Siddaramaiah| ಸಿಎಂ ಸಿದ್ದರಾಮಯ್ಯಗೆ ದೇವರಾಜು ಅರಸು ಸಂಸ್ಥೆಯಿಂದ ಗೌರವ ಡಾಕ್ಟರೇಟ್
ಕೋಲಾರದ ದೇವರಾಜು ಅರಸು ಉನ್ನತ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಯ 15ನೇ ವಾರ್ಷಿಕ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಸಂಸ್ಥೆಯ ಕುಲಪತಿ ಜಿ.ಎಚ್. ನಾಗರಾಜ್ ಅವರು ಸಿಎಂ ಸಿದ್ದರಾಮಯ್ಯ ಅವರಿಗೆ ಗೌರವ ಡಾಕ್ಟರೇಟ್ ಘೋಷಣೆ ಮಾಡಿದ್ದಾರೆ.;
ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿದರು.
ಕೋಲಾರದ ಶ್ರೀ ದೇವರಾಜ ಅರಸು ಉನ್ನತ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಯು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಮಾಜ ಸೇವಾ ವಿಭಾಗದಲ್ಲಿ ಗೌರವ ಡಾಕ್ಟರೇಟ್ ಪದವಿ ನೀಡುವುದಾಗಿ ಘೋಷಿಸಿದೆ.
ಸಂಸ್ಥೆಯ 15ನೇ ವಾರ್ಷಿಕ ಘಟಿಕೋತ್ಸವ ಸಮಾರಂಭದಲ್ಲಿ ಈ ಮಹತ್ವದ ಘೋಷಣೆಯನ್ನು ಸಂಸ್ಥೆಯ ಕುಲಪತಿ ಜಿ.ಎಚ್. ನಾಗರಾಜ್ ಅವರು ಮಾಡಿದರು.
ಸಿಎಂ ಸಿದ್ದರಾಮಯ್ಯ ಅವರು ಎರಡು ಬಾರಿ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದಾರೆ ಮತ್ತು ಹದಿನಾರು ಬಾರಿ ರಾಜ್ಯ ಬಜೆಟ್ ಮಂಡಿಸುವ ಮೂಲಕ ದಾಖಲೆ ಸೃಷ್ಟಿಸಿದ್ದಾರೆ. ಅವರ ಅಧಿಕಾರಾವಧಿಯಲ್ಲಿ ಜಾರಿಗೆ ತಂದ ಐದು ಗ್ಯಾರಂಟಿ ಯೋಜನೆಗಳಂತಹ ಜನಪರ ಮತ್ತು ಜನಪ್ರಿಯ ಕಾರ್ಯಕ್ರಮಗಳು ಬಡ ಹಾಗೂ ಮಧ್ಯಮ ವರ್ಗದವರ ಜೀವನಕ್ಕೆ ಆಧಾರವಾಗಿವೆ. ಇಂತಹ ಜನಪರ ಕೆಲಸಗಳು ಹಿಂದೆ ಯಾವುದೇ ಸರ್ಕಾರದಿಂದ ಆಗಿರಲಿಲ್ಲ ಎಂದು ಕುಲಪತಿಗಳು ಶ್ಲಾಘಿಸಿದರು.
ಸಿದ್ದರಾಮಯ್ಯ ಅವರಿಗೆ ಬಹಳ ಹಿಂದೆಯೇ ಈ ಗೌರವ ಸಲ್ಲಬೇಕಿತ್ತು ಎಂದು ತಿಳಿಸಿದ ಕುಲಪತಿಗಳು, ಈಗ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಇನ್ನೂ ಮುಖ್ಯಮಂತ್ರಿಗಳ ಗಮನಕ್ಕೆ ತಂದಿಲ್ಲ ಎಂದರು. ಅವರಿಗೆ ವಿಷಯ ತಿಳಿಸಿದ ನಂತರ, ಕೋಲಾರದಲ್ಲಿ ಕಾರ್ಯಕ್ರಮಕ್ಕೆ ಅವರು ಬಂದಾಗ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಗುವುದು ಎಂದು ತಿಳಿಸಿದರು. ಸಂಸ್ಥೆಯ ಕಾರ್ಯಕಾರಿ ಮಂಡಳಿ ಮತ್ತು ಶೈಕ್ಷಣಿಕ ಮಂಡಳಿ ಒಮ್ಮತದಿಂದ ಈ ನಿರ್ಧಾರವನ್ನು ಕೈಗೊಂಡಿದೆ ಎಂದು ಜಿ.ಎಚ್. ನಾಗರಾಜ್ ಅವರು ಸ್ಪಷ್ಟಪಡಿಸಿದರು.