Hijab row| ಬಿಜೆಪಿಯಿಂದ ರಘುಪತಿ ಭಟ್ ಉಚ್ಚಾಟನೆ; ಹಿಜಾಬ್ ವಿವಾದ ಸಂತ್ರಸ್ತೆ ಅಲಿಯಾ ಅಸ್ಸಾದಿ ಟಾಂಗ್
ನನ್ನನ್ನು ಕಾಲೇಜಿನಿಂದ ಹೊರದಬ್ಬಿ ನಿಮ್ಮ ಪಕ್ಷಕ್ಕೆ ದೊಡ್ಡ ಸಾಧನೆ ಮಾಡಿ ತೋರಿಸಿದರಲ್ಲವೇ, ಆದರೆ ಇಂದು ಅದೇ ಪಕ್ಷ ನಿಮ್ಮನ್ನು ಹೊರದಬ್ಬುವ ಆ ಕ್ಷಣವನ್ನು ನಾನು ನನ್ನ ಉಡುಪಿಯಲ್ಲೇ ನೋಡುವಂತಾಯಿತು;
ವಿಧಾನಪರಿಷತ್ ಚುನಾವಣೆಯಲ್ಲಿ ಬಂಡಾಯವಾಗಿ ಸ್ಪರ್ಧಿಸಿರುವ ಉಡುಪಿ ಮಾಜಿ ಶಾಸಕ ರಘುಪತಿ ಭಟ್ ಅವರನ್ನು ಬಿಜೆಪಿ ಪಕ್ಷದಿಂದ ಉಚ್ಚಾಟಿಸಲಾಗಿದೆ. ಇದೀಗ ಕೆಲ ವರ್ಷಗಳ ಹಿಂದೆ ಉಡುಪಿ ಶಾಲೆಯಲ್ಲಿ ಹಿಬಾಜ್ ವಿಚಾರಕ್ಕೆ ನಡೆದ ಗಲಾಟೆಯಲ್ಲಿ ಶಾಲೆಯಿಂದ ಉಚ್ಚಾಟನೆಯಾಗಿದ್ದ ವಿದ್ಯಾರ್ಥಿನಿ ಅಲಿಯಾ ಅಸ್ಸಾದಿ ಸದ್ಯ ಮಾಜಿ ಶಾಸಕ ರಘುಪತಿ ಭಟ್ ಪಕ್ಷದಿಂದ ಉಚ್ಚಾಟನೆಯಾಗಿರುವ ಬಗ್ಗೆ ಟ್ವೀಟ್ ಮಾಡಿ ಟಾಂಗ್ ಕೊಟ್ಟಿದ್ದಾರೆ.
ಮಂಗಳವಾರ ( ಮೇ 28) ಟ್ವೀಟ್ ಮಾಡಿರುವ ಅಲಿಯಾ ಅಸ್ಸಾದಿ, " ದೇವನು ತಾನಿಚ್ಚಿಸಿದ್ದನ್ನು ಮಾಡಿಯೇ ತೀರುವನು. ವಾರ್ಷಿಕ ಪರೀಕ್ಷೆಗೆ ಇನ್ನೇನು 60 ದಿನಗಳಿರುವಾಗ ಹಿಜಾಬ್ ಧರಿಸಿದ ಏಕಮಾತ್ರ ಕಾರಣಕ್ಕೆ ನನ್ನನ್ನು ಕಾಲೇಜಿನಿಂದ ಹೊರದಬ್ಬಿ ನಿಮ್ಮ ಪಕ್ಷಕ್ಕೆ ದೊಡ್ಡ ಸಾಧನೆ ಮಾಡಿ ತೋರಿಸಿದರಲ್ಲವೇ, ಆದರೆ ಇಂದು ಅದೇ ಪಕ್ಷ ನಿಮ್ಮನ್ನು ಹೊರದಬ್ಬುವ ಆ ಕ್ಷಣವನ್ನು ನಾನು ನನ್ನ ಉಡುಪಿಯಲ್ಲೇ ನೋಡುವಂತಾಯಿತು " ಎಂದಿದ್ದಾರೆ.
