ಇಂದು ರಾಷ್ಟ್ರೀಯ ಕ್ರೀಡಾ ದಿನ: ಪರದೆ ಆಚೆಯೂ ಕ್ರೀಡೆಯಲ್ಲಿ ಮಿಂಚಿದ ಸಿನಿತಾರೆಯರು
ಕ್ರೀಡಾ ದಿನಾಚರಣೆ ಕ್ರೀಡಾಪಟುಗಳಿಗೆ ಮಾತ್ರ ಸೀಮಿತವಾಗಿಲ್ಲ. ಬಾಲಿವುಡ್‌ನ ಕೆಲವು ಪ್ರಮುಖ ತಾರೆಯರೂ ಕೂಡ ಕ್ರೀಡಾ ಕ್ಷೇತ್ರಕ್ಕೆ ತಮ್ಮದೇ ಆದ ಕೊಡುಗೆ ನೀಡುತ್ತಿದ್ದಾರೆ.;
ಕ್ರೀಡೆಯ ಮೇಲಿನ ತಾರೆಯರ ಪ್ರೀತಿ
ಭಾರತದ ಹಾಕಿ ದಂತಕಥೆ ಮೇಜರ್ ಧ್ಯಾನ್ ಚಂದ್ ಜನ್ಮದಿನದ ಅಂಗವಾಗಿ ಶುಕ್ರವಾರ ದೇಶಾದ್ಯಂತ 'ರಾಷ್ಟ್ರೀಯ ಕ್ರೀಡಾ ದಿನ' ಆಚರಿಸಲಾಗುತ್ತಿದೆ.
ಇದು ಕೇವಲ ಕ್ರೀಡಾಪಟುಗಳಿಗೆ ಮಾತ್ರ ಸೀಮಿತವಾಗಿಲ್ಲ. ಸಿನಿರಂಗದ ಕೆಲವು ಪ್ರಮುಖ ತಾರೆಯರೂ ಕೂಡ ಕ್ರೀಡಾ ಕ್ಷೇತ್ರಕ್ಕೆ ತಮ್ಮದೇ ಆದ ಕೊಡುಗೆ ನೀಡುತ್ತಿದ್ದಾರೆ. ಅನೇಕ ಸೆಲೆಬ್ರಿಟಿಗಳು ಕ್ರೀಡೆ ಆಧರಿತವಾದ ಚಿತ್ರ ಮಾಡುವುದಷ್ಟೇ ಅಲ್ಲ, ಅವರ ಗುರುತಿನ ಭಾಗವಾಗಿಯೂ ಇದೆ. ಕ್ರೀಡಾಭಿಮಾನದಿಂದಲೇ 'ಚಕ್ ದೇ ಇಂಡಿಯಾ', '83', ʼಲಗಾನ್ʼ ಚಿತ್ರಗಳು ತೆರೆಯ ಮೇಲೆ ಮೂಡಿ ಬಂದಿವೆ. ಕ್ರೀಡೆಯನ್ನು ಅತೀವವಾಗಿ ಪ್ರೀತಿಸಿ ಪೋಷಿಸಿದ ನಟ-ನಟಿಯರು ಹಲವರು. ಪರದೆಯ ಆಚೆಗೆ ಕ್ರೀಡೆಯನ್ನು ತಮ್ಮ ಜೀವನದ ಭಾಗವಾಗಿಸಿಕೊಂಡ ತಾರೆಯರ ಕಥನ ಇಲ್ಲಿದೆ.
