Cyber Crime| 5 ಗಂಟೆ ಡಿಜಿಟಲ್‌ ಬಂಧನಕ್ಕೆ ಸಿಲುಕಿದ ಬೆಂಗಳೂರು ಯುವತಿ!

ಬೆಂಗಳೂರಿನ ಯುವತಿಯೊಬ್ಬರು ಸೈಬರ್ ಅಪರಾಧಿಗಳೊಂದಿಗೆ ತಮ್ಮ ದುಃಸ್ವಪ್ನದ ಅನುಭವವನ್ನು ಹಂಚಿಕೊಂಡಿದ್ದಾಳೆ. ಡಿಜಿಟಲ್ ಬಂಧನದಲ್ಲಿ ಸಿಲುಕಿರುವಾಗ, ಏನು ಮಾಡಬೇಕು ಎಂಬ ಬಗ್ಗೆ ನಗರ ಪೊಲೀಸರು ಕೆಲವು ಸಲಹೆ ನೀಡಿದ್ದಾರೆ. ಸೈಬರ್ ಅಪರಾಧ ಸಹಾಯವಾಣಿ ಸಂಖ್ಯೆ 1930 ಅಥವಾ ರಾಷ್ಟ್ರೀಯ ಸೈಬರ್ ಅಪರಾಧ ವರದಿ ಪೋರ್ಟಲ್ (https://cybercrime.gov.in/) ನಲ್ಲಿ ದೂರು ನೀಡಬೇಕು ಎಂದಿದ್ದಾರೆ.;

Update: 2024-07-26 08:42 GMT
ಸೈಬರ್ ವಂಚನೆ ಸಂಭವಿಸಿದಾಗ ʻಸ್ಟಾಕ್‌ಹೋಮ್ ಸಿಂಡ್ರೋಮ್‌ನ ಮಸುಕಾದ ಅಭಿವ್ಯಕ್ತಿʼ ಇರುತ್ತದೆ. ಜನ ಇನ್ನೊಂದು ತುದಿಯಲ್ಲಿರುವ ಕರೆ ಮಾಡುವವರನ್ನು ನಂಬುತ್ತಾರೆ.

ಬೆಂಗಳೂರಿನ ಭಾರಿ ಕಾರ್ಪೊರೇಟ್ ಹೌಸ್‌ನ ಉದ್ಯೋಗಿ ಸುನೀತಾ (26 ವರ್ಷ, ಹೆಸರು ಬದಲಿಸಲಾಗಿದೆ) ಅವರಿಗೆ ಮಂಗಳವಾರ (ಜುಲೈ 25) ಮತ್ತೊಂದು ಬಿಡುವಿಲ್ಲದ ಕೆಲಸದ ದಿನವಾಗಿತ್ತು.

ಸಾಲುಸಾಲು ಸಭೆಗಳಿದ್ದವು . ಆದರೆ, ಕಂಪನಿಯ ಕಚೇರಿ ಕೊಠಡಿಯಲ್ಲಿ  ಕುಳಿತಿದ್ದ ಆಕೆಗೆ ಬಂದ ಕರೆಯು ದುಃಸ್ವಪ್ನವಾಗಿ ಮಾರ್ಪಟ್ಟಿತು. 

'ದೆಹಲಿ ಕಸ್ಟಮ್ಸ್'ನಿಂದ ಕರೆ

ಆಗ ಬೆಳಿಗ್ಗೆ 10.30. ದೆಹಲಿಯ ಕಸ್ಟಮ್ಸ್ ಕಚೇರಿಯಿಂದ ಮಾತಾಡುತ್ತಿದ್ದೇನೆ ಎಂದು ಕರೆ ಮಾಡಿದಾತ ಹೇಳಿದ್ದಲ್ಲದೆ "ಸುನೀತಾ ಅವರ ಹೆಸರಿನ ನಕಲಿ ಎಟಿಎಂ ಕಾರ್ಡ್‌ಗಳು, ನಕಲಿ ಪಾಸ್‌ಪೋರ್ಟ್‌ಗಳು ಮತ್ತು ಎಂಡಿಎಂಎ (3,4-ಮಿಥಲೀನ್ ಡೈಆಕ್ಸಿ ಮೆಥಾಂಫೆಟಮೈನ್‌, ಸಂತೋಷಕೂಟದಲ್ಲಿ ಬಳಸುವ ಮತ್ತುಕಾರಕ) ಇರುವ ಪಾರ್ಸೆಲ್‌ ಅನ್ನು ದೆಹಲಿಯ ವಿಮಾನ ನಿಲ್ದಾಣದಲ್ಲಿ ವಶಪಡಿಸಿಕೊ‌ಳ್ಳಲಾಗಿದೆ. ಪಾರ್ಸೆಲ್ ಅನ್ನು ಮಲೇಷ್ಯಾಕ್ಕೆ ಕಳುಹಿಸಲು ಕಾಯ್ದಿರಿಸಲಾಗಿದೆʼ  ಎಂದು ವಿವರಿಸಿದ!  ಬಳಿಕ ಆ ಪಾರ್ಸೆಲ್‌ ಸ್ವೀಕರಿಸುವವರ ವಿಳಾಸ, ಪಾರ್ಸೆಲ್ ಐಡಿ, ವಹಿವಾಟು ಐಡಿ ಸಂಖ್ಯೆ ಇತ್ಯಾದಿಯನ್ನು ನೀಡಿದ. ಸಹಾಯಕ ಪೊಲೀಸ್ ಕಮಿಷನರ್ ಕೈಲಾಶ್ ಚಂದ್ ಎಂದು ಹೇಳಿಕೊಂಡ  ಆತ, ದೆಹಲಿ ಪೊಲೀಸ್ ಠಾಣೆಗೆ ಬರುವಂತೆ ಹೇಳಿದ.

