿಸಿದ ಬಂದರು ಯೋಜನೆ
ಹೊನ್ನಾವರದ ಶರಾವತಿ ಅಳಿವೆಯಂಚಿನ ಕಡಲ ದಂಡೆಯಲ್ಲಿ ನಿರ್ಮಾಣವಾಗುತ್ತಿರುವ ಖಾಸಗಿ ಬಂದರು, ಅಲ್ಲಿ ನೂರಾರು ವರ್ಷಗಳಿಂದ ಬದುಕು ಕಟ್ಟಿಕೊಂಡಿದ್ದ ಮೀನುಗಾರರು, ಮರಳ ಮೇಲೆ ವಿಸ್ತರಿಸಿದ್ದ ಒಣ ಮೀನು ಉದ್ಯಮ, ಕೊನೆಗೆ ಕಡಲಾಮೆಗಳ ಬದುಕನ್ನೂ ನುಂಗಿ ಹಾಕುವ ಹುನ್ನಾರ ನಡೆಸಿದೆ.
ಕರಾವಳಿಯಲ್ಲಿ ಮೀನಿನ ಬಲೆ ಹೆಗಲಿಗೇರಿಸಿ ದೋಣಿ ಹತ್ತಿ ಕಡಲಿಗೆ ಹೋದ ಮೀನುಗಾರರು ವಾಪಸು ಬರುವವರೆಗೆ ಮನೆಮಂದಿಗೆ ಅವರ ಜೀವದ್ದೇ ಚಿಂತೆ. ಆದರೆ, ಹೊನ್ನಾವರದ ಕಾಸರಕೋಡು ಅಳಿವೆಯಂಚಿನ ಮೀನುಗಾರರ ಕೇರಿಯಲ್ಲಿ ಪರಿಸ್ಥಿತಿ ತದ್ವಿರುದ್ಧ. ಮೀನು ಅರಸಿ ಕಡಲಿಗೆ ಇಳಿವ ಮೀನುಗಾರರಿಗೆ ತಾವು ವಾಪಸ್ ಬರುವವರೆಗೆ ದಡದಲ್ಲಿರುವ ತಮ್ಮ ಮನೆಗಳು ಬುಲ್ಡೋಜರುಗಳ ಅಡಿಗೆ ಸಿಲುಕಿ ಅಪ್ಪಚ್ಚಿಯಾಗದೆ ಉಳಿಯುವುವೇ ಎಂಬ ನಿತ್ಯ ಆತಂಕ ಅವರದು!
ಹೌದು, ಕಾಸರಕೋಡು ಮತ್ತು ಸುತ್ತಮುತ್ತಲ ಮೀನುಗಾರರ ತಲೆ ಮೇಲಿನ ಸೂರು, ಬದುಕಿನ ಬಂಡಿ ಎಳೆಯುವ ದುಡಿಮೆ, ನಾಳೆಯ ಭರವಸೆಗಳ ಮೇಲೆಲ್ಲಾ ಈಗ ಹೊನ್ನಾವರ ಖಾಸಗಿ ಬಂದರು ಲಿಮಿಟೆಡ್(HPPL) ಕಂಪನಿಯ ಕರಿನೆರಳು ಬಿದ್ದಿದೆ. ಹೊಸ ಬಂದರು ನಿರ್ಮಾಣ ಮತ್ತು ಅದಕ್ಕೆ ಸಂಪರ್ಕ ಕಲ್ಪಿಸಲು ರಸ್ತೆಗಾಗಿ ಸಾವಿರಾರು ಮೀನುಗಾರರ ಬದುಕಿನ ಮೇಲೆಯೇ ಚಪ್ಪಡಿ ಎಳೆಯುವ ಕಾರ್ಯ ಭರದಿಂದ ಸಾಗಿದೆ.
