
ಗೃಹ ಸಚಿವ ಡಾ.ಜಿ. ಪರಮೇಶ್ವರ್
ಧರ್ಮಸ್ಥಳ ಪ್ರಕರಣದಲ್ಲಿ ಎನ್‌ಐಎ ತನಿಖೆ ಅಗತ್ಯವಿಲ್ಲ: ಗೃಹ ಸಚಿವ ಡಾ.ಜಿ. ಪರಮೇಶ್ವರ್
ಪ್ರತಿಪಕ್ಷಗಳು ಧರ್ಮಸ್ಥಳಕ್ಕೆ ಶ್ರೀ ಮಂಜುನಾಥನ ದರ್ಶನ ಮಾಡಲು ಹೋಗುವಂತಿದ್ದರೆ ನಾವು ತಡೆಯಲು ಸಾಧ್ಯವಿಲ್ಲ. ನಮಗೆ ಸಂದರ್ಭ ಬಂದಾಗ ನಾವೂ ಹೋಗುತ್ತೇವೆ. ದೇವರ ದರ್ಶನಕ್ಕೆ ಹೋಗುವವರನ್ನು ತಡೆಯಲು ಸಾಧ್ಯವೇ ಎಂದು ಡಾ.ಜಿ. ಪರಮೇಶ್ವರ್ ಪ್ರಶ್ನಿಸಿದರು.
ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡ ದೂರುದಾರ ಚಿನ್ನಯ್ಯನನ್ನು ವಿಚಾರಣೆ ನಡೆಸುತ್ತಿದ್ದು, ಪ್ರಕರಣವನ್ನು ರಾಷ್ಟ್ರೀಯ ತನಿಖಾ ದಳಕ್ಕೆ(ಎನ್‌ಐಎ) ವಹಿಸುವ ಅಗತ್ಯವಿಲ್ಲ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್ ತಿಳಿಸಿದ್ದಾರೆ.
ಸೋಮವಾರ ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪ್ರಕರಣದ ಕುರಿತು ಸದನದಲ್ಲಿ ಪ್ರತಿಪಕ್ಷಗಳಿಗೆ ಈಗಾಗಾಲೇ ಉತ್ತರ ನೀಡಲಾಗಿದೆ. ಪ್ರಕರಣವನ್ನು ಎನ್‌ಐಎಗೆ ವಹಿಸುವಂತೆ ಬಿಜೆಪಿ ಆಗ್ರಹಿಸುತ್ತಿರುವುದು ಸರಿಯಲ್ಲ. ಎಸ್‌ಐಟಿ ಸಶಕ್ತವಾಗಿ ತನಿಖೆ ನಡೆಸುತ್ತಿರುವುದರಿಂದ ಅದರ ಕುರಿತು ಮಾತನಾಡುವುದಿಲ್ಲ ಎಂದರು.
ಪ್ರತಿಪಕ್ಷಗಳು ಧರ್ಮಸ್ಥಳಕ್ಕೆ ಶ್ರೀ ಮಂಜುನಾಥನ ದರ್ಶನ ಮಾಡಲು ಹೋಗುವಂತಿದ್ದರೆ ನಾವು ತಡೆಯಲು ಸಾಧ್ಯವಿಲ್ಲ. ನಮಗೆ ಸಂದರ್ಭ ಬಂದಾಗ ನಾವೂ ಹೋಗುತ್ತೇವೆ. ದೇವರ ದರ್ಶನಕ್ಕೆ ಹೋಗುವವರನ್ನು ತಡೆಯಲು ಆಗುತ್ತದೆಯೇ ಎಂದು ಪ್ರಶ್ನಿಸಿದರು. ಎಸ್‌ಐಟಿ ತನಿಖೆಗೆ ಕಾಲಮಿತಿ ನಿಗದಿಪಡಿಸಲು ಸಾಧ್ಯವಿಲ್ಲ. ವಿಚಾರಣೆ ಮಾಡುವಾಗ ಕೆಲವೊಮ್ಮೆ ತನಿಖೆ ಹೊಸ ತಿರುವುಗಳು ಪಡೆಯುವುದರಿಂದ ವಿಚಾರಣೆಗೆ ಸ್ವಲ್ಪ ವಿಳಂಬವಾಗಬಹುದು. ಆದಷ್ಟು ಶೀಘ್ರವಾಗಿ ತನಿಖೆ ನಡೆಸುವಂತೆ ಅಧಿಕಾರಿಗಳಿಗೆ ತಿಳಿಸಿದ್ದೇವೆ ಎಂದು ಹೇಳಿದರು.
ಎನ್‌ಐಎಗೆ ವಹಿಸುವಂತೆ ಬಿಜೆಪಿ ನಾಯಕರ ಆಗ್ರಹ
ಇತ್ತೀಚೆಗೆ ಚಿತ್ರದುರ್ಗದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ್ದ ಆರ್. ಅಶೋಕ್, ಸಿಎಂ ಸಿದ್ದರಾಮಯ್ಯನವರ ಸುತ್ತಮುತ್ತ ಒಂದು ಗುಂಪು ಕೆಲಸ ಮಾಡುತ್ತಿದೆ. ಆ ಗುಂಪಿನ ಸದಸ್ಯರಲ್ಲಿ ಯೂಟ್ಯೂಬರ್ ಸಮೀರ್ ಕೂಡ ಒಬ್ಬರು. ಆದ್ದರಿಂದ ಧರ್ಮಸ್ಥಳದ ಪ್ರಕರಣವನ್ನು ಎನ್‌ಐಎಗೆ ವಹಿಸಬೇಕು ಎಂದು ಸಂಪೂರ್ಣ ತನಿಖೆ ನಡೆಸಬೇಕು ಎಂದು ತಿಳಿಸಿದ್ದರು. ಧರ್ಮಸ್ಥಳದ ವಿರುದ್ಧ ಷಡ್ಯಂತ್ರ ನಡೆದಿದೆ. ಆದ್ದರಿಂದ ಪ್ರಕರಣವನ್ನು ಎನ್‌ಐಎಗೆ ವಹಿಸಬೆಕು ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಯಿ ಕೂಡ ಆಗ್ರಹಿಸಿದ್ದರು.
ಬಿಜೆಪಿ ನಾಯಕರ ಹೇಳಿಕೆಗೆ ಸಚಿವ ಜಾರಕಿಹೊಳಿ ಸಹಮತ
ಧರ್ಮಸ್ಥಳ ಪ್ರಕರಣವನ್ನು ಎನ್‌ಐಎಗೆ ವಹಿಸಿ ಸಂಪೂರ್ಣ ತನಿಖೆ ಮಾಡಿಸಬೇಕು ಎಂಬ ಬಿಜೆಪಿ ನಾಯಕರ ಹೇಳಿಕೆಗೆ ಸಚಿವ ಸತೀಶ್ ಜಾರಕಿಹೊಳಿ ಯಾದಗಿರಿಯಲ್ಲಿ ಪ್ರತಿಕ್ರಿಯಿಸಿದ್ದು, ಈಗಾಗಲೇ ಎಸ್‌ಐಟಿ ತನಿಖೆ ನಡೆಸುತ್ತಿದೆ. ಪ್ರಕರಣವನ್ನು ಎನ್‌ಐಎಗೆ ವಹಿಸಿದರೂ ತಪ್ಪೇನಿಲ್ಲ ಎಂದು ಸಹಮತ ವ್ಯಕ್ತಪಡಿಸಿದ್ದಾರೆ.