ತಮ್ಮ 'ಆಘಾತಕಾರಿ ಅನುಭವ' ವನ್ನು ʼದ ಫೆಡರಲ್‌ʼ ಗೆ ವಿವರಿಸಿದ ಸುನೀತಾ, ʼನನಗೆ ಚಿಂತೆ ಶುರುವಾಯಿತು. ಅವರ ಹೆಸರನ್ನು ಗೂಗಲ್ ಮಾಡಿದಾಗ, ಲಿಂಕ್ಡ್‌ಇನ್‌ನಲ್ಲಿ ವಿವರ ಸಿಕ್ಕಿತು, ಅವರು ತಮ್ಮ ಪೊಲೀಸ್ ಬ್ಯಾಡ್ಜ್ ಸಂಖ್ಯೆಯನ್ನು ಹಂಚಿಕೊಂಡಿದ್ದರು. ನಾನು ಬೆಂಗಳೂರಿನಲ್ಲಿ ವಾಸಿಸುತ್ತಿದ್ದೇನೆ ಎಂದು ಹೇಳಿದಾಗ, ಅವರು ನನ್ನ ಕರೆಯನ್ನು ದೆಹಲಿ ಪೊಲೀಸ್ ಹಾಟ್‌ಲೈನ್ ಸಂಖ್ಯೆಗೆ ವರ್ಗಾಯಿಸಿದರು,ʼ.

ವಿಡಿಯೋ ಕರೆ

ವಸಂತ್ ಕುಂಜ್ ಪೊಲೀಸ್ ಠಾಣೆಯ ಹೆಡ್ ಕಾನ್‌ಸ್ಟೆಬಲ್ ಎನ್ನಲಾದ ಸುನೀಲ್ ಕುಮಾರ್ (ಗೂಗಲ್ ಮಾಡಿದಾಗ, ವಸಂತ್ ಕುಂಜ್‌ನಲ್ಲಿ ಸುನೀಲ್ ಕುಮಾರ್ ಹೆಸರಿನವರು ಇದ್ದರು) ಎಂಬುವರು ಮಾತನಾಡಿ, ಸುನೀತಾ  ವಿರುದ್ಧ ಬೇರೆ ಪ್ರಕರಣಗಳಿವೆಯೇ ಎಂದು ಪರಿಶೀಲಿಸಬೇಕೆಂದು ಹೇಳಿದ.

ಸುನೀತಾ ಅವರಿಗೆ ವಿಡಿಯೋ ಕರೆಯಲ್ಲಿ ದೆಹಲಿ ಪೊಲೀಸ್‌ ಲಾಂಛನದ ಹಿನ್ನೆಲೆಯಲ್ಲಿ ಸಮವಸ್ತ್ರ ಧರಿಸಿದ್ದು ಕಂಡುಬಂದಿತು. ʻಅದು ಪೊಲೀಸ್‌ ಠಾಣೆಯಂತೆ ಕಾಣಿಸಿತು. ಹಿನ್ನೆಲೆಯಲ್ಲಿ ವಾಕಿ-ಟಾಕಿಯ ಶಬ್ದ ಕೇಳಿಸುತ್ತಿತ್ತು,ʼ ಎಂದು ಸುನೀತಾ ನೆನಪಿಸಿಕೊಂಡರು. ಸುನೀತಾ ವಿರುದ್ಧ ಮಾನವ ಕಳ್ಳಸಾಗಣೆ ಪ್ರಕರಣ ಇರುವುದನ್ನು ಹಾಗೂ ಪ್ರಕರಣದ ಸಂಖ್ಯೆಯನ್ನೂ ಆತ ಹೇಳಿದ.