ಖಾಸಗಿ ಬಂದರಿಗೆ ಸಂಪರ್ಕ ಕಲ್ಪಿಸಲು ಟೋಂಕಾ ಮತ್ತು ಕಾಸರಕೋಡು ನಡುವೆ ಚತುಷ್ಪತ ರಸ್ತೆಗಾಗಿ ಸಾವಿರಾರು ಮೀನುಗಾರರ ಮನೆಮಾರು ಕಿತ್ತುಕೊಂಡು ಅವರನ್ನು ಅಲ್ಲಿಂದ ಎತ್ತಂಗಡಿ ಮಾಡುವ ಪ್ರಯತ್ನಗಳಿಗೆ ಸರ್ಕಾರಿ ಅಧಿಕಾರಿಗಳು ಮತ್ತು ಪೊಲೀಸರ ʼಬಲʼದ ಕುಮ್ಮಕ್ಕು ಸಿಕ್ಕಿದೆ. ಹಾಗಾಗಿ, ಸುಮಾರು 6,000 ಮೀನುಗಾರರ ಕುಟುಂಬಗಳು ಮತ್ತು ಒಟ್ಟು ಸುಮಾರು 23,500 ಮೀನುಗಾರರ ಬದುಕು ಕೊಚ್ಚಿ ಹೋಗುವ ಆತಂಕ ಎದುರಾಗಿದೆ.
ಏನಿದು HPPL ಯೋಜನೆ?
ಸಾಗರ್ ಮಾಲಾ ಅಭಿವೃದ್ಧಿ ಯೋಜನೆಯ ಭಾಗವಾಗಿ ಹೈದರಾಬಾದ್ ಮೂಲಕ ಖಾಸಗಿ ಕಂಪನಿ ಹೊನ್ನಾವರದ ಶರಾವತಿ ನದಿ ಅಳಿವೆಯ ಸುತ್ತಮುತ್ತ ಬೃಹತ್ ಬಂದರು ನಿರ್ಮಾಣ ಕೈಗೆತ್ತಿಕೊಂಡಿದೆ. ಈ ಖಾಸಗಿ ಬಂದರು ಯೋಜನೆ ಕಾಸರಕೋಡು ಪಂಚಾಯ್ತಿ ವ್ಯಾಪ್ತಿಯ ಕಾಸರಕೋಡು, ಟೋಂಕಾ 1, ಟೋಂಕಾ 2, ಪಾವಿನಕುರ್ವೆ, ಮಲ್ಲುಕುರ್ವೆ ಮತ್ತು ಹೊನ್ನಾವರ ಗ್ರಾಮೀಣ ಎಂಬ ಐದು ಮೀನುಗಾರಿಕಾ ಗ್ರಾಮಗಳ 44 ಹೆಕ್ಟೇರ್ ಪ್ರದೇಶದಲ್ಲಿ ವ್ಯಾಪ್ತಿಯಲ್ಲಿ ವಿಸ್ತರಿಸಿದೆ.
ಮುಖ್ಯವಾಗಿ ಕಲ್ಲಿದ್ದಲು, ಕಬ್ಬಿಣ ಮತ್ತಿತರ ಅದಿರು ಸಾಗಣೆ ಸೇರಿದಂತೆ ವಾರ್ಷಿಕ ಸುಮಾರು ಐದು ಮಿಲಿಯನ್ ಮೆಟ್ರಿಕ್ ಟನ್ ಸರಕು ಸಾಗಣೆ ವಹಿವಾಟು ನಡೆಸುವ ಉದ್ದೇಶದ ಬಂದರು ನಿರ್ಮಾಣವಾಗಲಿದೆ. 2010ರಲ್ಲಿಯೇ ಬಂದರು ನಿರ್ಮಾಣದ ಕುರಿತು ಕರ್ನಾಟಕ ಸರ್ಕಾರ ಮತ್ತು ಖಾಸಗಿ ಸಂಸ್ಥೆ ನಡುವೆ ಒಪ್ಪಂದ ಏರ್ಪಟ್ಟಿತ್ತು. ಆಗಿನಿಂದಲೂ ಸ್ಥಳೀಯ ಮೀನುಗಾರರು ಈ ಯೋಜನೆಯ ವಿರುದ್ಧ ಹೋರಾಟ ನಡೆಸುತ್ತಲೇ ಇದ್ದಾರೆ. ಆದರೆ, 2016ರಲ್ಲಿ ಜಿಲ್ಲಾಧಿಕಾರಿಗಳ ನ್ಯಾಯಾಲಯ, ಯೋಜನೆಗಾಗಿ ಮೀನುಗಾರರ ಎತ್ತಂಗಡಿ ಮಾಡುವಂತೆ ಆದೇಶಿಸಿದ ಬಳಿಕ ಹೋರಾಟ ತೀವ್ರಗೊಂಡಿದೆ. ಸರ್ಕಾರ ಮತ್ತು ಕಂಪನಿಯ ಸೂಚನೆ ಮೇರೆಗೆ ಸ್ಥಳೀಯ ಪೊಲೀಸರು ಮತ್ತು ಕಂದಾಯ ಅಧಿಕಾರಿಗಳು ಮೀನುಗಾರರ ಎತ್ತಂಗಡಿಗೆ ಬಲಪ್ರಯೋಗ, ದಬ್ಬಾಳಿಕೆ, ಸುಳ್ಳು ಕೇಸು, ಮುಂತಾದ ಅಪ್ರಜಾಸತ್ತಾತ್ಮಕ ವರಸೆಗಳನ್ನು ಚಲಾಯಿಸುತ್ತಲೇ ಇದ್ದಾರೆ ಎಂಬುದು ಮೀನುಗಾರರ ಆರೋಪ.