ಡಾ.ಶಿವರಾಜ್ ಕುಮಾರ್
ನಟ ಶಿವರಾಜ್‌ಕುಮಾರ್ ವಾರಕ್ಕೆ ಎರಡು ಬಾರಿಯಾದರೂ ಕ್ರಿಕೆಟ್ ಆಡಲು ಸಮಯ ಮೀಸಲಿಡುತ್ತಾರೆ. ತಮ್ಮ ಸ್ನೇಹಿತರೊಂದಿಗೆ ತೆರಳಿ ಕ್ರಿಕೆಟ್ ಆಡುತ್ತಾರೆ. ಸಿನಿ ತಾರೆಯರ ಚುಟುಕು ಕ್ರಿಕೆಟ್ ಪಂದ್ಯವಾದ ಸಿಸಿಎಲ್‌ನಲ್ಲೂ ಭಾಗವಹಿಸಿ ತಮ್ಮ ಅಭಿಮಾನ ಮೆರೆದಿದ್ದರು. ಇದಲ್ಲದೇ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದಿದ್ದ ಟೀಂ ಇಂಡಿಯಾದ ಹಲವು ಪಂದ್ಯಗಳಲ್ಲಿ ವೀಕ್ಷಕ ವಿವರಣೆ ನೀಡಿದ್ದರು.
ದೀಪಿಕಾ ಪಡುಕೋಣೆ - ಬ್ಯಾಡ್ಮಿಂಟನ್
ಪ್ರಸಿದ್ಧ ಬ್ಯಾಡ್ಮಿಂಟನ್ ದಂತಕತೆ ಪ್ರಕಾಶ್ ಪಡುಕೋಣೆ ಅವರ ಪುತ್ರಿಯಾಗಿರುವ ನಟಿ ದೀಪಿಕಾ ಪಡುಕೋಣೆ ಕೂಡ ತಂದೆಯಂತೆ ಬ್ಯಾಂಡ್ಮಿಂಟನ್‌ನಲ್ಲಿ ಮಿಂಚಿದ್ದರು. ದೀಪಿಕಾ ಅವರು ಬಾಲಿವುಡ್‌ಗೆ ಬರುವ ಮೊದಲು ರಾಜ್ಯಮಟ್ಟದ ಬ್ಯಾಡ್ಮಿಂಟನ್ ಚಾಂಪಿಯನ್ ಕೂಡ ಆಗಿದ್ದರು ಎಂಬುದು ವಿಶೇಷ. ಅವರ ಸಿನಿ ಯಶಸ್ಸು ಹಾಗೂ ನಟನಾ ಪ್ರತಿಭೆಯು ಕ್ರೀಡೆಯಿಂದ ಬಂದ ಶಿಸ್ತು ಮತ್ತು ಸ್ಥಿತಿಸ್ಥಾಪಕತ್ವದಿಂದ ಸಾಧ್ಯವಾಗಿದೆ. ಪ್ರಕಾಶ್ ಪಡುಕೋಣೆ ಅವರ ಮಗಳಾಗಿ, ಬ್ಯಾಡ್ಮಿಂಟನ್ ಕ್ರೀಡೆ ದೀಪಿಕಾ ಅವರ ರಕ್ತದಲ್ಲಿ ಹರಿಯುತ್ತಿದೆ.
ರಣದೀಪ್ ಹೂಡಾ - ಕುದುರೆ ಸವಾರಿ ಮತ್ತು ಪೋಲೋ
ನಟ ರಣದೀಪ್ ಹೂಡಾ ಅವರು ಪೋಲೋ ಮತ್ತು ಶೋ ಜಂಪಿಂಗ್‌ನಂತಹ ಕುದುರೆ ಸವಾರಿ ಕ್ರೀಡೆಗಳಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಮಿಂಚಿದ್ದರು. ಪೋಲೋದಲ್ಲಿ ಚಾಂಪಿಯನ್ ಮತ್ತು ವೃತ್ತಿಪರ ಶೋ ಜಂಪರ್ ಕೂಡ ಆಗಿದ್ದಾರೆ. ಚಿಕ್ಕ ವಯಸ್ಸಿನಿಂದಲೂ ಕ್ರೀಡಾ ಉತ್ಸಾಹಿಯಾಗಿರುವ ಅವರು, ಕುದುರೆ ಸವಾರಿಯಲ್ಲೂ ಪ್ರವೀಣರು. ರಾಷ್ಟ್ರಮಟ್ಟದಲ್ಲಿ ಹಲವು ಪದಕಗಳನ್ನು ಗೆದ್ದಿದ್ದಾರೆ. ಶೋ ಜಂಪಿಂಗ್‌ನಲ್ಲಿ ಹಲವರಿಗೆ ತರಬೇತಿ ಕೂಡ ನೀಡಿದ್ದಾರೆ.