ಭಯದಿಂದ ಸ್ಥಬ್ಧಳಾದೆ! ʻನಾನು ಭಯದಿಂದ ಸ್ತಬ್ಧಳಾದೆ. ಆಗ ಆತ ನನಗೆ ಎಚ್‌ಡಿಎಫ್‌ಸಿ ಅಧಿಕಾರಿ ಸಂಜಯ್ ಸಿಂಗ್ ಗೊತ್ತಿದ್ದಾರೆಯೇ ಎಂದು ಕೇಳಿದ. (ಸಂಜಯ್ ಸಿಂಗ್‌ ಹೆಸರೂ ಗೂಗಲ್ ಮಾಡಬಹುದು).  ಸಿಂಗ್ ಅವರು ಹೊಸ ಖಾತೆ ಆರಂಭಿಸಲು ನನ್ನ ವಿವರ ತೆಗೆದುಕೊಂಡಿದ್ದಾರೆ ಮತ್ತು ಮಾನವ ಕಳ್ಳಸಾಗಣೆ ಸೇರಿದಂತೆ ಅಕ್ರಮ ವ್ಯವಹಾರಗಳಿಗೆ ಅದನ್ನು ಬಳಸುತ್ತಿದ್ದರು. ನನಗೆ ವ್ಯವಹಾರದಲ್ಲಿ ಶೇ.10 ಪಾಲು ಕೊಡುತ್ತಿದ್ದರು. ಇದೊಂದು ದೊಡ್ಡ ಹಗರಣ," ಎಂದು ಸುನಿಲ್‌ ಎಂಬಾತ ಹೇಳಿದ," ಎನ್ನುತ್ತಾರೆ ಸುನೀತಾ.  "ನಾನು ದಿಗ್ಮೂಢಳಾದೆ ಮತ್ತು ಪ್ರತಿಭಟಿಸಿದೆ. ಆದರೆ, ಆ ವ್ಯಕ್ತಿ   ನಾನು ಅಪರಾಧಿ ಅಲ್ಲ ಎಂದು ಸಾಬೀತುಪಡಿಸಬೇಕು," ಎಂದು ಪೊಲೀಸ್‌ ಧಾಟಿಯಲ್ಲಿ ಒತ್ತಾಯಿಸಿದರು," ಎಂದು ತಮ್ಮ ಅನುಭವವನ್ನು ವಿವರಿಸಿದರು ಸುನೀತಾ.

ಆನಂತರ, ʻಸಿಬಿಐ ಅಧಿಕಾರಿʼ ಎಂದು ಹೇಳಿಕೊಂಡ  ಅನಿಲ್ ಯಾದವ್  ಫೋನ್‌ ಕರೆ ಮಾಡಿ ಸುನೀತಾ ಅವರನ್ನು "ವಿಚಾರಣೆಗೆ" ಒಳಪಡಿಸಿದ. ಮೃದು ಮಾತಿನ ಸುನೀತಾ ಅವರಿಗೆ ಜೋರಾಗಿ ಕಿರಿಚಾಡುತ್ತಲೇ ಮಾತನಾಡಿದ ಆತ,  ʻಮಾನವ ಕಳ್ಳಸಾಗಣೆ ಎಷ್ಟು ದೊಡ್ಡ ಅಪರಾಧ ಎಂದು ತಿಳಿದಿದೆಯೇ?ʼ ಎಂದು ಬೆದರಿಸಿದ.

ಸಂಭಾಷಣೆ ವಿಚಿತ್ರ ತಿರುವು ತೆಗೆದುಕೊಳ್ಳುತ್ತಿದೆ ಎಂದು ಸುನೀತಾ ಅವರಿಗೆ ಭಾಸವಾಯಿತು.  ಆಕೆಯ ಬಂಧನ ವಾರಂಟ್ ಮತ್ತು ನ್ಯಾಯಾಲಯದ ಆದೇಶಗಳ ಪ್ರತಿಯನ್ನು ವಾಟ್ಸಾಪ್‌ ಮೂಲಕ ಕಳುಹಿಸಿದ. ಇದರಿಂದ ಸುನೀತಾ ಬಹಳಷ್ಟು ಹೆದರಿದರು.

ಕಾನೂನು ಭಾಷೆ ಬಳಕೆ

 ಎಲ್ಲ ಸಾಕ್ಷ್ಯಾಧಾರಗಳು ಆಕೆಯ ವಿರುದ್ಧ ಇವೆ ಎಂದು ಬೆದರಿಕೆ ಹಾಕಿದ. ರಿಸರ್ವ್ ಬ್ಯಾಂಕಿನ ನೋಟರಿ ಪತ್ರವನ್ನು ಉಲ್ಲೇಖಿಸಿ, ಕಾನೂನಿನ ನುಡಿಗಟ್ಟುಗಳನ್ನು ಬಳಸುತ್ತಿರುವುದರಿಂದ ಅವರೆಲ್ಲಾ ಅಧಿಕಾರಿಗಳೆ ಆಗಿರಬೇಕು ಎಂದುಕೊಂಡೆ," ಎಂದು ತಮ್ಮ ಅಭಿಪ್ರಾಯ ಹಂಚಿಕೊಂಡರು ಸುನೀತಾ. 