ಪೊಲೀಸ್ ದೌರ್ಜನ್ಯ: ಹೋರಾಟ ತೀವ್ರ
ಕಾಸರಕೋಡು ಗ್ರಾಮ ವ್ಯಾಪ್ತಿಯ ಸಾವಿರಾರು ಮೀನುಗಾರರು ತಮ್ಮ ನೆಲೆ ಮತ್ತು ದುಡಿಮೆ ಎರಡಕ್ಕೂ ಸಂಚಕಾರ ಬಂದಿರುವ ಹಿನ್ನೆಲೆಯಲ್ಲಿ ನಿರಂತರ ಹೋರಾಟ ನಡೆಸಿಕೊಂಡೇ ಬಂದಿದ್ದರೂ, ಪೊಲೀಸರು ಲಾಠಿ ಚಾರ್ಜ್, ಸುಳ್ಳು ಪ್ರಕರಣ ದಾಖಲಿಸುವುದು, ಹೋರಾಟಗಾರರಿಗೆ ರೌಡಿ ಶೀಟರ್ ಪಟ್ಟ ಕಟ್ಟುವುದು, ವಿದ್ಯಾವಂತ ಯುವಕರ ಮೇಲೆ ದುರುದ್ದೇಶದ ಕೇಸು ದಾಖಲಿಸಿ ಅವರ ಶಿಕ್ಷಣ ಮತ್ತು ಉದ್ಯೋಗಕ್ಕೆ ಸಂಚಕಾರ ತರುವುದು, ಮಹಿಳೆಯರ ಮೇಲೆ ದಬ್ಬಾಳಿಕೆ, ಹೀಗೆ ನೂರೆಂಟು ರೀತಿಯ ಕಿರುಕುಳಗಳು ನಿರಂತರವಾಗಿ ನಡೆಯುತ್ತಿವೆ ಎಂಬ ಸಂಗತಿಗಳು ಮುಖ್ಯವಾಹಿನಿ ಮಾಧ್ಯಮಗಳಲ್ಲಿ ವರದಿಯಾಗಿದ್ದು ವಿರಳ.
ಸೂರು ಮತ್ತು ಹೊಟ್ಟೆಪಾಡಿನ ದುಡಿಮೆ ಉಳಿಸಿಕೊಳ್ಳಲು ಹೋರಾಟ ನಡೆಸುತ್ತಿದ್ದ ಮೀನುಗಾರರ ಮೇಲೆ ಕಳೆದ ಜನವರಿಯಲ್ಲಿ ಪೊಲೀಸರು ಏಕಾಏಕಿ ಲಾಠಿ ಪ್ರಹಾರ ನಡೆಸಿ 300ಕ್ಕೂ ಹೆಚ್ಚು ಜನರ ಮೇಲೆ ಪ್ರಕರಣ ದಾಖಲಿಸಿ, 18 ಕ್ಕೂ ಹೆಚ್ಚು ಮಂದಿಯನ್ನು ಬಂಧಿಸಿ ದಬ್ಬಾಳಿಕೆ ನಡೆಸಿದರು. ಅದೂ ಕೂಡ ಉಪವಿಭಾಗಾಧಿಕಾರಿಗಳ ಉಸ್ತುವಾರಿಯಲ್ಲೇ ಈ ದಬ್ಬಾಳಿಕೆ ನಡೆಯಿತು ಎಂದು ಹೇಳುತ್ತಾರೆ ಮೀನುಗಾರರು.
