ಎಬಿವಿಪಿ ಮೆರವಣಿಗೆಯಲ್ಲಿ ಗೃಹ ಸಚಿವ ಪರಮೇಶ್ವರ್ ಭಾಗಿ: ರಾಜಕೀಯವಾಗಿ ಚರ್ಚೆಗೆ ಗ್ರಾಸ
ಇತ್ತೀಚೆಗೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ವಿಧಾನಸಭೆಯಲ್ಲಿ ಆರ್‌ಎಸ್‌ಎಸ್ ಗೀತೆ ಹಾಡಿದ್ದು ವಿವಾದಕ್ಕೆ ಕಾರಣವಾಗಿತ್ತು.;
ಗೃಹ ಸಚಿವ ಡಾ.ಜಿ. ಪರಮೇಶ್ವರ್
ತುಮಕೂರಿನಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ABVP) ಆಯೋಜಿಸಿದ್ದ ಮೆರವಣಿಗೆಯಲ್ಲಿ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ಅನಿರೀಕ್ಷಿತವಾಗಿ ಭಾಗವಹಿಸಿ, ವೀರರಾಣಿ ಅಬ್ಬಕ್ಕನ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದ ಪ್ರಸಂಗ ರಾಜಕೀಯ ವಲಯದಲ್ಲಿ ಹೊಸ ಚರ್ಚೆಗೆ ಗ್ರಾಸವಾಗಿದೆ.
ವೀರರಾಣಿ ಅಬ್ಬಕ್ಕ ಅವರ 500ನೇ ಜಯಂತಿ ಅಂಗವಾಗಿ ಎಬಿವಿಪಿ ರಾಜ್ಯವ್ಯಾಪಿ ರಥಯಾತ್ರೆ ಹಮ್ಮಿಕೊಂಡಿದೆ. ಮಂಗಳವಾರ ರಾತ್ರಿ ತಿಪಟೂರಿನಲ್ಲಿ ರಥಯಾತ್ರೆ ಸಾಗುವಾಗ ತಮ್ಮ ಕ್ಷೇತ್ರದ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಹಿಂತಿರುಗುತ್ತಿದ್ದರು. ಆಗ ಎಬಿವಿಪಿ ಹಮ್ಮಿಕೊಂಡಿದ್ದ ಪಂಜಿನ ಮೆರವಣಿಗೆಯನ್ನು ಗಮನಿಸಿದ ಗೃಹ ಸಚಿವ ಪರಮೇಶ್ವರ್ ಅವರು, ತಕ್ಷಣವೇ ಕಾರಿನಿಂದ ಕೆಳಗಿಳಿದು ಶಾಸಕ ಕೆ.ಷಡಕ್ಷರಿ ಅವರೊಂದಿಗೆ ರಥಯಾತ್ರೆ ಬಳಿ ತೆರಳಿ ರಾಣಿ ಅಬ್ಬಕ್ಕನ ಭಾವಚಿತ್ರಕ್ಕೆ ಗೌರವ ಸಲ್ಲಿಸಿದ್ದಾರೆ. ಅಲ್ಲದೇ, ಪ್ರಮುಖರೊಂದಿಗೆ ಕೆಲಕಾಲ ಚರ್ಚೆ ನಡೆಸಿದ್ದಾರೆ.
ಕಾಂಗ್ರೆಸ್‌ನಲ್ಲಿ ಸೈದ್ಧಾಂತಿಕ ಗೊಂದಲವೇ?
ಇತ್ತೀಚೆಗೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ವಿಧಾನಸಭೆಯಲ್ಲಿ ಆರ್‌ಎಸ್‌ಎಸ್ ಗೀತೆ ಹಾಡುವ ಮೂಲಕ ವಿವಾದಕ್ಕೆ ಕಾರಣವಾಗಿತ್ತು. ಇದರ ಬೆನ್ನಲ್ಲೇ, ಡಾ.ಜಿ. ಪರಮೇಶ್ವರ್ ಅವರು ಆರ್‌ಎಸ್‌ಎಸ್ ವಿದ್ಯಾರ್ಥಿ ಸಂಘಟನೆಯಾಗಿರುವ ಎಬಿವಿಪಿ ಕಾರ್ಯಕ್ರಮದಲ್ಲಿ ಭಾಗವಹಿಸಿರುವುದು ಕಾಂಗ್ರೆಸ್ ಪಕ್ಷದ ಸೈದ್ಧಾಂತಿಕ ಗೊಂದಲಗಳ ಕುರಿತು ಚರ್ಚೆ ಹುಟ್ಟುಹಾಕಿದೆ.
ನಾಯಕರಿಂದ ಮಿಶ್ರ ಪ್ರತಿಕ್ರಿಯೆ
ಎಬಿವಿಪಿ ಮೆರವಣಿಗೆಯಲ್ಲಿ ಪರಮೇಶ್ವರ್ ಭಾಗವಹಿಸಿದ ಕುರಿತು ಪ್ರತಿಕ್ರಿಯಿಸಿರುವ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು, "ಈ ಬಗ್ಗೆ ನನಗೆ ಮಾಹಿತಿ ಇಲ್ಲ" ಎಂದು ಹೇಳಿದ್ದಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಹೇಳಿಕೆ ಉಲ್ಲೇಖಿಸಿ, "ಪಕ್ಷದಲ್ಲಿ ಹುದ್ದೆ ಮತ್ತು ಜವಾಬ್ದಾರಿ ಹೊತ್ತವರು ಪಕ್ಷಕ್ಕೆ ನಿಷ್ಠರಾಗಿ ಕೆಲಸ ಮಾಡಬೇಕು" ಎಂದು ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.