ʻನನ್ನ ತಪ್ಪಿಲ್ಲವಾದರೂ ಇದೊಂದು ಕಾನೂನು ತೊಡಕು ಮತ್ತುಇದರಿಂದ ಹೇಗಾದರೂ ಪಾರಾಗಬೇಕೆಂದು ನಾನಂದುಕೊಂಡೆ.  ಅಷ್ಟರಲ್ಲಿ  ಆತ ತನ್ನ ಹೆಸರು (ಅನಿಲ್‌ ಯಾದವ್‌ ಮತ್ತು ಬ್ಯಾಡ್ಜ್‌ ಸಂಖ್ಯೆ) ನೀಡಿ ಗೂಗಲ್‌ ಮಾಡಲು ಹೇಳಿದ. ಈ ಬಗ್ಗೆ ನನ್ನ ತಂದೆಯೊಂದಿಗೆ ಮಾತನಾಡಬೇಕು ಎಂದು ನಾನು ಹೇಳಿದಾಗ, ಈ ಪ್ರಕರಣದಲ್ಲಿ ನಿಮ್ಮ ತಂದೆಯೂ ಅಪರಾಧಿಯಾಗುತ್ತಾರೆ ಎಂದು ಎಚ್ಚರಿಕೆ ನೀಡಿದ,"  ಎಂದು ಸುನೀತಾ ತನ್ನ ಕೆಟ್ಟ ಅನುಭವವನ್ನು ಹಂಚಿಕೊಂಡರು.

ʼನೀವು ತನಿಖೆಗೆ ಸಹಕರಿಸಿದರೆ, ನಾನು ನಿಮ್ಮನ್ನು ನಾಳೆಯೊಳಗೆ ಬಿಡುಗಡೆ ಮಾಡಬಹುದುʼ ಎಂದು ಯಾದವ್ ಹೇಳಿದರು. ಆಗ ಸುನಿತಾ ವಿಡಿಯೋದಲ್ಲಿದ್ದು, ಕೊಠಡಿಯಿಂದ ಹೊರಗೆ ಹೋಗದಂತೆ ಎಚ್ಚರಿಕೆ ನೀಡಲಾಗಿತ್ತು. 

ಅಸಲಿ ದಾಖಲೆಯಂತೆ ತೋರುವ ನಕಲಿ ದಾಖಲೆ

ಅಸಲಿಯಂತೆ ತೋರುವ ನಕಲಿ ಗುರುತುಪತ್ರ

ಐದು ಗಂಟೆ ಕಾಲ ವಿಚಾರಣೆ!

ವಿಚಾರಣೆ ಐದೂವರೆ ಗಂಟೆ ಕಾಲ ನಡೆಯಿತು. ಆನಂತರ ಯಾದವ್ ಬಾಂಬ್‌ ಸಿಡಿಸಿದರು; ಆರ್‌ಬಿಐ ನಿಮ್ಮ ಬ್ಯಾಂಕ್ ಖಾತೆಯನ್ನು ಪರಿಶೀಲಿಸಬೇಕಿದೆ. ನಿಮ್ಮ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಉಳಿತಾಯ ಖಾತೆಯಲ್ಲಿರುವ ಹಣವನ್ನು ಇನ್ನೊಂದು ಖಾತೆಗೆ ವರ್ಗಾಯಿಸಬೇಕೆಂದು ಅಧಿಕಾರವಾಣಿಯಲ್ಲಿ  ಹೇಳಿದ! ʻಹಣವನ್ನು ಖಾತೆಗೆ ವರ್ಗಾಯಿಸಲು ನಾನು ಆರ್‌ಬಿಐನಿಂದ ನಿರ್ದೇಶಿತನಾಗಿದ್ದೇನೆ.  ಆರ್‌ಬಿಐ ಅಧಿಕಾರಿಗಳು ಪರಿಶೀಲಿಸುತ್ತಾರೆ,ʼ ಎಂದು ಆತ ಹೇಳಿದ.

ವಂಚಕನನ್ನು ಸುನೀತಾ ನಂಬಿದ್ದೇಕೆ?

ʻಅವರು ಆರ್‌ಬಿಐ ಗೌಪ್ಯತಾ ನೋಟಿಸ್, ಬಂಧನ ವಾರಂಟ್ ಮತ್ತು ಅಧಿಕೃತ ಎನ್ನಿಸುವಂತಹ ದಾಖಲೆಗಳನ್ನು ತೋರಿಸಿದರು. ನನ್ನ ವಿರುದ್ಧದ ಪ್ರಕರಣದ ವಿವರ ಪರಿಶೀಲಿಸಲು, ಸುಪ್ರೀಂ ಕೋರ್ಟ್ ವೆಬ್‌ಸೈಟ್‌ಗೆ ಲಿಂಕ್ ಕಳುಹಿಸಿದರು. ಆದರೆ, ಆ ಲಿಂಕ್ ತೆರೆದುಕೊಳ್ಳಲಿಲ್ಲ. ನನಗೆ ಕೆಲಸ ಕಳೆದುಕೊಳ್ಳುವ ಮತ್ತು ಕುಟುಂಬಕ್ಕೆ ಅವಮಾನವಾಗುವ ಭೀತಿ ಕಾಡಿತು. ಈ ಬಗ್ಗೆ ಯೋಚಿಸಲು ಅವರು ಅವಕಾಶವನ್ನೇ ನೀಡಲಿಲ್ಲ. ಗೂಗಲ್‌ ಪೇ ಮೂಲಕ 1 ಲಕ್ಷ ರೂ. ಹಾಗೂ ನೆಟ್ ಬ್ಯಾಂಕಿಂಗ್ ಮೂಲಕ 50,000 ರೂ. ವರ್ಗಾಯಿಸಿಬಿಟ್ಟೆ ," ಎಂದು ವಂಚನೆಗೊಳಗಾದ ರೀತಿಯನ್ನು "ದ ಫೆಡರಲ್‌"ಗೆ ಹೇಳಿದರು.