ಸತ್ಯಶೋಧನಾ ವರದಿ ಬಿಚ್ಚಿಟ್ಟ ಸಂಗತಿ
ಆದರೆ, ಮೀನುಗಾರರು ಮಾತ್ರ ನ್ಯಾಯಕ್ಕಾಗಿನ ತಮ್ಮ ಹೋರಾಟವನ್ನು ಮಾತ್ರ ಕೈಬಿಟ್ಟಿಲ್ಲ. ಅವರ ಆ ನಿರಂತರ ಹೋರಾಟದ ಕೆಚ್ಚಿನ ಫಲವಾಗಿಯೇ ಕಳೆದ ವರ್ಷದ ಮಾರ್ಚ್ ನಲ್ಲಿ ಮುಂಬೈನ ಹಿರಿಯ ಪತ್ರಕರ್ತರು, ವಕೀಲರನ್ನೊಳಗೊಂಡ ಮೂವರ ಸತ್ಯಶೋಧನಾ ಸಮಿತಿ ಕಾಸರಕೋಡು ಪಂಚಾಯ್ತಿಯ ಮೀನುಗಾರರ ಹೋರಾಟದ ಕುರಿತು ವಾಸ್ತವ ಸಂಗತಿಗಳನ್ನು ಜಗತ್ತಿನ ಮುಂದಿಡಲು ಮುಂದಾಯಿತು.
ಮುಂಬೈನ ಹಿರಿಯ ಪತ್ರಕರ್ತೆ ಪಮೇಲಾ ಪಿಲಿಪೋಸ್, ಮತ್ತೊಬ್ಬ ಹಿರಿಯ ಪತ್ರಕರ್ತ ಅಮಿತ್ ಸೇನ್ ಗುಪ್ತಾ ಮತ್ತು ಬಾಂಬೆ ಹೈಕೋರ್ಟ್ ವಕೀಲೆ ಲಾರಾ ಜೆಸಾನಿ ಅವರ ತಂಡ ನಡೆಸಿದ ಸತ್ಯಶೋಧನಾ ವರದಿ ಇತ್ತೀಚೆಗೆ ಬಿಡುಗಡೆಯಾಗಿದ್ದು, ಮೀನುಗಾರರ ಬದುಕು, ಆಲಿವ್ ರಿಡ್ಲೆ ಕಡಲಾಮೆಗಳ ಅಸ್ತಿತ್ವ, ಶರಾವತಿ ಅಳಿವೆಯ ಜೀವಪರಿಸರ ಸೇರಿ ಇಡೀ ಪರಿಸರಕ್ಕೆ ತಂದೊಡ್ಡಿರುವ ಸಂಚಕಾರ ಮತ್ತು ಖಾಸಗಿ ಕಂಪನಿಯ ಬೆನ್ನಿಗೆ ನಿಂತಿರುವ ಆಡಳಿತ ಮತ್ತು ಪೊಲೀಸ್ ವ್ಯವಸ್ಥೆ ನಡೆಸುತ್ತಿರುವ ಮಾನವ ಹಕ್ಕುಗಳ ಉಲ್ಲಂಘನೆಯ ವಿವರಗಳನ್ನು ಬಯಲುಮಾಡಿದೆ.
ಕಂಪನಿಯ ಅನುಕೂಲಕ್ಕಾಗಿ ಎಚ್ ಟಿಎಲ್ ಬದಲು!