ಏನಿದು ಹಿಜಾಬ್ ಘಟನೆ
ಉಡುಪಿಯಲ್ಲಿ 2021 ರಂದು ನಡೆದ ಹಿಜಾಬ್ ಪ್ರಕರಣ ಇಡೀ ರಾಷ್ಟ್ರ ಮಟ್ಟದಲ್ಲಿ ಸುದ್ದಿಯಾಗಿತ್ತು. ಅಂದಿನ ಉಡುಪಿ ಶಾಸಕರಾಗಿದ್ದ ರಘುಪತಿ ಭಟ್ ಅವರು ಹಿಜಾಬ್ ಧರಿಸಿ ತರಗತಿಗೆ ಹಾಜರಾಗಲು ಅವಕಾಶವಿಲ್ಲ ಎಂದು ಪ್ರತಿಪಾದಿಸಿದ್ದರು. ಈ ವೇಳೆ ಪಿಯು ಕಾಲೇಜಿನಲ್ಲಿ ಅಭ್ಯಾಸ ಮಾಡುತ್ತಿದ್ದ ವಿದ್ಯಾರ್ಥಿನಿ ಅಲಿಯಾ ಅಸಾದಿ ಹಿಜಾಬ್ ಧರಿಸಿಯೇ ಪರೀಕ್ಷೆ ಬರೆಯುತ್ತೇನೆ. ಹಿಜಾಬ್‌ಗೆ ಅವಕಾಶ ಕೊಡಲಿಲ್ಲವೆಂದರೆ ನಾನು ಪರೀಕ್ಷೆ ಬರೆಯುವುದಿಲ್ಲ ಎಂದು ಹೇಳಿದ್ದಳು. ಇದರಿಂದ ವಿದ್ಯಾರ್ಥಿನಿ ಅಲಿಯಾ ಅಸಾದಿ ಪರೀಕ್ಷೆಯಿಂದ ಉಚ್ಛಾಟನೆಗೊಂಡಿದ್ದಳು. ಬಳಿಕ ರಿಪೀಟರ್ಸ್ ಪರೀಕ್ಷೆಯಲ್ಲಿ ಎಕ್ಸಾಂ ಬರೆದು ಉತ್ತೀರ್ಣಳಾಗಿ ಎಲ್‌ಎಲ್‌ಬಿ ಸೇರಿದ್ದಾಳೆ. ಆದರೆ ಈಗ ಬಿಜೆಪಿಯಿಂದ ಉಚ್ಛಾಟನೆಗೊಂಡು ವಿಧಾನ ಪರಿಷತ್ ಚುನಾವಣೆಗೆ ನೈಋತ್ಯ ಪದವೀಧರರ ಕ್ಷೇತ್ರದಿಂದ ಪಕ್ಷೇತರವಾಗಿ ಸ್ಪರ್ಧೆ ಮಾಡುತ್ತಿರುವ ಉಡುಪಿ ಕ್ಷೇತ್ರದ ಮಾಜಿ ಶಾಸಕ ರಘುಪತಿ ಭಟ್ ಅವರಿಗೆ ಕಾನೂನು ವಿದ್ಯಾರ್ಥಿನಿ ಅಲಿಯಾ ಅಸಾದಿ ಟ್ವಿಟರ್ ಮೂಲಕ ತಿರುಗೇಟು ಕೊಟ್ಟಿದ್ದಾಳೆ.
ಬಿಜೆಪಿಯಿಂದ ಎಂಎಲ್‌ಎ, ಎಂಎಲ್‌ಸಿ ಟಿಕೆಟ್ ನಿರಾಕರಣೆ
ಕಳೆದ 2023ರ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಹಾಲಿ ಶಾಸಕ ರಘುಪತಿ ಭಟ್ ಅವರಿಗೆ ಎಂಎಲ್‌ಎ ಟಿಕಟ್ ನೀಡದೇ ಹೊಸಬರಿಗೆ ಅವಕಾಶ ನೀಡುವ ನಿಟ್ಟಿನಲ್ಲಿ ಯಶ್ ಪಾಲ್ ಸುವರ್ಣಾ ಅವರಿಗೆ ಟಿಕಟ್ ನೀಡಲಾಗಿತ್ತು. ಲೋಕಸಭಾ ಚುನಾವಣೆಯಲ್ಲಿ ಟಿಕೆಟ್ ನಿರೀಕ್ಷೆ ಮಾಡಿದ್ದರೂ ಟಿಕೆಟ್ ಸಿಗಲಿಲ್ಲ. ಆದರೆ, ವಿಧಾನ ಪರಿಷತ್‌ಗೆ ಟಿಕೆಟ್ ಕೊಡಲಾಗುತ್ತದೆ ಎಂದು ಕಾದು ಕುಳಿತಿದ್ದರೂ ಬಿಜೆಪಿಯಿಂದ ಟಿಕೆಟ್ ನಿರಾಕರಿಸಲಾಗಿದೆ. ಇದರಿಂದ ಕುಪಿತಗೊಂಡ ಮಾಜಿ ಶಾಸಕ ರಘುಪತಿ ಭಟ್ ಅವರು ಬಿಜೆಪಿಗೆ ಸೆಡ್ಡು ಹೊಡೆದು ಪಕ್ಷೇತರವಾಗಿ ಸ್ಪರ್ಧೆ ಮಾಡಿದರು. ಇದರಿಂದ ಅವರನ್ನು ಪಕ್ಷದಿಂದ ಉಚ್ಛಾಟನೆ ಮಾಡಲಾಗಿದೆ.