ಹೆಚ್ಚು ಹಣಕ್ಕೆ ಬೇಡಿಕೆ

ಬ್ಯಾಂಕ್ ತನಿಖೆ ಪೂರ್ಣಗೊಳಿಸಿದ ನಂತರ ಎರಡು ಗಂಟೆಗಳಲ್ಲಿ ಹಣ ಹಿಂತಿರುಗಿಸುವುದಾಗಿ ಯಾದವ್ ಹೇಳಿದರು. ಜಾಮೀನು ಪ್ರಕ್ರಿಯೆ ಆರಂಭಿಸುತ್ತೇನೆ. ಆದರೆ, ಅವರಿಗೆ ಹೆಚ್ಚು ಹಣ ನೀಡಬೇಕಾಗುತ್ತದೆ ಎಂದರು.ಆನಂತರ ಸುನೀತಾ ತಮ್ಮ ಸ್ನೇಹಿತೆಯೊಂದಿಗೆ ಮಾತನಾಡಿದ ಬಳಿಕ ತಾವು ಮೋಸ ಹೋಗಿರುವುದು ಗೊತ್ತಾಯಿತು. ʻನಾನು ಮೋಸ ಹೋಗುತ್ತೇನೆ ಎಂದು ಭಾವಿಸಿರಲಿಲ್ಲ. ಆದರೆ, ಅವರು ಪಕ್ಕಾ ವೃತ್ತಿಪರರಂತೆ ವರ್ತಿಸಿದರು,ʼ ಸುನೀತಾ ನೊಂದು ಹೇಳಿದರು.

ಸ್ಟಾಕ್‌ಹೋಮ್ ಸಿಂಡ್ರೋಮ್‌

ಹಿರಿಯ ಪತ್ರಕರ್ತ ನಿಲಾಂಜನ್ ಮುಖೋಪಾಧ್ಯಾಯ ಅವರು ಇತ್ತೀಚೆಗೆ ಆನ್‌ಲೈನ್ ಹಗರಣವೊಂದರಿಂದ ತಪ್ಪಿಸಿಕೊಂಡಿದ್ದರು. ಅವರು ಇದನ್ನು ʻಸ್ಟಾಕ್‌ಹೋಮ್ ಸಿಂಡ್ರೋಮ್‌ನ ಮಸುಕಾದ ಅಭಿವ್ಯಕ್ತಿʼ ಎಂದು ಕರೆದಿದ್ದರು.

ʻಸೈಬರ್ ಅಪರಾಧ ದೇಶದ ಹೊಸ ಸಾಂಕ್ರಾಮಿಕ. ಈ ವಂಚಕರು ಎಲ್ಲ ರೀತಿಯ ಕಥೆಗಳನ್ನುಕಟ್ಟುತ್ತಾರೆ. ನಿಮ್ಮ ಮಗ ಅತ್ಯಾಚಾರ ಪ್ರಕರಣದಲ್ಲಿ ಸಿಕ್ಕಿಬಿದ್ದಿದ್ದಾನೆ ಎಂದು ಮಹಿಳೆಯೊಬ್ಬರನ್ನು ವಂಚಿಸಿದ್ದಾರೆ. ಅಮೆರಿಕದಿಂದ ಹಿಂದಿರುಗಿದ ಇನ್ನೊಬ್ಬ ಸ್ನೇಹಿತರು, ಕೆವೈಸಿ ವಿವರ ನವೀಕರಿಸಲು ಹೋಗಿ 10 ಲಕ್ಷ ರೂ. ಕಳೆದುಕೊಂಡಿದ್ದಾರೆ. ಈ ವಂಚಕರು ಉತ್ತಮ ಇಂಗ್ಲಿಷ್ ಮಾತನಾಡುತ್ತಾರೆ; ತರಬೇತಿ ಪಡೆದಿದ್ದಾರೆ,ʼ ಎಂದು ನೀಲಾಂಜನ್‌ ಹೇಳಿದ್ದಾರೆ.