“ಎಚ್ ಪಿಪಿಎಲ್ ಕಂಪನಿಯ ಅನುಕೂಲಕ್ಕಾಗಿ ಸರ್ಕಾರ ಮತ್ತು ಕರ್ನಾಟಕ ರಾಜ್ಯ ಕರಾವಳಿ ವಲಯ ನಿರ್ವಹಣಾ ಪ್ರಾಧಿಕಾರ(KSCZMA)ಗಳು ಸಮುದ್ರದ ಹೈ ಟೈಡ್ ಲೈನ್ (HTL)ನನ್ನು ಹೊಸದಾಗಿ ಗುರುತಿಸುತ್ತಿವೆ. ಈ ಮೊದಲು ಗುರುತಿಸಲಾಗಿದ್ದ ಸ್ಥಳಕ್ಕಿಂತ 200 ಮೀ. ಕಡಿತ ಮಾಡಿ ಕಂಪನಿಗೆ ಅನುಕೂಲ ಮಾಡಿಕೊಡಲಾಗಿದೆ ಎಂಬುದು ʼದ ಫೆಡರಲ್ ಕರ್ನಾಟಕʼದ ಜೊತೆ ಮಾತನಾಡಿದ ಮೀನುಗಾರರ ಪರ ಹೋರಾಟಗಾರ ಪ್ರಕಾಶ್ ಮೇಸ್ತಾ ಆರೋಪಿಸಿದರು.
ಹೈ ಟೈಡ್ ಲೈನ್ ಬದಲಾಯಿಸಿ ಕಂಪನಿಗೆ ಬೃಹತ್ ರಸ್ತೆ ನಿರ್ಮಾಣಕ್ಕೆ ಅವಕಾಶ ಮಾಡಿಕೊಟ್ಟಿರುವುದರಿಂದ ಆ ರಸ್ತೆ ಈಗ 600 ಮೀನುಗಾರರ ಕುಟುಂಬಗಳಿಗೆ ಸಿಆರ್ ಝಡ್ ನೀಡಿದ್ದ ನಿವೇಶನಗಳ ಮೇಲೆಯೇ ಹಾದುಹೋಗಲಿದೆ. ಆ ಕುಟುಂಬಗಳು ಅಕ್ಷರಶಃ ಬೀದಿಪಾಲಾಗಲಿವೆ ಎಂಬುದು ಮೇಸ್ತಾ ಅವರ ಆತಂಕ.
“ಚತುಷ್ಪತ ರಸ್ತೆ ನಿರ್ಮಾಣವಾಗುವ ಜಾಗದಲ್ಲೇ ಕರ್ನಾಟಕ ಸರ್ಕಾರ ಆಶ್ರಯ ಯೋಜನೆಯಡಿಯಲ್ಲಿ ನಿರ್ಮಾಣ ಮಾಡಿರುವ 600 ಕ್ಕು ಹೆಚ್ಚು ಮೀನುಗಾರರ ಮನೆಗಳಿವೆ. ರಸ್ತೆ ನಿರ್ಮಾಣವಾದರೆ ಬಡ ಮೀನುಗಾರರಿಗೆ ಸರ್ಕಾರವೇ ಕಟ್ಟಿಕೊಟ್ಟಿರುವ ಆ ಮನೆಗಳಲ್ಲು ಬಹುತೇಕ ನೆಲಸಮವಾಗಲಿವೆ ಎಂಬುದು ಮೀನುಗಾರರ ಆಕ್ರೋಶಕ್ಕೆ ಮೂಲ ಕಾರಣ. ಜೊತೆಗೆ ಬಂದರು ಚಟುವಟಿಕೆ ಆರಂಭವಾದರೆ ಆ ಪ್ರದೇಶದಲ್ಲಿ ಒಣ ಮೀನು ಉದ್ಯಮ ಚಟುವಟಿಕೆಗೆ ಅಂತ್ಯ ಹಾಡಬೇಕಾಗುತ್ತದೆ. ಅದರಿಂದಾಗಿ ಒಣ ಮೀನು ಉದ್ಯಮವನ್ನೇ ನಂಬಿಕೊಂಡು ಬದುಕುತ್ತಿರುವ ಸಾವಿರಾರು ಮೀನುಗಾರ ಮಹಿಳೆಯರ ದುಡಿಮೆಯನ್ನೇ ಕಿತ್ತುಕೊಂಡಂತಾಗುತ್ತದೆ” ಎಂದು ವಿವರಿಸುತ್ತಾರೆ ಮೀನುಗಾರರ ಹೋರಾಟಕ್ಕೆ ದನಿಗೂಡಿಸಿರುವ ಮಂಗಳೂರಿನ ಸಾಮಾಜಿಕ ಹೋರಾಟಗಾರ್ತಿ ವಿದ್ಯಾ ದಿನಕರ್.
