ದರ ಇಳಿಕೆಗೆ ಹೋಟೆಲ್​​ಗಳ ನಕಾರ: ತೆರಿಗೆ ಹೊರೆ ಇಳಿಸುವಂತೆ ಸರ್ಕಾರಕ್ಕೆ ಮಾಲೀಕರ ಮನವಿ

ಹೋಟೆಲ್ ಉದ್ಯಮವು ಪ್ರಮುಖವಾಗಿ ವಾಣಿಜ್ಯ ಬಳಕೆಯ ಅಡುಗೆ ಅನಿಲ ಸಿಲಿಂಡರ್‌ಗಳ ಮೇಲಿನ ಶೇ. 18ರಷ್ಟು ಜಿಎಸ್‌ಟಿ ಮತ್ತು ಕಟ್ಟಡ ಬಾಡಿಗೆ ಮೇಲಿನ ಶೇ. 18ರಷ್ಟು ಜಿಎಸ್‌ಟಿಯಿಂದಾಗಿ ತೀವ್ರ ಸಂಕಷ್ಟದಲ್ಲಿದೆ.

Update: 2025-09-25 05:58 GMT

ಕೇಂದ್ರ ಸರ್ಕಾರವು ಇತ್ತೀಚೆಗೆ ಹಲವು ವಸ್ತುಗಳ ಮೇಲಿನ ಜಿಎಸ್‌ಟಿ ದರವನ್ನು ಕಡಿಮೆ ಮಾಡಿದ್ದರೂ, ಹೋಟೆಲ್‌ ಮತ್ತು ರೆಸ್ಟೋರೆಂಟ್‌ಗಳ ದರಗಳನ್ನು ಸದ್ಯಕ್ಕೆ ಇಳಿಕೆ ಮಾಡಲು ಸಾಧ್ಯವಿಲ್ಲ ಎಂದು ಕರ್ನಾಟಕ ರಾಜ್ಯ ಹೋಟೆಲ್ ಮಾಲೀಕರ ಸಂಘ ಸ್ಪಷ್ಟಪಡಿಸಿದೆ. ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್‌ ಮತ್ತು ಕಟ್ಟಡ ಬಾಡಿಗೆ ಮೇಲಿನ ಜಿಎಸ್‌ಟಿ ಹೊರೆ ಹೆಚ್ಚಾಗಿರುವುದರಿಂದ ಗ್ರಾಹಕರಿಗೆ ತೆರಿಗೆ ಪ್ರಯೋಜನಗಳನ್ನು ವರ್ಗಾಯಿಸಲು ಸಾಧ್ಯವಾಗುತ್ತಿಲ್ಲ ಎಂದು ಸಂಘದ ಅಧ್ಯಕ್ಷರಾದ ಜಿ.ಕೆ. ಶೆಟ್ಟಿ ತಿಳಿಸಿದ್ದಾರೆ.

ಈ ಕುರಿತು ಹೇಳಿಕೆ ನೀಡಿರುವ ಅವರು, "ಹಲವು ವಸ್ತುಗಳ ಮೇಲಿನ ಜಿಎಸ್‌ಟಿ ಕಡಿತಗೊಳಿಸಿದ ಸರ್ಕಾರದ ನಿರ್ಧಾರವನ್ನು ನಾವು ಸ್ವಾಗತಿಸುತ್ತೇವೆ. ಆದರೆ, ಹೋಟೆಲ್ ಆಹಾರ ಮತ್ತು ಕೊಠಡಿ ದರಗಳನ್ನು ಯಾವಾಗ ಕಡಿಮೆ ಮಾಡುತ್ತೀರಿ ಎಂದು ಸಾರ್ವಜನಿಕರು ಕೇಳುತ್ತಿದ್ದಾರೆ. ನಮಗೆ ಸರ್ಕಾರದ ಕಡೆಯಿಂದ ತೆರಿಗೆ ವಿನಾಯಿತಿ ಸಿಗದ ಹೊರತು ದರ ಇಳಿಕೆ ಅಸಾಧ್ಯ" ಎಂದು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.

ಹೋಟೆಲ್ ಉದ್ಯಮವು ಪ್ರಮುಖವಾಗಿ ವಾಣಿಜ್ಯ ಬಳಕೆಯ ಅಡುಗೆ ಅನಿಲ ಸಿಲಿಂಡರ್‌ಗಳ ಮೇಲಿನ ಶೇ. 18ರಷ್ಟು ಜಿಎಸ್‌ಟಿ ಮತ್ತು ಕಟ್ಟಡ ಬಾಡಿಗೆ ಮೇಲಿನ ಶೇ. 18ರಷ್ಟು ಜಿಎಸ್‌ಟಿಯಿಂದಾಗಿ ತೀವ್ರ ಸಂಕಷ್ಟದಲ್ಲಿದೆ. ರಾಜ್ಯದ ಬಹುತೇಕ ಹೋಟೆಲ್‌ಗಳು ಬಾಡಿಗೆ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಈ ಎರಡೂ ತೆರಿಗೆಗಳು ನೇರವಾಗಿ ಹೋಟೆಲ್‌ಗಳ ಮೇಲೆ ದೊಡ್ಡ ಆರ್ಥಿಕ ಭಾರವನ್ನು ಹೊರಿಸುತ್ತಿವೆ.

"ಈ ಸ್ಪರ್ಧಾತ್ಮಕ ವಾತಾವರಣದಲ್ಲಿ ಹೋಟೆಲ್ ಉದ್ಯಮವು ಉಳಿದುಕೊಳ್ಳುವುದೇ ಕಷ್ಟವಾಗಿದೆ. ಆದ್ದರಿಂದ, ಕಟ್ಟಡ ಬಾಡಿಗೆ ಮೇಲಿನ ಜಿಎಸ್‌ಟಿಯನ್ನು ಶೇ. 18ರಿಂದ ಶೇ. 5ಕ್ಕೆ ಇಳಿಸಬೇಕು. ಹಾಗಾದಾಗ ಮಾತ್ರ ನಾವು ಅದರ ಪ್ರಯೋಜನವನ್ನು ಗ್ರಾಹಕರಿಗೆ ವರ್ಗಾಯಿಸಲು ಸಾಧ್ಯವಾಗುತ್ತದೆ," ಎಂದು ಜಿ.ಕೆ. ಶೆಟ್ಟಿ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಪ್ರಸ್ತುತ ಇರುವ ತೆರಿಗೆ ದರಗಳೊಂದಿಗೆ ಹೋಟೆಲ್ ಉದ್ಯಮವು ಯಾವುದೇ ಕಾರಣಕ್ಕೂ ದರಗಳನ್ನು ಕಡಿಮೆ ಮಾಡಲು ಸಾಧ್ಯವಿಲ್ಲ. ಸರ್ಕಾರದ ಕಡೆಯಿಂದ ಸೂಕ್ತ ಪರಿಹಾರ ಸಿಕ್ಕರೆ ಮಾತ್ರ ಗ್ರಾಹಕರಿಗೆ ಅನುಕೂಲ ಮಾಡಿಕೊಡಲು ಸಾಧ್ಯ ಎಂದು ಅವರು ಪುನರುಚ್ಚರಿಸಿದ್ದಾರೆ. 

Tags:    

Similar News