ಅವರ ಪ್ರಕಾರ, ʼಆನ್‌ಲೈನ್ ವಂಚನೆಗಳು ಅತಿಯಾಗಿವೆ. ತನಿಖಾ ಸಂಸ್ಥೆಗಳ ಕಾರ್ಯವಿಧಾನ ಕುರಿತು ಸ್ಪಷ್ಟ ಮಾಹಿತಿಯನ್ನು ಸಾರ್ವಜನಿಕರಿಗೆ ಕೊಡಬೇಕು. ತನಿಖಾಧಿಕಾರಿ ಭೌತಿಕ ರೂಪದಲ್ಲಿ ತನ್ನ/ಆಕೆಯ ಗುರುತು ತೋರಿಸುವಂತೆ ಆಗಬೇಕು. ಈ ಮಾಹಿತಿಗಳು ಎಲ್ಲ ಚಾನಲ್‌ಗಳಲ್ಲಿ ಪ್ರಕಟಗೊಳ್ಳ ಬೇಕು; ಯಾವುದೇ ಕಾನೂನು ಜಾರಿ ಸಂಸ್ಥೆ ಆನ್‌ಲೈನ್ ವಿಚಾರಣೆ ನಡೆಸುವುದಿಲ್ಲ ಎಂದು ಸ್ವತಃ ಗೃಹ ಸಚಿವರು ಸಾರ್ವಜನಿಕವಾಗಿ ಹೇಳಿಕೆ ನೀಡಬೇಕು,ʼ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಆನ್‌ಲೈನ್ ವಿಚಾರಣೆ‌ ನಡೆಸುವುದಿಲ್ಲ!

ಬೆಂಗಳೂರಿನ ಶಿವಾಜಿನಗರ ಸೈಬರ್ ಎಕನಾಮಿಕ್ ವಿಂಗ್ (ಸೆ‌‌ನ್) ಠಾಣೆಯ ಇನ್ಸ್‌ಪೆಕ್ಟರ್ ಉಮೇಶ್ ಕುಮಾರ್ ದ ಫೆಡರಲ್ ಜೊತೆ‌ ಮಾತನಾಡಿ, ಪೊಲೀಸರು ಎಂದಿಗೂ ಆನ್‌ಲೈನ್ ತನಿಖೆಗಳನ್ನು ನಡೆಸುವುದಿಲ್ಲ ಎಂದು ಖಚಿತಪಡಿಸಿದ್ದಾರೆ. ʻಜನ ಇದನ್ನು ತಿಳಿದುಕೊಳ್ಳಬೇಕು. ಅಲ್ಲದೆ, ಅಂತಹ ಸಂದರ್ಭದಲ್ಲಿ ಬೇರೆಯವರೊಂದಿಗೆ ಚರ್ಚಿಸಬೇಕು. ಹಾಗೂ ಖಾತೆಯ ವಿವರಗಳನ್ನು ಎಂದಿಗೂ ಹಂಚಿಕೊಳ್ಳಬಾರದು,ʼ ಎಂದು ಸಲಹೆ ನೀಡಿದ್ದಾರೆ.

ʻಶಿಕ್ಷಿತರು, ಇಂಗ್ಲಿಷ್ ಮಾತನಾಡುವವರು ಈ ಹಗರಣಗಳಿಗೆ ಸಿಲುಕುತ್ತಿದ್ದಾರೆ. ದುರದೃಷ್ಟವಶಾತ್, 'ಡಿಜಿಟಲ್ ಬಂಧನ' ಎಂದು ನಾವು ಕರೆಯುವ ಸ್ಥಿತಿಗೆ ಸಿಲುಕಿದಾಗ ಆಲೋಚನೆ ಮಾಡುವುದಿಲ್ಲ. ಇಂಥವರಲ್ಲಿ ಹೆಚ್ಚಿನವರು ಮಹಿಳೆಯರು ಮತ್ತು ಹಿರಿಯ ನಾಗರಿಕರು,ʼ ಎಂದು ಹೇಳಿದರು.

ಬೆಂಗಳೂರಿನ ಪ್ರತಿ ಪೊಲೀಸ್ ವಿಭಾಗದಲ್ಲಿ ತಲಾ ಒಂದರಂತೆ ಎಂಟು ಸಿಇಎನ್ ಠಾಣೆಗಳಿವೆ. ವರದಿಗಳ ಪ್ರಕಾರ, ಆನ್‌ಲೈನ್ ವಂಚನೆಗಳು ಹೆಚ್ಚಾಗಿರುವುದರಿಂದ ಈ ಠಾಣೆಗಳಲ್ಲಿ ಸಿಬ್ಬಂದಿ ಕೊರತೆ ಉಂಟಾಗಿದೆ. ಉಮೇಶ್ ಅವರ ಪ್ರಕಾರ, ಕಳೆದ ವರ್ಷ 50 ಕೋಟಿ ರೂ. ಕಳೆದುಕೊಂಡಿದ್ದಾರೆ. ಈ ಮೊತ್ತ ಕೇವಲ ಒಂದು ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣಗಳಿಗೆ ಸಂಬಂಧಿಸಿದೆ ಎಂದು ಹೇಳಿದರು.