ʼದ ಫೆಡರಲ್ ಕರ್ನಾಟಕʼ ಜೊತೆ ಮಾತನಾಡಿದ ಅವರು, “ಸಾವಿರಾರು ಹೆಣ್ಣುಮಕ್ಕಳು ಮೀನು ಒಣಗಿಸಿ ಮಾರಾಟ ಮಾಡುವ ಮೂಲಕ ತಮ್ಮ ಸಂಸಾರಗಳನ್ನು ನಡೆಸುತ್ತಿದ್ದರು. ಕಾಸರಕೋಡದ ಕಡಲ ತಡಿಯ ಸುಮಾರು ನೂರು ಎಕರೆ ಮರಳ ದಿಬ್ಬವೇ ಮೀನು ಒಣಗಿಸುವ ಜಾಗವಾಗಿತ್ತು. ಆ ಕಾರಣದಿಂದಲೇ ಹೊನ್ನಾವರ ಒಣ ಮೀನು ಉದ್ಯಮ ದೇಶವ್ಯಾಪಿ ಜನಪ್ರಿಯ. ಆದರೆ, ಈಗ ಖಾಸಗಿ ಕಂಪನಿಗಾಗಿ ಈ ಇಡೀ ಆ ಜಾಗವನ್ನು ಕಿತ್ತುಕೊಂಡಿರುವ ಸರ್ಕಾರ, ಬಡ ಮೀನುಗಾರ ಹೆಣ್ಣುಮಕ್ಕಳ ಬದುಕಿಗೆ ಬೆಂಕಿ ಇಟ್ಟಿದೆ. ಈ ಅನ್ಯಾಯದ ವಿರುದ್ಧ ಜನಪರವಾಗಿ ನಿಲ್ಲಬೇಕಿದ್ದ ಜನಪ್ರತಿನಿಧಿಗಳು ಈಗ ಜನರ ಕೈಗೇ ಸಿಗದೆ ತಪ್ಪಿಸಿಕೊಳ್ಳುತ್ತಿದ್ದಾರೆ. ಮೀನುಗಾರರಿಗೆ ನ್ಯಾಯ ಕೊಡಿಸಿ ಎಂದು ಮುಖ್ಯಮಂತ್ರಿಗಳಿಗೆ ಮನವಿ ಮಾಡಲು ಬೆಂಗಳೂರಿಗೆ ಹೋದ ಮೀನುಗಾರರ ನಿಯೋಗಕ್ಕೆ ಸ್ಥಳೀಯ ಶಾಸಕರಾದ ಮೀನುಗಾರಿಕಾ ಸಚಿವ ಮಂಕಾಳ ವೈದ್ಯ ಕೂಡ ಸರಿಯಾಗಿ ಸ್ಪಂದಿಸಿಲ್ಲ” ಎಂದು ಅವರು ವಿವರಿಸಿದರು.
ಮಂಕಾಳ ವೈದ್ಯ ಯೂ ಟರ್ನ್?
ಈ ಮೊದಲು ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಮೀನುಗಾರರ ಹೋರಾಟದ ಪರ ದನಿ ಎತ್ತುತ್ತಿದ್ದ ಹಾಲಿ ಸಚಿವ ಮಂಕಾಳ ವೈದ್ಯ, ಇದೀಗ ಕಂಪನಿ ಪರವಾಗೇ ವಕಾಲತು ವಹಿಸತೊಡಗಿದ್ದಾರೆ. ಮೀನುಗಾರರ ಹಿತ ಕಾಯುವೆ, ಅವರ ಹೋರಾಟಕ್ಕೆ ಬೆಂಬಲವಿದೆ. ಗೆದ್ದು ಬಂದರೆ ಅವರ ಸಮಸ್ಯೆ ಬಗೆಹರಿಸಿ ನ್ಯಾಯ ಕೊಡಿಸುವೆ ಎಂದು ಚುನಾವಣೆಗೆ ಮುನ್ನ ಹೇಳಿದ್ದ ಅವರು, ಇದೀಗ ಮೀನುಗಾರರೇ ಮನೆ ಬಾಗಿಲಿಗೆ ಹೋದರೂ ಭೇಟಿಯಾಗದೆ ಸಾಗಹಾಕುತಿದ್ದಾರೆ ಎಂಬ ಆಕ್ರೋಶ ಮೀನುಗಾರರದ್ದು.