ರಣಬೀರ್ ಕಪೂರ್ - ಫುಟ್ಬಾಲ್
ರಣಬೀರ್ ಕಪೂರ್ ಅವರಿಗೆ ಫುಟ್‌ಬಾಲ್ ಕೇವಲ ಹವ್ಯಾಸವಲ್ಲ, ಅದು ಅವರ ಜೀವನದ ಅವಿಭಾಜ್ಯ ಅಂಗ. ಅವರು ʻಆಲ್ ಸ್ಟಾರ್ಸ್ ಫುಟ್‌ಬಾಲ್ ಕ್ಲಬ್" (ASFC) ನ ಸಹ-ಮಾಲೀಕರಾಗಿ ಮತ್ತು ಸದಸ್ಯರಾಗಿ ಸಮಾಜ ಸೇವಾ ಕಾರ್ಯಗಳಲ್ಲೂ ತೊಡಗಿಸಿಕೊಂಡಿದ್ದಾರೆ.
ರಣವೀರ್ ಸಿಂಗ್ - ಬ್ಯಾಸ್ಕೆಟ್‌ಬಾಲ್
ಸಿನಿಮಾರಂಗಕ್ಕೆ ಬರುವ ಬಹಳ ಹಿಂದೆಯೇ ರಣವೀರ್ ಸಿಂಗ್ ಅವರು ಬ್ಯಾಸ್ಕೆಟ್‌ಬಾಲ್ ಕ್ರೀಡೆಯಲ್ಲಿ ತೊಡಗಿಸಿಕೊಂಡಿದ್ದರು. ಅವರ ಉತ್ಸಾಹದಿಂದಲೇ ಭಾರತದಲ್ಲಿ NBA ಬ್ರಾಂಡ್ ರಾಯಭಾರಿ ಎಂಬ ಬಿರುದು ತಂದುಕೊಟ್ಟಿತು. ಇದು ಅಸಂಖ್ಯಾತ ಯುವಕರನ್ನು ಕ್ರೀಡೆಯಲ್ಲಿ ಭಾಗವಹಿಸಲು ಪ್ರೇರೇಪಿಸಿತು.
ತಾಪ್ಸಿ ಪನ್ನು - ಸ್ಕ್ವಾಷ್
ತಾಪ್ಸಿ ಪನ್ನು ಅವರು ತಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕಾಗಿ ಸ್ಕ್ವಾಷ್ ಆಡುತ್ತಾರೆ. ಇದು ಅವರನ್ನು ಚುರುಕು ಮತ್ತು ಗಮನ ಹರಿಸುವಂತೆ ಮಾಡಿದೆ. ಆಟದ ಶಿಸ್ತನ್ನು ಅವರು ತಮ್ಮ ನಟನಾ ವೃತ್ತಿಗೂ ಅಳವಡಿಸಿಕೊಂಡಿದ್ದಾರೆ.
ಜಾನ್ ಅಬ್ರಹಾಂ - ಸಾಕರ್ ಮತ್ತು ಬ್ಯಾಸ್ಕೆಟ್‌ಬಾಲ್
ಫಿಟ್‌ನೆಸ್ ಐಕಾನ್ ಆಗಿರುವ ಜಾನ್ ಅಬ್ರಹಾಂ ಅವರು ಫುಟ್‌ಬಾಲ್ ಮತ್ತು ಬ್ಯಾಸ್ಕೆಟ್‌ಬಾಲ್‌ಗಳಲ್ಲಿ ಸಕ್ರಿಯರಾಗಿದ್ದಾರೆ. ಕೇವಲ ಆಡುವುದಷ್ಟೇ ಅಲ್ಲ, ಭಾರತದ ಯುವಕರು ಆರೋಗ್ಯಕರ ಜೀವನ ನಡೆಸಲು ಪ್ರೇರೇಪಿಸುವ ಕ್ರೀಡಾ ಉಪಕ್ರಮಗಳನ್ನೂ ಅವರು ಬೆಂಬಲಿಸಿದ್ದಾರೆ.