ಕಾಂಬೋಡಿಯಾ ಮತ್ತು ವಿಯಟ್ನಾಂ ಮೂಲ: ʻಹೆಚ್ಚಿನ ವಂಚಕರು ಕಾಂಬೋಡಿಯಾ ಮತ್ತು ವಿಯಟ್ನಾಂನಿಂದ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ತನಿಖೆಯಿಂದ ತಿಳಿದುಬಂದಿದೆ. ಅಲ್ಲಿ ನೆಲೆಸಿ, ನಕಲಿ ದಾಖಲೆಗಳನ್ನು ಸೃಷ್ಟಿಸುವ ವ್ಯವಸ್ಥೆಯನ್ನು ರಚಿಸಿಕೊಂಡಿದ್ದು, ಪೊಲೀಸ್ ಅಧಿಕಾರಿಗಳಂತೆ ವರ್ತಿಸುತ್ತಾರೆ. ವಾಸ್ತವವಾಗಿ, ಈ ದೇಶಗಳಿಗೆ ಪ್ರಯಾಣಿಸುವ ಜನರ ಪಟ್ಟಿಯನ್ನು ಪರಿಶೀಲಿಸಲು ನಮಗೆ ಸಹಾಯ ಮಾಡಬೇಕೆಂದು ಗೃಹ ಸಚಿವಾಲಯ ಮತ್ತು ವಿದೇಶಾಂಗ ವ್ಯವಹಾರಗಳ ಸಚಿವಾಲಯವನ್ನು ಕೇಳಿದ್ದೇವೆ. ಅವರು ತಂಗಿರುವ ಸ್ಥಳಗಳ ಮೇಲೂ ನಾವು ದಾಳಿ ನಡೆಸುತ್ತಿದ್ದೇವೆ,ʼ ಎಂದು ಉಮೇಶ್‌  ಹೇಳಿದರು.

ʻಸೈಬರ್ ವಂಚನೆಗಳು ಜನವರಿ 2023 ರಲ್ಲಿ ಪ್ರಾರಂಭವಾದವು. ಜನರಲ್ಲಿ ಸ್ವಲ್ಪ ಮಟ್ಟಿನ ಜಾಗೃತಿ ಮೂಡಿರುವುದರಿಂದ, ವಂಚನೆ ಪ್ರಕರಣಗಳು ಕಡಿಮೆಯಾಗಿವೆ ಎಂದು ತಜ್ಞರು ಹೇಳುತ್ತಾರೆ. ಸೈಬರ್ ಅಪರಾಧಿಗಳು ಜನರ ಹಣವನ್ನು ಕಸಿಯಲು ನವನವೀನ ಮಾರ್ಗಗಳನ್ನು ಕಂಡುಕೊಂಡಿದ್ದಾರೆ.

ʻಸಂತ್ರಸ್ತರು ತಮ್ಮ ಹಣವನ್ನು ಹಿಂಪಡೆಯುತ್ತಾರೆಯೇ?ʼ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ಹೌದು ಶೇ.30ರಷ್ಟು ಪ್ರಕರಣಗಳಲ್ಲಿ ಹಣ ವಾಪಸಾಗುತ್ತದೆ. ಅಪರಾಧಿಗಳು ತ್ವರಿತವಾಗಿ ಹಣವನ್ನು ಬೇರೆ ಬೇರೆ ಖಾತೆಗಳಿಗೆ ವರ್ಗಾಯಿಸುತ್ತಾರೆ ಅಥವಾ ಎಟಿಎಂಗಳಿಂದ ಹಣ ಹಿಂಪಡೆಯುತ್ತಾರೆ ಅಥವಾ ಅವುಗಳನ್ನು ಕ್ರಿಪ್ಟೋ ಕರೆನ್ಸಿ ಆಗಿ ಪರಿವರ್ತಿಸುತ್ತಾರೆ. ಇದರ ಜಾಡು ಹಿಡಿಯುವುದು ಕಷ್ಟ ಎಂದು ಉಮೇಶ್‌ ಹೇಳಿದರು.

ಸೈಬರ್ ಕ್ರೈಮ್ ದೂರು ದಾಖಲಿಸುವುದು ಹೇಗೆ?

ಮೊದಲನೆಯದಾಗಿ, ಸೈಬರ್ ಅಪರಾಧ ಸಹಾಯವಾಣಿ ಸಂಖ್ಯೆ 1930 ಅಥವಾ ರಾಷ್ಟ್ರೀಯ ಸೈಬರ್ ಅಪರಾಧ ವರದಿ ಪೋರ್ಟಲ್ (https://cybercrime.gov.in/) ನಲ್ಲಿ ದೂರು ನೀಡಬೇಕು. ನಕಲಿ ದಾಖಲೆಗಳು ಸೇರಿದಂತೆ ಆನ್‌ಲೈನ್ ವಂಚನೆಯ ಎಲ್ಲಾ ವಿವರ ಹಂಚಿಕೊಳ್ಳಬೇಕು.ಆನಂತರ ನಿಮ್ಮ ಹಣವನ್ನು ವರ್ಗಾಯಿಸಿದ ಖಾತೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ನಿಮಗೆ ತಿಳಿಸಲಾಗುತ್ತದೆ. ಈ ಪಿಡಿಎಫ್‌ ಪ್ರತಿಯನ್ನು ನೀವು ವಾಸಿಸುವ ಪ್ರದೇಶದ ಪೊಲೀಸ್ ಠಾಣೆಯಲ್ಲಿ ದೂರು ನೀಡಿ, ಕೊಡಬೇಕು