ಕಂಪನಿಯ ಒತ್ತಡಕ್ಕೆ ಮಣಿದು ಜನಪ್ರತಿನಿಧಿಗಳು, ರಾಜಕೀಯ ಮುಖಂಡರು ಮೀನುಗಾರರ ಕೈಬಿಟ್ಟಿದ್ದಾರೆ. ಈ ಹಿಂದೆ ವಿಧಾನಸಭಾ ಚುನಾವಣೆಗೆ ಮುನ್ನ ಹೊನ್ನಾವರಕ್ಕೆ ಆಗಮಿಸಿದ್ದ ಹಾಲಿ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಕೂಡ ಮೀನುಗಾರರ ಹೋರಾಟಕ್ಕೆ ಬೆಂಬಲ ನೀಡಿದ್ದರು. "ರಸ್ತೆ ನಿರ್ಮಾಣಕ್ಕಾಗಿ ಬಡ ಮೀನುಗಾರರ ಮನೆ ನೆಲಸಮವಾಗಲು ಬಿಡುವುದಿಲ್ಲ, ನೀವು ರಸ್ತೆ ಕಾಮಗಾರಿಗೆ ಅವಕಾಶ ಕೊಡಲೇಬೇಡಿ. ರಸ್ತೆಗೆ ಅಡ್ಡ ಮಲಗಿ ಕೆಲಸ ನಿಲ್ಲಿಸಿ. ನಾವಿದ್ದೇವೆ" ಎಂದು ಅಂದು ಮಾತುಕೊಟ್ಟಿದ್ದವರು ಈಗ ಜಾಣ ಮೌನಕ್ಕೆ ಜಾರಿದ್ದಾರೆ.
ಜನಪ್ರತಿನಿಧಿಗಳು, ಮುಖಂಡರು ಹೀಗೆ ಯೂ ಟರ್ನ್ ಹೊಡೆದರೂ, ಹೋರಾಟ ನಿಲ್ಲುವುದಿಲ್ಲ. ಸರ್ಕಾರ ಪೊಲೀಸರ ಮೂಲಕ ಹೋರಾಟ ಹತ್ತಿಕ್ಕಲು ನಡೆಸುವ ಪ್ರಯತ್ನಗಳು ನಮ್ಮನ್ನು ಹಿಮ್ಮೆಟ್ಟಿಸಲಾರವು. ಸತ್ಯಶೋಧನಾ ವರದಿ ನಮ್ಮ ಕಾಳಜಿಗಳ ಬಗ್ಗೆ ಜಗತ್ತಿನ ಕಣ್ಣು ತೆರೆಸುವ ವಿಶ್ವಾಸವಿದೆ ಎನ್ನುತ್ತಾರೆ ಹೋರಾಟಗಾರ ಪ್ರಕಾಶ್ ಮೇಸ್ತಾ.
ಈ ನಡುವೆ, ಕಾಸರಕೋಡು ಬೀಚಿನಲ್ಲಿ ಭಾನುವಾರ(ಫೆ.3)ರ ರಾತ್ರಿ ಕೂಡ ಆಲಿವ್ ರಿಡ್ಲೆ ಆಮೆಗಳು ಬಂದು ಮೊಟ್ಟೆ ಇಟ್ಟು ಹೋಗಿವೆ. ಹಾಗೇ ಒಂದು ಡಾಲ್ಫಿನ್ ಸಾವು ಕಂಡಿದೆ! ಆದರೆ, ಆಮೆಗಳು, ಡಾಲ್ಫಿನ್‌ಗಳು ಹೋರಾಟ ನಡೆಸಲಾರವು. ಅವುಗಳ ಪರ ದನಿ ಎತ್ತುವ ಮೀನುಗಾರರ ದನಿಗೆ ಸರ್ಕಾರ ಕಿವಿಗೊಡಲಾರದು!