ಪೊಲೀಸರು ಪ್ರಕರಣದ ತನಿಖೆ ಪ್ರಾರಂಭಿಸುತ್ತಾರೆ; ಐಪಿ ವಿಳಾಸ, ಹಣದ ಜಾಡು ಇತ್ಯಾದಿಯನ್ನು ಪರಿಶೀಲಿಸುತ್ತಾರೆ. ಅದೃಷ್ಟ ನಿಮ್ಮ ಪರ ಇದ್ದರೆ ಮತ್ತು ಹಣ ವರ್ಗಾವಣೆ ಆಗದೆ ಇದ್ದರೆ, ಹಣವನ್ನು ಮರಳಿ ಪಡೆಯಲು ನ್ಯಾಯಾಲಯದಲ್ಲಿ ಬಿಡುಗಡೆ ಅರ್ಜಿ ಸಲ್ಲಿಸಬೇಕಾಗುತ್ತದೆ. ಆನಂತರ ಹಣವನ್ನು ನಿಮ್ಮ ಖಾತೆಗೆ ಜಮಾ ಮಾಡಲಾಗುತ್ತದೆ.

ʻಕಿರಿಕಿರಿ ಸಂಗತಿಯೆಂದರೆ, ಪ್ರಕರಣವನ್ನು ಮುಂದುವರಿಸುವ ಜವಾಬ್ದಾರಿ ಹಣ ಕಳೆದುಕೊಂಡವರ ಮೇಲೆ ಇರುತ್ತದೆ. ಸರ್ಕಾರ ಇಂಥ ಹಗರಣಗಳ ಬಗ್ಗೆ ಹೆಚ್ಚು ಆಳವಾಗಿ ತನಿಖೆ ನಡೆಸಬೇಕು. ವಂಚಕನಿಗೆ ಖಾತೆ ತೆರೆಯಲು ಅವಕಾಶ ನೀಡುವ ಬ್ಯಾಂಕ್‌ಗೆ ದಂಡ ವಿಧಿಸಬೇಕು" ಎಂದು ನಿಲಾಂಜನ್ ಹೇಳಿದರು. 28 ಗಂಟೆಗಳ ಕಾಲ ʻಡಿಜಿಟಲ್ ಕಸ್ಟಡಿʼಯಲ್ಲಿ ಇದ್ದ ಬಳಿಕ ಅವರು ಈಗ ಅಪರಿಚಿತ ಸಂಖ್ಯೆಯಿಂದ ಬರುವ ಕರೆಗಳನ್ನು ಸ್ವೀಕರಿಸುವುತ್ತಿಲ್ಲ.

ತೀವ್ರ ಆಘಾತ: ಸುನೀತಾ ಅವರು ಸಹಾಯವಾಣಿ  1930 ರಲ್ಲಿ ದೂರು ದಾಖಲಿಸಿದ ನಂತರವೂ ಆಕೆಗೆ ಸಂದೇಶ ಮತ್ತು ಕರೆಗಳು ತಪ್ಪಲಿಲ್ಲ. ಪೊಲೀಸರು ಕರೆಗಳ ಜಾಡು ಹಿಡಿದು ವಂಚಕರನ್ನು ಪತ್ತೆಹಚ್ಚಬಹುದು ಎಂದು ಅಂದುಕೊಂಡಿದ್ದರು. ಆದರೆ, ಇದನ್ನು ಮಾಡುವ ಸೌಲಭ್ಯ ಇರಲಿಲ್ಲ. ಹೀಗಾಗಿ, ಕರೆಗಳನ್ನು ನಿರ್ಬಂಧಿಸಬೇಕೆಂದು ಸಲಹೆ ನೀಡಿದರು.

ಪ್ರಕರಣದಿಂದ ಸುನಿತಾ ʻಆಘಾತಗೊಂಡಿದ್ದಾರೆ,ʼ. ತಾವು ವಂಚಕರಿಗೆ ಮುಖ್ಯವಾದ ಮಾಹಿತಿ ನೀಡಿದ್ದೇನೆ ಎಂದು ಅವರು ಚಿಂತಿತರಾಗಿದ್ದಾರೆ. ʻಈ ಕಾಲದಲ್ಲೂ ಜನರು ಇಂತಹ ವಂಚನೆಗೆ ಹೇಗೆ ತುತ್ತಾಗುತ್ತಾರೆ ಎಂದು ಆಶ್ಚರ್ಯ ಪಡುತ್ತಿದ್ದೆ. ಆದರೆ, ನಾನು ಆ ಸ್ಥಾನದಲ್ಲಿದ್ದಾಗ ನನಗೆ ಮನವರಿಕೆಯಾಯಿತು,ʼ ಎಂದು ಹೇಳಿದರು.  ಈ ಕಹಿ ಪ್ರಕರಣ ಅವರೊಟ್ಟಿಗೆ ಜೀವಮಾನವಿಡೀ ಇರಲಿದ್ದು, ಪಾಠವಾಗಿ ಉಳಿಯಲಿದೆ!

Tags:    

Similar News